ಬೆಣ್ಣೆನಗರಿ ದಾವಣಗೆರೆಯಲ್ಲಿ ಗಣೇಶೋತ್ಸವಕ್ಕೆ ಭರ್ಜರಿ ಸಿದ್ಧತೆ: ಗಗನಕ್ಕೇರಿದ ಹೂವು, ಹಣ್ಣುಗಳ ಬೆಲೆ
ದಾವಣಗೆರೆ, ಆ.30: ಕಳೆದ ಎರಡು ವರ್ಷಗಳಿಂದ ಮಹಾಮಾರಿ ಕೊರೊನಾ ದಾವಣಗೆರೆ ಜಿಲ್ಲೆಯಲ್ಲಿ ಗಣೇಶ ಹಬ್ಬ ಕಳೆಗುಂದಿತ್ತು. ಈ ಬಾರಿ ಗಣೇಶೋತ್ಸವಕ್ಕೆ ಭರ್ಜರಿ ತಯಾರಿಯನ್ನು ನಡೆಸಿದ್ದಾರೆ. ಗಣೇಶೋತ್ಸವ ಮಂಡಳಿಗಳಿಗೆ ಮಳೆ ಆರ್ಭಟದ ಆತಂಕ ಶುರು ಆಗಿದೆ. ಹಬ್ಬದ ಸಡಗರ ಅಲ್ಲಲ್ಲಿ ಕಂಡು ಬರುತ್ತಿದ್ದರೂ, ದಿನಬಳಕೆ ವಸ್ತುಗಳ ಬೆಲೆ ಹೆಚ್ಚಾಗಿರುವುದರಿಂದ ಜನರ ಜೇಬಿಗೆ ಕತ್ತರಿ ಬೀಳುತ್ತಿದೆ.
ದಾವಣಗೆರೆಯಲ್ಲಿ ಗಣೇಶೋತ್ಸವ ಸಡಗರ ಸಂಭ್ರಮ ಜೋರಾಗಿದೆ. ನಗರದ ಜನರು ಗಣೇಶ ಪ್ರತಿಷ್ಠಾಪನೆಗೆ ಸಕಲ ಸಿದ್ದತೆ ಮಾಡಿಕೊಂಡಿದ್ದಾರೆ. ನಗರದೆಲ್ಲೆಡೆ ವಿವಿಧ ಮಾದರಿಯ ಗಣಪತಿಗಳು ಸಿದ್ಧವಾಗಿದ್ದು, ಜನರು ಭರ್ಜರಿ ಖರೀದಿಯಲ್ಲಿ ತೊಡಗಿದ್ದಾರೆ. ಈ ಬಾರಿ ಸಾರ್ವಜನಿಕ ಗಣೇಶೋತ್ಸವಕ್ಕೆ ಯಾವುದೇ ನಿರ್ಬಂಧ ಇಲ್ಲದ ಕಾರಣ ಅತ್ಯಂತ ವಿಜೃಂಭಣೆಯಿಂದ ಆಚರಿಸಲು ಸಾರ್ವಜನಿಕರು ಸಜ್ಜುಗೊಂಡಿದ್ದಾರೆ. ನಗರದ ಹಲವಾರು ಕಡೆ ಬೃಹತ್ ಮಂಟಪ, ವೇದಿಕೆ ನಿರ್ಮಾಣಗೊಂಡಿದ್ದು, ಗಣೇಶೋತ್ಸವಕ್ಕೆ ಕ್ಷಣಗಣನೆ ಆರಂಭವಾಗಿದೆ.
ಹಿಂದೂ ಮಹಾಗಣಪತಿ ಸಮಿತಿಯಿಂದ ಸರ್ಕಾರಿ ಬಾಲಕರ ಪ್ರೌಢಶಾಲಾ ಮೈದಾನದಲ್ಲಿ ತರಳಬಾಳು ಹುಣ್ಣಿಮೆ ಮಂಟಪದ ಮಾದರಿಯ ಭರ್ಜರಿ ಪೆಂಡಾಲ್ ನಿರ್ಮಾಣ ಕಾರ್ಯ ಪೂರ್ಣಗೊಂಡಿದೆ. ಕೋಲ್ಕತ್ತಾ ಮೂಲದ ಕಲಾವಿದರು ಮಂಟಪದ ನಿರ್ಮಾಣ ಮಾಡುತ್ತಿದ್ದಾರೆ. 25 ದಿನಗಳ ಕಾಲ ಗಣೇಶ ಮೂರ್ತಿಯ ಪ್ರತಿಷ್ಠಾಪನೆ ಮಾಡಲಾಗುವುದು. ರಾಜೇಶ್ ಕೃಷ್ಣನ್, ಗಂಗಾವತಿ ಪ್ರಾಣೇಶ್, ಚಕ್ರವರ್ತಿ ಸೂಲಿಬೆಲೆ ಒಳಗೊಂಡಂತೆ ಖ್ಯಾತ ಕಲಾವಿದರು, ವಾಗ್ಮಿಗಳು ಕಾರ್ಯಕ್ರಮಕ್ಕೆ ರಂಗು ತುಂಬಲಿದ್ದಾರೆ.

ಬೆಣ್ಣೆನಗರಿಯಲ್ಲಿ ಗಣೇಶೋತ್ಸವ ಸಂಭ್ರಮ
ಟ್ರ್ಯಾಕ್ಟರ್ ಗಣಪ, ರೈಲು ಏರಿದ ಗಣಪ ಹೀಗೆ ಅನೇಕ ಮಾದರಿಯ ಗಣಪಗಳು ತಯಾರಾಗಿದ್ದು, ಮೂರ್ತಿಗಳಿಗೆ ಬೇಡಿಕೆಯು ಹೆಚ್ಚಾಗಿದೆ. ಬೆಳ್ಳಿ ಗಣಪ, ತೆಂಗಿನಕಾಯಿ, ಹತ್ತಿ, ಹಸಿ ಅಡಕೆ, ಮೆಕ್ಕೆಜೋಳದ ತೆನೆ, ಉತ್ತುತ್ತಿ, ಬಾದಾಮಿ, ಏಲಕ್ಕಿ, ರುದ್ರಾಕ್ಷಿ ಹೀಗೆ ವಿಶೇಷವಾಗಿ ಗಣೇಶನ ಮೂರ್ತಿ ಪ್ರತಿಷ್ಠಾಪನೆ ಮಾಡಲಾಗುತ್ತಿದೆ. ಹಿಂದೂ ಯುವ ಶಕ್ತಿಯಿಂದ ಈ ಬಾರಿಯೂ ತೊಗಟವೀರ ಕಲ್ಯಾಣ ಮಂಟಪದಲ್ಲಿ 201 ಕೆಜಿ ಒಣ ಕೊಬ್ಬರಿಯಿಂದ ಮಾಡಿದ 13 ಅಡಿ ಎತ್ತರದ ಗಣೇಶ ಮೂರ್ತಿಯನ್ನು ಪ್ರತಿಷ್ಠಾಪನೆ ಮಾಡಲಾಗುತ್ತಿದೆ. ಸೆಪ್ಟೆಂಬರ್ 10 ರವರೆಗೆ ಗಣೇಶ ಮೂರ್ತಿ ದರ್ಶನಕ್ಕೆ ಇಡಲಾಗುವುದು.

ಯಾವ್ಯಾವ ನಗರದಲ್ಲಿ ಮೂರ್ತಿಗಳ ತಯಾರಿಕೆ?
ವಿನೋಬ ನಗರದ ಶ್ರೀ ವರಸಿದ್ಧಿ ವಿನಾಯಕ ಸೇವಾ ಸಮಿತಿ ಪದಾಧಿಕಾರಿಗಳು 30ನೇ ವರ್ಷದ ಗಣೇಶೋತ್ಸವಕ್ಕೆ ಸಿದ್ಧತೆ ನಡೆಸಿದ್ದಾರೆ. ನಗರದೆಲ್ಲೆಡೆ ಈಗಾಗಲೇ ಗಣೇಶ ಮೂರ್ತಿಗಳ ಮಾರಾಟವೂ ಪ್ರಾರಂಭವಾಗಿದೆ. ಸ್ವಾಗೇರಪೇಟೆ, ಕಾಯಿಪೇಟೆ ಇತರೆಡೆ ಗಣೇಶ ಮೂರ್ತಿಗಳು ಸಿದ್ಧತೆಗೊಂಡಿವೆ.

ಗೌರಿಗಣೇಶ ಹಬ್ಬದ ಸಂಭ್ರಮದಲ್ಲಿ ಮಹಿಳೆಯರು
ದಾವಣಗೆರೆಯಲ್ಲಿ ಗಣೇಶೋತ್ಸವವನ್ನು ವಿಜೃಂಭಣೆಯಿಂದ ನಡೆಸಲು ಜನರು ತುದಿಗಾಲಿನಲ್ಲಿ ನಿಂತಿದ್ದಾರೆ. ಗೌರಿ ಗಣೇಶ ಹಬ್ಬವನ್ನು ಮಹಿಳೆಯರು ಸಂಭ್ರಮದಿಂದ ಆಚರಣೆ ಮಾಡಿದ್ದಾರೆ. ಹರಿಶಿಣ ಕುಂಕುಮದೊಂದಿಗೆ ಮನೆಯ ಹೆಣ್ಣುಮಕ್ಕಳಿಗೆ ಬಾಗಿನ ನೀಡಿ ಸಂಭ್ರಮಿಸಿದ್ದಾರೆ. ಗಣೇಶನಿಗೂ ಮುನ್ನ ಆಗಮಿಸುವ ಗೌರಿಗೆ ಭಕ್ತಿ ಭಾವದ ನಮನ ಸಲ್ಲಿಸಿದ್ದಾರೆ.

ಗಗನಕ್ಕೇರಿದ ಹೂವುಗಳ ಬೆಲೆ
ಗೌರಿಗಣಪ ಹಬ್ಬದ ಹಿನ್ನೆಲೆಯಲ್ಲಿ ಹೂವು ಹಣ್ಣುಗಳ ವ್ಯಾಪಾರ ಭರ್ಜರಿಯಾಗಿ ನಡೆದಿದೆ. ನಿನ್ನೆಯಿಂದಲೇ ಜನರು ಹೂವು, ಹಣ್ಣು ಖರೀದಿಯಲ್ಲಿ ಬ್ಯುಸಿಯಾಗಿದ್ದಾರೆ. ಎಂದಿನಂತೆ ಹೂವು, ಹಣ್ಣುಗಳ ಬೆಲೆ ಗಗನಕ್ಕೇರಿದೆ. ಮಾರು ಸೇವಂತಿಗೆ ಹೂವು 100 ರೂಪಾಯಿ, ಕಾಕಡ, ಕನಕಾಂಬರ 50 ರೂಪಾಯಿ, 250 ಗ್ರಾಂ ಬಿಡಿ ಹೂವಿಗೆ 100 ರೂಪಾಯಿ ಹೀಗೆ ಹೂವುಗಳ ದರವೂ ಗಗನಕ್ಕೆ ಏರಿದೆ. ಇನ್ನು ಹಣ್ಣುಗಳ ಬೆಲೆಯೂ ಹೆಚ್ಚಾಗಿದೆ. ಬೆಲೆ ಹೇಗೆ ಇದ್ದರೂ ಹಬ್ಬಕ್ಕೆ ಖರೀದಿ ಮಾಡುವುದು ಮಾತ್ರ ತಪ್ಪುವುದಿಲ್ಲ ಎಂದು ಜನರು ಅಭಿಪ್ರಾಯ ವ್ಯಕ್ತಪಡಿಸಿದರು.












Click it and Unblock the Notifications