'ಮುಂದಿನ ಮುಖ್ಯಮಂತ್ರಿ ವಿಜಯೇಂದ್ರ': ದಾವಣಗೆರೆಯಲ್ಲಿ ಅಭಿಮಾನಿಗಳ ಜೈಕಾರ..!
ದಾವಣಗೆರೆ, ಮೇ.12: ರಾಜ್ಯದಲ್ಲಿ ಬಿಜೆಪಿ ಪಕ್ಷದ ರಾಜಕೀಯ ಚಟುವಟಿಕೆಗಳು ಗರಿಗೆದರಿವೆ. ಮುಖ್ಯಮಂತ್ರಿ ಬದಲಾವಣೆ ಮಾತು ಈ ಹಿಂದಿನಿಂದಲೂ ಕೇಳಿ ಬರುತ್ತಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಕೆಳಗಿಳಿಸಲಾಗುತ್ತದೆ ಎಂಬ ಗುಸುಗುಸು ಮುಂದುವರಿದಿದೆ. ಬೊಮ್ಮಾಯಿ ಡೆಲ್ಲಿ ಭೇಟಿಯೂ ಆಗಾಗ್ಗೆ ನಡೆಯುತ್ತಲೇ ಇದೆ. ಈ ಮಧ್ಯೆ "ಮುಂದಿನ ಮುಖ್ಯಮಂತ್ರಿ ಬಿ.ವೈ. ವಿಜಯೇಂದ್ರ'' ಎಂಬ ಘೋಷಣೆಗಳು ಮೊಳಗಿವೆ.
ದಾವಣಗೆರೆ ತಾಲೂಕಿನ ಬಾಡಾ ಕ್ರಾಸ್ ಬಳಿಯ ಕಲ್ಪನಹಳ್ಳಿ ಗ್ರಾಮದಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ವಿಜಯೇಂದ್ರ ಕಾರಿನಿಂದ ಇಳಿಯುತ್ತಿದ್ದಂತೆ ಬಿಜೆಪಿ ಕಾರ್ಯಕರ್ತರು, ವಿಜಯೇಂದ್ರ ಅಭಿಮಾನಿಗಳು ಮುಂದಿನ ಸಿಎಂ ಎಂದು ಘೋಷಣೆ ಕೂಗಿದ್ದಾರೆ. ಪಟಾಕಿ ಸಿಡಿಸಿ ಸಂಭ್ರಮಿಸಿದ ಜನರು ಮುಂದಿನ ಮುಖ್ಯಮಂತ್ರಿಗೆ ಜೈ ಎನ್ನುತ್ತಿದ್ದಂತೆ ವಿಜಯೇಂದ್ರ ಅವರು ಅವರತ್ತ ನೋಡುತ್ತಲೇ ಸುಮ್ಮನಿದ್ದರು. ಹರಿಹರದ ಬಿಜೆಪಿಯ ಮಾಜಿ ಶಾಸಕ ಬಿ. ಪಿ. ಹರೀಶ್ ಹುಟ್ಟುಹಬ್ಬದಲ್ಲಿ ಪಾಲ್ಗೊಳ್ಳಲು ತೆರಳುವ ಮಾರ್ಗ ಮಧ್ಯೆ ದಾವಣಗೆರೆಯ ಕಲ್ಪನಹಳ್ಳಿಗೆ ಬಂದಾಗ ಈ ಪ್ರಸಂಗ ನಡೆದಿದೆ.

ಸಂಪುಟ ವಿಸ್ತರಣೆ ಬಗ್ಗೆ ಎಲ್ಲವೂ ತಿಳಿಯುತ್ತದೆ
ಈ ವೇಳೆ ಮಾಧ್ಯಮದವರ ಜೊತೆ ಮಾತನಾಡಿದ ವಿಜಯೇಂದ್ರ ಅವರು, ರಾಜ್ಯದಲ್ಲಿ ಸಚಿವ ಸಂಪುಟ ವಿಚಾರಕ್ಕೆ ಸಂಬಂಧಿಸಿದಂತೆ ಸಿಎಂ ಬಸವರಾಜ ಬೊಮ್ಮಾಯಿ, ಪಕ್ಷದ ವರಿಷ್ಠರು ಕ್ರಮ ತೆಗೆದುಕೊಳ್ಳುತ್ತಾರೆ. ಸಂಪುಟ ವಿಸ್ತರಣೆಯಾಗುತ್ತೋ ಅಥವಾ ಸಂಪುಟ ಪುನಾರಚನೆ ಆಗುತ್ತಾ ಎಂಬ ಬಗ್ಗೆ ಸಿಎಂ ನಿರ್ಧರಿಸುತ್ತಾರೆ. ದೆಹಲಿಗೆ ಭೇಟಿ ನೀಡಿದ ವೇಳೆ ಬೊಮ್ಮಾಯಿ ಅವರೇ ನಾಲ್ಕೈದು ದಿನಗಳಲ್ಲಿ ಏನಾಗಬಹುದೋ ಏನೋ ಎಂಬ ಮಾತು ಆಡಿದ್ದಾರೆ. ಸಂಪುಟ ವಿಸ್ತರಣೆಗಾಗಿ ಅವರು ದೆಹಲಿಗೆ ಹೋಗುತ್ತಿಲ್ಲ. ರಾಜ್ಯದ ಹಿತದೃಷ್ಟಿಯಿಂದ ಹೋಗಿ ಬರುತ್ತಿದ್ದಾರೆ. ಅಲ್ಲಿ ಕೇಂದ್ರ ಸಚಿವರನ್ನು ಭೇಟಿ ಮಾಡಿ ಚರ್ಚಿಸಿದ್ದಾರೆ ಎಂದು ಹೇಳಿದರು.

ವಲಸಿಗ ಸಚಿವರು ಆತಂಕ ಪಡಬೇಕಿಲ್ಲ..!
ಈಗಾಗಾಲೇ ಕೇಂದ್ರ ಗೃಹ ಖಾತೆ ಸಚಿವ ಅಮಿತ್ ಶಾ ಅವರ ಜೊತೆ ಸಂಪುಟ ವಿಸ್ತರಣೆ ಮಾಡಬೇಕೋ, ಪುನಾರಚನೆ ಮಾಡಬೇಕೋ ಎಂಬ ಬಗ್ಗೆ ಈಗಾಗಲೇ ಚರ್ಚೆ ನಡೆಸಿದ್ದಾರೆ. ಈ ಬಗ್ಗೆ ಏನಾಗುತ್ತೋ ಏನೋ ಎಂಬುದು ನನಗೂ ಗೊತ್ತಿಲ್ಲ ಎಂದು ತಿಳಿಸಿದರು. ಇನ್ನೂ ವಲಸಿಗ ಸಚಿವರು ಆತಂಕ ಪಡದಂತೆ ಈಗಾಗಲೇ ಮುಖ್ಯಮಂತ್ರಿಗಳು ಅವರ ಜೊತೆ ಸಮಾಲೋಚನೆ ನಡೆಸಿ ಧೈರ್ಯ ತುಂಬುವ ಕೆಲಸ ಮಾಡಿದ್ದಾರೆ. ಯಾರನ್ನು ಸಂಪುಟಕ್ಕೆ ತೆಗೆದುಕೊಳ್ಳಬೇಕು, ಯಾರನ್ನು ಬಿಡಬೇಕು ಎಂಬುದರ ಬಗ್ಗೆ ಸರಿಯಾದ ಸಮಯದಲ್ಲಿ ಸಿಎಂ ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.

ಸ್ಪರ್ಧೆ ಬಗ್ಗೆ ಹೈಕಮಾಂಡ್ ತೀರ್ಮಾನಿಸುತ್ತದೆ
"ನಾನು ಚುನಾವಣೆಯಲ್ಲಿ ಸ್ಪರ್ಧಿಸಬೇಕೋ ಅಥವಾ ಬೇಡವೋ ಎಂಬ ಬಗ್ಗೆ ಪಕ್ಷದ ವರಿಷ್ಠರು ನಿರ್ಧರಿಸುತ್ತಾರೆ. ಕೆ. ಆರ್. ಪೇಟೆ ಉಪಚುನಾವಣೆಯಲ್ಲಿ ಬಿಜೆಪಿ ಜಯಭೇರಿ ಬಾರಿಸುವಂತೆ ಮಾಡಿದ್ದೇವೆ. ಅದಕ್ಕೂ ಮುನ್ನ ಅಲ್ಲಿ ಬಿಜೆಪಿ ಗೆದ್ದಿರಲಿಲ್ಲ. ಕಾರ್ಯಕರ್ತರಲ್ಲಿ ಉತ್ಸಾಹ ಹೆಚ್ಚಾಗುತ್ತಿದೆ. ಮೈಸೂರು ಭಾಗದಲ್ಲಿ ಪಕ್ಷ ಸಂಘಟನೆಗೆ ಒತ್ತು ನೀಡಲಾಗಿದೆ ಎಂದರು.
ಬಿಜೆಪಿ ಸಚಿವರ ವಿರುದ್ಧ ಕಾಂಗ್ರೆಸ್ ನವರು ಸುಳ್ಳು ಆರೋಪ ಮಾಡುತ್ತಲೇ ಬರುತ್ತಿದ್ದಾರೆ. ಸುಳ್ಳನ್ನು ನೂರು ಬಾರಿ ಹೇಳಿ ಸತ್ಯ ಅಂತಾ ನಿರೂಪಿಸುವ ಕೆಲಸ ಕಾಂಗ್ರೆಸ್ ಮಾಡುತ್ತಿದೆ. ಸಚಿವರಾಗಿದ್ದ ಕೆ. ಎಸ್. ಈಶ್ವರಪ್ಪ ಅವರು ಪಕ್ಷಕ್ಕೆ ಮುಜುಗರ ಆಗಬಾರದಂದು ಎಂಬ ಕಾರಣಕ್ಕೆ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದರು. ಕಾಂಗ್ರೆಸ್ ಮಾಡಿರುವ ಆರೋಪದಲ್ಲಿ ಯಾವುದೇ ಹುರುಳಿಲ್ಲ ಎಂದು ಕಿಡಿಕಾರಿದರು. ಜನರನ್ನು ತಪ್ಪು ದಾರಿಗೆ ತೆಗೆದುಕೊಂಡು ಹೋಗುವ ಕೆಲಸವನ್ನು ಕಾಂಗ್ರೆಸ್ ಮುಖಂಡರು ಮಾಡುತ್ತಿದ್ದಾರೆ. ಏನೇ ಹಾರಾಡಿದರೂ ಮುಂದೆಯೂ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ರಾಜ್ಯಾಧ್ಯಕ್ಷರಾಗಿ ನಳಿನ್ ಕುಮಾರ್ ಕಟೀಲ್ ಮುಂದವರಿಕೆ..!
ಇನ್ನೂ ಬಿಜೆಪಿ ರಾಜ್ಯಾದ್ಯಕ್ಷ ನಳೀನ್ ಕುಮಾರ್ ಕಟೀಲ್ ಬದಲಾವಣೆ ವಿಚಾರಕ್ಕೆ ಸಂಬಂಧಪಟ್ಟಂತೆ ಪ್ರತಿಕ್ರಿಯಿಸಿದ ಅವರು, ಮುಂದಿನ ವಿಧಾನಸಭೆ ಚುನಾವಣೆವರೆಗೂ ನಳೀನ್ ಕುಮಾರ್ ಕಟೀಲ್ ಅವರೇ ರಾಜ್ಯಾದ್ಯಕ್ಷರಾಗಿ ಮುಂದುವರೆಯಲಿದ್ದಾರೆ. ರಾಜ್ಯಾದ್ಯಕ್ಷರ ಬದಲಾವಣೆ ವಿಚಾರ ಬರೀ ಊಹಾಪೋಹಗಳಷ್ಟೇ ಎಂದು ಸ್ಪಷ್ಟನೆ ನೀಡಿದರು.












Click it and Unblock the Notifications