ದಾವಣಗೆರೆ ಲೋಕಸಭಾ ಕ್ಷೇತ್ರದ ಬಿಜೆಪಿ ಟಿಕೆಟ್ ಬಗ್ಗೆ ಮತ್ತೆ ಹೊಸ ವರಸೆ ಶುರು ಮಾಡಿದ ಎಂಪಿ ರೇಣುಕಾಚಾರ್ಯ-ಏನದು?
ದಾವಣಗೆರೆ, ಜನವರಿ, 16: ದಾವಣಗೆರೆ ಲೋಕಸಭಾ ಕ್ಷೇತ್ರ ಬಿಜೆಪಿ ಟಿಕೆಟ್ ಸಂಬಂಧ ಹೇಳಿಕೆ ಮೇಲೆ ಹೇಳಿಕೆ ನೀಡುತ್ತಲೇ ಇರುವ ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ, ಈಗ ಮತ್ತೆ ಹೊಸ ವರಸೆ ಶುರು ಮಾಡಿದ್ದಾರೆ. ಜಿಲ್ಲೆಯವರಿಗೆ ಟಿಕೆಟ್ ನೀಡಬೇಕು ಎಂಬುದು ನನ್ನ ಅಪೇಕ್ಷೆಗಿಂತ ಜಿಲ್ಲೆಯ ಮತದಾರರು, ಬಿಜೆಪಿ ಮುಖಂಡರು, ಕಾರ್ಯಕರ್ತರ ಒತ್ತಾಯವಾಗಿದೆ ಎಂದು ಹೇಳಿದ್ದಾರೆ.
ಲೋಕಸಭೆ ಚುನಾವಣೆಗೆ ನಾನೂ ಟಿಕೆಟ್ ಆಕಾಂಕ್ಷಿ ಅಂತಾರೆ, ಮತ್ತೊಂದೆಡೆ ಬಿಜೆಪಿ ಗೆಲ್ಲಲೇಬೇಕು ಅಂತಾರೆ. ಸಂಸದ ಡಾ.ಜಿ.ಎಂ.ಸಿದ್ದೇಶ್ವರ ಅವರು ಲೋಕಸಭೆ ಅಭ್ಯರ್ಥಿ ಘೋಷಣೆಯಾಗುವವರೆಗೂ ನನ್ನ ಹೆಸರೇ ಇದೆ ಎನ್ನುತ್ತಾರೆ. ಸಿದ್ದೇಶಣ್ಣ, ಅವರ ತಂದೆ ಮಲ್ಲಿಕಾರ್ಜುನಪ್ಪರ ಬಗ್ಗೆ ಗೌರವವಿದೆ ಎನ್ನುತ್ತಾರೆ. ಮಗದೊಮ್ಮೆ ಸರ್ವೇ ನಡೆಸಿ, ಸಮೀಕ್ಷೆ ಆಧರಿಸಿ ಟಿಕೆಟ್ ಘೋಷಿಸಿ ಎನ್ನುತ್ತಾರೆ. ಒಟ್ಟಾರೆ ರೇಣುಕಾಚಾರ್ಯರ ನಡೆ ಬಿಜೆಪಿ ಪಕ್ಷದವರಿಗೆ ಗೊಂದಲ, ಬೇಸರ ತರಿಸುತ್ತಿದೆ.

ಅಲ್ಲದೆ ಮಲ್ಲಿಕಾರ್ಜುನಪ್ಪ ಅವರು ಎರಡು ಬಾರಿ ಸಂಸದರಾಗಿ ಕೇಂದ್ರದ ಯೋಜನೆಗಳನ್ನು ಜನರಿಗೆ ತಲುಪಿಸಿದ್ದಾರೆ. ಸಿದ್ದೇಶ್ವರ ಅವರು ನಾಲ್ಕು ಬಾರಿ ಎಂಪಿ ಆಗಿದ್ದಾರೆ. ಅವರ ಕೊಡುಗೆ ಮರೆಯುವಂತಿಲ್ಲ ಎನ್ನುವ ರೇಣುಕಾಚಾರ್ಯ ಈಗ ಹೊಸ ವರಸೆ ಶುರು ಮಾಡಿದ್ದಾರೆ. ಜಿಲ್ಲೆಯವರಿಗೇ ಟಿಕೆಟ್ ನೀಡಬೇಕು ಎಂಬ ಬೇಡಿಕೆ ಇಟ್ಟಿರುವುದಾಗಿ ಹಾಗೂ ಬೆಂಗಳೂರಿನಲ್ಲಿ ನಡೆದ ಬಿಜೆಪಿ ಸಭೆಯಲ್ಲಿ ನಾನು ಪ್ರಸ್ತಾಪಿಸಿದ್ದೇನೆ. ಇದು ರೇಣುಕಾಚಾರ್ಯನ ಅಭಿಪ್ರಾಯ ಅಲ್ಲ, ಪಕ್ಷದ ಮುಖಂಡರು, ಕಾರ್ಯಕರ್ತರು, ಜಿಲ್ಲೆಯ ಅಭಿಮತವಾಗಿದೆ ಅಂತಿದ್ದಾರೆ.
ಈ ಅಭಿಪ್ರಾಯ ನಾನು ವ್ಯಕ್ತಪಡಿಸಿದ್ದೇನೆ ಅಷ್ಟೇ. ದಾವಣಗೆರೆ ಜಿಲ್ಲೆಯವರಿಗೇ ಲೋಕಸಭೆ ಚುನಾವಣೆಗೆ ಟಿಕೆಟ್ ನೀಡಬೇಕು ಎಂಬ ಅಪೇಕ್ಷೆ ಇದೆ. ಯಾರಿಗೆ ಟಿಕೆಟ್ ನೀಡಿದರೂ ಗೆಲುವಿಗೆ ಶ್ರಮಿಸುತ್ತೇವೆ. ಇದಕ್ಕೆ ಕಾರಣ ಪ್ರಧಾನಿ ನರೇಂದ್ರ ಮೋದಿ ಅವರು ಮೂರನೇ ಬಾರಿ ಪ್ರಧಾನಿ ಆಗಬೇಕು ಎಂಬುದು ದೇಶದ ಜನರ ಬಯಕೆ ಆಗಿದೆ. ಈ ನಿಟ್ಟಿನಲ್ಲಿ ಒಂದಾಗಿ ಕೆಲಸ ಮಾಡುತ್ತೇವೆ ಎಂದು ಹೇಳುತ್ತಾರೆ.
ಸಿದ್ದೇಶ್ವರ ಅವರು ನನಗೆ ಟಿಕೆಟ್ ಸಿಗುತ್ತದೆ ಎಂದು ದೃಢವಾಗಿ ಹೇಳುತ್ತಿದ್ದಾರೆ. ಮತ್ತೊಂದೆಡೆ ಸಿದ್ದೇಶ್ವರ ವಿರುದ್ಧ ನಾವಿಲ್ಲ, ಜಿಲ್ಲೆಯವರಿಗೆ ಟಿಕೆಟ್ ನೀಡಬೇಕು ಎಂಬ ಹೊಸ ವರಸೆ ಆರಂಭಿಸಿರುವ ರೇಣುಕಾಚಾರ್ಯ ದಾವಣಗೆರೆಗೆ ವಾರಕ್ಕೆ ನಾಲ್ಕೈದು ಬಾರಿ ಬಂದು ಹೋಗುತ್ತಿದ್ದಾರೆ. ಏನೇ ಕಾರ್ಯಕ್ರಮಗಳು ಇದ್ದರೂ ತಪ್ಪಿಸಿಕೊಳ್ಳುವುದಿಲ್ಲ, ಇಲ್ಲಿಗೆ ಬರುತ್ತಾರೆ. ಮಾಧ್ಯಮವದರ ಜೊತೆ ಮಾತನಾಡುತ್ತಾರೆ. ಅಭಿಪ್ರಾಯ ವ್ಯಕ್ತಪಡಿಸಿ ಹೋಗುತ್ತಿದ್ದಾರೆ. ಈ ಹೊಸ ವರಸೆ ಬಿಜೆಪಿ ಮುಖಂಡರಿಗೇ ಅರ್ಥವಾಗದಂತಾಗಿದೆ.
ಮಾಜಿ ಶಾಸಕ ಎಸ್.ವಿ.ರಾಮಚಂದ್ರಪ್ಪ ಅವರ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ದಾವಣಗೆರೆಗೆ ಆಗಮಿಸಿದ್ದ ರೇಣುಕಾಚಾರ್ಯ ಅವರು, ಮಾಧ್ಯಮದವರ ಜೊತೆ ಮಾತನಾಡಿದರು. ಸ್ಪರ್ಧೆ, ಪೈಪೋಟಿ ಯಾವುದೂ ಇಲ್ಲ. ನರೇಂದ್ರ ಮೋದಿ ಅವರು ಮೂರನೇ ಬಾರಿ ಪ್ರಧಾನಿ ಆಗುವುದನ್ನು ಬ್ರಹ್ಮನಿಂದಲೂ ತಪ್ಪಿಸಲು ಸಾಧ್ಯವಿಲ್ಲ. ಖಾಲಿಪೀಲಿ 28 ಪಕ್ಷಗಳು ಸೇರಿಕೊಂಡಿವೆ. ಈ ಪಕ್ಷಗಳ ಆಟ ನಡೆಯಲ್ಲ ಎಂದು ಹೇಳಿದರು.
ಸಮೀಕ್ಷೆ ನಡೆಸಿದರೆ ತಪ್ಪೇನಿದೆ. ದಾವಣಗೆರೆ ಜಿಲ್ಲೆಯವರಿಗೆ ಅವಕಾಶ ಸಿಕ್ಕಿಲ್ಲ ಎಂಬ ಕೊರಗಿದೆ. ಇದು ವಿನಂತಿ ಅಷ್ಟೇ. ಪ್ರತಿಯೊಬ್ಬ ಕಾರ್ಯಕರ್ತರ ಭಾವನೆಗಳನ್ನು ವಿಜಯೇಂದ್ರ, ಯಡಿಯೂರಪ್ಪ ಸೇರಿದಂತೆ ಎಲ್ಲಾ ನಾಯಕರಿಗೂ ತಿಳಿಸುತ್ತೇವೆ ಎಂದರು.
ಇಂದಿರಾ ಗಾಂಧಿ ಜನಪ್ರಿಯತೆಯನ್ನೂ ಮೀರಿ ನರೇಂದ್ರ ಮೋದಿ ಅವರು ಬೆಳೆದಿದ್ದಾರೆ. ಇಂದಿರಾ ಗಾಂಧಿ ಅವರದ್ದು ಸರ್ವಾಧಿಕಾರ ಆಡಳಿತ. ಮೋದಿ ಅವರದ್ದು ಅಭಿವೃದ್ಧಿ ಕೇಂದ್ರೀತ ಆಡಳಿತ. ಅಭಿವೃದ್ಧಿ ಹೊಂದಿದ ದೇಶ ಭಾರತ ಆಗಿದೆ. ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ, ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಅವರ ಸಾರಥ್ಯದಲ್ಲಿ 28 ಲೋಕಸಭೆ ಕ್ಷೇತ್ರಗಳನ್ನು ಗೆಲ್ಲಬೇಕು ಎಂಬ ಸಂಕಲ್ಪ ತೊಟ್ಟಿದ್ದೇವೆ. ಈ ಮೂಲಕ ನರೇಂದ್ರ ಮೋದಿ ಅವರಿಗೆ ಗಿಫ್ಟ್ ನೀಡುತ್ತೇವೆ. ಎಲ್ಲರೂ ಒಟ್ಟಾಗಿ ಕೆಲಸ ಮಾಡುತ್ತೇವೆ ಎಂದು ತಿಳಿಸಿದರು.
ನನಗೆ ಈಗ ಕಿವಿ ಕೇಳಲ್ಲ: ನನಗೆ ಜೋರಾಗಿ ಕೇಳಿ, ಕಿವಿ ಕೇಳಲ್ಲ. ಸಂಸದ ಸಿದ್ದೇಶ್ವರ ಅವರಿಗೆ ಟಿಕೆಟ್ ಫಿಕ್ಸ್ ಎಂಬ ಬಗ್ಗೆ ಮಾಧ್ಯಮವದರ ಪ್ರಶ್ನೆಗೆ ಈ ರೀತಿ ಪ್ರತಿಕ್ರಿಯಿಸಿದ ರೇಣುಕಾಚಾರ್ಯ ಅವರು ಯಾರಿಗೂ ಟಿಕೆಟ್ ಫಿಕ್ಸ್ ಆಗಿಲ್ಲ ಎಂದು ಸ್ಪಷ್ಟಪಡಿಸಿದರು.
ನನ್ನದು ತೆರೆದ ಹೃದಯ, ತೆರೆದ ಪುಸ್ತಕ. ಯಾವುದೇ ಕಾರಣಕ್ಕೂ ಮ್ಯಾಚ್ ಫಿಕ್ಸಿಂಗ್ ಇಲ್ಲ. ಸರ್ವಾಧಿಕಾರಿನೂ ಅಲ್ಲ. ದಾವಣಗೆರೆ ಎಲ್ಲಾ ಬಿಜೆಪಿ ಕಾರ್ಯಕರ್ತರ ಅಪೇಕ್ಷೆಗೆ ತಕ್ಕಂತೆ ಮಾತನಾಡುತ್ತೇನೆ. ದಾವಣಗೆರೆ ಲೋಕಸಭಾ ಕ್ಷೇತ್ರ ಗೆಲ್ಲಬೇಕು. ಈ ಜಿಲ್ಲೆಯಲ್ಲಿ ಸಾಮಾನ್ಯ ಮತದಾರರು, ಎಲ್ಲಾ ವರ್ಗದವರ ಅಪೇಕ್ಷೆಯೂ ಇದೆ ಆಗಿದೆ. ರೇಣುಕಾಚಾರ್ಯ ಧ್ವನಿ ಅಲ್ಲ. ಸಮಸ್ತ ಮುಖಂಡರು, ಕಾರ್ಯಕರ್ತರ ಭಾವನೆಯಂತೆ ಸಮೀಕ್ಷೆ ನಡೆಸಲಿ. ಯಾರಿಗೆ ಬೇಕಾದರೂ ಬರಲಿ. ಅವರಿಗೆ ಒಟ್ಟಾಗಿ ದುಡಿಯುತ್ತೇವೆ. ಪಾರದರ್ಶಕವಾಗಿ, ಪ್ರಾಮಾಣಿಕವಾಗಿ ಸಮೀಕ್ಷೆ ನಡೆಸಬೇಕೆಂದು ಒತ್ತಾಯಿಸಿದರು.
ಅನಂತಕುಮಾರ್ ಹೆಗಡೆ ವಿರುದ್ಧ ಎಂಪಿಆರ್ ಗರಂ: ಉತ್ತರ ಕನ್ನಡ ಸಂಸದ ಅನಂತ್ ಕುಮಾರ್ ಹೆಗ್ಗಡೆ ವಿರುದ್ಧ ಗರಂ ಆಗಿರುವ ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ, ಮಾತನಾಡುವಾಗ ನಾಲಗೆ ಮೇಲೆ ಹಿಡಿತ ಇರಬೇಕು. ಮುಖ್ಯಮಂತ್ರಿ ಸಿದ್ದರಾಮಯ್ಯರ ವಿರುದ್ಧ ಏಕವಚನದಲ್ಲಿ ಹೇಳಿಕೆ ನೀಡಿರುವುದನ್ನು ಒಪ್ಪಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.
ನಾವು ಬಂದಿದ್ದು, ಸಂವಿಧಾನ ಬದಲಾವಣೆ ಮಾಡಲು ಬಂದಿದ್ದೇವೆ ಎಂದು ಅನಂತ್ ಕುಮಾರ್ ಹೆಗಡೆ ಈ ಹಿಂದೆ ಹೇಳಿದ್ದರು. ನರೇಂದ್ರ ಮೋದಿ ಅವರು ಸಬ್ ಕಾ ಸಾಥ್ ಸಬ್ ಕಾ ವಿಕಾಸ್ ಅಂತಾರೆ. ಪರಿಶಿಷ್ಟ ಜಾತಿ, ಪಂಗಡದವರೆಲ್ಲರ ಹಿತ ಕಾಯಲು ಅಂಬೇಡ್ಕರ್ ಸಂವಿಧಾನ ಬರೆದಿದ್ದರು. ಅನಂತ್ ಕುಮಾರ್ ಹೆಗಡೆ ಈ ಹಿಂದೆ ಇದೇ ರೀತಿಯಲ್ಲಿ ಹಲವು ಬಾರಿ ವಿವಾದಾತ್ಮಕ ಹೇಳಿಕೆ ನೀಡಿದ್ದರು. ಇದನ್ನು ಖಂಡಿಸಿದ್ದೇವೆ, ಟಿಕೆಟ್‌ಗೋಸ್ಕರ ಈ ರೀತಿ ಮಾತನಾಡುವುದನ್ನು ಬಿಜೆಪಿ ಪಕ್ಷ ಒಪ್ಪಲ್ಲ, ನಾವೂ ಸಹ ಒಪ್ಪಲು ಸಾಧ್ಯವಿಲ್ಲ ಎಂದು ತಿಳಿಸಿದರು.
ಸಿದ್ದರಾಮಯ್ಯ ಅವರು ಹಿಂದುಳಿದ ವರ್ಗದವರು, ಮುಖ್ಯಮಂತ್ರಿ ಮುಖ್ಯಮಂತ್ರಿಯೇ. ರಾಜಕಾರಣವಾಗಿ ವಿರೋಧ ಮಾಡಬಹುದು. ತತ್ವ, ಸಿದ್ಧಾಂತ ಏನೇ ಇರಲಿ. ಆದರೆ ಸಿಎಂ ಬಗ್ಗೆ ಹಗುರವಾಗಿ, ಏಕವಚನದಲ್ಲಿ ಮಾತನಾಡಿದ್ದನ್ನು ಒಕ್ಕೊರಲನಿಂದ ಖಂಡಿಸುತ್ತೇವೆ. ಸಿಎಂ ವಿರುದ್ಧ ಅಗೌರವವಾಗಿ ಯಾರೇ ಮಾತನಾಡಿದರೂ ತಪ್ಪು. ಇದು ಒಳ್ಳೆಯ ಬೆಳವಣಿಗೆ ಅಲ್ಲ ಎಂದರು.
ಯತ್ನಾಳ್, ಸೋಮಣ್ಣ, ರೇಣುಕಾಚಾರ್ಯ ಸೇರಿ ಯಾರೂ ದೊಡ್ಡವರಲ್ಲ, ಪಕ್ಷ ದೊಡ್ಡದು. ಅಂಬೇಡ್ಕರ್‌ಗೆ ಅಪಮಾನ, ಸಂವಿಧಾನಕ್ಕೆ ಅಪಮಾನ ಮಾಡುವುದು ಸರಿಯಲ್ಲ. ತುಳಿತಕ್ಕೊಳಗಾದವರಿಗೆ ಆಗ ಅಂಬೇಡ್ಕರ್ ಅವರು ಸಂವಿಧಾನ ಬರೆದಿದ್ದಾರೆ. ಅನಂತ್ ಕುಮಾರ್ ಹೆಗ್ಗಡೆ ಮಾತನಾಡುವ ಭರದಲ್ಲಿ ಸಿಎಂ ವಿರುದ್ದ ಏಕವಚನದಲ್ಲಿ ಮಾತನಾಡುವುದು ಸರಿಯಲ್ಲ. ಅನಂತ್ ಕುಮಾರ್ ಹೆಗ್ಗಡೆ ಹೇಳಿಕೆ ಸಾರಾಸಗಟಾಗಿ ತಿರಸ್ಕರಿಸುತ್ತೇವೆ ಎಂದು ತಿಳಿಸಿದರು.
ಟೀಕೆ ಟಿಪ್ಪಣಿ ಆರೋಗ್ಯಕರ ಆಗಿರಬೇಕು. ಹೊಲಸು ಮಾತನಾಡಬಾರದು. ತಂದೆ ತಾಯಿ, ಪಕ್ಷವು ಸಂಸ್ಕೃತಿ ಕಲಿಸಿಕೊಟ್ಟಿದೆ. ಅದೇ ರೀತಿಯಲ್ಲಿ ಮಾತನಾಡಬೇಕು. ನಾವು ಮಾತನಾಡುವಾಗ ನಾಲಗೆ ಹಿಡಿತದಲ್ಲಿರಬೇಕು ಎಂದು ಹೇಳಿದರು.
ಈ ವೇಳೆ ಆರೈಕೆ ಆಸ್ಪತ್ರೆಯ ಮುಖ್ಯಸ್ಥರೂ ಆದ ದಾವಣಗೆರೆ ಲೋಕಸಭೆ ಕ್ಷೇತ್ರದ ಟಿಕೆಟ್ ಆಕಾಂಕ್ಷಿ ಟಿ.ಜಿ.ರವಿಕುಮಾರ್, ಮಾಜಿ ಶಾಸಕ ಎಸ್.ವಿ.ರಾಮಚಂದ್ರಪ್ಪ, ಮಹಾನಗರ ಪಾಲಿಕೆ ಮಾಜಿ ಮೇಯರ್ ಅಜಯ್ ಕುಮಾರ್, ಬಿಜೆಪಿ ಜಿಲ್ಲಾಧ್ಯಕ್ಷ ರಾಜಶೇಖರ್, ಟಿಂಕರ್ ಮಂಜಣ್ಣ, ರಾಜು, ಲೋಕಿಕೆರೆ ನಾಗರಾಜ್ ಮತ್ತಿತರರು ಹಾಜರಿದ್ದರು.












Click it and Unblock the Notifications