ರೇಣುಕಸ್ವಾಮಿ ಕೊಲೆ ಪ್ರಕರಣ: ನಟ ದರ್ಶನ್‌ನನ್ನು ಚಿತ್ರರಂಗದಿಂದ ಬ್ಯಾನ್ ಮಾಡ್ಬೆಕಷ್ಟೇ: ಎಂ.ಪಿ.ರೇಣುಕಾಚಾರ್ಯ
ದಾವಣಗೆರೆ, ಜೂನ್, 14: ಚಿತ್ರದುರ್ಗದ ರೇಣುಕಾಸ್ವಾಮಿಯನ್ನು ಬರ್ಬರವಾಗಿ ಹತ್ಯೆ ಮಾಡಿರುವುದನ್ನು ನೋಡಿದರೆ, ಹಿಂಸೆ ಕೊಟ್ಟಿರುವುದು ಅತ್ಯಂತ ಹೀನ ಕೃತ್ಯ. ಈ ಕೊಲೆ ಪ್ರಕರಣದಲ್ಲಿ ಭಾಗಿಯಾದ ಆರೋಪ ಎದುರಿಸುತ್ತಿರುವ ನಟ ದರ್ಶನ್ ತೂಗುದೀಪ ಅವರಂಥವರನ್ನು ಚಿತ್ರರಂಗದಿಂದ ಬ್ಯಾನ್ ಮಾಡಬೇಕು ಎಂದು ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಆಗ್ರಹಿಸಿದರು.
ಬಿಜೆಪಿ ಕಚೇರಿಯಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ನೆಲದ ಕಾನೂನು ಎಲ್ಲರಿಗೂ ಒಂದೇ. ಯಾರೇ ತಪ್ಪು ಮಾಡಿದ್ದರೂ ತಪ್ಪು. ಈ ಪ್ರಕರಣ ಗಂಭೀರವಾಗಿ ಪರಿಗಣಿಸಬೇಕು. ಸೆಲೆಬ್ರೆಟಿಗಳು, ರಾಜಕಾರಣಿಗಳು ಎಂಬ ರಿಯಾಯಿತಿ ಯಾರಿಗೂ ಸಲ್ಲ. ಹತ್ಯೆಯಾಗಿರುವ ರೀತಿ ನೋಡಿದರೆ ಇದೊಂದು ಭೀಕರ ಹತ್ಯೆ ಎಂದು ಗೊತ್ತಾಗುತ್ತದೆ. ರೇಣುಕಾಸ್ವಾಮಿ ಕುಟುಂಬಕ್ಕೆ ಒಂದು ಕೋಟಿ ರೂಪಾಯಿ ಪರಿಹಾರವನ್ನು ರಾಜ್ಯ ಸರ್ಕಾರ ನೀಡಬೇಕು ಎಂದು ಆಗ್ರಹಿಸಿದರು.

ಆತ ತಪ್ಪು ಮಾಡಿದ್ದರೆ ಎರಡೇಟು ಕೊಡಬಹುದಿತ್ತು. ಎಚ್ಚರಿಕೆ ನೀಡಿ ಕಳುಹಿಸಬಹುದಿತ್ತು. ಆದರೆ, ಹಿಂಸೆ ನೀಡಿ ಕೊಲೆ ಮಾಡಲಾಗಿದೆ. ಕಾನೂನು ಯಾರೇ ಕೈಗೆತ್ತಿಕೊಂಡರೂ ಅಪರಾಧವೇ. ದಂಡಿಸಲು ಯಾರಿಗೂ ಅಧಿಕಾರ ಇಲ್ಲ. ನನಗೆ ಬೆದರಿಕೆ ಹಾಕಿದ್ದರು, ಬಾಯಿಗೆ ಬಂದಂತೆ ಬೈದಿದ್ದರು. ಕೋರ್ಟ್ ಇದೆ, ಕಾನೂನು ಇದೆ. ಕ್ರೂರಿಯಾಗಿ ನಡೆದುಕೊಂಡಿರುವ ರೀತಿ ನೋಡಿದರೆ ಆರೋಪಿಗಳಿಗೆ ಕಠಿಣ ಶಿಕ್ಷೆಯಾಗಲೇಬೇಕು ಎಂದು ಒತ್ತಾಯಿಸಿದರು.
ಬಿಎಸ್‌ವೈ ಬಂಧನಕ್ಕೆ ಷಡ್ಯಂತ್ರ: ಪೋಕ್ಸೋ ಕೇಸ್‌ನಡಿ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಬಂಧಿಸಿದರೆ ರಾಜ್ಯದ ಕಾಂಗ್ರೆಸ್ ಪತನ ಆಗುತ್ತದೆ. ಕಾಂಗ್ರೆಸ್ ನಾಯಕರಾದ ರಾಹುಲ್ ಗಾಂಧಿ, ರಣದೀಪ್ ಸುರ್ಜೀವಾಲಾ ಅವರು ಸಿಎಂ ಸಿದ್ದರಾಮಯ್ಯರ ಮೇಲೆ ಒತ್ತಡ ಹೇರಿ ಯಡಿಯೂರಪ್ಪ ಬಂಧನಕ್ಕೆ ಷಡ್ಯಂತ್ರ ರೂಪಿಸಿದ್ದಾರೆ. ನಾವು ಸುಮ್ಮನೆ ಕೈ ಕಟ್ಟಿ ಕೂರುವ ಪ್ರಶ್ನೆಯೇ ಇಲ್ಲ. ನಾವೆಲ್ಲರೂ ಯಡಿಯೂರಪ್ಪರ ಪರ ಇದ್ದೇವೆ ಎಂದು ರೇಣುಕಾಚಾರ್ಯ ಹೇಳಿದರು.
ಯಡಿಯೂರಪ್ಪ ಅವರನ್ನು ಪೋಕ್ಸೋ ಕೇಸ್‌ನಡಿ ಬಂಧಿಸಬಹುದು ಎಂಬ ಗೃಹ ಸಚಿವ ಜಿ.ಪರಮೇಶ್ವರ್ ಹೇಳಿಕೆ ನೀಡಿರುವುದು ರಾಜಕೀಯ ಪ್ರೇರಿತ. ಪೋಕ್ಸೋ ಕೇಸ್ ಆಗಿ 45 ದಿನಗಳಿಗೂ ಹೆಚ್ಚು ದಿನಗಳು ಕಳೆದಿವೆ. ಗೃಹ ಸಚಿವ ಪರಮೇಶ್ವರ್ ಅವರೇ ಹೇಳಿದಂತೆ ಮಮತಾ ಎಂಬ ಹೆಣ್ಣುಮಗಳು ಐಎಎಸ್, ಐಪಿಎಸ್ ಸೇರಿ 53 ಅಧಿಕಾರಿಗಳು, ಉದ್ಯಮಿಗಳ ಮೇಲೆ ಕೇಸ್ ಹಾಕಿದ್ದಳು. ಈಕೆ ಮಾನಸಿಕ ಅಸ್ವಸ್ಥೆ ಎಂದಿದ್ದರು. ಮಮತಾ ಕಾಯಿಲೆಯಿಂದ ಮೃತಪಟ್ಟಿದ್ದಾರೆ. ಆದ್ರೆ, ಇದ್ದಕ್ಕಿದ್ದಂತೆ ಯಡಿಯೂರಪ್ಪರಿಗೆ ಅರೆಸ್ಟ್ ವಾರೆಂಟ್ ನೀಡಿರುವುದು ಯಾಕೆ? ಎಂದು ಪ್ರಶ್ನಿಸಿದರು.
ಮಮತಾ ಎಂಬ ಮಹಿಳೆ ಬದುಕಿದ್ದಾಗ ಯಡಿಯೂರಪ್ಪರನ್ನು ಭೇಟಿ ಮಾಡಿ ಮಗಳಿಗೆ ಅನ್ಯಾಯ ಆಗಿದೆ, ಗಂಡನ ಸಹೋದರ ಸಂಬಂಧಿಗಳು ಮುಗ್ದ ಬಾಲಕಿ ಮೇಲೆ ಅತ್ಯಾಚಾರ ಮಾಡಿದ್ದು ಇಬ್ಬರ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ್ದರು. 5,000 ಕೋಟಿ ರೂಪಾಯಿ ಬಜಾಜ್ ಕಂಪೆನಿ ನನಗೆ ವಾಪಸ್ ನೀಡಬೇಕು ಎಂದು ಆಗ್ರಹಿಸಿದ್ದರು. ಈಗ ಆ ಮಹಿಳೆ ತೀರಿಕೊಂಡಿದ್ದಾರೆ. ಆಕೆಯ ಪುತ್ರನಿಗೆ ಆಸೆ, ಆಮೀಷವೊಡ್ಡಿ ಪ್ರಭಾವಿ ಮಂತ್ರಿಯೊಬ್ಬರು ಯಡಿಯೂರಪ್ಪ ಅವರನ್ನು ಸಂಕಷ್ಟಕ್ಕೆ ಸಿಲುಕಿಸಲು ಹೂಡಿರುವ ಹುನ್ನಾರ. ಎಲ್ಲಾ ಮಾಹಿತಿ ನನ್ನಲಿವೆ. 53 ಜನರ ವಿಚಾರಣೆ ಯಾಕೆ ನಡೆಸಿಲ್ಲ? ಅತ್ಯಾಚಾರ ಎಸಗಿದ ಇಬ್ಬರನ್ನು ಯಾಕೆ ಇದುವರೆಗೆ ಬಂಧಿಸಿಲ್ಲ? ಎಂದು ಪ್ರಶ್ನಿಸಿದರು.
ಪೇ ಸಿಎಂ ಕೇಸ್‌ನಡಿ ಕೋರ್ಟ್‌ಗೆ ರಾಹುಲ್ ಗಾಂಧಿ, ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್ ಹಾಜರಾಗಿದ್ದರು. ರಾಹುಲ್ ಗಾಂಧಿ ಅವರು ವಿಚಾರಣೆಗೆ ಇಲ್ಲಿಗೆ ಬಂದಿದ್ದು, ಲೋಕಸಭೆ ಚುನಾವಣೆಯಲ್ಲಿ ಹಿನ್ನೆಡೆ, ವಾಲ್ಮೀಕಿ ನಿಗಮದ ಭ್ರಷ್ಟಾಚಾರ ಕೇಸ್ ಸಿಬಿಐಗೆ ಹೋಗಿದ್ದು, ಸಚಿವ ನಾಗೇಂದ್ರ ರಾಜೀನಾಮೆ ನೀಡಿದ್ದು ಸೇರಿದಂತೆ ಕಾಂಗ್ರೆಸ್ ಭ್ರಷ್ಟಾಚಾರ ಮುಚ್ಚಿಹಾಕಲು ಯಡಿಯೂರಪ್ಪರ ಮೇಲೆ ಸೇಡಿನ ಕ್ರಮ ತೆಗೆದುಕೊಳ್ಳಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮಮತಾರ ಮಗ, ಬಾಲಕಿಯ ಸಹೋದರ ದೂರು ನೀಡಿದ್ದಾನೆ. ಆತ ತಾಯಿ, ಸಹೋದರಿಯಿಂದ ದೂರ ಇದ್ದ. ನಾಲ್ಕು ದಿನಗಳ ಹಿಂದೆ ಪ್ರಭಾವಿ ಸಚಿವರು ಸಹೋದರನನ್ನು ಕರೆಯಿಸಿ ಆಮೀಷವೊಡ್ಡಿ ಬಲವಂತದಿಂದ ಕೇಸ್ ಕೊಡಿಸಿದ್ದಾರೆ. ಎರಡು ದಿನಗಳ ಹಿಂದೆ ಸಿಐಡಿ ನೊಟೀಸ್ ಕೊಟ್ಟಿದ್ದಾರೆ. ಜೂನ್ 17ಕ್ಕೆ ವಿಚಾರಣೆಗೆ ಹಾಜರಾಗ್ತೇನೆ ಎಂದಿದ್ದ ಯಡಿಯೂರಪ್ಪ ತಲೆಮರೆಸಿಕೊಂಡಿಲ್ಲ ಎಂದರು.
ಸಾಕ್ಷ್ಯ ನಾಶ ಮಾಡ್ತಾರೆ ಎಂಬ ಕಾರಣವೊಡ್ಡಿ ವಶಕ್ಕೆ ಸಿಐಡಿ ಅಧಿಕಾರಿಗಳು ಕೇಳುತ್ತಿದ್ದಾರೆ. ಯಡಿಯೂರಪ್ಪ ಮತ್ತು ಕೆಲವರನ್ನು ಬಂಧಿಸಿದರೆ ಸರ್ಕಾರಕ್ಕೆ ಕೆಟ್ಟ ಹೆಸರು, ಸರ್ಕಾರ ಪತನವಾಗುತ್ತದೆ ಎಂಬ ಕಾರಣಕ್ಕೆ ಕಾಂಗ್ರೆಸ್ ನಾಯಕರು ಈ ಷಡ್ಯಂತ್ರ ರೂಪಿಸಿದ್ದಾರೆ ಎಂದು ದೂರಿದರು.
ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಮುಖಂಡ ಮಾಡಾಳ್ ಮಲ್ಲಿಕಾರ್ಜುನ್, ಬಿಜೆಪಿ ಜಿಲ್ಲಾ ಘಟಕದ ಎನ್.ರಾಜಶೇಖರ್, ಪ್ರಧಾನ ಕಾರ್ಯದರ್ಶಿ ಕಡ್ಲೇಬಾಳು ಧನಂಜಯ, ವಕ್ತಾರ ಕೊಳೇನಹಳ್ಲಿ ಸತೀಶ್ ಸೇರಿದಂತೆ ಮತ್ತಿತರರು ಹಾಜರಿದ್ದರು.












Click it and Unblock the Notifications