ಚಿಕ್ಕನಹಳ್ಳಿಯಲ್ಲಿ ರಾಜಕಾಲುವೆಗೆ ಸೇತುವೆ ನಿರ್ಮಿಸದ ದಾವಣಗೆರೆ ಪಾಲಿಕೆ, ಶಾಲಾ ಮಕ್ಕಳ ಪರದಾಟ
ದಾವಣಗೆರೆ, ಡಿಸೆಂಬರ್, 04: ದಾವಣಗೆರೆ ನಗರದ ಚಿಕ್ಕನಹಳ್ಳಿಯಲ್ಲಿ ರಾಜಕಾಲುವೆಗೆ ಸೇತುವೆ ಇಲ್ಲದೆ ಅಂಗೈಯಲ್ಲಿ ಜೀವ ಹಿಡಿದುಕೊಂಡು ಶಾಲಾ ಮಕ್ಕಳು ಓಡಾಡುತ್ತಿದ್ದಾರೆ. ವಿದ್ಯುತ್ ಕಂಬವನ್ನು ಅಡ್ಡಲಾಗಿ ಹಾಕಿ ಅದರ ಮೇಲೆಯೇ ಮಕ್ಕಳು ಹಾಗೂ ಸ್ಥಳೀಯರು ಸಂಚರಿಸುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.
ಹೀಗೆ ಶಾಲಾ - ಕಾಲೇಜಿಗೆ ಹೋಗುವ ವಿದ್ಯಾರ್ಥಿಗಳು ಪ್ರಾಣ ಕೈಯಲ್ಲಿಡಿದುಕೊಂಡು ವಿದ್ಯುತ್ ಕಂಬದ ಮೇಲೆ ಹೋಗುವಂತಹ ದುಃಸ್ಥಿತಿ ನಿರ್ಮಾಣವಾಗಿದೆ. ಆದರೂ ಅಧಿಕಾರಿಗಳು, ಜನಪ್ರತಿನಿಧಿಗಳು ಈ ಬಗ್ಗೆ ಸೂಕ್ತ ಕ್ರಮವನ್ನು ತೆಗೆದುಕೊಳ್ಳುತ್ತಿಲ್ಲ ಎಂದು ಪಕ್ಕಳ ಪೋಷಕರು ಹಾಗೂ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪ್ರತಿನಿತ್ಯ ಅಂಗೈಯಲ್ಲಿ ಜೀವ ಹಿಡಿದುಕೊಂಡು ಶಾಲೆಗೆ ಹೋಗುವ ಮಕ್ಕಳು ಹಾಗೂ ಅಂಗನವಾಡಿಗೆ ಚಿಕ್ಕ ಮಕ್ಕಳನ್ನು ಪೋಷಕರೇ ಕರೆ ತಂದು ಬಿಟ್ಟು, ಮತ್ತೆ ವಾಪಸ್ ಕರೆದುಕೊಂಡು ಹೋಗುವ ಪರಿಸ್ಥಿತಿ ನಿರ್ಮಾಣವಾಗಿದೆ. ಇದೇ ಸ್ಥಳದಲ್ಲಿ 4 ವರ್ಷದ ಹಿಂದೆ ನೀರಿನಲ್ಲಿ ಮಗು ಕೊಚ್ಚಿ ಹೋಗಿ ಸಾವನ್ನಪ್ಪಿದ ಘಟನೆಯೂ ನಡೆದಿದೆ. ಇಷ್ಟೆಲ್ಲ ಅನಾಹುತಗಳು ಸಂಭವಿಸಿದರೂ ಕೂಡ ಅಧಿಕಾರಿಗಳು ಮಾತ್ರ ಎಚ್ಚೆತ್ತುಕೊಂಡಿಲ್ಲ ಎಂದು ಜನರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಧೂಳಿನಿಂದ ತರಕಾರಿ ಬೆಳೆ ನಾಶ: ಸಾರಥಿ ಗ್ರಾಮದ ರಸ್ತೆಯಲ್ಲಿ ಲಾರಿಗೆ ಅಡ್ಡ ಕುಳಿತು ಮಹಿಳೆ ಆಕ್ರೋಶ
ಪಾಲಿಕೆ ನಿರ್ಲಕ್ಷ್ಯ, ಪ್ರತಿನಿತ್ಯ ಪರದಾಟ
ಇದೇ ಸ್ಥಳದಲ್ಲಿ 15 ದಿನಗಳ ಹಿಂದೆ ನೀರಿನಲ್ಲಿ ಕೊಚ್ಚಿ ಹೋಗುತ್ತಿದ್ದ ಮಗುವನ್ನು ಮಹಿಳೆಯೊಬ್ಬರು ಕಾಪಾಡಿದ್ದಾರೆ. 15 ವರ್ಷಗಳಿಂದ ಸಮಸ್ಯೆ ಇದ್ದರೂ ಇದುವರೆಗೂ ಇದಕ್ಕೆ ಮುಕ್ತಿ ಸಿಕ್ಕಿಲ್ಲ. ಹೀಗೆ ಹಾಲಿ ಮೇಯರ್ ಜಯಮ್ಮ ಗೋಪಿನಾಯ್ಕ್ 30ನೇ ವಾರ್ಡ್‌ನಲ್ಲಿ ಮಕ್ಕಳ ಗೋಳನ್ನು ಕೇಳುವವರಿಲ್ಲ ಎಂಬಂತಾಗಿದೆ. ಇನ್ನು ಪಾಲಿಕೆ ವ್ಯಾಪ್ತಿಯಲ್ಲಿ ಬರುವ ರಾಜ ಕಾಲುವೆಗೆ ಸೇತುವೆ ನಿರ್ಮಿಸಿಕೊಡದೆ ನಿರ್ಲಕ್ಷ್ಯ ವಹಿಸಿದೆ ಎನ್ನುವ ಆರೋಪ ಕೇಳಿಬಂದಿದೆ. ಶಾಲೆಗೆ ಹೋಗುವ ಮಾರ್ಗದ ಮಧ್ಯೆಯೇ ಇರುವ ಈ ಜಾಗದಲ್ಲಿ ಚಿಕ್ಕ ಬ್ರಿಡ್ಜ್ ಮಾಡಿಕೊಡುವಂತೆ ಮಕ್ಕಳ ಒತ್ತಾಯಕ್ಕೂ ಅಧಿಕಾರಿಗಳು ಕಾಸಿನ ಕಿಮತ್ತು ಕೊಡುತ್ತಿಲ್ಲ ಎನ್ನುವ ಗಂಭೀರ ಆರೋಪಗಳು ಕೇಳಿಬರುತ್ತಿವೆ.
ಸೇತುವೆ ನಿರ್ಮಿಸುವಂತೆ ಮಕ್ಕಳ ಒತ್ತಾಯ
ಈಗಾಗಲೇ ರಾಜಕಾಲುವೆ ನೀರಿನಿಂದ ಆವೃತವಾಗಿದ್ದು, ಮಕ್ಕಳು ಈ ಕಾಲುವೆಯನ್ನು ದಾಟಲು ಹರಸಾಹಸ ಪಡುವಂತಾಗಿದೆ. ಹೀಗೆ ಮಕ್ಕಳ ಗೋಳು ಕೇಳುವವರೇ ಇಲ್ಲದಂತಾಗಿದೆ. ಮಳೆ ಬಂದಾಗ ಈ ಸ್ಥಳದಲ್ಲಿ ಮಕ್ಕಳ ಪಾಡು ನರಕಯಾತನೆ ಆಗಿರುತ್ತದೆ. ಬೇರೆ ಕಡೆಯಿಂದ 4 ಕಿಲೋ ಮೀಟರ್ ಸುತ್ತಿ ಬರಬೇಕು. ಇದು ನಮಗೆ ಹತ್ತಿರದ ಮಾರ್ಗವಾಗಿದ್ದು, ನಾವು ಇಲ್ಲಿಂದಲೇ ಹೋಗುತ್ತೇವೆ.

ಈ ಸಮಸ್ಯೆಯಿಂದ ಮುಕ್ತಿ ಕೊಡಿಸಿ ಅಂತಾ ಮಕ್ಕಳು ಹಾಗೂ ಪೋಷಕರು ಅಳಲು ತೋಡಿಕೊಂಡಿದ್ದಾರೆ. ಅಕ್ಕಪಕ್ಕದ ಜಾಗದವರು ಇದು ನಮ್ಮ ಜಾಗ. ಮಕ್ಕಳು ಹೋಗಲು ನಾವು ದಾರಿ ಹೇಗೆ ಬಿಡಬೇಕು. ಕಾನೂನು ಪ್ರಕಾರ ನಮ್ಮ ಜಾಗ ಅದು. ಪಾಲಿಕೆಯವರು ಬೇರೆ ಮಾರ್ಗದಲ್ಲಿ ಜಾಗ ಮಾಡಿಕೊಡಲಿ ಎಂದು ಹೇಳುತ್ತಿದ್ದಾರೆ. ಇನ್ನು ಪಾಲಿಕೆ ಅಧಿಕಾರಿಗಳು ಎಚ್ಚೆತ್ತುಕೊಂಡು ಆದಷ್ಟು ಬೇಗ ಸೂಕ್ತ ನಿರ್ಧಾರ ಕೈಗೊಳ್ಳಿ ಎನ್ನುವುದು ಮಕ್ಕಳ ಆಗ್ರಹವಾಗಿದೆ.