ದಾವಣಗೆರೆ : ನಗರಕ್ಕೆ ವಾರಕ್ಕೊಮ್ಮೆ 1 ಗಂಟೆ ಮಾತ್ರ ನೀರು
ದಾವಣಗೆರೆ, ಜೂನ್ 12 : ದಾವಣಗೆರೆ ನಗರಕ್ಕೆ ಬರಗಾಲದ ಬಿಸಿ ತಟ್ಟಿದೆ. ವಾರಕ್ಕೊಮ್ಮೆ 1 ಗಂಟೆ ಮಾತ್ರ ನೀರು ಪೂರೈಕೆ ಮಾಡಲಾಗುತ್ತದೆ. ಮಹಾನಗರ ಪಾಲಿಕೆ ಈ ಕುರಿತು ಜನರಿಗೆ ಮಾಹಿತಿ ನೀಡಿದೆ.
ತುಂಗಭದ್ರಾ ನದಿಯಲ್ಲಿ ನೀರಿನ ಹರಿವು ನಿಂತಿದೆ. ಇದರಿಂದಾಗಿ ರಾಜನಹಳ್ಳಿ ಜಾಕ್‌ವೆಲ್ ಪಂಪ್‌ಹೌಸ್ ಬಳಿ ನೀರು ಸಿಗುವುದು ಕಷ್ಟವಾಗಿದೆ. ಆದ್ದರಿಂದ, ಸಾವಿರ ಹೆಚ್.ಪಿಯ ಪಂಪ್ ಸ್ಥಗಿತಗೊಂಡಿದೆ.
ದಾವಣಗೆರೆ ನಗರಕ್ಕೆ ಶೇ 60ರಷ್ಟು ನೀರು ರಾಜನಹಳ್ಳಿ ಜಾಕ್‌ವೆಲ್‌ನಿಂದ ಪೂರೈಕೆ ಆಗುತ್ತಿತ್ತು. ಆದರೆ, ಈಗ ನದಿ ಬತ್ತಿ ಹೋಗಿರುವುದರಿಂದ ನೀರಿನ ಕೊರತೆ ಎದುರಾಗಿದೆ. ಇದರಿಂದಾಗಿ ಸುಮಾರು 20 ವಾರ್ಡ್‌ಗಳಿಗೆ ನೀರು ಪೂರೈಕೆಗೆ ತೊಂದರೆ ಉಂಟಾಗಿದೆ.

ಕುಂದವಾಡ ಕೆರೆಯಿಂದ ಕೆಲವು ವಾರ್ಡ್‌ಗಳಿಗೆ ಮಹಾನಗರ ಪಾಲಿಕೆ ನೀರು ಪೂರೈಕೆ ಮಾಡುತ್ತಿದೆ. 20 ವಾರ್ಡ್‌ಗಳಿಗೆ ಟಿ.ವಿ.ಸ್ಟೇಷನ್ ಕೆರೆಯಿಂದ ನೀರು ಪೂರೈಕೆ ಮಾಡಲು ಪಾಲಿಕೆ ನಿರ್ಧರಿಸಿದೆ. ಆದರೆ, ವಾರಕ್ಕೊಮ್ಮೆ 1 ಗಂಟೆ ಮಾತ್ರ ನೀರು ಹರಿಸಲಾಗುತ್ತದೆ.
ಭದ್ರಾಜಲಾಶಯದಿಂದ ತುಂಗಭದ್ರಾನದಿಗೆ 3 ಟಿಎಂಸಿ ನೀರು ಬಿಡುಗಡೆ ಮಾಡಬೇಕು ಎಂದು ದಾವಣಗೆರೆ ಜಿಲ್ಲಾಧಿಕಾರಿ ಜಿ.ಎಸ್.ಶಿವಮೂರ್ತಿ ಅವರು ಮೈಸೂರಿನ ಪ್ರಾದೇಶಿಕ ಆಯುಕ್ತರಿಗೆ ಪತ್ರ ಬರೆದಿದ್ದಾರೆ.
ನೀರನ್ನು ಮಿತವಾಗಿ ಬಳಸಿ, ಕುಡಿಯುವ ನೀರಿಗಾಗಿ ಮಾತ್ರ ನೀರನ್ನು ಬಳಕೆ ಮಾಡಿ ಎಂದು ಮಹಾನಗರ ಪಾಲಿಕೆ ಜನರಿಗೆ ಸೂಚನೆ ನೀಡಿದೆ. ಮಳೆ ಬಂದು ನದಿಯಲ್ಲಿ ನೀರು ಹರಿಯಲು ಆರಂಭವಾಗದಿದ್ದರೆ ನೀರಿಗಾಗಿ ಸಂಕಷ್ಟ ಎದುರಾಗಲಿದೆ.











Click it and Unblock the Notifications