ತುಂಗಾ ಭದ್ರಾ ನೀರಿಗೆ ಕೈ ಹಾಕಿದ್ರೆ ರಕ್ತಪಾತವಾದೀತು ಎಚ್ಚರ!
ಹರಿಹರ, ಜೂನ್ 17: ತುಂಗ ಭದ್ರಾ ನದಿ ನೀರನ್ನು ಬೆಂಗಳೂರಿಗೆ ಹರಿಸಿ, ನಗರವಾಸಿಗಳ ಕುಡಿಯುವ ನೀರಿನ ಬವಣೆ ನೀಗಿಸಲು ಕರ್ನಾಟಕ ಸರ್ಕಾರ ಮುಂದಾಗಿರುವುದು ಗೊತ್ತಿರಬಹುದು. ಆದರೆ, ತುಂಗ ಭದ್ರಾ ನೀರಿಗೆ ಕೈ ಹಾಕಿದ್ರೆ ರಕ್ತಪಾತವಾದೀತು ಎಚ್ಚರ ಎಂದು ಸ್ಥಳೀಯ ಸಂಸದರು ಗುಡುಗಿದ್ದಾರೆ.
ಹರಿಹರದ ತರಳಬಾಳು ಶಾಲೆಯಲ್ಲಿ ಮತದಾರರಿಂದ ನೀಡಿದ ಸನ್ಮಾನ ಸ್ವೀಕರಿಸಿ ಮಾತನಾಡಿದ ಬಿಜೆಪಿ ಸಂಸದ ಜಿ.ಎಂ ಸಿದ್ದೇಶ್ವರ, ಈ ಭಾಗದ ಶಿವಮೊಗ್ಗ, ದಾವಣಗರೆ, ಚಿತ್ರದುರ್ಗ ಜಿಲ್ಲೆಯ ರೈತರಿಗೆ ತುಂಗ ಭದ್ರಾ ಜೀವ ನದಿಯಾಗಿದೆ. ಸರಿಯಾಗಿ ಮಳೆ ಬೀಳದೆ ಕುಡಿಯುವ ನೀರಿಗೆ ಹಾಹಾಕಾರ ಎದ್ದಿದೆ. ಇಂಥ ಸಂದರ್ಭದಲ್ಲಿ ಸರ್ಕಾರದ ಪ್ರಸ್ತಾವಿತ ಯೋಜನೆ ಸರಿಯಾಗುದ್ದಲ್ಲ. ಇದು ಅವೈಜ್ಞಾನಿಕ ಕ್ರಮ, ಪರಿಸರ ವಿಜ್ಞಾನಿಗಳ ಸಲಹೆ ಪಡೆಯದೆ ಕೇವಲ ನೀರಾವರಿ ತಜ್ಞರ ಅಭಿಪ್ರಾಯ ಪಡೆದು ಯೋಜನೆಯನ್ನು ಕಾರ್ಯಗತ ಗೊಳಿಸಲು ಎಚ್ ಡಿ ಕುಮಾರಸ್ವಾಮಿ ಅವರ ಸರ್ಕಾರ ಮುಂದಾಗಿದೆ ಎಂದರು.
ಸರ್ಕಾರ ತನ್ನ ಹಠಮಾರಿತನವನ್ನು ಮುಂದುವರೆಸಿದರೆ, ಜಿಲ್ಲೆಯ ಸಂಸದರು, ಶಾಸಕರು ರಾಜೀನಾಮೆ ನೀಡಿ ರಸ್ತೆಗಿಳಿದು ಹೋರಾಟ ಮಾಡಬೇಕಾಗುತ್ತದೆ. ಲಿಂಗನಮಕ್ಕಿ ಅಣೆಕಟ್ಟಿನಿಂದ ಮೊದಲಿಗೆ ಬೆಂಗಳೂರಿಗೆ ಹರಿಸಲಿ ನೋಡೋಣ ಎಂದರು.

ಕಳೆದ ಮುಂಗಾರು ಋತುವಿನಲ್ಲಿ 30 ಟಿಎಂಸಿಯಷ್ಟು ಮಳೆ ಕಂಡಿದ್ದ ಈ ಭಾಗ ಈಗ 1 ಟಿಎಂಸಿ ಮಾತ್ರ ಸಂಗ್ರಹವಾಗಿದೆ. ರೈತರಿಗೆ, ನಾಗರಿಕರಿಗೆ ಸಮಸ್ಯೆಯಾಗಿದೆ. ಜಿಲ್ಲೆಯ 2000ಕ್ಕೂ ಅಧಿಕ ಗ್ರಾಮಗಳಿಗೆ ಕುಡಿಯುವ ನೀರಿನ ಸಮಸ್ಯೆ ಇದೆ ಈ ಬಗ್ಗೆ ಶೀಘ್ರವೇ ಗಮನ ಹರಿಸಲಾಗುವುದು ಎಂದರು.












Click it and Unblock the Notifications