'ಜೂನ್ 15ರ ತನಕ ಬರ ಪರಿಹಾರ ಕಾಮಗಾರಿ ನಡೆಸಿ'

By: ಹುಬ್ಬಳ್ಳಿ ಪ್ರತಿನಿಧಿ
Subscribe to Oneindia Kannada

ಧಾರವಾಡ, ಏಪ್ರಿಲ್ 27 : 'ಮೇ ತಿಂಗಳಿನಲ್ಲಿ ಬರ ಪರಿಸ್ಥಿತಿ ಇನ್ನಷ್ಟು ಗಂಭೀರವಾಗುವ ಲಕ್ಷಣಗಳಿವೆ. ಆದ್ದರಿಂದ, ಜೂನ್ 15ರ ತನಕ ಬರಪರಿಹಾರ ಕಾಮಗಾರಿಗಳು ಚುರುಕಾಗಿ ಮುಂದುವರೆಯಲಿ' ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ.

ಮಂಗಳವಾರ ಧಾರವಾಡ ಜಿಲ್ಲೆಯ ವಿವಿಧ ಬರಪೀಡಿತ ಸ್ಥಳಗಳಿಗೆ ಭೇಟಿ ನೀಡಿದ ನಂತರ ಹುಬ್ಬಳ್ಳಿಯಲ್ಲಿ ನಡೆದ ಬರನಿರ್ವಹಣೆಯ ಪರಿಶೀಲನಾ ಸಭೆ ಉದ್ದೇಶಿಸಿ ಅವರು ಮಾತನಾಡಿದರು. 'ರಾಜ್ಯದಲ್ಲಿ ಭೀಕರ ಬರಪರಿಸ್ಥಿತಿ ಉದ್ಭವಿಸಿದೆ. ಜನ, ಜಾನುವಾರುಗಳಿಗೆ ಸಂಕಷ್ಟವಾಗದಂತೆ ಕುಡಿಯುವ ನೀರು, ಮೇವು ಪೂರೈಕೆ ಹಾಗೂ ಆರೋಗ್ಯ ಕಾಪಾಡಲು ಸರ್ಕಾರ ಸಮರೋಪಾದಿಯಲ್ಲಿ ಶ್ರಮಿಸುತ್ತಿದೆ' ಎಂದು ಸಿದ್ದರಾಮಯ್ಯ ಹೇಳಿದರು. [ಚಿತ್ರಗಳು : ಧಾರವಾಡದಲ್ಲಿ ಸಿದ್ದರಾಮಯ್ಯ ಬರ ಪ್ರವಾಸ]

siddaramaiah

'ಅಧಿಕಾರಿಗಳು ಸಮಯದ ಮಿತಿ ಮರೆತು ಕರ್ತವ್ಯ ನಿರ್ವಹಿಸಬೇಕು' ಎಂದು ಹೇಳಿದ ಸಿದ್ದರಾಮಯ್ಯ ಅವರು, 'ಬರುವ ಮೇ ತಿಂಗಳಿನಲ್ಲಿ ಪರಿಸ್ಥಿತಿ ಇನ್ನಷ್ಟು ಗಂಭೀರವಾಗುವ ಸಾಧ್ಯತೆ ಇದೆ. ಆದ್ದರಿಂದ, ಜೂನ್ 15 ಅಥವಾ ಅಗತ್ಯಬಿದ್ದರೆ ಜೂನ್ ಅಂತ್ಯದವರೆಗೂ ಬರಪರಿಹಾರ ಕಾಮಗಾರಿಗಳು ಚುರುಕಾಗಿ ಮುಂದುವರೆಯಲಿ' ಎಂದು ಸೂಚಿಸಿದರು. [ಸಚಿವರ ಲೆಕ್ಕದಲ್ಲಿ ಬರಗಾಲ ಅಂದ್ರೆ ಯಾವುದು?]

* ಧಾರವಾಡ ಜಿಲ್ಲೆಯ 17 ಗ್ರಾಮಗಳಲ್ಲಿ ಕುಡಿಯುವ ನೀರಿನ ತೀವ್ರ ಸಮಸ್ಯೆಯಿದ್ದು, ಟ್ಯಾಂಕರುಗಳ ಮೂಲಕ ನೀರು ಸರಬರಾಜು ಮಾಡಲಾಗುತ್ತಿದೆ. ಜನ ಹಾಗೂ ಜಾನುವಾರುಗಳ ಸಂಖ್ಯೆಗಳನ್ನು ಪರಿಗಣಿಸಿ ಅವುಗಳಿಗೆ ಸಾಕಾಗುವಷ್ಟು ನೀರು ಪೂರೈಸಬೇಕು. ನೀರಿಗೆ ತೊಂದರೆಯಾಗಬಾರದು ಎಂದು ಅಧಿಕಾರಿಗಳಿಗೆ ಸೂಚಿಸಿದರು. [ಬತ್ತಿದ ನೇತ್ರಾವತಿ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನೀರಿನ ಕೊರತೆ]

drought

* ಕುಡಿಯುವ ನೀರು ಪೂರೈಕೆ, ಬರ ನಿರ್ವಹಣೆಗೆ ಹಣದ ಕೊರತೆ ಇಲ್ಲ, ಕೊರೆದ ಕೊಳವೆ ಬಾವಿಗಳಿಗೆ ತ್ವರಿತವಾಗಿ ವಿದ್ಯುತ್ ಸಂಪರ್ಕ ಕಲ್ಪಿಸಬೇಕು. ಹಳೆಯ ಕೊಳವೆ ಬಾವಿಗಳನ್ನು ಪುನಶ್ಚೇತನಗೊಳಿಸಲು ಕ್ರಮ ಕೈಗೊಳ್ಳಬೇಕು. ಖಾಸಗಿ ಬೋರ್‌ವೆಲ್‌ಗಳನ್ನು ಸರ್ಕಾರದ ವಶಕ್ಕೆ ಪಡೆದು ಬಾಡಿಗೆ ನೀಡಬೇಕು ಎಂದರು. [ಕೊಳವೆ ಬಾವಿಗಳನ್ನು ಬಾಡಿಗೆಗೆ ಪಡೆಯಲಿದೆ ಸರ್ಕಾರ]

* ಧಾರವಾಡ ಜಿಲ್ಲೆಯ ಐದು ತಾಲೂಕುಗಳಿಗೆ ಕುಡಿಯುವ ನೀರು ಪೂರೈಸುವ ಅಮ್ಮಿನಭಾವಿಯ ಮಲಪ್ರಭಾ ಕುಡಿಯುವ ನೀರಿನ ಯೋಜನೆಗೆ ಅಗತ್ಯವಿರುವ ಹಣಕಾಸು ಒದಗಿಸುವ ಕುರಿತು ಬೆಂಗಳೂರಿನಲ್ಲಿ ಅಧಿಕಾರಿಗಳ ಉನ್ನತ ಮಟ್ಟದ ಸಭೆಯನ್ನು ಶೀಘ್ರ ಕರೆಯಲಾಗುವುದು ಎಂದರು.

* ಜಾನುವಾರುಗಳಿಗಾಗಿ ಈಗಾಗಲೇ 5 ಮೇವು ಬ್ಯಾಂಕ್‌ ಸ್ಥಾಪಿಸಲಾಗಿದೆ. ಬರುವ ಮೇ ತಿಂಗಳಿನಲ್ಲಿ ಇನ್ನಷ್ಟು ತೊಂದರೆಯಾಗುವ ಸಂಭವ ಇರುವುದರಿಂದ ಅಗತ್ಯವಿದ್ದ ಕಡೆ ಗೋ ಶಾಲೆಗಳನ್ನು ನೀರು, ನೆರಳು, ಔಷಧಿ ಹಾಗೂ ಮೇವಿನೊಂದಿಗೆ ಸ್ಥಾಪಿಸಬೇಕು ಎಂದರು. ಕೆಲವು ಗ್ರಾಮಗಳಿಗೆ ಉಚಿತವಾಗಿ ಮೇವು ಪೂರೈಸುತ್ತಿರುವ ಬೆಂಗಳೂರಿನ ಇನ್ಫೋಸಿಸ್ ಪ್ರತಿಷ್ಠಾನಕ್ಕೆ ಅವರು ಕೃತಜ್ಞತೆ ಸಲ್ಲಿಸಿದರು.

drinking water

* ಗ್ರಾಮೀಣ ಪ್ರದೇಶಗಳಲ್ಲಿ ಕೆರೆಗೆ ನೀರು ಹರಿದು ಬರುವ ಕಾಲುವೆ ಮಾರ್ಗಗಳನ್ನು ಒತ್ತುವರಿ ಮಾಡಿಕೊಂಡಿರುವವರು ಎಷ್ಟೇ ಪ್ರಭಾವಶಾಲಿಯಾಗಿದ್ದರೂ ಸಹ, ಅವುಗಳನ್ನು ತೆರವುಗೊಳಿಸಿ, ಸ್ವಚ್ಛಗೊಳಿಸಬೇಕು. ಜನರ ನೋವಿಗೆ ಅಧಿಕಾರಿಗಳು ಸ್ಪಂದಿಸಬೇಕು. ಬರ ಕಾಮಗಾರಿಗಳಲ್ಲಿ ನಿರ್ಲಕ್ಷ್ಯ ತೋರುವ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತದೆ ಎಂದರು.

* ಭೀಕರ ಬರಪರಿಸ್ಥಿತಿ ಇರುವುದರಿಂದ ಸಹಕಾರ ಹಾಗೂ ರೈತ ಸಹಕಾರ ಬ್ಯಾಂಕ್‌ಗಳು ಕೃಷಿ ಸಾಲ ವಸೂಲಾತಿಗೆ ಮುಂದಾಗುವುದು ಬೇಡ ಎಂದು ಮುಖ್ಯಮಂತ್ರಿಗಳು ಅಧಿಕಾರಿಗಳಿಗೆ ಸೂಚಿಸಿದರು.

dharwad

ಕಳಸಾ ಬಂಡೂರಿ ಪ್ರಧಾನಿಗೆ ಪತ್ರ : 'ಮಹಾದಾಯಿ ನದಿಗೆ ತಿರುವು ಕಲ್ಪಿಸಿ ಕಳಸಾ ಬಂಡೂರಿಗೆ ನೀರು ತರುವ ವಿಚಾರ ಮೂರು ರಾಜ್ಯಗಳಿಗೆ ಸಂಬಂಧಿಸಿರುವುದರಿಂದ ಈ ವಿಷಯದಲ್ಲಿ ಪ್ರಧಾನ ಮಂತ್ರಿಗಳ ಮಧ್ಯಸ್ಥಿಕೆ ಅತ್ಯಗತ್ಯವಾಗಿದೆ. ರಾಜ್ಯ ಸರ್ಕಾರ ನ್ಯಾಯಾಧೀಕರಣದಲ್ಲಿ ಮಧ್ಯಂತರ ಅರ್ಜಿ ಸಲ್ಲಿಸಿ ಕಾನೂನು ಹೋರಾಟ ಮಾಡುತ್ತಿದೆ' ಎಂದು ಸಿದ್ದರಾಮಯ್ಯ ಹೇಳಿದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Karnataka Chief Minister Siddaramaiah instructed all officials to arrange drinking water and fodder in every drought-affected taluk in the state till June 15, 2016. Siddaramaiah addressed review meeting of drought relief works with elected representatives and senior officials at Dharwad district on Monday, April 27, 2016.
Please Wait while comments are loading...