ಮಾಜಿ ಸಚಿವ ಮಲ್ಲಿಕಾರ್ಜುನ್ ರೈಸ್ ಮಿಲ್‌ನಲ್ಲಿ ವನ್ಯಜೀವಿಗಳು ಪತ್ತೆ: ಬಂಧನಕ್ಕೆ ಆಗ್ರಹಿಸಿ ಪ್ರತಿಭಟನೆ
ದಾವಣಗೆರೆ, ಡಿಸೆಂಬರ್ 23: ವನ್ಯಜೀವಿಗಳನ್ನು ಕಲ್ಲೇಶ್ವರ ರೈಸ್ ಮಿಲ್‌ನಲ್ಲಿ ಅಕ್ರಮವಾಗಿ ಇರಿಸಿಕೊಂಡಿದ್ದ ಆರೋಪದ ಮೇರೆಗೆ ಮಾಜಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಅವರನ್ನು ಕೂಡಲೇ ಬಂಧಿಸಬೇಕು ಎಂದು ಆಗ್ರಹಿಸಿ ಪಾಲಿಕೆಯ ಬಿಜೆಪಿ ಸದಸ್ಯರು, ಮುಖಂಡರು ಪ್ರತಿಭಟನೆ ನಡೆಸಿದ್ದಾರೆ.
ಮೇಯರ್ ಜಯಮ್ಮ ಗೋಪಿನಾಯ್ಕ್ ನೇತೃತ್ವದಲ್ಲಿ ಮಹಾನಗರ ಪಾಲಿಕೆಯ ಎದುರು ಪ್ರತಿಭಟನೆ ನಡೆಸಿದ ಪ್ರತಿಭಟನಾಕಾರರು, ಜಿಂಕೆ ಮರಿ ಕಳ್ಳತನ ಮಾಡಿದ ಎಸ್. ಎಸ್. ಮಲ್ಲಿಕಾರ್ಜುನ್‌ಗೆ ಧಿಕ್ಕಾರ.. ಧಿಕ್ಕಾರ.. ಪ್ರಾಣಿ ಹಿಂಸೆ ನಿಲ್ಲಿಸಿ..ಮಾಜಿ ಸಚಿವರ ಬಂಧನ ಆಗಲೇಬೇಕು ಎಂದು ಘೋಷಣೆ ಕೂಗಿ ಆಕ್ರೋಶ ಹೊರಹಾಕಿದ್ದಾರೆ.
ಕಲ್ಲೇಶ್ವರ ರೈಸ್ ಮಿಲ್ ಮೇಲೆ ಸಿಸಿಬಿ ಅಧಿಕಾರಿಗಳು ಹಾಗೂ ಅರಣ್ಯ ವಲಯಾಧಿಕಾರಿಗಳು ದಾಳಿ ಮಾಡಿದ್ದು, ಈ ವೇಳೆ ಕಾಡು ಪ್ರಾಣಿಗಳು, ಮೂಳೆಗಳು ಸಿಕ್ಕಿವೆ. ಈ ಹಿನ್ನೆಲೆಯಲ್ಲಿ ಮಾಜಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಅವರ ವಿರುದ್ಧ ಪ್ರಕರಣ ದಾಖಲಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದ್ದಾರೆ.

ಕಲ್ಲೇಶ್ವರ ರೈಸ್ ಮಿಲ್ ಮಲ್ಲಿಕಾರ್ಜುನ್ ಒಡೆತನಕ್ಕೊಳಪಟ್ಟಿದೆ. ಮಿಲ್ ಅನ್ನು ಕೂಡಲೇ ಸೀಜ್ ಮಾಡಬೇಕು. ಈ ಸ್ಥಳದಲ್ಲಿ ಜಿಂಕೆ, ಕೃಷ್ಣಮೃಗ, ಎರಡು ನರಿ, ಕಾಡು ಹಂದಿ ಸೇರಿದಂತೆ ಅನೇಕ ಪ್ರಾಣಿಗಳು ಸಿಕ್ಕಿವೆ ಎಂಬುದಾಗಿ ಅರಣ್ಯ ವಲಯಾಧಿಕಾರಿಗಳು ಹೇಳಿದ್ದಾರೆ. ಹಾಗಾಗಿ ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದರು.
ಈ ವೇಳೆ ಮಾತನಾಡಿದ ಮಾಜಿ ಮೇಯರ್ ಅಜಯ್ ಕುಮಾರ್, "ಯಾರೇ ತಪ್ಪು ಮಾಡಿದ್ದರೂ ತಪ್ಪೇ. ತಪ್ಪು ಎಸಗಿದ್ದನ್ನು ಹೇಳಿದರೆ ಅದು ಹೇಗೆ ರಾಜಕೀಯ ಆಗುತ್ತದೆ. ವನ್ಯಜೀವಿಗಳನ್ನು ಅಕ್ರಮವಾಗಿ ಇರಿಸಿಕೊಳ್ಳಬಾರದು ಎಂಬ ಕನಿಷ್ಠ ಜ್ಞಾನವೂ ಇಲ್ಲವೇ. ಸಿಂಥೆಲ್ ಎಂಬ ವ್ಯಕ್ತಿ ಜಿಂಕೆ ಕೊಂಬು ಸೇರಿದಂತೆ ಪ್ರಾಣಿಗಳ ಬಿಡಿಭಾಗಗಳ ಮಾರಾಟ ವೇಳೆ ಬೆಂಗಳೂರಿನ ಸಿಸಿಬಿ ಪೊಲೀಸರಿಗೆ ಸಿಕ್ಕಿ ಬಿದ್ದಿದ್ದಾನೆ. ಆತನೇ ದಾವಣಗೆರೆ ಕಲ್ಲೇಶ್ವರ ರೈಸ್ ಮಿಲ್‌ನಲ್ಲಿ ತಂದಿರುವುದಾಗಿ ಒಪ್ಪಿಕೊಂಡಿದ್ದಾನೆ. ಹಾಗಾಗಿ ನಿಜವಾದ ಆರೋಪಿ ಬಂಧನ ಆಗಬೇಕು. ಅದನ್ನು ಬಿಟ್ಟು ಬೇರೆಯವರನ್ನು ಬಂಧಿಸಿ ತನಿಖೆ ಹಾದಿ ತಪ್ಪಿಸಲು ಯತ್ನಿಸಿದರೆ ಹೋರಾಟ ನಿರಂತವಾಗಿರುತ್ತದೆ. ನೈಜ ಆರೋಪಿಗಳ ಬಂಧನ ಆಗಲೇಬೇಕು ಎಂದು ಆಗ್ರಹಿಸಿದರು.
ಮಾಜಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಹತ್ತಾರು ವರ್ಷಗಳಿಂದ ಜಿಂಕೆ, ಹಂದಿ, ನರಿ ಸೇರಿದಂತೆ ವನ್ಯಜೀವಿಗಳನ್ನು ಫಾರಂನಲ್ಲಿ ಸಾಕಿ, ಮಾರಾಟ ಮಾಡಿದ್ದಾರೆ. ಅವರು ಮಾಡುತ್ತಿರುವುದು ಕಾನೂನು ಬಾಹಿರ ಎಂಬುದು ಮಾಜಿ ಸಚಿವರಿಗೆ ಗೊತ್ತಿರಲಿಲ್ಲವೇ ಎಂದು ಅಜಯ್ ಕುಮಾರ್ ಪ್ರಶ್ನಿಸಿದರು.

ದೂಡಾ ಅಧ್ಯಕ್ಷ ಎ. ವೈ. ಪ್ರಕಾಶ್ ಮಾತನಾಡಿ, "ಎಸ್. ಎಸ್. ಮಲ್ಲಿಕಾರ್ಜುನ್ ಅವರು ಅರಣ್ಯ ಇಲಾಖೆಯ ಅನುಮತಿ ಪಡೆದು ಪ್ರಾಣಿಗಳನ್ನು ಸಾಕುತ್ತಿದ್ದೇನೆ ಎಂಬ ಸ್ಪಷ್ಟನೆ ನೀಡಿದ್ದಾರೆ ಎಂಬುದಾಗಿ ಕೇಳಿಪಟ್ಟಿದ್ದೇನೆ. ವನ್ಯಜೀವಿ ಕಾಯ್ದೆ ಪ್ರಕಾರ ನಡೆದುಕೊಂಡಿಲ್ಲ ಎಂಬುದು ಈಗಾಗಲೇ ಎಲ್ಲರಿಗೂ ಗೊತ್ತಾಗಿದೆ. ತಪ್ಪು ಮಾಡುವುದೇ ಕಾಂಗ್ರೆಸ್ಸಿಗರ ಜಾಯಮಾನ" ಎಂದು ಕಿಡಿಕಾರಿದರು.
ಎಸ್. ಎಸ್. ಮಲ್ಲಿಕಾರ್ಜುನ್ ಅವರನ್ನು ಬಂಧಿಸುವಂತೆ ಮಹಾನಗರ ಪಾಲಿಕೆಯಿಂದ ಮೆರವಣಿಗೆಯಲ್ಲಿ ತೆರಳಿ ಉಪವಿಭಾಗಾಧಿಕಾರಿಗಳ ಮೂಲಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಗೆ ಪ್ರತಿಭಟನಾಕಾರರು ಮನವಿ ಸಲ್ಲಿಸಿದರು. ಈ ವೇಳೆ ಪಾಲಿಕೆಯ ಉಪಮೇಯರ್ ಗಾಯತ್ರಿ ಖಂಡೊಜಿರಾವ್, ಪಾಲಿಕೆ ಸದಸ್ಯರಾದ ಸೋಗಿ ಶಾಂತಕುಮಾರ್, ಗೋಣಪ್ಪ, ಪ್ರಸನ್ನಕುಮಾರ್, ಕೆ. ಎಂ. ವೀರೇಶ್, ಗೋಪಿನಾಯ್ಕ್, ಲಕ್ಷ್ಮಣ್ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.












Click it and Unblock the Notifications