ಡಯಟ್ ನಡುವೆ ದಾವಣಗೆರೆ ಬೆಣ್ಣೆದೋಸೆ ಸವಿದು ಸೂಪರ್ ಎಂದ ಮೋಹಕ ತಾರೆ ರಮ್ಯಾ
ದಾವಣಗೆರೆ, ಅಕ್ಟೋಬರ್ 17: ಸ್ಯಾಂಡಲ್‌ವುಡ್ ಕ್ವೀನ್, ಮೋಹಕ ತಾರೆ ರಮ್ಯಾ ಬೆಣ್ಣೆನಗರಿಯ ಬೆಣ್ಣೆದೋಸೆ ರುಚಿಗೆ ಫಿದಾ ಆಗಿದ್ದಾರೆ. ಸೋಮವಾರ ಡಾಲಿ ಧನಂಜಯ್ ಅಭಿನಯದ ಹೆಡ್‌ಬುಷ್ ಸಿನಿಮಾದ ಪ್ರಮೋಷನ್‌ಗೆ ದಾವಣಗೆರೆಗೆ ಬಂದಿರುವ ರಮ್ಯಾ ಬೆಣ್ಣೆ ದೋಸೆ ಸೇವಿಸಿದ್ದಾರೆ.
ನಗರದ ಗುರುಕೊಟ್ಟೂರೇಶ್ವರ ಬೆಣ್ಣೆದೋಸೆ ಹೋಟೆಲ್‌ಗೆ ಭೇಟಿ ನೀಡಿದ ದಿವ್ಯಾಸ್ಪಂದನ ಎರಡು ಬೆಣ್ಣೆದೋಸೆ ರುಚಿ ಸವಿದರು. ಹೆಡ್ ಬುಷ್ ಸಿನಿಮಾ ಪ್ರಮೋಷನ್‌ಗೆ ನಿನ್ನೆ ದಾವಣಗೆರೆಗೆ ಆಗಮಿಸಿದ್ದ ರಮ್ಯಾ ನನಗೆ ಬೆಣ್ಣೆದೋಸೆ ಅಂದರೆ ಇಷ್ಟ. ನಾನು ಡಯಟ್‌ನಲ್ಲಿದ್ದೇನೆ. ಆದರೂ ಬೆಣ್ಣೆದೋಸೆ ತಿನ್ನುತ್ತೇನೆ. ಯಾವ ಹೊಟೇಲ್‌ನಲ್ಲಿ ರುಚಿ ಚೆನ್ನಾಗಿರುತ್ತೆ ಎಂದು ಬಾಪೂಜಿ ಎಂಬಿಎ ಗ್ರೌಂಡ್‌ನಲ್ಲಿ ಆಯೋಜಿಸಿದ್ದ ಹೆಡ್ ಬುಷ್ ಸಿನಿಮಾದ ಪ್ರೀ ಪ್ರಮೋಷನ್ ಈವೆಂಟ್‌ನಲ್ಲಿ ಅಭಿಮಾನಿಗಳನ್ನು ಕೇಳಿದ್ದರು.
ಆಗ ಅಭಿಮಾನಿಗಳು ಗುರು ಕೊಟ್ಟೂರೇಶ್ವರ ಬೆಣ್ಣೆದೋಸೆ ಚೆನ್ನಾಗಿದೆ ಎಂದು ಸಲಹೆ ನೀಡಿದ್ದರು. ನಾಳೆ ಬೆಳಗ್ಗೆ ಹೋಗುತ್ತೇನೆ ಎಂದಿದ್ದ ರಮ್ಯಾ, ಸೋಮವಾರ ಬೆಳಿಗ್ಗೆ ಬೆಂಗಳೂರಿಗೆ ಹೋಗುವ ಮುನ್ನ ಗುರು ಕೊಟ್ಟೂರೇಶ್ವರ ಹೊಟೇಲ್‌ಗೆ ಆಗಮಿಸಿದರು. ಮೋಹಕ ತಾರೆ ಆಗಮಿಸಿದ ಸುದ್ದಿ ತಿಳಿಯುತ್ತಿದ್ದಂತೆ ಯುವಕರು, ಯುವತಿಯರು ಸೇರಿದಂತೆ ಹಲವರು ನೆಚ್ಚಿನ ನಟಿ ನೋಡಲು ಜಮಾಯಿಸಿದರು. ನೋಡನೋಡುತ್ತಲೇ ನೂರಾರು ಅಭಿಮಾನಿಗಳು ಹೋಟೆಲ್ ಮುಂಭಾಗ ಸೇರಿಕೊಂಡರು.

ಸೆಲ್ಫಿಗಾಗಿ ರಮ್ಯಾ ಸುತ್ತುವರಿದ ಅಭಿಮಾನಿಗಳು
ಇನ್ನು ಯುವಕರು ಹಾಗೂ ಯುವತಿಯರು ರಮ್ಯಾ ನೋಡಲು ಹಾಗೂ ಸೆಲ್ಫಿ ತೆಗೆದುಕೊಳ್ಳಲು ನಾಮುಂದು ತಾಮುಂದು ಅಂತಾ ಮುಗಿಬಿದ್ದರು. ಕೆಲವರಂತೂ ರಮ್ಯಾ ಹೋಟೆಲ್‌ನಿಂದ ಹೊರಬರುವಾಗ ಸುತ್ತುವರೆದರು. ಸೆಲ್ಫಿ, ಫೋಟೋ ಕ್ಲಿಕ್ಕಿಸಿಕೊಳ್ಳಲು ಯತ್ನಿಸಿ ಅದರಲ್ಲಿ ಯಶ ಕಂಡು ಸಂಭ್ರಮಿಸಿದರು. ಇತ್ತ ಪೊಲೀಸರು ಅಭಿಮಾನಿಗಳನ್ನು ನಿಯಂತ್ರಿಸಲು ಪರದಾಡಿದರು. ಮಹಿಳಾ ಪೊಲೀಸ್ ಸಿಬ್ಬಂದಿ ಇದ್ದರೂ ಕ್ಯಾರೇ ಎನ್ನದ ಯುವತಿಯರು ರಮ್ಯಾ ಜೊತೆ ನಿಂತು ಫೋಟೋ ತೆಗೆಸಿಕೊಂಡದ್ದು ಕಂಡುಬಂದಿತು.

ಹತ್ತು ನಿಮಿಷ ಟ್ರಾಫಿಕ್ ಜಾಮ್
ರಮ್ಯಾರನ್ನು ನೋಡಲು ನೂರಾರು ಜನರ ಸೇರಿದ ಕಾರಣ ಗುರುಕೊಟ್ಟೂರೇಶ್ವರ ಹೋಟೆಲ್ ರಸ್ತೆ ಹತ್ತು ನಿಮಿಷಕ್ಕೂ ಹೆಚ್ಚು ಹೊತ್ತು ಜಾಮ್ ಆಗಿತ್ತು. ರಮ್ಯಾ ಆಗಮಿಸಿದ ಬಳಿಕ ವಾಹನಗಳನ್ನು ಅಲ್ಲಲ್ಲಿ ನಿಲ್ಲಿಸಿ ಬಂದರೆ, ಬೈಕ್ ಸವಾರರು ರಸ್ತೆ ಮಧ್ಯೆಯೇ ನಿಲ್ಲಿಸಿದ್ದರು. ಹೋಟೆಲ್ ಮುಂದೆ ಜನರು ಜಮಾಯಿಸಿದ ಕಾರಣ ರಸ್ತೆ ಸಂಚಾರ ಕೆಲ ಹೊತ್ತು ಬಂದ್ ಆಗಿತ್ತು.

ಬೆಣ್ಣೆದೋಸೆಗೆ ಮೋಹಕ ತಾರೆ ಫಿದಾ
ಬೆಣ್ಣೆದೋಸೆ ಸೇವಿಸಿದ ಬಳಿಕ ಮಾತನಾಡಿದ ರಮ್ಯಾ, ಗುರುಕೊಟ್ಟೂರೇಶ್ವರ ಹೋಟೆಲ್‌ನಲ್ಲಿ ಬೆಣ್ಣೆದೋಸೆ ಚೆನ್ನಾಗಿದೆ. ನಾನು ಎರಡು ದೋಸೆ ತಿಂದೆ. ಒಂದು ಖಾಲಿ, ಒಂದು ಬೆಣ್ಣೆದೋಸೆ ಸೇವಿಸಿದೆ. ನಿಜಕ್ಕೂ ರುಚಿ ಸೂಪರ್ ಆಗಿದೆ ಎಂದು ಸಂತಸ ವ್ಯಕ್ತಪಡಿಸಿದರು.
ಮನೆಗೆ ಪಾರ್ಸಲ್ ತೆಗೆದುಕೊಂಡು ಹೋಗಿ ಸೇವಿಸುವ ಬದಲು ಇಲ್ಲಿಗೆ ಬಂದು ತಿಂದರೆ ಅದರ ಟೇಸ್ಟ್ ಬೇರೆ ಇರುತ್ತೆ. ಹಳ್ಳಿಯ ಬೆಣ್ಣೆ ಬಳಸಿ ದೋಸೆ ಮಾಡುತ್ತಾರೆ. ಪ್ಯಾಕೇಟ್ ಬೆಣ್ಣೆ ಅಲ್ಲ. ಹಾಗಾಗಿ ರುಚಿ ತುಂಬಾ ಅಚ್ಚುಕಟ್ಟಾಗಿದೆ. ಒಲೆಯಲ್ಲಿ ಬೇಯಿಸುವುದರಿಂದ ಟೇಸ್ಟ್ ಚೆನ್ನಾಗಿರುತ್ತದೆ. ಭಾನುವಾರ ಕಾರ್ಯಕ್ರಮದಲ್ಲಿ ಗುರು ಕೊಟ್ಟೋರೇಶ್ವರ ಬೆಣ್ಣೆದೋಸೆ ಹೋಟೆಲ್‌ಗೆ ಹೋಗಿ ಎಂದು ಅಭಿಮಾನಿಗಳು ಸಲಹೆ ನೀಡಿದ್ದರು, ಅವರು ನೀಡಿದ ಸಲಹೆ ಮೇರೆಗೆ ಬಂದಿದ್ದೇನೆ ಎಂದು ತಿಳಿಸಿದರು.

ಬೆಣ್ಣೆ ದೋಸೆ ಸವಿದಿದ್ದ ದರ್ಶನ್
ನಮ್ಮ ಊಟ, ನಮ್ಮ ಕಲ್ಚರ್ ಎಷ್ಟು ಬೆಳೆಸಿದ್ರು ಉದ್ಯಮ ಬೆಳೆಯುತ್ತೆ. ಇಂಥಾ ಟೇಸ್ಟಿ ಹೋಟೆಲ್ ಸಲಹೆ ನೀಡಿದ ದಾವಣಗೆರೆ ಜನತೆಗೆ ಧನ್ಯವಾದ ತಿಳಿಸಿದರು. ರಮ್ಯಾ ಜೊತೆಗೆ ಹೊಂಬಾಳೆ ಫಿಲ್ಮ್ಸ್‌ನ ಕಾರ್ಯನಿರ್ವಾಹಕ ಕಾರ್ತಿಕ್ ಗೌಡ ಹಾಗೂ ಕೆಆರ್‌ಜಿ ಸ್ಟುಡಿಯೋಸ್‌ನ ಯೋಗಿ ರಾಜ್ ಸಹ ಇದ್ದರು.
ಚಾಲೆಂಜಿಂಗ್ ಸ್ಟಾರ್ ದರ್ಶನ್ ಕೂಡ, ಕಳೆದ ತಿಂಗಳು ಮಾಜಿ ಸಚಿವ ಎಸ್. ಎಸ್. ಮಲ್ಲಿಕಾರ್ಜುನ್ ಹುಟ್ಟುಹಬ್ಬಕ್ಕೆ ದಾವಣಗೆರೆಗೆ ಬಂದಿದ್ದಾಗ ಬೆಣ್ಣೆ ದೋಸೆ ಸವಿದಿದ್ದರು. ಅವರು ಡಯಟ್‌ನಲ್ಲಿದ್ದರೂ ಸಹಾ ದಾವಣಗೆರೆಯ ಬೆಣ್ಣೆ ದೋಸೆ ಟೇಸ್ಟ್ ಸವಿದು ಹೋಗಿದ್ದರು.












Click it and Unblock the Notifications