Devar Hippargi Constituency: ಕಾಂಗ್ರೆಸ್ ಟಿಕೆಟ್ ಹಂಚಿಕೆ ಗೊಂದಲ, ಬಿಜೆಪಿ-ಜೆಡಿಎಸ್‌ಗೆ ಗೆಲುವಿಗೆ ವರದಾನ?
ಬೆಂಗಳೂರು, ಮಾರ್ಚ್ 26: ದೇವರ ಹಿಪ್ಪರಗಿಯು ವಿಜಯಪುರ ಜಿಲ್ಲೆ ವಿಧಾನಸಭಾ ಕ್ಷೇತ್ರವಾಗಿದೆ. ಸುತ್ತಮುತ್ತಲಿನ ಹಳ್ಳಿಯಗಳಿಗೆ ಈ ದೇವರ ಹಿಪ್ಪರಗಿ ಪ್ರಮುಖ ಮಾರುಕಟ್ಟೆ ಕೇಂದ್ರವಾಗಿದೆ. ಈ ಸ್ಥಳ ವಿಜಯಪುರ, ಬಾಗಲಕೋಟೆ, ಇಂಡಿ, ಗುಲ್ಬರ್ಗ, ಮುದ್ದೇಬಿಹಾಳ, ತಾಳಿಕೋಟೆ, ಸಿಂದಗಿ ಮತ್ತು ಸೋಲಾಪುರ ಸಂಪರ್ಕಿಸುವ ಪ್ರಮುಖ ಜಂಕ್ಷನ್ ಸಹ ಆಗಿದೆ.
ಪುರುಷರು ಮತ್ತು ಮಹಿಳೆಯರನ್ನು ಸಮಾನವಾಗಿ ಹೊಂದಿರುವ ಈ ಕ್ಷೇತ್ರದಲ್ಲಿ ಸಾಕ್ಷರತೆ ಪ್ರಮಾಣ ಸರಾಸರಿ 56 ಪ್ರತಿಶತ ಇದೆ. ಪುರುಷರ ಸಾಕ್ಷರತೆ 63 ಪ್ರತಿಶತ ಮತ್ತು ಮಹಿಳಾ ಸಾಕ್ಷರತೆ 49 ಪ್ರತಿಶತ ವಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ. ದೇವರ ಹಿಪ್ಪರಗಿಯಲ್ಲಿ ಕಲ್ಮೇಶ್ವರ, ಮಡಿವಾಳ ಮಾಚಿದೇವರು, ಮಲ್ಲಯ್ಯ, ರಾವುತರಾಯ, ಬಾಣತಿ ಸೇರಿ ಒಟ್ಟು ಸುಮಾರು 40 ದೇವಾಲಗಳಿವೆ. ಹದಿನಾಲ್ಕನೇ ಶತಮಾನದ ಸ್ಮಾರಕ ಮಹಾಲಗುಂಬ (ಆಳದ ಬುಡ) ಮಲ್ಲಯ್ಯ ದೇವಸ್ಥಾನವು ಇಲ್ಲಿದೆ. ಕ್ಷೇತ್ರ ಧಾರ್ಮಿಕವಾಗಿ ಶ್ರೀಮಂತವಾಗಿದೆ.

ಜೆಡಿಎಸ್ ಸಹ ಪ್ರಮುಖ ಪ್ರತಿಪಕ್ಷವಾಗಿ ಹೊರ ಹೊರಮ್ಮಿರುವ ಈ ಕ್ಷೇತ್ರದಲ್ಲಿ ಬಿಜೆಪಿ ಅಧಿಕಾರದಲ್ಲಿದೆ. ಸೋಮನಗೌಡ ಪಾಟೀಲ (ಸಾಸನೂರು) ಅವರು ಹಾಲಿ ಶಾಸಕರಾಗಿದ್ದಾರೆ. ಈ ಹಿಂದಿನ ಎರಡು ಚುನಾವಣೆಗಳಲ್ಲಿ ಕಾಂಗ್ರೆಸ್ ಬಹುಮತ ಗಳಿಸುವ ಮೂಲಕ ಜನಾಶೀರ್ವಾದಕ್ಕೆ ಪಾತ್ರವಾಗಿತ್ತು. ಅಮಿನಪ್ಪ ಗೌಡ ಸಂಗನಗೌಡ ಪಾಟೀಲ ಅವರೇ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ತರುವಲ್ಲಿ ಯಶಸ್ವಿಯಾಗಿದ್ದರು.
ಆದರೆ ಕಳೆದ ಬಾರಿ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಮಾಡಿದ್ದ ಯಡವಟ್ಟು ಅಂದರೆ ಬಾಪುಗೌಡ ಎಸ್ ಪಾಟೀಲರನ್ನು ಚುನಾವಣೆಗೆ ಇಳಿಸಿದ್ದರು. ಇದರ ಫಲವಾಗೇ ಎಂಬಂತೆ ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್ ಸೋಲುಣ್ಣಬೇಕಾಯಿತು. ಅಷ್ಟೇ ಅಲ್ಲದೇ ಜೆಡಿಎಸ್‌ಗಿಂತಲೂ ಹೀನಾಯ ಸ್ಥಿತಿ ತಲುಪಿತು.
2018ರಲ್ಲಿ ಕಾಂಗ್ರೆಸ್ ಅಭ್ಯರ್ಥಿ ಬಾಪುಗೌಡ ಎಸ್ ಪಾಟೀಲರಿಗೆ 38,038 ಮತ ಧಕ್ಕಿದರೆ, ಜೆಡಿಎಸ್ ಅಭ್ಯರ್ಥಿ ರಾಜುಗೌಡ ಪಾಟೀಲ್ ಅವರು 44,892 ಮತ ಪಡೆದು ಪ್ರಬಲ ವಿಪಕ್ಷವಾಗಿ ಹೊರಹೊಮ್ಮಿತು. ಇವೆರಡು ಪಕ್ಷದ ಅಭ್ಯರ್ಥಿಗಳ ವಿರುದ್ಧ ಬಿಜೆಪಿ ಸೋಮಗೌಡ ಪಾಟೀಲರು 48,245 ಬಹುಮತ ಪಡೆದು ಆಡಳಿತಕ್ಕೆ ಮುನ್ನುಡಿ ಬರೆಯಿತು.
| ವರ್ಷ | ಗೆದ್ದವರು | ಮತಗಳು | ಸೋತವರು | ಮತಗಳು |
| 2018 | ಸೋಮನಗೌಡ ಪಾಟೀಲ | 48,245 | ರಾಜಗೌಡ ಪಾಟೀಲ | 44,892 |
| 2013 | ಅಮಿನಗೌಡ ಎಸ್.ಪಾಟೀಲ | 36,231 | ಸೋಮನಗೌಡ ಪಾಟೀಲ | 28,135 |
| 2008 | ಅಮಿನಗೌಡ ಎಸ್.ಪಾಟೀಲ | 54,879 | ಬಸನಗೌಡ ಪಾಟೀಲ್ ಯತ್ನಾಳ್ | 23,986 |
ಬುಗಿಲೆದ್ದ ಟಿಕೆಟ್ ಆಕಾಂಕ್ಷಿಗಳ ಆಕ್ರೋಶ
ಕಾಂಗ್ರೆಸ್‌ನಲ್ಲಿ ಹಾಲಿ ಶಾಸಕರನ್ನು ಹೊರತುಪಡಿಸಿ ಸುಮಾರು ಒಂಬತ್ತು ಮಂದಿ ಕಮಲದಿಂದ ಸ್ಪರ್ಧಿಸಲು ಸಜ್ಜಾಗಿದ್ದಾರೆ. ಅವರೆಲ್ಲರು ಟಿಕೆಟ್ ಆಕಾಂಕ್ಷಿಗಳೇ ಆಗಿದ್ದು, ಇದೀಗ ಅವರು ಎಸ್.ಆರ್.ಪಾಟೀಲರ ಮೇಲೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಟಿಕೆಟ್ ಹಂಚಿಕೆಯಾಗುವ ಮುನ್ನವೇ ಆಗುವ ಮುನ್ನವೇ ವಿಜಯಪುರ ಜಿಲ್ಲಾ ಕಾಂಗ್ರೆಸ್‌ನಲ್ಲಿ ಅಸಮಾಧಾನ ಭುಗಿಲೆದ್ದಿದೆ. ದೇವರ ಹಿಪ್ಪರಗಿ ಕ್ಷೇತ್ರದಲ್ಲಿ ಕಾಂಗ್ರೆಸ್ ಟಿಕೆಟ್ ಪಡೆಯಲು ಹಿರಿಯ ಮುಖಂಡ ಎಸ್.ಅರ್.ಪಾಟೀಲರು, ವರಿಷ್ಠರ ಮೇಲೆ ಒತ್ತಡ ಹಾಕುತ್ತಿರುವ ಬೆನ್ನಲ್ಲಿಯೇ ಈ ಕ್ಷೇತ್ರದಲ್ಲಿ ಟಿಕೆಟ್ ಪ್ರಬಲ ಆಕಾಂಕ್ಷಿಗಳಾಗಿದ್ದ 9 ಮುಖಂಡರು, ಎಸ್.ಆರ್.ಪಾಟೀಲ ಹಾಗೂ ಪಕ್ಷದ ವರಿಷ್ಠರ ವಿರುದ್ಧ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಟಿಕೆಟ್ ಆಕಾಂಕ್ಷಿಗಳ ಕಾರಣವೋ ಅಥವಾ ಕೈತಪ್ಪಿರುವ ಕ್ಷೇತ್ರವನ್ನು ಹೊಸ ತಂತ್ರಗಾರಿಕೆ ಮೂಲಕ ಮರಳಿ ಪಡೆಯುವ ಚಿಂತನೆಯಿಂದಲೋ ಕಾಂಗ್ರೆಸ್ ತನ್ನ ಮೊದಲ 124ಮಂದಿಯ ಪಟ್ಟಿಯಲ್ಲಿ ದೇವರ ಹಿಪ್ಪರಗಿ ಕ್ಷೇತ್ರದ ಟಿಕೆಟ್ ಘೋಷಣೆ ಮಾಡಿಲ್ಲ. ಒಂದು ವೇಳೆ ಮುಂದೆ ಯಾರೋ ಒಬ್ಬರಿಗೂ ಟಿಕೆಟ್ ನೀಡಿದರೂ ಸಹ ಇನ್ನಷ್ಟು ಆಕ್ರೋಶ ವ್ಯಕ್ತವಾಗಿ ಅದು ಕಾಂಗ್ರೆಸ್ ಪಕ್ಷಕ್ಕೆ ನಷ್ಟು ಉಂಟು ಮಾಡುವ ಸಾಧ್ಯತೆ ಇದೆ ಎಂದು ವಿಶ್ಲೇಷಿಸಲಾಗಿದೆ.
ಕ್ಷೇತ್ರಕ್ಕೆ ಸಂಬಂಧ ಪಡದವರನ್ನು ಕಳೆದ ಬಾರಿಯಂತೆ ಈ ಬಾರಿಯು ನಿಲ್ಲಿಸಿದರೆ ಕಾಂಗ್ರೆಸ್ ಮತ್ತೆ ಹೀನಾಯವಾಗಿ ಸೋಲಬೇಕಾಗುತ್ತದೆ ಎಂದು ಟಿಕೆಟ್ ಆಕಾಂಕ್ಷಿಯೊಬ್ಬರು ಮಾಹಿತಿ ನೀಡಿದ್ದಾರೆ.

| ದೇವರ ಹಿಪ್ಪರಗಿ ಕ್ಷೇತ್ರದ ಮತದಾರರು |
| ಒಟ್ಟು ಮತದಾರರು - 2,07,180 |
| ಪುರುಷರು - 1,07,407 |
| ಮಹಿಳೆಯರು- 99,773 |
ಕಾಂಗ್ರೆಸ್ ಒಳಮುನಿಸು ಬಿಜೆಪಿಗೆ ವರದಾನವೇ?
ಹೀಗೆ ಕಾಂಗ್ರೆಸ್‌ನಲ್ಲಿ ಟಿಕೆಟ್ ಹಂಚಿಕೆ ಗೊಂದಲ ನಡೆಯುತ್ತಿದೆ. ಇದು ಬಿಜೆಪಿಗೆ ವರದಾನವಾಗುವ ಲಕ್ಷಣಗಳು ಹೆಚ್ಚಾಗಿವೆ. ಈ ಕಾರಣದಿಂದ ಬಿಜೆಪಿಯಿಂದ ಈ ಸಲ ಹಾಲಿ ಶಾಸಕ ಸೋಮನಗೌಡ ಪಾಟೀಲರನ್ನೇ ನಿಲ್ಲಿಸುವ ಚಿಂತನೆಯಲ್ಲಿ ಬಿಜೆಪಿ ಇದೆ ಎನ್ನಲಾಗಿದೆ. ಇನ್ನು ಕ್ಷೇತ್ರದ ವಿಪಕ್ಷ ಸ್ಥಾನ ಅಲಂಕರಿಸಿರುವ ಜೆಡಿಎಸ್ ಈ ಬಾರಿ ಯಾರನ್ನು ಕಣಕ್ಕಿಳಿಸಲಿದ್ದಾರೆ ಎಂದು ಕಾದು ನೋಡಬೇಕಿದೆ. ಕಳೆದ ಬಾರಿ ಅತ್ಯಂತ ಕಡಿಮೆ ಅಂತರದಿಂದ ಸೋತಿದ್ದ ಅಭ್ಯರ್ಥಿಯನ್ನೇ ಮತ್ತೆ ಅದೃಷ್ಠ ಪರೀಕ್ಷೆಗೆ ಕಳುಹಿಸಬಹುದು ಅಂತಲೂ ಹೇಳಲಾಗುತ್ತಿದೆ.












Click it and Unblock the Notifications