ಭದ್ರ ನೀರಿಗಾಗಿ ಸಿಡಿದೆದ್ದ ರೈತರು: ದಾವಣಗೆರೆ ಬಂದ್‌ಗೆ ಉತ್ತಮ ಪ್ರತಿಕ್ರಿಯೆ, ಅಂಗಡಿ ಮುಗ್ಗಟ್ಟು ಬಂದ್
ದಾವಣಗೆರೆ, ಸೆಪ್ಟೆಂಬರ್ 25: ಭದ್ರಾ ಜಲಾಶಯದ ಬಲದಂಡೆ ನಾಲೆಯಲ್ಲಿ ನೀರು ಬಂದ್ ಮಾಡಿರುವುದರ ವಿರುದ್ಧ ಭಾರತೀಯ ರೈತ ಒಕ್ಕೂಟ ಕರೆ ನೀಡಿದ್ದ ದಾವಣಗೆರೆ ಬಂದ್‌ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.
ನಗರದಲ್ಲಿ ದಿನಸಿ ಅಂಗಡಿ ಸೇರಿದಂತೆ ಅಂಗಡಿ ಮುಂಗಟ್ಟುಗಳು ಬಂದ್ ಆಗಿದ್ದವು. ಖಾಸಗಿ, ಆಟೋ ಸೇರಿದಂತೆ ಇತರೆ ವಾಹನಗಳ ಓಡಾಟ ವಿರಳವಾಗಿತ್ತು. ಖಾಸಗಿ, ಸರ್ಕಾರಿ ಶಾಲೆಗಳು ಎಂದಿನಂತೆ ನಡೆದವು. ಶೇಕಡಾ 65ರಷ್ಟು ಬಂದ್ ಆಗುವ ಮೂಲಕ ಬಂದ್‌ಗೆ ಜನರು ಸಹಕರಿಸಿದರು. ಬಂದ್ ಬಹುತೇಕ ಶಾಂತಿಯುತವಾಗಿ ನಡೆಯಿತು.

ಬೆಳಿಗ್ಗೆ ಏಳು ಗಂಟೆಗೆ ಜಯದೇವ ವೃತ್ತದಲ್ಲಿ ಜಮಾಯಿಸಿದ ಭಾರತೀಯ ರೈತ ಒಕ್ಕೂಟದ ಮುಖಂಡರು ಬಂದ್‌ಗೆ ಸಹಕರಿಸುವಂತೆ ಮನವಿ ಮಾಡಿದರು. ಬೆಳಿಗ್ಗೆ 9 ಗಂಟೆಯ ಬಳಿಕ ಪಿ.ಬಿ ರಸ್ತೆ, ಪಿ.ಜೆ. ಬಡಾವಣೆ, ಎಸ್.ಎಸ್ ಲೇಔಟ್, ಹಳೇ ದಾವಣಗೆರೆ ಭಾಗದಲ್ಲಿ ಸಂಚರಿಸಿ ಬಂದ್‌ಗೆ ಸಹಕರಿಸುವಂತೆ ಮನವಿ ಮಾಡಿದರು. ಅಂಗಡಿ ಮುಂಗಟ್ಟುಗಳ ಮಾಲೀಕರು ಬಂದ್ ಬೆಂಬಲಿಸಿ ಅಂಗಡಿ ತೆರೆಯಲಿಲ್ಲ.
ಬಂದ್‌ಗೆ ಚೇಂಬರ್ ಆಫ್ ಕಾಮರ್ಸ್, ದಲ್ಲಾಳಿ ಮಾಲೀಕರ ಸಂಘ, ಕೂಲಿ ಕಾರ್ಮಿಕರ ಸಂಘ, ಖಾಸಗಿ ಬಸ್‌ಗಳ ಮಾಲೀಕರ ಸಂಘ, ಖಾಸಗಿ ಶಿಕ್ಷಣ ಸಂಸ್ಥೆಗಳು, ಆಟೋ ಮಾಲೀಕರ ಸಂಘ, ಕ್ರಿಮಿನಾಶಕ, ರಸಗೊಬ್ಬರ ಜಿಲ್ಲಾ ಸಂಘ, ಆಮ್ ಆದ್ಮಿ ಪಕ್ಷ, ಕರ್ನಾಟಕ ರಕ್ಷಣಾ ವೇದಿಕೆ ಸೇರಿದಂತೆ ಹಲವು ಸಂಘಟನೆಗಳು ಬಂದ್ ಗೆ ಬೆಂಬಲ ಸೂಚಿಸಿದ್ದು, ದಲ್ಲಾಳರು, ಕಾರ್ಮಿಕರ ಸಂಘವು ಬೆಂಬಲಿಸಿದ್ದು, ಎಪಿಎಂಸಿ ಬಣ ಬಣ ಎನ್ನುತಿತ್ತು. ವ್ಯಾಪಾರ ವಹಿವಾಟು ಸ್ಥಗಿತಗೊಂಡಿತ್ತು.

ಭಾರತೀಯ ರೈತ ಒಕ್ಕೂಟದ ಜಿಲ್ಲಾಧ್ಯಕ್ಷ ಶಾಮನೂರು ಲಿಂಗರಾಜ್, ಎಪಿಎಂಸಿ ಮಾಜಿ ಅಧ್ಯಕ್ಷ ಕೊಳೇನಹಳ್ಳಿ ಎಂ. ಬಿ. ಸತೀಶ್, ನಾಗೇಶ್ವರ ರಾವ್, ಕಲ್ಲಿಂಗಪ್ಪ ಸೇರಿದಂತೆ ರೈತ ಮುಖಂಡರು ಪ್ರತಿಭಟನಾ ಸಭೆ ನಡೆಸಿದರು. ಜಿಲ್ಲೆಯ ಜನರಲ್ಲಿ ಬಂದ್ ಬೆಂಬಲಿಸುವಂತೆ ಮನವಿ ಮಾಡಿದರು. ಬೆಳ್ಳಂಬೆಳಗ್ಗೆ ಜಿಟಿಜಿಟಿ ಮಳೆಯ ನಡುವೆಯೂ ಪ್ರತಿಭಟನೆ ನಡೆಸಿದರು. ಪ್ರತಿಭಟನೆ ವೇಳೆ ನಾಗೇಶ್ವರ ರಾವ್ ತೀವ್ರ ಅಸ್ವಸ್ಥಗೊಂಡ ಕಾರಣ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಯಿತು.
ಬಂದ್‌ಗೆ ಬಿಜೆಪಿ ಬೆಂಬಲ
ಆಟೋ ಸಂಚಾರ, ಖಾಸಗಿ ಬಸ್‌ಗಳ ಓಡಾಟ ವಿರಳವಾಗಿದ್ದರಿಂದ ಜನಸಾಮಾನ್ಯರು ತೊಂದರೆ ಅನುಭವಿಸಬೇಕಾಯಿತು. ನಗರದ ಗಾಂಧಿ ಸರ್ಕಲ್ ನಲ್ಲಿ ಟೈರ್‌ಗೆ ಬೆಂಕಿ ಹಚ್ಚಿ ರೈತರು ಆಕ್ರೋಶ ವ್ಯಕ್ತಪಡಿಸಿದರು. ದಾವಣಗೆರೆ ಬಂದ್‌ಗೆ ಬಿಜೆಪಿ ಪಕ್ಷವು ಬೆಂಬಲ ಸೂಚಿಸಿದ್ದರಿಂದ ನಾಯಕರು ಬೀದಿಗಿಳಿದು ಬಂದ್‌ಗೆ ಸಹಕರಿಸಿದರು.

ಬಿಜೆಪಿ ರೈತ ಮೋರ್ಚಾ ಜಿಲ್ಲಾಧ್ಯಕ್ಷ ಲೋಕಿಕೆರೆ ನಾಗರಾಜ್, ಮಹಾನಗರ ಪಾಲಿಕೆ ಮಾಜಿ ಮೇಯರ್ ಅಜಯ ಕುಮಾರ್, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಶ್ರೀನಿವಾಸ್ ದಾಸಕರಿಯಪ್ಪ, ದೂಡಾ ಮಾಜಿ ಅಧ್ಯಕ್ಷ ರಾಜನಹಳ್ಳಿ ಶಿವಕುಮಾರ್, ಶಾಸಕ ಬಿ.ಪಿ. ಹರೀಶ್ ಸೇರಿದಂತೆ ಬಿಜೆಪಿ ನಾಯಕರು ಬಂದ್‌ನಲ್ಲಿ ಭಾಗವಹಿಸಿದ್ದರು.
ಸಾವಿರಾರು ಹೆಕ್ಟೇರ್ ಪ್ರದೇಶದಲ್ಲಿ ರೈತರು ಭತ್ತ ಬೆಳೆದಿದ್ದು, ಭದ್ರಾ ಡ್ಯಾಂನ ಬಲದಂಡೆ ನಾಲೆಯಲ್ಲಿ ನೀರು ಹರಿಸುವುದಾಗಿ ಭರವಸೆ ಕೊಟ್ಟಿದ್ದ ಸರ್ಕಾರವು ಉಲ್ಟಾ ಹೊಡೆದಿದೆ. ಇದರಿಂದಾಗಿ ರೈತರ ಜೀವನದ ಜೊತೆ ಚೆಲ್ಲಾಟ ಆಡುತ್ತಿದೆ. ಕಾಂಗ್ರೆಸ್ ನೇತೃತ್ವದ ಸರ್ಕಾರ ರೈತರ ಹಿತ ಕಾಪಾಡುವ ಬದಲು ರಾಜಕೀಯ ಮಾಡಲು ಹೊರಟಿದೆ. ಇದು ಖಂಡನೀಯ. ನಾಲೆಯಲ್ಲಿ ನೀರು ಹರಿಸದಿದ್ದರೆ ಹೋರಾಟ ಮತ್ತಷ್ಟು ತೀವ್ರಗೊಳಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಎಪಿಎಂಸಿ ಮಾಜಿ ಅಧ್ಯಕ್ಷ ಕೊಳೇನಹಳ್ಳಿ ಬಿ. ಎಂ. ಸತೀಶ್, ಕುಂದುವಾಡದ ಅಣ್ಣಪ್ಪ, ಭಾರತೀಯ ರೈತ ಒಕ್ಕೂಟದ ಜಿಲ್ಲಾಧ್ಯಕ್ಷ ಶಾಮನೂರು ಲಿಂಗರಾಜ್, ಕಲ್ಲಿಂಗಪ್ಪ, ಬಸವರಾಜ್, ಮೋಹನ್ ಸೇರಿದಂತೆ ನೂರಾರು ರೈತರು ಪಾಲ್ಗೊಂಡು ಪ್ರತಿಭಟನೆ ನಡೆಸಿದರು. ಬೆಳಿಗ್ಗೆಯಿಂದಲೇ ಪ್ರಮುಖ ರಸ್ತೆಗಳಲ್ಲಿನ ಅಂಗಡಿಗಳು ಮುಚ್ಚಿದ್ದವು. ರೈತರ ಹಿತಕ್ಕಾಗಿ ನಡೆಸುತ್ತಿರುವ ಹೋರಾಟ ಬೆಂಬಲಿಸಿ. ದಾವಣಗೆರೆ ಭದ್ರಾ ಅಚ್ಚುಕಟ್ಟುದಾರರ ಪರವಾಗಿ ನಾವು ನಡೆಸುತ್ತಿರುವ ಹೋರಾಟ ಬೆಂಬಲಿಸಿ. ಈ ಮೂಲಕ ಸರ್ಕಾರಕ್ಕೆ ಒತ್ತಡ ಹೇರುವ ಕೆಲಸ ಮಾಡೋಣ ಎಂದು ಮನವಿ ಮಾಡಿದರು.
ಪ್ರತಿಭಟನಾಕಾರರು-ಪೊಲೀಸರ ನಡುವೆ ಮಾತಿನ ಚಕಮಕಿ
ಜಯದೇವ ವೃತ್ತದಲ್ಲಿ ಟೈರ್‌ಗೆ ಬೆಂಕಿ ಹಚ್ಚಲು ರೈತರು, ಬಿಜೆಪಿ ನಾಯಕರು ಮುಂದಾದಾಗ ಪೊಲೀಸರು ತಡೆದರು. ಈ ವೇಳೆ ಮಾತಿನ ಚಕಮಕಿಯೂ ನಡೆಯಿತು. ಬಂದ್ ಹಿನ್ನೆಲೆಯಲ್ಲಿ ನಗರದ ಪ್ರಮುಖ ರಸ್ತೆಗಳಲ್ಲಿ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿತ್ತು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ್ ಸಹ ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿದರು. ಈ ವೇಳೆ ಕಾನೂನು ಕೈಗೆತ್ತಿಕೊಂಡರೆ ಕಾನೂನು ರೀತಿಯಲ್ಲಿ ಕ್ರಮ ಜರುಗಿಸಲಾಗುವುದು. ಬಂದ್‌ಅನ್ನು ಶಾಂತಿಯುತವಾಗಿ ನಡೆಸಬೇಕು ಎಂದು ಸೂಚನೆ ನೀಡಿದರು.
ರೈತ ಸಂಘಗಳ ಆಗ್ರಹ
ಭದ್ರಾ ಡ್ಯಾಂನ ಬಲದಂಡೆ ನಾಲೆಯಲ್ಲಿ ನೂರು ದಿನಗಳ ಕಾಲ ನೀರು ಹರಿಸಬೇಕು ಎನ್ನುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಭಾರತೀಯ ರೈತ ಒಕ್ಕೂಟ ದಾವಣಗೆರೆ ಬಂದ್‌ಗೆ ರೈತ ಸಂಘವೂ ಬೆಂಬಲ ಕೊಟ್ಟಿತ್ತು.
ಸರ್ಕಾರ ಮಾತು ಕೊಟ್ಟಂತೆ ಭದ್ರ ಡ್ಯಾಂ ನಿಂದ 100 ದಿನ ನೀರು ಹರಿಸಿ ಭತ್ತದ ಬೆಳೆಗಾರರನ್ನು ರಕ್ಷಿಸಬೇಕು. ಕೃಷಿ ಉತ್ಪನ್ನ ಮಾರಾಕಟ್ಟೆ ರೈತ ಭವನದ ಕಾಂಪೌಂಡ್ ಅನ್ನು ಈ ಹಿಂದಿನ ಎಪಿಎಂಸಿ ಕಾರ್ಯದರ್ಶಿ ಅಕ್ರಮವಾಗಿ ಕೆಡವಿದ್ದು ಖಂಡನೀಯ. ಕೂಡಲೇ ಕಾಂಪೌಂಡ್ ಅನ್ನು ಪುನರ್ ನಿರ್ಮಾಣ ಮಾಡಿಕೊಡಬೇಕು.
ಸರ್ಕಾರ ದಾವಣಗೆರೆ ಜಿಲ್ಲೆಯನ್ನು ಬರಪೀಡಿತ ಎಂದು ಘೋಷಣೆ ಮಾಡಿದ್ದು, ರೈತರಿಗೆ ಬೆಳೆ ಪರಿಹಾರಾರ್ಥವಾಗಿ ಎಕರೆಗೆ 25,000 -ರೂಪಾಯಿಗಳನ್ನು ಘೋಷಿಸಿ, ಜನ - ಜಾನುವಾರುಗಳಿಗೆ ಅಗತ್ಯ ಸೌಲಭ್ಯಗಳನ್ನು ಕಲ್ಪಿಸಿಕೊಡಬೇಕು. ನೀರಾವರಿ ಪಂಪ್‌ಸೆಟ್‌ಗಳಿಗೆ ಹಗಲಿನಲ್ಲಿ ತಡೆರಹಿತ ಗುಣಮಟ್ಟದ 7 ಗಂಟೆ ವಿದ್ಯುತ್ ಅನ್ನು ಪೂರೈಸಬೇಕು. ಅಕ್ರಮ - ಸಕ್ರಮ ಅಡಿಯಲ್ಲಿ ಹಣ ಕಟ್ಟಿರುವ ಪಂಪ್‌ಸೆಟ್‌ಗಳಿಗೆ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಬೇಕು. ಸುಟ್ಟುಹೋದ ಟಿ.ಸಿಗಳನ್ನು ಬದಲಿಸಿ ತಕ್ಷಣವೇ ಹೊಸ ಟಿ.ಸಿಗಳನ್ನು ಹಾಕಿಸಿಕೊಡಬೇಕು. ರೈತರ ಬ್ಯಾಂಕ್, ಸಹಕಾರಿ ಸಂಸ್ಥೆ, ಕೃಷಿ ಭೂ ಅಭಿವೃದ್ಧಿ ಬ್ಯಾಂಕ್ , ಖಾಸಗಿ ಫೈನಾನ್ಸ್ ಗಳ ಎಲ್ಲಾ ಸಾಲ ವಸೂಲಾತಿ ತಡೆಹಿಡಿಯಬೇಕು. ರೈತರ ಸಂಪೂರ್ಣ ಸಾಲ ಮನ್ನಾ ಮಾಡಬೇಕು ಎಂದು ರೈತ ಸಂಘ ಒತ್ತಾಯಿಸಿ ಮನವಿ ಸಲ್ಲಿಸಿದೆ.











Click it and Unblock the Notifications