ನಮ್ಮ ಸರ್ಕಾರಕ್ಕೆ ಯಾರ ಬೆಂಬಲವೂ ಬೇಕಿಲ್ಲ: ಯಡಿಯೂರಪ್ಪ
ದಾವಣಗೆರೆ, ನವೆಂಬರ್ 25: ನಮ್ಮ ಸರ್ಕಾರಕ್ಕೆ ಯಾವುದೇ ಬೇರೆ ಪಕ್ಷಗಳ ಬೆಂಬಲ ಬೇಕಿಲ್ಲ ಎಂದು ಸಿಎಂ ಯಡಿಯೂರಪ್ಪ ಹೇಳಿದರು.
ವಿಜಯನಗರಕ್ಕೆ ಚುನಾವಣಾ ಪ್ರಚಾರಕ್ಕೆ ತೆರಳುವ ಮುನ್ನಾ ಸುದ್ದಿಗಾರರೊಂದಿಗೆ ಮಾತನಾಡಿದ ಯಡಿಯೂರಪ್ಪ, 'ಯಾವ ಪಕ್ಷದ ಬೆಂಬಲವನ್ನೂ ಪಡೆಯದೇ ಮುಂದಿನ ಮೂರುವರೆ ವರ್ಷಗಳು ಅತ್ಯುತ್ತಮ ಆಡಳಿತ ನೀಡಲಿದ್ದೇವೆ' ಎಂದು ಯಡಿಯೂರಪ್ಪ ಹೇಳಿದರು.
'ಮುಂದಿನ ಮೂರುವರೆ ವರ್ಷ ಯಡಿಯೂರಪ್ಪ ಸಿಎಂ ಆಗಿರಬೇಕು ಎಂದು ಜನರು ನಿಶ್ಚಯ ಮಾಡಿದ್ದಾರೆ. ಪ್ರಚಾರಕ್ಕೆ ಹೋದ ಕಡೆಯೆಲ್ಲಾ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ, ಹದಿನೈದು ಉಪಚುನಾವಣಾ ಕ್ಷೇತ್ರದಲ್ಲೂ ನಾವೇ ಗೆಲುವು ಸಾಧಿಸುತ್ತೇವೆ' ಎಂದು ಯಡಿಯೂರಪ್ಪ ಹೇಳಿದರು.

'ಉಪಚುನಾವಣೆ ನಂತರ ಯಡಿಯೂರಪ್ಪ ರಾಜೀನಾಮೆ ನೀಡಬೇಕಾಗುತ್ತದೆ' ಎಂಬ ಸಿದ್ದರಾಮಯ್ಯ ಹೇಳಿಕೆಗೆ ಪ್ರತ್ಯುತ್ತರ ಕೇಳಿದ ಸುದ್ದಿಗಾರರಿಗೆ, 'ವಿಪಕ್ಷ ನಾಯಕರ ಯಾವುದೇ ಹೇಳಿಕೆಗೆ ನಾನು ಉತ್ತರ ನೀಡುವುದಿಲ್ಲ, ಅವರಿಗೆ ಜನರೇ ಉತ್ತರ ನೀಡಲಿದ್ದಾರೆ' ಎಂದರು.
'ಲಿಂಗಾಯತರ ಮತ ಬಿಜೆಪಿಗೆ ಬರಬೇಕು' ಎಂಬ ತಮ್ಮ ಹೇಳಿಕೆ ವಿರುದ್ಧ ಕುಮಾರಸ್ವಾಮಿ ದೂರು ನೀಡುವುದಾಗಿ ಹೇಳಿದ್ದಾರೆಂದು ಸುದ್ದಿಗಾರರು ಗಮನ ಸೆಳೆದರು. ಇದರ ಬಗ್ಗೆ ಪ್ರತಿಕ್ರಿಯಿಸಿದ ಯಡಿಯೂರಪ್ಪ, 'ಕುಮಾರಸ್ವಾಮಿ ಅವರಿಗೆ ಸಾಕಷ್ಟು ಪುರುಸೊತ್ತಿದೆ ಹಾಗಾಗಿ ಅವರಿಗೆ ಇಷ್ಟವಾದದ್ದು ಮಾಡಲಿ' ಎಂದರು.
'ವೀರಶೈವರು ಮಾತ್ರವಲ್ಲ, ಎಲ್ಲ ಜಾತಿ, ಧರ್ಮ, ಜನಾಂಗದವರು ಚುನಾವಣೆಯಲ್ಲಿ ಬಿಜೆಪಿ ಜೊತೆ ನಿಲ್ಲಲಿ' ಎಂದು ತಾವು ಹೇಳಿದ್ದಾಗಿ ಯಡಿಯೂರಪ್ಪ ಸ್ಪಷ್ಟನೆ ನೀಡಿದರು.
ಹುಳಿಮಾವು ಕೆರೆ ದುರಂತವಾದ ಬಗ್ಗೆ ಬೇಸರ ವ್ಯಕ್ತಪಡಿಸಿದ ಯಡಿಯೂರಪ್ಪ, ಈ ಬಗ್ಗೆ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿ ಸಂತ್ರಸ್ತ ಕುಟುಂಬಕ್ಕೆ ಪರಿಹಾರ ಘೋಷಿಸುವುದಾಗಿ ಭರವಸೆ ನೀಡಿದರು.












Click it and Unblock the Notifications