ಸಿಎಂ ಬದಲಾವಣೆ ವಿಚಾರ: ಕಾಂಗ್ರೆಸ್ ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪ ಯೂ ಟರ್ನ್
ದಾವಣಗೆರೆ, ಸೆಪ್ಟೆಂಬರ್, 13: ರಾಜ್ಯದಲ್ಲಿ ಸಿಎಂ ಸಿದ್ದರಾಮಯ್ಯ ವಿರುದ್ಧ ಮುಡಾ ಹಗರಣ ಪ್ರಕರಣ ಕೇಳಿ ಬಂದಿದ್ದು, ಇದನ್ನೇ ಬಂಡವಾಳ ಮಾಡಿಕೊಂಡ ವಿಪಕ್ಷಗಳು ಕಾಂಗ್ರೆಸ್ ಸರ್ಕಾರದ ವಿರುದ್ಧ ಮುಗಿಬೀಳುತ್ತಿವೆ. ಮತ್ತೊಂದೆಡೆ ಸಿಎಂ ರೇಸ್‌ನಲ್ಲಿ ನಾವೂ ಇದ್ದೇವೆ ಎನ್ನುವ ಕೂಗುಗಳು ಸ್ವಪಕ್ಷದಲ್ಲೇ ಕೇಳಿಬರುತ್ತಿವೆ. ಇನ್ನೂ ಇದೀಗ ಶಾಮನೂರು ಶಿವಶಂಕರಪ್ಪನವರು ಈ ಬಗ್ಗೆ ಪ್ರತಿಕ್ರಿಯಿಸಿದ್ದಾರೆ.
ನಿನ್ನೆಯಷ್ಟೇ (ಸೆಪ್ಟೆಂಬರ್ 12) ದಾವಣಗೆರೆಯಲ್ಲಿ ಮಾತನಾಡಿದ್ದ ಶಾಮನೂರು ಶಿವಶಂಕರಪ್ಪ ಅವರು, ಸಿಎಂ ಬದಲಾವಣೆ ವಿಚಾರ ಬಂದ್ರೆ ನಾನು ಕೂಡ ಸಿಎಂ ಸ್ಥಾನಕ್ಕೆ ಸ್ಪರ್ಧೆ ಮಾಡುತ್ತೇನೆ ಎನ್ನುವ ಹೇಳಿಕೆಯನ್ನು ನೀಡಿದ್ದರು. ಆದರೆ ಇದೀಗ ಇಂದು (ಸೆಪ್ಟೆಂಬರ್ 13) ಸಿದ್ದರಾಮಯ್ಯನವರೇ ಸಿಎಂ ಆಗಿ ಮುಂದುವರೆಯಲಿದ್ದಾರೆ ಎಂದು ಹೇಳಿದ್ದಾರೆ.

ಬಿಜೆಪಿಯ ಕೆಲವು ಮುಖಂಡರು ಸಿದ್ದರಾಮಯ್ಯನವರು ಸಿಎಂ ಸ್ಥಾನದಿಂದ ಕೆಳಗೆ ಇಳಿಯುತ್ತಾರೆ ಎಂದು ತಿರುಕನ ಕನಸು ಕಾಣುತ್ತಿದ್ದಾರೆ. ಆದರೆ, ಸಿದ್ದರಾಮಯ್ಯ ಉತ್ತಮ ಆಡಳಿತ ನೀಡುತ್ತಿದ್ದು, ಅವರೇ ಮುಖ್ಯಮಂತ್ರಿಯಾಗಿ ಮುಂದುವರೆಯಲಿದ್ದಾರೆ ಎಂದು ಕಾಂಗ್ರೆಸ್‌ನ ಹಿರಿಯ ಶಾಸಕ ಡಾ.ಶಾಮನೂರು ಶಿವಶಂಕರಪ್ಪ ಹೇಳಿದರು.
ಸಿದ್ದರಾಮಯ್ಯನವರು ಸಿಎಂ ಆಗಿರುವುದರಿಂದಲೇ 5 ಗ್ಯಾರಂಟಿ ಯೋಜನೆಗಳನ್ನು ನೀಡಿದರು. ರಾಜ್ಯದಲ್ಲಿ ಆರ್ಥಿಕ ಸಮತೋಲ ಇದ್ದು, ಹಣಕಾಸು ಪರಿಸ್ಥಿತಿಯೂ ಉತ್ತಮವಾಗಿದೆ. ಶಾಸಕರ ಕ್ಷೇತ್ರಗಳ ಅಭಿವೃದ್ಧಿಗೆ ಅನುದಾನ ಬಿಡುಗಡೆ ಆಗುತ್ತಿದೆ ಎಂದು ಹೇಳಿದರು.
ಎಂಬಿ ಪಾಟೀಲ್ ಹೇಳಿದ್ದೇನು?: ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಎಂಬಿ ಪಾಟೀಲ್ ಅವರು, ಕಾಂಗ್ರೆಸ್‌ನಲ್ಲಿ ಸಿಎಂ ಬದಲಾವಣೆಯಂತೂ ಇಲ್ಲ, ಸಿದ್ದರಾಮಯ್ಯ ಸಿಎಂ ಆಗಿದ್ದಾರೆ, ಅವರೇ ಮುಂದುವರೆಯುತ್ತಾರೆ. ಇನ್ನು ಸಿಎಂ ಆಗುವುದಕ್ಕೆ ಸೀನಿಯಾರಿಟಿ ಬೇಕಿಲ್ಲ. ಆದರೂ ಒಂದು ಮಾತು ಹೇಳುತ್ತೇನೆ. ಕಾಂಗ್ರೆಸ್‌ನಲ್ಲಿ ನಾನು ಕೂಡ ಸಿಎಂ ಆಗುತ್ತೇನೆ ಎಂದು ಹೇಳುವ ಮೂಲಕ ಗಮನ ಸೆಳೆದಿದ್ದಾರೆ.
ಶಿವಾನಂದ ಪಾಟೀಲ್ ಅಂತೂ ಸಿಎಂ ಆಗುವುದಿಲ್ಲ. ಇನ್ನು ಅವರು ಇದೀಗ ಜನತಾ ದಳದಿಂದ ಕಾಂಗ್ರೆಸ್‌ಗೆ ಬಂದಿದ್ದಾರೆ. ಸಿಎಂ ಬದಲಾವಣೆಯಂತಹ ಸನ್ನಿವೇಶ ಸದ್ಯ ಇದೀಗ ಬಂದಿಲ್ಲ. ಸಿದ್ದರಾಮಯ್ಯನವರೇ ಸಿಎಂ ಆಗಿದ್ದಾರೆ, ಮುಂದೆಯೂ ಇರುತ್ತಾರೆ. ಮತ್ತೊಂದೆಡೆ ನಾನು ಕೂಡ ಹಿರಿಯ ಸದಸ್ಯನಿದ್ದೇನೆ. ಒಂದಲ್ಲ ಒಂದು ದಿನ ಮುಖ್ಯಮಂತ್ರಿ ಆಗುತ್ತೇನೆ ಎಂಂದು ಹೇಳಿದ್ದಾರೆ.
ಇನ್ನು ಮುಡಾ ಪ್ರಕರಣವನ್ನು ಬೇರೆ ಕಡೆ ತಿರುಗಿಸಲು ನಟ ದರ್ಶನ್ ಫೋಟೋ ಲೀಕ್ ಮಾಡಿಸಿದ್ದಾರೆ ಎಂಬ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿಕೆಗೆ ಪ್ರತಿಕ್ರಿಯಿಸಿ, ಪ್ರಹ್ಲಾದ್ ಜೋಶಿ ತಿಳಿದವರಾಗಿದ್ದಾರೆ. ಅವರು ಈ ರೀತಿ ಮಾತನಾಡುವುದು ಸರಿಯಲ್ಲ. ದರ್ಶನ್ ರಾಜಾತಿಥ್ಯ ವಿಚಾರ ಗಂಭೀರವಾದ ಪ್ರಕರಣ ಹಾಗೂ ಆರೋಪವಾಗಿದೆ. ಈ ಘಟನೆಯನ್ನು ಸರ್ಕಾರ ಗಂಭೀರವಾಗಿ ತೆಗೆದುಕೊಂಡಿದೆ. ಆದ್ದರಿಂದ ದರ್ಶನ್ & ಗ್ಯಾಂಗ್ ಅನ್ನು ಬೇರೆ ಬೇರೆ ಜೈಲಿಗೆ ಶಿಫ್ಟ್ ಮಾಡಲಾಗಿದೆ ಎಂದು ಹೇಳಿದರು.
ಸೈಟ್ ಹಂಚಿಕೆ ಆಗಿದ್ದು ಬಿಜೆಪಿ ಸರ್ಕಾರದ ಅವಧಿಯಲ್ಲಿ, ಇದರಲ್ಲಿ ಸಿದ್ದರಾಮಯ್ಯನವರ ಪಾಲು ಏನಿದೆ? ಮುಡಾದಿಂದ ಯಾರೂ ಭಯಗೊಂಡಿಲ್ಲ. ಕಾನೂನಾತ್ಮಕವಾಗಿ ಹೋರಾಟ ಮಾಡುತ್ತಿದ್ದೇವೆ. ಇದರಲ್ಲಿ ನಮಗೆ ಜಯ ಸಿಕ್ಕೆ ಸಿಗುತ್ತದೆ. ಹಗಲು ಕನಸ್ಸು ಬೇಡ , ರಾಜ್ಯಪಾಲರ ನಡವಳಿಕೆ ಮಾತ್ರ ಕಾನೂನು ಬಾಹಿರವಾಗಿದೆ ಎಂದು ಆಕ್ರೊಶ ಹೊರಹಾಕಿದರು.












Click it and Unblock the Notifications