ಆಹಾರ ಧಾನ್ಯಗಳ ಮೇಲಿನ GST ವಿರೋಧಿಸಿ ರಾಜ್ಯಾದ್ಯಂತ ಅಕ್ಕಿ ಗಿರಣಿಗಳ ಬಂದ್!
ದಾವಣಗೆರೆ, ಜುಲೈ 13; ಜಿಎಸ್‌ಟಿ ಮಂಡಳಿಯು ಆಹಾರ ಧಾನ್ಯಗಳ ಮೇಲೆ ವಿಧಿಸಿರುವ ಶೇ. 5ರಷ್ಟು ಜಿಎಸ್‌ಟಿ ವಿರೋಧಿಸಿ ಜುಲೈ 15 ಮತ್ತು 16ರಂದು ಜಿಲ್ಲೆಯ ಎಲ್ಲಾ ಅಕ್ಕಿ ಗಿರಣಿ ಮಾಲೀಕರು ತಮ್ಮ ಗಿರಣಿಗಳನ್ನು ಬಂದ್ ಮಾಡಲು ನಿರ್ಧರಿಸಿದ್ದಾರೆ. ಮಾತ್ರವಲ್ಲ, ಆಹಾರ ಧಾನ್ಯಗಳ ಮಾರಾಟ ವಹಿವಾಟು ನಿಲ್ಲಿಸಲು ಜಿಲ್ಲಾ ಅಕ್ಕಿ ಗಿರಣಿದಾರರ ಸಂಘ ನಿರ್ಧರಿಸಿದೆ.
ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಸಂಘದ ಕಾರ್ಯದರ್ಶಿ ಕೋಗುಂಡಿ ಬಕ್ಕೇಶಪ್ಪ ಅವರು, ಜಿಎಸ್‌ಟಿ ಜಾರಿ ಮಾಡಿದ್ದೇ ಆದರೆ ಗ್ರಾಹಕರು ಹಾಗೂ ನಮಗೆ ತುಂಬಾ ತೊಂದರೆ ಆಗಲಿದೆ ಎಂದು ಕಳವಳ ವ್ಯಕ್ತಪಡಿಸಿದರು.
ಜೂನ್ 28 ಮತ್ತು 29 ರಂದು ಜಿಎಸ್‌ಟಿ ಮಂಡಳಿಯು ಆಹಾರ ಧಾನ್ಯಗಳ ಮೇಲೆ ಶೇ. 5ರಷ್ಟು ತೆರಿಗೆ ವಿಧಿಸಿ ಆದೇಶ ಹೊರಡಿಸಿದ್ದರು. ಇದು ದೇಶದಾತ್ಯಂತ ಜುಲೈ 18ರಿಂದ ಜಾರಿಗೆ ಬರಲಿದೆ. ಆಹಾರ ಧಾನ್ಯಗಳಾದ ಅಕ್ಕಿ, ಜೋಳ, ರಾಗಿ ಇತರೆ ಅಗತ್ಯ ವಸ್ತುಗಳನ್ನು ಕಾರ್ಮಿಕರು, ಬಡವರು, ಮಧ್ಯಮ ವರ್ಗದವರಿಗೆ ದಿನನಿತ್ಯ ಬಳಸುವ ಅವಶ್ಯಕ ಪದಾರ್ಥಗಳ ಮೇಲೆ ತೆರಿಗೆ ಹೆಚ್ಚಾಗಲಿದೆ ಎಂದು ಹೇಳಿದರು.

ತೆರಿಗೆಯಿಂದಾಗಿ ಜನ ಸಾಮಾನ್ಯರ ಜೀವನ ವೆಚ್ಚ ಹೆಚ್ಚಾಗಲಿದೆ. ಕಾರಣ ತೆರಿಗೆ ಕೈಬಿಡಬೇಕು. ಈಗಾಗಲೇ ರಾಜ್ಯ, ಕೇಂದ್ರ ಸರ್ಕಾರಗಳಿಗೆ ಹಲವಾರು ಸಂಘ ಸಂಸ್ಥೆಗಳ ಮೂಲಕ ಮನವಿ ಸಲ್ಲಿಸಿದ್ದೇವೆ. ಇದಕ್ಕೆ ಯಾವುದೇ ಪ್ರತಿಕ್ರಿಯೆ ಕೊಟ್ಟಿಲ್ಲ. ಅಲ್ಲದೆ ಕೇಂದ್ರ ಸರ್ಕಾರದ ತೆರಿಗೆ ಇಲಾಖೆಯು ಈ ಬಗ್ಗೆ ಯಾವುದೇ ಸ್ಪಷ್ಟೀಕರಣ ನೀಡಿಲ್ಲ. ಇದನ್ನು ಖಂಡಿಸಿ ಪ್ರತಿಭಟನೆ ಮೂಲಕ ವಿರೋಧ ವ್ಯಕ್ತಪಡಿಸುತ್ತೇವೆ ಎಂದು ತಿಳಿಸಿದರು.
ಇದೇ 15ರಂದು ದಾವಣಗೆರ ಜಿಲ್ಲಾ ಅಕ್ಕಿಗಿರಣಿ ಮಾಲೀಕರ ಸಂಘ, ಆಹಾರ ಧಾನ್ಯಗಳ ವರ್ತಕ ಸಂಘ ಹಾಗೂ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕೋದ್ಯಮ ಸಂಸ್ಥೆಗಳ ಸಹಯೋಗದೊಂದಿಗೆ ದಾವಣಗೆರೆಯಲ್ಲಿ ಬೆಳಿಗ್ಗೆ 11.30ಕ್ಕೆ ಜಿಲ್ಲಾಧಿಕಾರಿಗಳನ್ನು ಭೇಟಿ ಮಾಡಿ ಮನವಿ ಸಲ್ಲಿಸಲಾಗುವುದು. ಅಲ್ಲದೇ ಎರಡೂ ದಿನಗಳು ಎಲ್ಲಾ ವ್ಯಾಪಾರ, ಉದ್ಯಮದ ವಹಿವಾಟನ್ನು ನಿಲ್ಲಿಸಲು ನಿರ್ಧರಿಸಿದ್ದೇವೆ. ಜಿಲ್ಲೆಯಲ್ಲಿ 90ಕ್ಕೂ ಹೆಚ್ಚು ದಾವಣಗೆರೆ ನಗರದಲ್ಲಿ ಸಗಟು ವ್ಯಾಪಾರಿಗಳು ಬಂದ್ ಆಗಲಿವೆ ಎಂದು ಹೇಳಿದರು.
ರಾಜ್ಯಾದ್ಯಂತ ಪ್ರತಿಭಟನೆ ನಡೆಸಲು ನಿರ್ಧರಿಸಲಾಗಿದೆ. ಕಳೆದ 39 ವರ್ಷಗಳಲ್ಲಿ ತೆರಿಗೆ ವಿಧಿಸದ ಸರಕಾರ ಈಗ ಜಿಎಸ್‌ಟಿ ವಿಧಿಸುತ್ತಿರುವುದು ಎಷ್ಟರ ಮಟ್ಟಿಗೆ ಸರಿ. ಜಿಎಸ್‌ಟಿ ಜಾರಿಯಾಗಿದ್ದೇ ಆದರೆ ಒಂದು ಕ್ವಿಂಟಾಲ್ ಅಕ್ಕಿಗೆ 300 ರೂಪಾಯಿಯಿಂದ 400 ರೂಪಾಯಿ ಹೆಚ್ಚಳವಾಗಲಿದೆ. ಅದೇ ರೀತಿಯಲ್ಲಿ ಗಿರಣಿಗಳ ಯಂತ್ರೋಪಕರಣಗಳ ದರವೂ ಜಾಸ್ತಿಯಾಗಲಿದೆ. ಇದೆಲ್ಲದರ ನೇರ ಪರಿಣಾಮ ಬೀಳುವುದು ಗ್ರಾಹಕರ ಮೇಲೆ ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಬಾಳೆಹೊಲದ ಸಿದ್ದಣ್ಣ, ಜಾವೀದ್ ಸಾಬ್, ಕೆ.ಜಿ.ನಾಗರಾಜಪ್ಪ, ಶಂಭುಲಿಂಗಪ್ಪ, ರಾಜಗೋಪಾಲ್, ಕುಂಬಳೂರು ಚಂದ್ರಣ್ಣ, ಲತೀಫ್ ಸಾಬ್, ಜಯಕುಮಾರ್ ಮಾಗಿ ಇತರರು ಇದ್ದರು.












Click it and Unblock the Notifications