ದಾವಣಗೆರೆ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕನ್ನಡ ರಾಜ್ಯೋತ್ಸವ: ಗೋಕಾಕ ಚಳುವಳಿಯಲ್ಲಿ ಅಣ್ಣಾವ್ರ ಜೊತೆಗಿನ ಹೋರಾಟ ನೆನದ ಬಂಕಾಪುರದ ಚನ್ನಬಸಪ್ಪ

By ದಾವಣಗೆರೆ ಪ್ರತಿನಿಧಿ
|
Google Oneindia Kannada News

ದಾವಣಗೆರೆ, ಅಕ್ಟೋಬರ್ 31 : ಕನ್ನಡ ನಾಡು, ನುಡಿ, ಕರ್ನಾಟಕ ಏಕೀಕರಣ, ಗೋಕಾಕ ಚಳವಳಿ ಸೇರಿದಂತೆ ಹಲವು ಕನ್ನಡಪರ ಹೋರಾಟಗಳಲ್ಲಿ ದಾವಣಗೆರೆ ಹೆಸರು ಯಾವಾಗಲೂ ಮುಂಚೂಣಿಯಲ್ಲಿರುತ್ತದೆ. ಯಾವುದೇ ಕನ್ನಡ ವಿರೋಧಿ ಕೃತ್ಯ ಕಂಡು ಬಂದಾಗ ಪ್ರತಿಭಟನೆಗಳು ನಡೆಯುತ್ತವೆ. ಹಿಂದಿ ಭಾಷೆ ಹೇರಿಕೆ, ಕನ್ನಡ ನಾಮಫಲಕ ಅಳವಡಿಕೆ, ಕನ್ನಡ ಭಾಷೆ ಏಳಿಗೆ, ಸಂಸ್ಕೃತಿ ವಿಚಾರ ಬಂದಾಗ ಯಾವುದೇ ಹೋರಾಟಕ್ಕಾದರೂ ಬೆಂಬಲ ಘೋಷಿಸುತ್ತದೆ ಈ ಬೆಣ್ಣೆನಗರಿ.

ಯಾವುದೇ ಕನ್ನಡ ಪರ ಹೋರಾಟದಲ್ಲಿ ದಾವಣಗೆರೆಯಲ್ಲಿ ಕೇಳಿಬರುವ ಮೊದಲ ಹೆಸರೆಂದರೆ ಗೋಕಾಕ ಚಳವಳಿಯಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದ ಬಂಕಾಪುರದ ಚನ್ನಬಸಪ್ಪರ ಹೆಸರು. ಚೆನ್ನಬಸಪ್ಪ ಇಂದಿಗೂ ಕನ್ನಡತನ ಉಳಿಸಿಕೊಂಡಿರುವ ಅಪ್ಪಟ ಕನ್ನಡ ಹೋರಾಟಗಾರ ಎಂಬುದು ಪ್ರಶಂಸನೀಯ. ದಾವಣಗೆರೆ ನಗರದ ಕೆ. ಬಿ. ಬಡಾವಣೆಯ ಅಜ್ಜಂಪುರ ಶೇಟ್ ಲೇಔಟ್‌ನ ಕೆನರಾ ಬ್ಯಾಂಕ್ ಸಮೀಪದ ಮನೆಯೊಂದರಲ್ಲಿ ವಾಸವಾಗಿರುವ ಬಂಕಾಪುರದ ಚನ್ನಬಸಪ್ಪ ಗೋಕಾಕ ಚಳುವಳಿಯಲ್ಲಿ ಪಾಟೀಲ್ ಪುಟ್ಟಪ್ಪ, ಡಾ. ರಾಜ್‌ಕುಮಾರ್ ಸೇರಿದಂತೆ ಗಣ್ಯರ ಜೊತೆಗೆ ಹೋರಾಟ ಮಾಡಿದ್ದಾರೆ.

ಮಧ್ಯಕರ್ನಾಟಕದ ಹೆಬ್ಬಾಗಿಲಾಗಿರುವ ದಾವಣಗೆರೆ ಹಲವು ಕನ್ನಡ ಪರ ಹೋರಾಟಗಳಲ್ಲಿ ಪ್ರಮುಖ ಪಾತ್ರವಹಿಸದೆ. ಇಲ್ಲಿ ಕರ್ನಾಟಕ ಏಕೀಕರಣಕ್ಕೆ ಸಂಬಂಧಿಸಿದಂತೆ ಎರಡು ಪ್ರಮುಖ ಅಧಿವೇಶನಗಳು ನಡೆದಿದ್ದು ಈಗ ಇತಿಹಾಸ. 1946 ಮತ್ತು 1951ರಲ್ಲಿ ರಾಜನಹಳ್ಳಿ ಹನುಮಂತಪ್ಪರ ಛತ್ರದಲ್ಲಿ ಸಮಾವೇಶ ನಡೆದು, ಮಹತ್ವದ ನಿರ್ಣಯಗಳನ್ನು ಅಂಗೀಕರಿಸಲಾಗಿತ್ತು. ಇಲ್ಲಿಂದ ಹೋರಾಟ ಚುರುಕುಗೊಳಿಸಲಾಗಿತ್ತು. ಆಗ ಪಾಟೀಲ ಪುಟ್ಟಪ್ಪ, ಜಯದೇವ ಲಿಗಾಡೆ, ಹಳ್ಳಿಕೇರಿ ಗುದ್ಲೆಪ್ಪ ಮತ್ತಿತರರು ಈ ಅಧಿವೇಶನದಲ್ಲಿ ಭಾಗವಹಿಸಿದ್ದರು.

Breaking: ಕರ್ನಾಟಕದ ಸಾಹಿತಿ, ಕಲಾವಿದರಿಗೆ 2000 ರೂಪಾಯಿ ಮಾಶಾಸನBreaking: ಕರ್ನಾಟಕದ ಸಾಹಿತಿ, ಕಲಾವಿದರಿಗೆ 2000 ರೂಪಾಯಿ ಮಾಶಾಸನ

 ಕರ್ನಾಟಕ ಏಕೀಕರಣದಲ್ಲಿ ದಾವಣಗೆರೆ ಹೋರಾಟಗಾರರು

ಕರ್ನಾಟಕ ಏಕೀಕರಣದಲ್ಲಿ ದಾವಣಗೆರೆ ಹೋರಾಟಗಾರರು

ಕರ್ನಾಟಕ ಏಕೀಕರಣ ಹೋರಾಟದ ವಿಷಯ ಪ್ರಸ್ತಾಪ ಆದಾಗಲೆಲ್ಲಾ ದಾವಣಗೆರೆಯ ಪ್ರಥಮ ಶಾಸಕರಾದ ಬಳ್ಳಾರಿ ಸಿದ್ದಮ್ಮ, ನಗರಸಭೆ ಮಾಜಿ ಅಧ್ಯಕ್ಷ ಕಾರಡಗಿ ವೀರಭದ್ರಪ್ಪ, ಗುರುದೇವ ನಿಶಾನಿ ಮಠ, ಶಿವಾನಂದಸ್ವಾಮಿ, ಜೆ. ಮಹಮದ್ ಇಮಾಮ್ ಹೆಸರು ಮುಂಚೂಣಿಯಲ್ಲಿ ಬರುತ್ತದೆ. 20 ಕ್ಕೂ ಹೆಚ್ಚು ನಾಯಕರು ಏಕೀಕರಣ ಹೋರಾಟದಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದರು.

ದಾವಣಗೆರೆಯ ಈ ಹೋಟೆಲ್‌ನಲ್ಲಿ ಸಿಗುವುದು ಅಪ್ಪು ಅಚ್ಚುಮೆಚ್ಚಿನ ಅಡುಗೆ!ದಾವಣಗೆರೆಯ ಈ ಹೋಟೆಲ್‌ನಲ್ಲಿ ಸಿಗುವುದು ಅಪ್ಪು ಅಚ್ಚುಮೆಚ್ಚಿನ ಅಡುಗೆ!

 ಮೂರು ತಿಂಗಳ ಕಾಲ ಹೋರಾಟ

ಮೂರು ತಿಂಗಳ ಕಾಲ ಹೋರಾಟ

ಇನ್ನು ಕರ್ನಾಟಕದಲ್ಲಿ ನಡೆದ ಮತ್ತೊಂದು ದೊಡ್ಡ ಹೋರಾಟ ಗೋಕಾಕ ಚಳವಳಿ. ಈ ಚಳವಳಿಗೆ ಶಕ್ತಿ ತುಂಬಿದ ನೆಲ ಅಂದರೆ ದಾವಣಗೆರೆ. ಕನ್ನಡಕ್ಕಾಗಿ ಈಗಿನ ಮಹಾನಗರ ಪಾಲಿಕೆ ಎದುರು ಸುಮಾರು ಮೂರು ತಿಂಗಳ ಕಾಲ ಹೋರಾಟ ನಡೆದಿತ್ತು. ವಕೀಲರು, ರಾಜಕಾರಣಿಗಳು, ಆಟೋಚಾಲಕರು, ವೈದ್ಯರು, ಕಾರ್ಮಿಕರು, ರೈತರು ಹೀಗೆ ಸುತ್ತಮುತ್ತಲಿನ ಜನರು ಭಾರಿ ಸಂಖ್ಯೆಯಲ್ಲಿ ಅಪಾರ ಸ್ಪಂದನೆ ತೋರಿದರು.

ದಾವಣಗೆರೆ ನಿವಾಸಿ ಆಗಿದ್ದ ನೇತಾಜಿ ಪತ್ರಿಕೆ ಸಂಪಾದಕ ಇಟಗಿ ವೇದಮೂರ್ತಿ ಅವರು, ಕರ್ನಾಟಕದ ಏಕೀಕರಣ ಆಗುವವರೆಗೆ ನಿರಂತರವಾಗಿ ಸಕ್ರಿಯವಾಗಿ ಹೋರಾಟದಲ್ಲಿ ತೊಡಗಿಸಿಕೊಂಡಿದ್ದರು. ಕರ್ನಾಟಕ ಏಕೀಕರಣ ಇಲ್ಲವೇ ನನ್ನ ಮರಣ ಎಂಬ ಘೋಷವಾಕ್ಯ ಸಾಕಷ್ಟು ಪ್ರಸಿದ್ಧಿ ಹೊಂದಿತ್ತು. ಅನೇಕ ಲಾವಣಿಕಾರರು ಏಕೀಕರಣದ ಸಂದರ್ಭಕ್ಕನುಗುಣವಾಗಿ ಹಾಡು ರಚಿಸಿ ಹಾಡುವ ಮೂಲಕ, ನಾಟಕ ಪ್ರದರ್ಶಿಸಿ ಜನರಲ್ಲಿ ಕನ್ನಡದ ಅಸ್ಮಿತೆ ಕಾಪಾಡುವ ಪ್ರಯತ್ನ ಮಾಡಿದರು. 1956 ನವೆಂಬರ್ 1 ರಂದು ಕರ್ನಾಟಕ ಏಕೀಕರಣ ಘೋಷಣೆ ಮಾಡಲಾಯಿತು. ಆದರೆ ರಾಜ್ಯದ ಹೆಸರು ಮೈಸೂರು ಎಂದು ಕರೆಯಲಾಯಿತು. ಈ ರಾಜ್ಯಕ್ಕೆ ಕರ್ನಾಟಕ ಎಂದೇ ನಾಮಕರಣ ಮಾಡಬೇಕೆಂದು ಹೋರಾಟ ಶುರುವಾಯ್ತು. ಆಗಲೂ ದಾವಣಗೆರೆಯಲ್ಲಿ ಬೆಂಬಲ ವ್ಯಕ್ತವಾಗಿತ್ತು.

 ಗೋಕಾಕ ಚಳುವಳಿಯ ದೊಡ್ಡ ಸಮಾವೇಶ

ಗೋಕಾಕ ಚಳುವಳಿಯ ದೊಡ್ಡ ಸಮಾವೇಶ

ಇನ್ನು ಗೋಕಾಕ ಚಳವಳಿಗೆ ವರನಟ ರಾಜಕುಮಾರ್ ಎಂಟ್ರಿ ಕೊಟ್ಟ ಮೇಲೆ ಕನ್ನಡ ಜ್ವಾಲೆ ಎಲ್ಲೆಡೆ ಶುರುವಾಯಿತು. ಕಿಚ್ಚು ಹತ್ತಿತ್ತು. ಕನ್ನಡದ ಜಾಗೃತಿ ಹೆಚ್ಚಾಯಿತು. 1982-83ರ ಸಮಯದಲ್ಲಿ ಇಡೀ ಕರುನಾಡು ಗೋಕಾಕ ಚಳವಳಿಗೆ ಬೆಂಬಲ ಸೂಚಿಸಿತ್ತು. ಬೆಂಗಳೂರು, ಹುಬ್ಬಳ್ಳಿಯಲ್ಲಿ ಬಿಟ್ಟರೆ ಅತ್ಯಂತ ದೊಡ್ಡ ಸಮಾವೇಶ ನಡೆದಿದ್ದು ದಾವಣಗೆರೆಯಲ್ಲಿ. ಧಾರವಾಡದ ವಿದ್ಯಾವರ್ಧಕ ಸಂಘ ಇಲ್ಲಿನ ಹೈಸ್ಕೂಲ್ ಮೈದಾನದಲ್ಲಿ ಆಯೋಜಿಸಿದ್ದ ಹೋರಾಟ ಸಭೆಯಲ್ಲಿ ಡಾ. ರಾಜಕುಮಾರ್, ಅಶೋಕ್, ಪತ್ರಕರ್ತ ಸತ್ಯ, ಚಂದ್ರಶೇಖರ ಪಾಟೀಲ್, ಪಾಟೀಲ ಪುಟ್ಟಪ್ಪ, ಎಂ. ಚಿದಾನಂದಮೂರ್ತಿ, ಎಂ. ಎಂ. ಕಲಬುರ್ಗಿ ಸೇರಿದಂತೆ ಇಡೀ ಕನ್ನಡ ಚಿತ್ರರಂಗವೇ ಹೋರಾಟದಲ್ಲಿ ಪಾಲ್ಗೊಂಡಿತ್ತು.

ರಾಜಕುಮಾರ್ ಬಂದಿದ್ದ ಈ ಹೋರಾಟಕ್ಕೆ ಸೇರಿದ್ದ ಜನಸಾಗರ ಅದ್ವಿತೀಯ. ಆ ಕಾಲದಲ್ಲಿ ಲಕ್ಷಾಂತರ ಜನರು ಬಂದಿದ್ದರು. ಗೋಕಾಕ ಚಳವಳಿಯ ಮತ್ತೊಂದು ಮೈಲಿಗಲ್ಲು ಸೃಷ್ಟಿಸಿದ್ದೇ ಇಲ್ಲಿ. ಅಷ್ಟು ಬೆಂಬಲ ಸಿಕ್ಕಿತ್ತು. ಈಗಲೂ ಜನರು ಸೇರಿದ್ದು ಕಣ್ಣ ಮುಂದೆಯೇ ಇದೆ ಎನ್ನುತ್ತಾರೆ ಕನ್ನಡಪರ ಹೋರಾಟಗಾರ ಬಂಕಾಪುರದ ಚನ್ನಬಸಪ್ಪ.

 ಪ್ರತಿಭಟನೆಗೆ ಭಾರಿ ಸ್ಪಂದನೆ

ಪ್ರತಿಭಟನೆಗೆ ಭಾರಿ ಸ್ಪಂದನೆ

ದಾವಣಗೆರೆಯಲ್ಲಿ ಗೋಕಾಕ ಚಳವಳಿ ಹೋರಾಟಗಾರರನ್ನು ಬಂಧಿಸಲಾಗಿತ್ತು. ಸುಮಾರು 77 ಜನರು ಜೈಲುವಾಸ ಅನುಭವಿಸಿದ್ದರು. ಚಳವಳಿಯಲ್ಲಿ ಪ್ರಮುಖರಾಗಿದ್ದ ಬಂಕಾಪುರದ ಚನ್ನಬಸಪ್ಪ ಹಾಗೂ ಪಿ. ಹಾಲೇಶ್ ಅವರಿಗೆ ಯಾವುದೇ ಕಾರಣಕ್ಕೂ ನೀವು ಬಂಧನಕ್ಕೆ ಒಳಗಾಗಬಾರದು. ಇಲ್ಲಿನ ಹೋರಾಟ ರೂಪುರೇಷೆ ರೂಪಿಸಿ ಎಂದು ಸೂಚನೆ ಕೊಡಲಾಗಿತ್ತು. ಈ ಕಾರಣಕ್ಕೆ ಸೆರೆಯಾಗಲಿಲ್ಲ. ಉಳಿದವರು ಸೆರೆಯಾದರೂ ಹೋರಾಟ ಮಾತ್ರ ಮುಂದುವರಿದೇ ಇತ್ತು. ಆರಂಭದಲ್ಲಿ ಪ್ರತಿಕ್ರಿಯೆ ಅಷ್ಟೇನೂ ಇರಲಿಲ್ಲ. ದಿನ ಕಳೆದಂತೆ ಜನರೂ ಸಹ ಹೆಚ್ಚಾಗಿ ಬರತೊಡಗಿದರು. ಜಾತಿ, ಧರ್ಮ, ದೊಡ್ಡವರು, ಸಣ್ಣವರು ಎಂಬುದು ಲೆಕ್ಕಕ್ಕಿಲ್ಲ ಎಂಬಂತೆ ಪ್ರತಿಭಟನೆಗೆ ಭಾರೀ ಸ್ಪಂದನೆ ಸಿಕ್ಕಿತು ಎಂದು ಎಂದು ನೆನಪಿಸಿಕೊಂಡರು

 80ರ ವೃದ್ಧೆ ಅಶೀರ್ವಾದ ಪಡೆದಿದ್ದ ರಾಜ್‌ಕುಮಾರ್

80ರ ವೃದ್ಧೆ ಅಶೀರ್ವಾದ ಪಡೆದಿದ್ದ ರಾಜ್‌ಕುಮಾರ್

ಇನ್ನು ದಾವಣಗೆರೆಗೆ ರಾಜಕುಮಾರ್ ಆಗಮಿಸುತ್ತಾರೆ ಎಂಬ ಕಾರಣಕ್ಕೆ 80 ರ ವೃದ್ಧೆ ಕಾದು ಕುಳಿತಿದ್ದರು. ದಾವಣಗೆರೆ ಸಮಾವೇಶ ಮುಗಿಸಿಕೊಂಡು ಹರಪನಹಳ್ಳಿಗೆ ರಾಜಕುಮಾರ್ ತೆರಳುತ್ತಾರೆ ಎಂದು ಗೊತ್ತಾದ ಹಿನ್ನೆಲೆಯಲ್ಲಿ ಕಾದೇ ಕುಳಿತಿದ್ದರು ಅಜ್ಜಿ. ರಾಜಕುಮಾರ್ ಅವರಿಗೆ ಈ ವಿಷಯ ಗೊತ್ತಿರಲಿಲ್ಲ. ಇಲ್ಲಿನ ಸಮಾವೇಶದಲ್ಲಿ ಪಾಲ್ಗೊಂಡು ಹರಪನಹಳ್ಳಿಗೆ ಹೋದರು. ಆಮೇಲೆ ವಯಸ್ಸಾದ ವೃದ್ಧೆಯೊಬ್ಬರು ನಿಮ್ಮನ್ನು ನೋಡಬೇಕೆಂಬ ಕಾರಣಕ್ಕೆ ದಿನದಿಂದ ಕಾಯುತ್ತಿದ್ದಾರೆ ಎಂದರು. ಆಗ ತಡಮಾಡದೇ ವಾಪಸ್ ಬಂದಿದ್ದ ರಾಜಕುಮಾರ್ ಅವರು, ಅಜ್ಜಿ ಕಾಲಿಗೆ ಬಿದ್ದು ಆಶೀರ್ವಾದ ಪಡೆದರು. ಜೊತೆಗೆ ಕನ್ನಡಪರ ಹೋರಾಟಕ್ಕೆ ಬೆಂಬಲಿಸಿ ಎಂದು ಮನವಿ ಮಾಡಿದ್ದ ರಾಜಕುಮಾರ್ ಅವರ ಸರಳತೆ ಇಂದಿಗೂ ಎಲ್ಲರೂ ನೆನಪು ಮಾಡಿಕೊಳ್ಳುತ್ತಾರೆ ಎನ್ನುತ್ತಾರೆ ಬಂಕಾಪುರದ ಚನ್ನಬಸಪ್ಪರು.

ಒಟ್ಟಿನಲ್ಲಿ ದಾವಣಗೆರೆಯಲ್ಲಿ ಪ್ರತಿಭಟನೆ, ಲಾಠಿ ಚಾರ್ಜ್, ಗೋಲಿಬಾರ್ ಸೇರಿದಂತೆ ಹಲವು ರೀತಿಯ ಹೋರಾಟಗಳು ಕನ್ನಡಕ್ಕಾಗಿ ನಡೆದಿವೆ. ಕನ್ನಡಕ್ಕೆ ಧಕ್ಕೆ ಬಂದಾಕ್ಷಣ ಹೋರಾಟ, ಚಳವಳಿ ಶುರುವಾಗುತ್ತದೆ. ಕರ್ನಾಟಕ ಏಕೀಕರಣ ಚಳವಳಿ, ಗೋಕಾಕ ಹೋರಾಟದಲ್ಲಿ ದಾವಣಗೆರೆ ಹೆಸರು ಚಿರಸ್ಥಾಯಿಯಾಗಿ ಉಳಿದಿದೆ.

English summary
Story of Bankapura Channabasappa who participate Gokak movemnet in Davanagere with Dr Rajkumar,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X