'ಮುಂದಿನ ಸಿಎಂ ಸಿದ್ದರಾಮಯ್ಯ': ದಾವಣಗೆರೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಘೋಷಣೆ
ದಾವಣಗೆರೆ, ಜು.13: ಇನ್ನು ಚುನಾವಣೆಯೇ ಘೋಷಣೆ ಆಗಿಲ್ಲ. ಸ್ವತಃ ಸಿದ್ದರಾಮಯ್ಯ ಅವರೇ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಯಾರು ಸಿಎಂ ಆಗಬೇಕು ಎಂಬುದನ್ನು ಹೈಕಮಾಂಡ್ ನಿರ್ಧಾರ ಮಾಡುತ್ತೆ ಎಂದಿದ್ದರೂ, ಅಭಿಮಾನಿಗಳು ಮಾತ್ರ ಮುಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಜೈ ಎಂಬ ಘೋಷಣೆ ಹಾಕುವುದನ್ನು ನಿಲ್ಲಿಸಿಲ್ಲ.
ಬಾಪೂಜಿ ಗೆಸ್ಟ್ ಹೌಸ್ ಗೆ ಬಂದು ವಿಶ್ರಾಂತಿ ಪಡೆದ ಬಳಿಕ ಹೊರಗಡೆ ಬರುವಾಗ ನೆರೆದಿದ್ದ ನೂರಾರು ಸಂಖ್ಯೆಯ ಅಭಿಮಾನಿಗಳು ಮುಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅಂತಾಲೇ ಪದೇ ಪದೇ ಘೋಷಣೆ ಹಾಕಿದರು. ಇದಕ್ಕೆ ನಗುತ್ತಲೇ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ ವಿಜಯಸಂಕೇತ ತೋರಿ ಕಾರಿನಿಂದ ಹೊರಟರು. ಸೆಲ್ಫಿಗೆ ಮುಗಿಬಿದ್ದ ಕಾರ್ಯಕರ್ತರು ಇನ್ನು ಕಾಂಗ್ರೆಸ್ ಶಾಸಕ ಶಾಮನೂರು ಶಿವಶಂಕರಪ್ಪ ಅವರ ಮನೆಗೆ ಬಂದಿದ್ದ ಸಿದ್ದರಾಮಯ್ಯ ಅಲ್ಲಿಯೇ ಊಟ ಮಾಡಿದರು. ಈ ವೇಳೆ ಶಾಮನೂರು ಶಿವಶಂಕರಪ್ಪರ ಜೊತೆ ಸಮಾಲೋಚನೆ ನಡೆಸಿದರು. ಸುಮಾರು ಹತ್ತು ನಿಮಿಷಗಳ ಕಾಲ ಚರ್ಚೆ ನಡೆಸಿದರು. ಈ ವೇಳೆಯೂ ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು, ಅಭಿಮಾನಿಗಳು ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಸೆಲ್ಫಿ ತೆಗೆಸಿಕೊಳ್ಳಲು ತಾ ಮುಂದು ನಾ ಮುಂದು ಅಂತಾ ಮುಗಿಬಿದ್ದರು. ಇದಾದ ಬಳಿಕ ಹೊರಗಡೆ ಬಂದ ಸಿದ್ದರಾಮಯ್ಯ ಅವರಿಗೆ ಮುಂದಿನ ಸಿಎಂ ಸಿದ್ದರಾಮಯ್ಯ ಅಂತಾ ಕೂಗಿದರು. ಈ ವೇಳೆ ಕೆಲವರು ಹೌದು ಹುಲಿಯಾ ಅಂತಾಲೂ ಘೋಷಣೆ ಹಾಕಿದರು.
ಬೈರತಿ ಬಸವರಾಜ್ ಖಜಾಂಚಿ...!
ಇನ್ನು ಬಾಯ್ತಪ್ಪಿದ ಸಿದ್ದರಾಮಯ್ಯ ಅವರು 75 ನೇ ಜನುಮದಿನಾಚರಣೆಯ ಸಮಿತಿ ಖಜಾಂಚಿ ಬೈರತಿ ಬಸವರಾಜ ಎಂದು ಎರಡರಿಂದ ಮೂರು ಬಾರಿ ಹೇಳಿದರು. ಈ ವೇಳೆ ಅಲ್ಲಿದ್ದವರು ಗಮನಕ್ಕೆ ತಂದಾಗ ಸಿದ್ದರಾಮಯ್ಯ ಅವರು, ಬೈರತಿ ಬಸವರಾಜ್ ಅಲ್ಲ, ಭೈರತಿ ಸುರೇಶ್ ಎಂದು ಹೇಳಿದರು.

ಸಿಎಂ ಯಾರಾಗಬೇಕೆಂಬುದು ಹೈಕಮಾಂಡ್ ನಿರ್ಧರಿಸುತ್ತೆ:
ದಾವಣಗೆರೆಯಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಮಾತನಾಡಿ, ಮುಖ್ಯಮಂತ್ರಿ ಯಾರಾಗಬೇಕು ಎಂಬುದು ಪಕ್ಷದ ಹೈಕಮಾಂಡ್ ತೆಗೆದುಕೊಳ್ಳುವ ನಿರ್ಧಾರ. ಯಾರು ಸಿಎಂ ಆಗಬೇಕೆಂದು ಹೊಸದಾಗಿ ಆಯ್ಕೆಯಾದ ಶಾಸಕರ ಅಭಿಪ್ರಾಯದ ಮೇಲೆ ತೀರ್ಮಾನಕ್ಕೆ ಬರಲಾಗುತ್ತದೆ. ಎಐಸಿಸಿ ಅಧಿನಾಯಕ ರಾಹುಲ್ ಗಾಂಧಿ ಅವರು ನಾನೇ ಸಿಎಂ ಎಂದು ಎಲ್ಲಿಯೂ ಹೇಳಿಲ್ಲ. ನನಗೇನೂ ಗೊತ್ತಿಲ್ಲ. ನಿಮಗೇನಾದರೂ ಹೇಳಿದ್ದರಾ. ನಾವು ಅಧಿಕಾರಕ್ಕೆ ಬರುವ ಬಗ್ಗೆ ಮಾತ್ರ ನಮ್ಮ ಯೋಚನೆ ಎಂದು ಸ್ಪಷ್ಟನೆ ನೀಡಿದರು.

ಶಾಮನೂರು ಶಿವಶಂಕರಪ್ಪರ ನಿವಾಸದಲ್ಲಿ ಮಾಧ್ಯಮದವರ ಜೊತೆ ಮಾತನಾಡಿದ ಅವರು, "ಚುನಾವಣೆಗೆ ಎಂಟು ತಿಂಗಳಿದೆ. ಚುನಾವಣೆಗೂ ನನ್ನ ಜನುಮ ದಿನದ ಆಚರಣೆಗೂ ಸಂಬಂಧ ಇಲ್ಲ. ನೂರಕ್ಕೆ ನೂರು ಕಾಂಗ್ರೆಸ್ ಪಕ್ಷ 2023ರ ವಿಧಾನಸಭಾ ಚುನಾವಣೆಯಲ್ಲಿ 130ಕ್ಕೂ ಹೆಚ್ಚು ಸ್ಥಾನಗಳಲ್ಲಿ ಗೆಲ್ಲಲಿದೆ. 150 ಸ್ಥಾನ ಗೆಲ್ಲಬೇಕೆಂಬ ಗುರಿ ಇದೆ," ಎಂದು ತಿಳಿಸಿದರು.












Click it and Unblock the Notifications