Road accident: ದಾವಣಗೆರೆ: ಅಯ್ಯೋ ದುರ್ವಿಧಿಯೇ.. ಅಜ್ಜಿ ಮುಂದೆಯೇ 2 ವರ್ಷದ ಮುದ್ದು ಕಂದಮ್ಮನ ಬಲಿ ಪಡೆದ ಟಿಪ್ಪರ್ ಲಾರಿ
ದಾವಣಗೆರೆ, ಜೂನ್, 21: ಅಂಗನವಾಡಿಯಿಂದ ಮನೆಗೆ ತೆರಳುವಾಗ ತಲೆ ಮೇಲೆ ಲಾರಿ ಹರಿದು 2 ವರ್ಷದ ಕಂದಮ್ಮ ಸಾವನ್ನಪ್ಪಿದ ಘಟನೆ ದಾವಣಗೆರೆ ತಾಲೂಕಿನ ಹಳೇಕುಂದುವಾಡ ಗ್ರಾಮದಲ್ಲಿ ನಡೆದಿದೆ. ಇನ್ನು ತನ್ನ ಮಗಳನ್ನು ಕಳೆದುಕೊಂಡ ಪೋಷಕರ ಆಕ್ರಂದನವಂತೂ ಮುಗಿಲು ಮುಟ್ಟಿದೆ.
ಈ ಮಗು ಹುಟ್ಟಿದ ಮೇಲೆ ಮನೆಯಲ್ಲಿ ಸಂಭ್ರಮವೋ ಸಂಭ್ರಮ. ಓಡಾಟ, ತುಂಟಾಟ, ನಗು, ಅಳು ಎಲ್ಲವೂ ಆ ಮನೆಯನ್ನು ಸಂತೋಷದಲ್ಲಿಟ್ಟಿತ್ತು. ಆಕೆಯನ್ನು ಕಂಡರೆ ಎಲ್ಲರಿಗೂ ಪ್ರೀತಿಯೋ ಪ್ರೀತಿ. ಮುದ್ದು ಮುದ್ದಾದ ಕಂದನ ನೋಡಿದರೆ ಸಾಕು ತಂದೆ ತನ್ನೆಲ್ಲಾ ನೋವು ಮರೆತುಬಿಡುತ್ತಿದ್ದರು. ಹಾಗೆಯೇ ತಾಯಿಯಂತೂ ಮಗಳನ್ನು ಅಷ್ಟೇ ಹಚ್ಚಿಕೊಂಡಿದ್ದರು. ಆಕೆ ಮನೆಯಲ್ಲಿದ್ದರೆ ಸಾಕು ಸಂಭ್ರಮಕ್ಕೆ ಪಾರವೇ ಇರಲಿಲ್ಲ. ಆದರೆ ಇಂದು ನಡೆದ ಘಟನೆ ದುರ್ಘಟನೆ ಈ ಕುಟುಂಬಕ್ಕೆ ಬರಸಿಡಿಲು ಬಡಿದಂತಾಗಿದೆ.

ಕಣ್ಮುಂದೆ ಆಟವಾಡಿಕೊಂಡು ಇದ್ದ ಮಗಳು, ಬೆಳಗ್ಗೆ ಮನೆಯಿಂದ ಹೋದವಳು ಮಧ್ಯಾಹ್ನದ ಹೊತ್ತಿಗೆ ಇಲ್ಲವೆಂದರೆ ಹೇಗಾಗಬೇಡ. ಇನ್ನು ಆ ಬಾಲಕಿಗೆ ಕೇವಲ 2 ವರ್ಷ. ಮನೆಗೆ ಸಂತಸ ತಂದಿದ್ದ ಬಾಲಕಿಯ ಸಾವು ಮನೆಯ ಸದಸ್ಯರೆಲ್ಲರೂ ಕಣ್ಣೀರಿನಲ್ಲಿ ಕೈತೊಳೆಯುವಂತಾಗಿದೆ. ತಂದೆಗಂತೂ ಮಗಳನ್ನು ಕಂಡರೆ ತುಂಬಾ ಪ್ರೀತಿ. ನಿತ್ಯವೂ ಆಕೆ ಫೋಟೋಗಳನ್ನು ತನ್ನ ವ್ಯಾಟ್ಸಪ್ ಸ್ಟೇಟಸ್‌ನಲ್ಲಿ ಹಾಕಿಕೊಂಡಿರುತ್ತಿದ್ದರು.
ಮನೆಗೆ ಹೋದಾಕ್ಷಣ ಆಕೆ ಮುಖ ನೋಡದೇ ಇದ್ದರೆ ಸಮಯವೇ ಹೋಗುತ್ತಿರಲಿಲ್ಲ. ಅಷ್ಟೊಂದು ಬಾಂಧವ್ಯ, ಪ್ರೀತಿ, ಅನ್ಯೂನ್ಯತೆ ತಂದೆ ಹಾಗೂ ತಾಯಿಗಿತ್ತು. ಅಜ್ಜಿ ಕಂಡರೆ ಮೊಮ್ಮಗಳಿಗೂ ಪ್ರೀತಿ, ಮೊಮ್ಮಗಳೆಂದರೆ ಅಜ್ಜಿಗೂ ಪ್ರೀತಿ. ಆದರೆ ಇಂದು ನಡೆದ ದುರಂತದಿಂದ ಆಕಾಶವೇ ಮೇಲೆ ಬಿದ್ದಂತಾಗಿದೆ. ಅಂದಹಾಗೆ, ಇಂಥದ್ದೊಂದು ದುರಂತ ನಡೆದಿರುವುದು ದಾವಣಗೆರೆ ತಾಲೂಕಿನ ಹಳೇಕುಂದುವಾಡ ಗ್ರಾಮದಲ್ಲಿ. ಕುಂದುವಾಡ ಗ್ರಾಮದ ಗಣೇಶ್ ಎಂಬುವವರ ಪುತ್ರಿ ಕೇವಲ 2 ವರ್ಷದ ಚರಸ್ವಿ ಮೃತಪಟ್ಟ ಬಾಲಕಿ ಆಗಿದ್ದಾರೆ.
ಎಂ.ಸ್ಯಾಂಡ್ ಲಾರಿ ಚಾಲಕ ಮಾಡಿದ ಯಡವಟ್ಟು ಹಾಗೂ ಅಜಾಗರೂಕತೆಯಿಂದ ಮುದ್ದು ಮುದ್ದಾದ 2 ವರ್ಷದ ಪುಟ್ಟ ಬಾಲೆಯ ಉಸಿರು ನಿಂತಿದೆ.ಇನ್ನು ಚರಸ್ವಿ ಹಳೇಕುಂದುವಾಡದ ಅಂಗನವಾಡಿಗೆ ಹೋಗುತ್ತಿದ್ದಳು. ಎಂದಿನಂತೆ ಇಂದೂ ಸಹ ಅಂಗನವಾಡಿಗೆ ತೆರಳಿದ್ದಳು. ಅಜ್ಜಿಯು ಅಂಗನವಾಡಿ ಮುಗಿಸಿಕೊಂಡ ತಕ್ಷಣ ಮೊಮ್ಮಗಳನ್ನು ಮನೆಗೆ ಕರೆದುಕೊಂಡು ಬರುವಾಗ ಎಂ. ಸ್ಯಾಂಡ್ ಲಾರಿ ಯಮಸ್ವರೂಪಿಯಂತೆ ಬಂದಿದ್ದು, ಚರಸ್ವಿ ತಲೆ ಮೇಲೆ ಲಾರಿಯ ಚಕ್ರ ಹರಿದಿದೆ. ಪರಿಣಾಮ ಮುದ್ದು ಮುದ್ದಾಗ ಕಂದ ಚರಸ್ವಿ ಮೆದುಳು ಛಿದ್ರಛಿದ್ರಗೊಂಡಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.
KA-17-D-5017 ನಂಬರ್‌ನ ಟಿಪ್ಪರ್ ಲಾರಿ ಮೇಲೆ ತಲೆ ಮೇಲೆ ಹತ್ತಿದ ಪರಿಣಾಮ ಪುಟ್ಟ ಬಾಲಕಿಯ ದೇಹ ಛಿದ್ರಛಿದ್ರಗೊಂಡಿದೆ. ಚಾಲಕನ ಅಜಾಗರೂಕತೆಯಿಂದ ಈ ದುರಂತ ನಡೆದಿದ ಎಂದು ತಿಳಿದುಬಂದಿದೆ.
ಲಾರಿ ಚಾಲಕ, ಮಾಲೀಕನನ್ನು ಬಂಧಿಸುವಂತೆ ಆಗ್ರಹ
ಇನ್ನು ಚರಸ್ವಿ ಮೃತದೇಹ ನೋಡುತ್ತಿದ್ದಂತೆ ಗ್ರಾಮಸ್ಥರ ಸಿಟ್ಟು ನೆತ್ತಿಗೇರಿತ್ತು. ಅಲ್ಲದೆ ರಸ್ತೆ ಬಂದ್ ಮಾಡಿ ಇಲ್ಲಿನ ಜನರು ಲಾರಿ ಮಾಲೀಕರ ವೊರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಅಲ್ಲದೆ ಕೂಡಲೇ ಎಂ.ಸ್ಯಾಂಡ್ ಲಾರಿ ಮಾಲೀಕ, ಚಾಲಕನನ್ನು ಬಂಧಿಸಿ ಕಾನೂನು ರೀತಿಯಲ್ಲಿ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು. ಚಾಲಕನ ಅಜಾಗರೂಕತೆಯಿಂದ ಈ ದುರಂತ ನಡೆದಿದೆ. ಇದನ್ನು ಸಹಿಸಿಕೊಳ್ಳಲು ಸಾಧ್ಯವಿಲ್ಲ. ಕೂಡಲೇ ಆತನನ್ನು ಬಂಧಿಸಬೇಕು ಎಂದು ಪಟ್ಟುಹಿಡಿದರು. ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ದಕ್ಷಿಣ ಸಂಚಾರಿ ಠಾಣೆ, ವಿದ್ಯಾನಗರ ಪೊಲೀಸರು ಭೇಟಿ ನೀಡಿ ಪ್ರತಿಭಟನಾಕಾರರ ಮನವೊಲಿಸುವಲ್ಲಿ ಯಶಸ್ವಿಯಾದರು.
ಮುಗಿಲು ಮುಟ್ಟಿದ ಆಕ್ರಂದನ
2 ವರ್ಷದ ಬಾಲಕಿ ಚರಸ್ವಿಯನ್ನು ಕಳೆದುಕೊಂಡ ಪೋಷಕರು ಹಾಗೂ ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿತ್ತು. ಇನ್ನು ಅಜ್ಜಿಯ ಗೋಳಾಟವಂತೂ ನೋಡತೀರದ್ದಂತಾಗಿದೆ. ನನ್ನ ಎರಡು ವರ್ಷದ ಮೊಮ್ಮಗಳು ನೋಡು ನೋಡುತ್ತಿದ್ದಂತೆ ಲಾರಿ ಚಕ್ರ ಹರಿದು ಮೃತಪಟ್ಟ ಘಟನೆ ಕಣ್ಮುಂದೆ ಇದೆ ಎನ್ನುವ ಮೂಲಕ ಬಿಕ್ಕಿ ಬಿಕ್ಕಿ ಅಳುತ್ತಿದ್ದಾರೆ. ಹಾಗೆಯೇ ಮತ್ತೊಂದೆಡೆ ತಂದೆ, ತಾಯಿಯ ಆಕ್ರಂದನವೂ ಮುಗಿಲು ಮುಟ್ಟಿದೆ.












Click it and Unblock the Notifications