ದಾವಣಗೆರೆ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ದಾವಣಗೆರೆಗೆ ನೀರು ಪೂರೈಕೆ ಮಾಡುವ ತೂಗು ತೊಟ್ಟಿಲು ಕುಸಿತ: ಜಿಲ್ಲಾಧಿಕಾರಿ ಭರವಸೆ ಏನು?

By ದಾವಣಗೆರೆ ಪ್ರತಿನಿಧಿ
|
Google Oneindia Kannada News

ದಾವಣಗೆರೆ, ಅಕ್ಟೋಬರ್‌, 06: ಭದ್ರಾ ಜಲಾಶಯದಿಂದ ದಾವಣಗೆರೆಗೆ ನೀರು ಪೂರೈಕೆ ಮಾಡುವ ಶ್ಯಾಗಲೆ ಹಳ್ಳದ ತೂಗು ತೊಟ್ಟಿಲು ಕುಸಿದು ಬಿದ್ದಿದೆ. ಭಾರಿ ಮಳೆಯಿಂದಾಗಿ ತೊಟ್ಟಿಲು ಕುಸಿದ ಪರಿಣಾಮ ಹತ್ತಾರು ಹಳ್ಳಿಗಳಿಗೆ ತೊಂದರೆ ಆಗಿದೆ. ತಾಲೂಕಿನ ನಲ್ಕುಂದ ಗ್ರಾಮದ ಬಳಿ ತೂಗು ತೊಟ್ಟಿಲು ಮುರಿದಿರುವುದರಿಂದ ನೀರು ಪೋಲಾಗುತ್ತಿದೆ. ಇದರಿಂದ ರೈತರು ಕಂಗಾಲಾಗಿದ್ದಾರೆ.

ಶ್ಯಾಗಲೆ ಹಳ್ಳದ ತೊಟ್ಟಿಲು ಮುರಿದು ಬಿದ್ದ ಪರಿಣಾಮ ಇದರ ನೀರು ಹಳ್ಳಕ್ಕೆ ಹರಿದು ಹೋಗುತ್ತಿದೆ. ಬಾಡಾದಿಂದ ಸುಮಾರು 7 ಕಿಲೋ ಮೀಟರ್ ದೂರದಲ್ಲಿರುವ ನಲ್ಕುಂದದ ಮೂಲಕ ಹಾದು ಹೋಗುವ ಈ ತೊಟ್ಟಿಲು ಸೇತುವೆಯು ಕಳೆದ ಕೆಲವು ದಿನಗಳಿಂದ ನಿರಂತರ ಸುರಿಯುತ್ತಿರುವ ಮಳೆಗೆ ದುರ್ಬಲಗೊಂಡಿತ್ತು. ಸದ್ಯ ಇದರಿಂದ ಯಾವುದೇ ಪ್ರಾಣಹಾನಿ, ಬೆಳೆ ಹಾನಿ ಉಂಟಾಗಿಲ್ಲ. ಈ ತೂಗು ತೊಟ್ಟಿಲನ್ನು ಕೂಡಲೇ ಸರಿಪಡಿಸದೇ ಇದ್ದರೆ ದಾವಣಗೆರೆ ನಗರಕ್ಕೆ ನೀರು ಪೂರೈಸಲು ಆಗುವುದಿಲ್ಲ. ಆವರಗೊಳ್ಳ, ಕಕ್ಕರಗೊಳ್ಳ, ರಾಂಪುರ, ನಲ್ಕುಂದ, ಉಪನಾಯಕನಹಳ್ಳಿ ಸಹಿತ ಅನೇಕ ಹಳ್ಳಿಗಳ ರೈತರಿಗೆ ಭತ್ತ ಬೆಳೆಯುವ ಸಮಯಕ್ಕೆ ನೀರಿಲ್ಲದಂತಾಗಲಿದೆ ಎಂದು ಸ್ಥಳೀಯರು ಜಿಲ್ಲಾಡಳಿತದ ಗಮನಕ್ಕೆ ತಂದಿದ್ದಾರೆ.

ಹಾವು ಕಚ್ಚಿದರೂ ಏನೂ ಆಗುವುದಿಲ್ಲ; ನಾಗೇನಹಳ್ಳಿಯ ವಿಶೇಷತೆಹಾವು ಕಚ್ಚಿದರೂ ಏನೂ ಆಗುವುದಿಲ್ಲ; ನಾಗೇನಹಳ್ಳಿಯ ವಿಶೇಷತೆ

ಈ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳು ಅಧಿಕಾರಿಗಳ ಸಮೇತ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ತೊಟ್ಟಿಲು ಕುಸಿದು ಬಿದ್ದಿರುವುದನ್ನು ಗಮನಿಸಿದ್ದಾರೆ. ನಂತರ ಅಧಿಕಾರಿಗಳಿಗೆ ತರಾಟೆಗೆ ತೆಗೆದುಕೊಂಡ ಅವರು, ಕೂಡಲೇ ಸರಿಪಡಿಸುವಂತೆ ಸೂಚಿಸಿದ್ದಾರೆ.

 ಕಾಮಗಾರಿ ಆರಂಭಿಸುವುದಾಗಿ ಭರವಸೆ

ಕಾಮಗಾರಿ ಆರಂಭಿಸುವುದಾಗಿ ಭರವಸೆ

ತಾಂತ್ರಿಕ ಪರಿಣಿತರ ತಂಡ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದು, ಭದ್ರಾ ಆಣೆಕಟ್ಟೆಯಿಂದ 2,150 ಕ್ಯೂಸೆಕ್ ಹರಿಯುತ್ತಿದ್ದ ನೀರನ್ನು ನಿಲ್ಲಿಸಲಾಗಿದೆ. ನೀರು ಸಂಪೂರ್ಣ ನಿಂತ ಬಳಿಕ ತುರ್ತು ಕಾಮಗಾರಿ ಆರಂಭಿಸುವುದಾಗಿ ಭರವಸೆ ನೀಡಿದ್ದಾರೆ. ಈ ಅನಾಹುತದ ಬಗ್ಗೆ ರೈತ ಮುಖಂಡ ಹುಚ್ಚವ್ವನಹಳ್ಳಿ ಮಂಜುನಾಥ್ ನೀರಾವರಿ ಇಲಾಖೆ ಅಧಿಕಾರಿಗಳ ವಿರುದ್ಧ ಸ್ಥಳದಲ್ಲಿಯೇ ಜಿಲ್ಲಾಧಿಕಾರಿಗಳಿಗೆ ದೂರು ನೀಡಿದರು. ಇದೀಗ ಒಡೆದು ಹೋಗಿರುವ ತೂಗು ತೊಟ್ಟಿಲು ಅನಾಹುತಕ್ಕೆ ನಿಗಮದ ಇಂಜಿನಿಯರುಗಳೇ ನೇರ ಕಾರಣಕರ್ತರಾಗಿದ್ದಾರೆ. ಅತಿ ಹೆಚ್ಚಿನ ಪ್ರಮಾಣದಲ್ಲಿ ನೀರು ಬಂದಾಗ ತೊಟ್ಟಿಲಿನ ಹಿಂಭಾಗ ಇರುವ ಮೂರು ಗೇಟುಗಳನ್ನು ತೆರೆದು ಹಳ್ಳಕ್ಕೆ ನೀರು ಹರಿಸುವ ವ್ಯವಸ್ಥೆ ಇತ್ತು. ಆದರೆ ಇಲಾಖೆ ಅಧಿಕಾರಿಗಳು ಈ ಗೇಟ್‌ಗಳನ್ನು ಸಿಮೆಂಟ್‌ನಿಂದ ಮುಚ್ಚಿದ್ದಾರೆ. ಈ ತಾಂತ್ರಿಕ ಕಾರಣಗಳಿಂದ ತೂಗು ತೊಟ್ಟಿಲು ಸಂಪೂರ್ಣ ಹಾನಿಯಾಗಿದೆ ಎಂದು ಆರೋಪಿಸಿದರು.

 ಅಧಿಕಾರಿಗಳ ವಿರುದ್ಧ ರೊಚ್ಚಿಗೆದ್ದ ರೈತರು

ಅಧಿಕಾರಿಗಳ ವಿರುದ್ಧ ರೊಚ್ಚಿಗೆದ್ದ ರೈತರು

ಒಂದು ವರ್ಷದಿಂದ ಈ ಭಾಗದ ರೈತರು ತೂಗು ತೊಟ್ಟಿಲಿನಿಂದ ನೀರು ಸೋರಿಕೆ ಆಗುತ್ತಿರುವುದನ್ನು ವಿಡಿಯೋ ಮಾಡಿ ಅಧಿಕಾರಿಗಳ ಗಮನಕ್ಕೆ ತಂದಿದ್ದರು. ಆದರೂ ಕೂಡ ಅದರ ದುರಸ್ಥಿಗೆ ಇಲಾಖೆಯ ಅಧಿಕಾರಿಗಳು ಗಮನಹರಿಸದೇ ಇರುವುದು ಇಂದಿನ ಅನಾಹುತಕ್ಕೆ ಕಾರಣವಾಗಿದೆ. ಅಲ್ಲದೇ ಕೋಟ್ಯಂತರ ರೂಪಾಯಿ ಮೌಲ್ಯದ ಬೆಳೆ ನಾಶವಾಗಿದೆ. ಈ ಹಿನ್ನೆಲೆಯಲ್ಲಿ ಸಂಬಂಧಿಸಿದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಮಂಜುನಾಥ್ ಒತ್ತಾಯಿಸಿದರು.

 ಭತ್ತ ಬೆಳೆದ ರೈತಾಪಿ ವರ್ಗ ಆತಂಕ

ಭತ್ತ ಬೆಳೆದ ರೈತಾಪಿ ವರ್ಗ ಆತಂಕ

ಇನ್ನು ಎಪಿಎಂಸಿ ಮಾಜಿ ಅಧ್ಯಕ್ಷ‌ ‌ಮುದೇಗೌಡರ ಗಿರೀಶ್ ಮಾತನಾಡಿ, ಒಂದು ವೇಳೆ ತೂಗು ತೊಟ್ಟಿಲು ಸರಿಪಡಿಸದಿದ್ದರೆ, ಅಥವಾ ತಡವಾಗಿ ನೀರು ಹರಿಸುವುದು ವಿಳಂಬವಾದರೆ ರೈತರಿಗೆ ತುಂಬಾ ತೊಂದರೆ ಆಗಲಿದೆ. ಮತ್ತು ಮಳೆ ಕೂಡ ಬರದಿದ್ದರೆ ದಾವಣಗೆರೆ ಭಾಗದಲ್ಲಿ 60 ರಿಂದ 70 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಬೆಳೆದು ನಿಂತಿರುವ ಭತ್ತದ ಬೆಳೆ ನಾಶವಾಗಲಿದೆ. ತುರ್ತಾಗಿ ಜಿಲ್ಲಾಡಳಿತ ಕ್ರಮ ಕೈಗೊಳ್ಳಬೇಕು ಎಂದು ಡಿಸಿ ಕಚೇರಿ ಎದುರು ವಿವಿಧ ನಾಲಾ ವ್ಯಾಪ್ತಿಯ ಭತ್ತ ಬೆಳೆಗಾರರು ಆಗ್ರಹಿಸಿದ್ದಾರೆ.

ಈ ಸಂದರ್ಭದಲ್ಲಿ ದಾವಣಗೆರೆ ಎಪಿಎಂಸಿ ಮಾಜಿ ಅಧ್ಯಕ್ಷ ಮುದೇಗೌಡ್ರ ಗಿರೀಶ್, ವಿ.ಎನ್.ಪ್ರಕಾಶ್, ರೈತ ಯರವನಾಗತಿಹಳ್ಳಿ ಬಾಲಾಜಿ, ಕೈದಾಳು ರವಿಕುಮಾರ್, ಚಿಕ್ಕತೊಗಲೇರಿ ಕೆಂಚಪ್ಪ, ಆಲೂರು ಪರಶುರಾಮ್, ಹಿರೆಕೋಗಲೂರು ಕುಮಾರ್, ನೀರು ಬಳಕೆದಾರರ ಸಹಕಾರ ಸಂಘದ ಅಧ್ಯಕ್ಷರು ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

English summary
Supply of water from Shyagale Halla rivulet disturbed, ten villages of Davanagere suffering. know more,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X