ದಾವಣಗೆರೆ ಪಾಲಿಕೆ ಕಡತ ನಿರ್ವಹಣೆ ಖಾಸಗಿ ವ್ಯಕ್ತಿ ಕೈಯಲ್ಲಿ: ಉಪ ಲೋಕಾಯುಕ್ತ ಗರಂ
ದಾವಣಗೆರೆ, ಏಪ್ರಿಲ್ 24: ದಾವಣಗೆರೆ ಪ್ರವಾಸದಲ್ಲಿದ್ದ ಕರ್ನಾಟಕದ ಉಪ ಲೋಕಾಯುಕ್ತ ನ್ಯಾಯಮೂರ್ತಿ ಬಿ. ವೀರಪ್ಪ ದಾವಣಗೆರೆ ಮಹಾನಗರ ಪಾಲಿಕೆಯ ಕೇಂದ್ರ ಕಛೇರಿಗೆ ಭೇಟಿ ನೀಡಿದರು. ಕಛೇರಿಯಲ್ಲಿ ಅಧಿಕಾರಿಗಳ ಕರ್ತವ್ಯ ನಿರ್ವಹಣೆಯ ಲೋಪವನ್ನು ಗುರುತಿಸಿದ ಅವರು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಕರ್ತವ್ಯ ಲೋಪದ ಕುರಿತು ಸ್ವಯಂ ಪ್ರೇರಿತ ದೂರು ದಾಖಲು ಮಾಡಿಕೊಳ್ಳಲು ಸೂಚನೆ ನೀಡಿದರು.
ನ್ಯಾಯಮೂರ್ತಿ ಬಿ. ವೀರಪ್ಪ ಅನಿರೀಕ್ಷಿತವಾಗಿ ದಾವಣಗೆರೆ ಮಹಾನಗರ ಪಾಲಿಕೆಯ ಕಚೇರಿಗೆ ಭೇಟಿ ನೀಡಿ ಅಲ್ಲಿನ ವಿವಿಧ ಶಾಖೆಗಳ ಕಡತ ಹಾಗೂ ಇತರೆ ದಾಖಲೆಗಳ ಪರಿಶೀಲನೆ ನಡೆಸಿದರು. ಕಚೇರಿಯ ಅಧಿಕಾರಿ ಮತ್ತು ಸಿಬ್ಬಂದಿಗಳ ಹಾಜರಾತಿ ಪುಸ್ತಕ, ಚಲನ-ವಲನ ವಹಿ ಮತ್ತು ನಗದು ಘೋಷಣಾ ವಹಿಗಳ ಬಗ್ಗೆ ವಿಚಾರಿಸಿ ಮಾಹಿತಿ ಪಡೆದುಕೊಂಡರು.

ಕಡತಗಳನ್ನು ಸರಿಯಾಗಿ ನಿರ್ವಹಿಸದಿರುವ ಕುರಿತು ಅಧಿಕಾರಿಗಳ ಮೇಲೆ ಅಸಮಾಧಾನ ವ್ಯಕ್ತಪಡಿಸಿದರು. ಅಭಿಯಂತರರು ವಿಭಾಗ ಶಾಖೆಗಳಿಗೆ ನೀಡಿ ಪರಿಶೀಲಿಸಿ, ಸೂಕ್ತ ದಾಖಲೆಗಳು ನೀಡದ ಕಾರಣ ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಸ್ವಯಂ ಪ್ರೇರಿತ ದೂರು ದಾಖಲಿಸಲು ನಿರ್ದೇಶನ ನೀಡಿದರು.
ಖಾಸಗಿ ವ್ಯಕ್ತಿ ಕೈಯಲ್ಲಿ ಪಾಲಿಕೆ ಕಡತ: ವಲಯ 3ರ ಅಧಿಕಾರಿ ಕಚೇರಿಯಲ್ಲಿ ಖಾಸಗಿ ವ್ಯಕ್ತಿಯೋರ್ವ ಯಾವುದೇ ರೀತಿಯ ಅಧಿಕಾರ ಇಲ್ಲದೆ ಮಹಾನಗರ ಪಾಲಿಕೆ ಕಡತಗಳನ್ನು ನಿರ್ವಹಣೆ ಮಾಡುತ್ತಿರುವ ಕುರಿತು, ವಿಡಿಯೋ ತುಣುಕು ಹರಿದಾಡುತ್ತಿದೆ. ಈ ಸಂಬಂಧ ಮಹಾನಗರ ಪಾಲಿಕೆ ಅಯುಕ್ತರು ಏನು ಕ್ರಮಕೈಗೊಂಡಿದ್ದೀರಿ? ಎಂದು ನ್ಯಾ. ಬಿ. ವೀರಪ್ಪ ಪ್ರಶ್ನಿಸಿದರು.
ಆಯುಕ್ತೆ ರೇಣುಕಾ ಉತ್ತರ ನೀಡಿ, ಕಚೇರಿಯ ಸಂಬಂಧಪಟ್ಟ ಅಧಿಕಾರಿಗೆ ಕಾರಣ ಕೇಳಿ ನೋಟಿಸ್ ಜಾರಿ ಮಾಡಲಾಗಿದೆ. ಪೊಲೀಸ್ ಇಲಾಖೆಗೆ ವಿಡಿಯೋ ಸತ್ಯಾಸತ್ಯತೆ ತಿಳಿಯಲು ಪತ್ರ ಬರೆದಿರುವುದಾಗಿ ಮಾಹಿತಿ ನೀಡಿದರು.
ಆಯುಕ್ತ ಉತ್ತರಕ್ಕೆ ಅಸಮಾಧನಗೊಂಡ ನ್ಯಾ. ಬಿ. ವೀರಪ್ಪ, ಸಂಬಂಧ ಪಟ್ಟ ಅಧಿಕಾರಿಯನ್ನು ಈ ಕೂಡಲೇ ಇಲಾಖೆ ವಿಚಾರಣೆ ಕಾಯ್ದಿರಿಸಿ ಅಮಾನತು ಮಾಡಬೇಕು. ಖಾಸಗಿ ವ್ಯಕ್ತಿಯ ವಿರುದ್ಧ ಪೊಲೀಸ್ ದೂರು ದಾಖಲಿಸಬೇಕು ಎಂದು ಆಯುಕ್ತರಿಗೆ ನಿರ್ದೇಶನ ನೀಡಿದರು. ಈ ಸೂಚನೆಯಂತೆ ವಲಯ 3ರ ಉಪ ಆಯುಕ್ತೆ ಈರಮ್ಮ ಹಾಗೂ ವಿಷಯ ನಿರ್ವಾಹಕಿ ನೇತ್ರಾ ಅವರನ್ನು ಅಮಾನತು ಮಾಡುವಂತೆ ಆಯುಕ್ತರು ಶಿಫಾರಸು ಮಾಡಿದರು.
ಕಸ ಸಂಗ್ರಹ, ವಿಲೇವಾರಿ, ಅಧಿಕಾರಿಗಳ ವಾಹನ ಸೇರಿ ದಾವಣಗೆರೆ ಮಹಾನಗರ ಪಾಲಿಕೆ ಬಳಿ 200 ವಾಹನಗಳು ಕಾರ್ಯಚರಣೆ ನಡೆಸುತ್ತಿವೆ. ಆದರೆ ನ್ಯಾ. ಬಿ. ವೀರಪ್ಪ ಮಹಾನಗರ ಪಾಲಿಕೆಯ ಒಟ್ಟು ವಾಹನಗಳು ಎಷ್ಟು?, ಅವುಗಳಲ್ಲಿ ಎಷ್ಟು ವಾಹನಗಳಿಗೆ ಎಫ್‌ಸಿ ಮುಗಿದಿದೆ? ಎಂದು ಪ್ರಶ್ನಿಸಿದಾಗ ಸಂಬಂಧ ಪಟ್ಟ ಅಧಿಕಾರಿ 200ಕ್ಕೂ ವಾಹನಗಳು ಇದ್ದು ಇದರಲ್ಲಿ 15 ವಾಹನಗಳ ಎಫ್‌ಸಿ ಮುಗಿದಿದೆ ಎಂದು ತಪ್ಪಾಗಿ ಮಾಹಿತಿ ನೀಡಿದರು.
ಆಗ ಉಪ ಲೋಕಾಯುಕ್ತರು ಪ್ರಾದೇಶಿಕ ಸಾರಿಗೆ ಅಧಿಕಾರಿಗಳಿಗೆ ಮಹಾನಗರ ಪಾಲಿಕೆಯ ಒಟ್ಟು ವಾಹನಗಳ ಪರಿಶೀಲನೆ ನಡೆಸುವಂತೆ ಸೂಚಿಸಿ, ಒಂದೆರಡು ಗಂಟೆಯಲ್ಲಿ ವರದಿ ನೀಡುವಂತೆ ಸೂಚಿಸಿದರು. ಸಂಜೆಯ ವೇಳೆ ಸಾರಿಗೆ ಅಧಿಕಾರಿಗಳ ವರದಿ ನೀಡಿ, ಮಹಾನಗರ ಪಾಲಿಕೆಯ 200 ವಾಹನಗಳಲ್ಲಿ 115 ವಾಹನಗಳಿಗೆ ಎಫ್‌ಸಿ ಮುಗಿದಿದೆ ಎಂದು ತಿಳಿಸಿದರು. ಇದರ ಮೇರೆಗೆ ಪಾಲಿಕೆ 115 ವಾಹನಗಳ ಜಪ್ತಿಗೆ ನ್ಯಾ. ಬಿ. ವೀರಪ್ಪ ಸೂಚಿಸಿದರು.












Click it and Unblock the Notifications