ದಾವಣಗೆರೆಯಲ್ಲಿ ಅತ್ಯಾಧುನಿಕ ಸೌಕರ್ಯ ಹೊಂದಿರುವ 109.84 ಕೋಟಿ ವೆಚ್ಚದ ನೂತನ KSRTC ಬಸ್ ನಿಲ್ದಾಣದ ನಿರ್ಮಾಣ, ಮಾಹಿತಿ, ವಿವರ
ದಾವಣಗೆರೆ, ಮಾರ್ಚ್, 10: ಆಧುನಿಕ ಸೌಕರ್ಯ ಹೊಂದಿರುವ ದಾವಣಗೆರೆ ನೂತನ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣ ಇಂದು (ಮಾರ್ಚ್ 9) ಉದ್ಘಾಟನೆ ಮಾಡಲಾಗಿದೆ. ಮಲ್ಟಿಪ್ಲೆಕ್ಸ್ ಸಿನಿಮಾ ಹಾಲ್ ಜೊತೆ ಪ್ರಯಾಣಿಕರಿಗೆ ಬೇಕಾದ ಎಲ್ಲಾ ಮೂಲಭೂತ ಸೌಕರ್ಯ ಹೊಂದಿರುವ ರಾಜ್ಯದಲ್ಲಿನ ಮೊದಲ ಮಾದರಿ ಬಸ್ ನಿಲ್ದಾಣ ಇದಾಗಿದೆ ಎಂದು ಸಾರಿಗೆ ಹಾಗೂ ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ ಹೇಳಿದರು. ಹಾಗಾದರೆ ಈ ಬಸ್ ನಿಲ್ದಾಣ ಇನ್ನೇನೆಲ್ಲ ಸೌಲಭ್ಯಗಳನ್ನು ಒಳಗೊಂಡಿದೆ ಹಾಗೂ ಎಷ್ಟು ಕೋಟಿ ವೆಚ್ಚದಲ್ಲಿ ಎನ್ನುವ ಮಾಹಿತಿಯನ್ನು ಇಲ್ಲಿ ತಿಳಿಯಿರಿ.
ದಾವಣಗೆರೆ ನೂತನ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ ಹಲವು ಆಧುನಿಕ ಸೌಕರ್ಯಗಳನ್ನು ಹೊಂದಿದ್ದು, ಮಲ್ಟಿಪ್ಲೆಕ್ಸ್ ಸಿನಿಮಾ ಹಾಲ್‌ಗಳ ಜೊತೆಗೆ ಪ್ರಯಾಣಿಕರಿಗೆ ಬೇಕಾದ ಮೂಲಭೂತ ಸೌಕರ್ಯಗಳನ್ನು ಹೊಂದಿರುವ ರಾಜ್ಯದಲ್ಲಿನ ಮೊದಲ ಬಸ್ ನಿಲ್ದಾಣ ಇದಾಗಿದೆ ಎಂದು ಸಾರಿಗೆ ಹಾಗೂ ಮುಜರಾಯಿ ಸಚಿವ ರಾಮಲಿಂಗಾರೆಡ್ಡಿಯವರು ತಿಳಿಸಿದರು.

ಅವರು ರಾಜ್ಯ ರಸ್ತೆ ಸಾರಿಗೆ ನಿಗಮ, ದಾವಣಗೆರೆ ಸ್ಮಾರ್ಟ್ ಸಿಟಿ ಯೋಜನೆಯಡಿ ನಿರ್ಮಾಣ ಮಾಡಲಾಗಿರುವ ದಾವಣಗೆರೆ ಮುಖ್ಯ ಬಸ್ ನಿಲ್ದಾಣ ಹಾಗೂ ಬೇತೂರು ರಸ್ತೆಯಲ್ಲಿನ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ ಲೋಕಾರ್ಪಣೆ ಮಾಡಿ ಮುಖ್ಯ ಬಸ್ ನಿಲ್ದಾಣದಲ್ಲಿ ಏರ್ಪಡಿಸಲಾದ ಸಮಾರಂಭದಲ್ಲಿ ಮಾತನಾಡಿದರು.
ಸ್ಮಾರ್ಟ್ ಸಿಟಿ ಯೋಜನೆಯಡಿ ದಾವಣಗೆರೆ ಮುಖ್ಯ ಬಸ್ ನಿಲ್ದಾಣ ಮತ್ತು ಬೇತೂರು ರಸ್ತೆಯ ಬಸ್ ನಿಲ್ದಾಣ ನಿರ್ಮಾಣ ಮಾಡಲಾಗಿದೆ. ಮುಖ್ಯ ಬಸ್ ನಿಲ್ದಾಣವನ್ನು 109.84 ಕೋಟಿ ರೂಪಾಯಿ ವೆಚ್ಚದಲ್ಲಿ 6.07 ಹೆಕ್ಟೇರ್ ವಿಸ್ತೀರ್ಣದಲ್ಲಿ ಬಸ್ ನಿಲ್ದಾಣ ಕಟ್ಟಡವನ್ನು ನಿರ್ಮಾಣ ಮಾಡಲಾಗಿದೆ. ಇದರಲ್ಲಿ ಶೇಕಡಾ 25ರಷ್ಟು ನಿಗಮದ ಅನುದಾನ ಹಾಗೂ ಶೇಕಡಾ 75ರಷ್ಟು ಸ್ಮಾರ್ಟ್ ಸಿಟಿ ಯೋಜನೆ ಅನುದಾನ ಆಗಿದೆ.
ಬೇತೂರು ರಸ್ತೆಯಲ್ಲಿನ ಬಸ್ ನಿಲ್ದಾಣವನ್ನು 1.20 ಹೆಕ್ಟೇರ್ ಜಾಗದಲ್ಲಿ 8.96 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣ ಮಾಡಲಾಗಿದೆ. ದಾವಣಗೆರೆಯಿಂದ ಪ್ರತಿನಿತ್ಯ 1,400ಕ್ಕಿಂತ ಹೆಚ್ಚು ಬಸ್‍ಗಳು ಬಂದು ಹೋಗುತ್ತವೆ. ಇಲ್ಲಿಗೆ ಆಗಮಿಸುವ ಬಸ್‍ಗಳ ಸಂಖ್ಯೆಯು ಹೆಚ್ಚಿದ್ದು, ಅದಕ್ಕೆ ಬೇಕಾದ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಲಾಗಿದೆ ಎಂದರು.
ಶಕ್ತಿ ತಂದ ಮೇಲೆ ಮಹಿಳೆಯರಿಗೆ ಶಕ್ತಿ: ಚುನಾವಣಾ ಪೂರ್ವದಲ್ಲಿ ನೀಡಿದ ಭರವಸೆಯಂತೆ ಸರ್ಕಾರ ಬಂದು 15 ದಿನಗಳಲ್ಲಿ ಮಹಿಳೆಯರು ಉಚಿತ ಪ್ರಯಾಣಿಸುವ ಶಕ್ತಿ ಯೋಜನೆಯನ್ನು ಜಾರಿಗೆ ತರಲಾಯಿತು. ಈ ಯೋಜನೆ ಜಾರಿಯಿಂದ ಮುಂದಿನ ದಿನಗಳಲ್ಲಿ ನಿಗಮದ ಬಸ್‍ಗಳಿಗೆ ಇಂಧನ ಭರಿಸಲು ಹಣವಿಲ್ಲದಂತಾಗುತ್ತದೆ ಎಂಬ ಭಾವನೆಯನ್ನು ನಿವಾರಣೆ ಮಾಡಿ ನಿಗಮವನ್ನು ಅತ್ಯುತ್ತಮವಾಗಿ ನಡೆಸಿಕೊಂಡು ಹೋಗಲಾಗುತ್ತಿದೆ. ಶಕ್ತಿ ಬಂದಾಗಿನಿಂದ ರಾಜ್ಯದಲ್ಲಿ 160 ಕೋಟಿಗಿಂತಲೂ ಹೆಚ್ಚಿನ ಮಹಿಳೆಯರು ಪ್ರಯಾಣಿಸಿದ್ದು, ಇವರಿಗೆ ಆರ್ಥಿಕವಾಗಿ ಶಕ್ತಿ ತುಂಬಲಾಗಿದೆ ಎಂದು ವಿವರಿಸಿದರು.
ಸಿಬ್ಬಂದಿ ನೇಮಕ, ಹೊಸ ಬಸ್‍ಗಳ ಖರೀದಿ: ವಿವಿಧ ಸಾರಿಗೆ ನಿಗಮಗಳಿಗೆ ಸುಮಾರು 5,800 ಹೊಸ ಬಸ್‍ಗಳನ್ನು ಖರೀದಿ ಮಾಡಲಾಗುತ್ತಿದ್ದು, ಈಗಾಗಲೇ ಅರ್ಧಕ್ಕೂ ಹೆಚ್ಚು ಹೊಸ ಬಸ್‍ಗಳು ಬಂದಿವೆ. ಉಳಿದ ಅರ್ಧ ಬಸ್‍ಗಳು ಬರಬೇಕಾಗಿದೆ. 2016ರಿಂದ ಸಾರಿಗೆ ನಿಗಮದ ಸಿಬ್ಬಂದಿ ನೇಮಕಾತಿ ನಡೆಯದ ಕಾರಣ ಹೊಸ ಬಸ್ ಖರೀದಿಸಿದರೂ ಸಿಬ್ಬಂದಿ ಕೊರತೆ ಆಗುತ್ತಿತ್ತು.
ಇದನ್ನು ಮನಗಂಡು 9,000 ನಿಗಮದ ಸಿಬ್ಬಂದಿ ನೇಮಕಾತಿ ಮಾಡಲು ಕ್ರಮ ಕೈಗೊಳ್ಳಲಾಗಿದೆ. ಈಗಾಗಲೇ 1,619 ಸಿಬ್ಬಂದಿಗೆ ಕಲ್ಯಾಣ ಕರ್ನಾಟಕ ವಲಯಕ್ಕೆ ನೇಮಕಾತಿ ಆದೇಶ ನೀಡಲಾಗಿದೆ. ಖಾಲಿ ಇರುವ ಸಿಬ್ಬಂದಿ ನೇಮಕಾತಿ ಮಾಡಿದ ತಕ್ಷಣವೇ ಕೊರೋನಾ ಸಂದರ್ಭದಲ್ಲಿ ನಿಲ್ಲಿಸಲಾಗಿದ್ದ ಹಳೆ ಮಾರ್ಗ ಮತ್ತು ಪ್ರಯಾಣಿಕರ ದಟ್ಟಣೆ ಇರುವ ಹೊಸ ಮಾರ್ಗಗಳಲ್ಲಿ ಬಸ್ ಓಡಿಸಲಾಗುತ್ತದೆ ಎಂದರು.
ಪಂಪಾಪತಿ ಹೆಸರು ಪರಿಶೀಲನೆ: ದಾವಣಗೆರೆ ಬಸ್ ನಿಲ್ದಾಣಕ್ಕಾಗಿ ಶ್ರಮಿಸಿದ ಮಾಜಿ ಶಾಸಕರಾದ ಪಂಪಾಪತಿಯವರ ಹೆಸರಿಡಬೇಕು ಎಂದು ಬೇಡಿಕೆ ಇದ್ದು, ಈ ಬಗ್ಗೆ ನಿಗಮದ ಆಡಳಿತ ಮಂಡಳಿಯಲ್ಲಿ ನಿರ್ಧರಿಸಬೇಕಾಗಿದೆ. ಈ ಬಗ್ಗೆ ಪ್ರಾಮಾಣಿಕ ಪ್ರಯತ್ನ ಮಾಡಲಾಗುತ್ತದೆ ಎಂದು ಭರವಸೆ ನೀಡಿದರು. ಇನ್ನು ಗಣಿ ಮತ್ತು ಭೂ ವಿಜ್ಞಾನ, ತೋಟಗಾರಿಕೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಎಸ್.ಮಲ್ಲಿಕಾರ್ಜುನ್ ಅವರು ನೂತನ ಬಸ್ ನಿಲ್ದಾಣ ಉದ್ಘಾಟಿಸಿ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಸ್ಮಾರ್ಟ್‍ಸಿಟಿ ಯೋಜನೆಯನ್ನು ಅನುಷ್ಠಾನ ಮಾಡಲು ರೂಪಿಸಲಾದ ಮಾನದಂಡಗಳಲ್ಲಿ ದೇಶದಲ್ಲಿ ದಾವಣಗೆರೆ 9ನೇ ಸ್ಥಾನದಲ್ಲಿತ್ತು. ಈ ಹಿಂದಿನ ಅವಧಿಯಲ್ಲಿ ಸ್ಮಾರ್ಟ್ ಸಿಟಿ ಯೋಜನೆ ರೂಪಿಸಿ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣ ನಿರ್ಮಾಣ ಮಾಡಲು ಒಪ್ಪಿಗೆ ನೀಡಲಾಗಿತ್ತು. ಸ್ಮಾರ್ಟ್ ಸಿಟಿ ಯೋಜನೆಯಡಿ ಬೇತೂರು ರಸ್ತೆಯಲ್ಲಿನ ಬಸ್ ನಿಲ್ದಾಣ ನಿರ್ಮಾಣವಾಗಿದ್ದು, ಜಗಳೂರು, ಹರಪನಹಳ್ಳಿ ಭಾಗದ ಜನರಿಗೆ ಅನುಕೂಲ ಆಗಲಿದೆ.
ಮುಖ್ಯ ಬಸ್ ನಿಲ್ದಾಣವು ಸುಸಜ್ಜಿತವಾಗಿ ನಿರ್ಮಾಣವಾಗಿದೆ. ಖಾಸಗಿ ಬಸ್ ನಿಲ್ದಾಣ ನಿರ್ಮಾಣಕ್ಕೂ ಅನುಮೋದನೆ ನೀಡಿದ್ದು, ಹಿಂದಿನ ಪ್ಲಾನ್‍ನಂತೆ ನಿರ್ಮಾಣ ಮಾಡದೆ ಇರುವುದರಿಂದ ಕೆಲವೊಂದು ಮಾರ್ಪಾಡಿನೊಂದಿಗೆ ಮುಂದಿನ ದಿನಗಳಲ್ಲಿ ಉದ್ಘಾಟನೆ ಮಾಡಿ ಖಾಸಗಿ ಬಸ್‍ಗಳು ಇಲ್ಲಿಂದಲೇ ಕಾರ್ಯಾಚರಣೆ ಮಾಡಲು ಅವಕಾಶ ಮಾಡಿಕೊಡಲಾಗುತ್ತದೆ ಎಂದರು.
ಗ್ಯಾರಂಟಿ ಯೋಜನೆ ಮೊದಲನೆಯದಾಗಿ ನಿಗಮದ ಬಸ್‍ಗಳಲ್ಲಿ ಮಹಿಳೆಯರು ಉಚಿತ ಪ್ರಯಾಣ ಮಾಡುವ ಮೂಲಕ ರಾಜ್ಯದಲ್ಲಿ ತೀರ್ಥಸ್ಥಳ ಸೇರಿದಂತೆ ಯಾವ ಜಿಲ್ಲೆಗೆ ಬೇಕಾದರೂ ಪ್ರಯಾಣಿಸಲು ಅವಕಾಶ ಕಲ್ಪಿಸಲಾಗಿದೆ. ಅನ್ನಭಾಗ್ಯ, ಗೃಹಲಕ್ಷ್ಮಿ, ಗೃಹಜ್ಯೋತಿ, ಯುವನಿಧಿ ಯೋಜನೆಗಳನ್ನು ಚಾಚು ತಪ್ಪದೇ ಜಾರಿಗೆ ತರಲಾಗಿದೆ. ಹೇಳಿದಂತೆ ನಡೆದಿದ್ದು, ಮುಂದಿನ ದಿನಗಳಲ್ಲಿಯೂ ನಮ್ಮ ಮೇಲೆ ವಿಶ್ವಾಸವಿರಲಿ ಎಂದರು.
ಸಾರಿಗೆ ನಿಗಮದಿಂದ ಸತತ 7 ವರ್ಷಗಳ ಕಾಲ ಅಪರಾಧ ರಹಿತ, ಅಪಘಾತ ರಹಿತ ಚಾಲಕರಿಗೆ ಬೆಳ್ಳಿ ಪದಕ ನೀಡಿದ್ದು, ಇಂತಹ ಸೇವೆಯನ್ನು ಎಲ್ಲಾ ಸಿಬ್ಬಂದಿ ನೀಡಲು ಮುಂದಾಗಬೇಕು. ಇದರಿಂದ ನಿಗಮದ ಗೌರವ ಹೆಚ್ಚಲು ನೀವೇ ಕಾರಣರಾಗುತ್ತೀರಾ ಎಂದು ಸಿಬ್ಬಂದಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ದಾವಣಗೆರೆ ಮುಖ್ಯ ಬಸ್ ನಿಲ್ದಾಣ ನಿರ್ಮಾಣಕ್ಕೆ ಮಾಜಿ ಶಾಸಕರಾದ ಪಂಪಾಪತಿಯವರ ಶ್ರಮ ಇದ್ದು, ಆ ಕಾಲದಲ್ಲಿ ನಗರದ ಕೊನೇ ಭಾಗದಲ್ಲಿತ್ತು.
ಜನರು ಇಲ್ಲಿಗೆ ಬರಲು ಆಟೋಗೆ ಹಣ ಕೊಡಲಿಕ್ಕಾಗಲ್ಲ ಎನ್ನುತ್ತಿದ್ದರು, ಈಗ ನಗರದ ಮಧ್ಯಭಾಗದಲ್ಲಿದೆ. ಮತ್ತು ಬೇತೂರು ರಸ್ತೆಯ ಬಸ್ ನಿಲ್ದಾಣ ನಿರ್ಮಾಣದಲ್ಲಿ ಅಂಬರ್‍ಕರ್ ಕುಟುಂಬವನ್ನು ಸ್ಮರಿಸಿಕೊಳ್ಳಬೇಕು ಎಂದು ತಿಳಿಸಿದರು.
ಮಾಯಕೊಂಡ ಕ್ಷೇತ್ರ ಶಾಸಕರಾದ ಕೆ.ಎಸ್.ಬಸವಂತಪ್ಪ ಮಾತನಾಡಿ, ಈ ಹಿಂದೆ ದಾವಣಗೆರೆ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದ ಸ್ವಚ್ಚತೆಯನ್ನು ಟೆಂಡರ್ ಮೂಲಕ ಸತತ 20 ವರ್ಷಗಳ ಕಾಲ ನಾನು ನಿರ್ವಹಣೆ ಮಾಡುತ್ತಿದ್ದೆ. ಮಳೆ ಬಂತೆಂದರೆ ಬಸ್ ನಿಲ್ದಾಣದ ತುಂಬೆಲ್ಲಾ ನೀರು ನಿಂತು ಬಸ್‍ಗಳೇ ಸಂಚರಿಸುತ್ತಿರಲಿಲ್ಲ. ಆದರೆ ಈಗ ಎತ್ತರದಲ್ಲಿ ಹೊಸದಾಗಿ ಬಸ್ ನಿಲ್ದಾಣ ನಿರ್ಮಾಣ ಮಾಡಿದ್ದು, ಇದರ ಉದ್ಘಾಟನೆಯಲ್ಲಿ ಶಾಸಕನಾಗಿ ಭಾಗಿಯಾಗಿರುವುದಕ್ಕೆ ಧನ್ಯನಾಗಿದ್ದೇನೆ ಎಂದರು.
ಮಾಯಕೊಂಡ ಕ್ಷೇತ್ರದ ಕೇಂದ್ರ ಸ್ಥಾನವಾಗಿದ್ದು, ಇಲ್ಲಿ ಬಸ್ ನಿಲ್ದಾಣ ಇರುವುದಿಲ್ಲ. ಈ ಬಗ್ಗೆ ಸಾರಿಗೆ ಸಚಿವರಲ್ಲಿ ಮನವಿ ಮಾಡಿದ್ದೆ, ಅದಕ್ಕೆ ಅವರು 10 ಕೋಟಿ ರೂಪಾಯಿ ಅನುದಾನದಲ್ಲಿ ಮಾಯಕೊಂಡದಲ್ಲಿ ಕೆಎಸ್‍ಆರ್‌ಟಿಸಿ ಬಸ್ ನಿಲ್ದಾಣ ಮಾಡಲು ಮಂಜೂರಾತಿ ನೀಡಿದ್ದು, ಮುಂದಿನ ದಿನಗಳಲ್ಲಿ ಇದರ ಕಾಮಗಾರಿ ಆರಂಭ ಆಗಲಿದೆ ಎಂದರು.
ಬೆಳ್ಳಿ ಪದಕ ವಿಜೇತ ಚಾಲಕರು: ಕೆ.ಎಸ್.ಆರ್.ಟಿ.ಸಿ.ಯಲ್ಲಿ ಚಾಲಕರಾಗಿ ಸೇವೆ ಸಲ್ಲಿಸುತ್ತಿರುವ ಕೆ.ಜಿ.ಮಂಜುನಾಥ್, ರವಿಕುಮಾರ್.ಆರ್, ಚಂದ್ರನಾಯ್ಕ, ಮೊಹಮ್ಮದ್ ಅಕ್ರಂ ಅಲಿ ಇವರು ಸತತ 7 ವರ್ಷಗಳ ಕಾಲ ಅಪರಾಧ ರಹಿತ, ಅಪಘಾತ ರಹಿತವಾದ ಚಾಲನೆ ಮಾಡಿದ್ದು, ಇವರಿಗೆ ಬೆಳ್ಳಿ ಪದಕ ಮತ್ತು ನಗದು ಬಹುಮಾನ ವಿತರಣೆ ಮಾಡಲಾಯಿತು.
ಕಾರ್ಯಕ್ರಮದಲ್ಲಿ ಮೇಯರ್ ವಿನಾಯಕ್ ಬಿ.ಹೆಚ್, ಕೆ.ಎಸ್.ಆರ್.ಟಿ.ಸಿ. ನಿಗಮದ ಸಿಬ್ಬಂದಿ ಮತ್ತು ಜಾಗೃತ ವಿಭಾಗದದ ನಿರ್ದೇಶಕರಾದ ಡಾ.ಕೆ.ನಂದಿನಿದೇವಿ, ಪಾಲಿಕೆ ಸದಸ್ಯರಾದ ಚಮನ್‍ಸಾಬ್, ಅಪರ ಜಿಲ್ಲಾಧಿಕಾರಿ ಸೈಯ್ಯದಾ ಆಫ್ರೀನ್ ಭಾನು ಎಸ್.ಬಳ್ಳಾರಿ, ಸ್ಮಾರ್ಟ್‍ಸಿಟಿ ವ್ಯವಸ್ಥಾಪಕ ನಿರ್ದೇಶಕ ವೀರೇಶ್‍ಕುಮಾರ್, ಎಲೆಬೇತೂರು ಗ್ರಾ.ಪಂ.ಅಧ್ಯಕ್ಷ ರೇವಣಸಿದ್ದಪ್ಪ ಹಾಗೂ ಪಾಲಿಕೆ ಸದಸ್ಯರು, ಅಧಿಕಾರಿಗಳು ಉಪಸ್ಥಿತರಿದ್ದರು. ಕೆ.ಎಸ್.ಆರ್.ಟಿ.ಸಿ. ವಿಭಾಗೀಯ ನಿಯಂತ್ರಕ ಶ್ರೀನಿವಾಸ್‍ಮೂರ್ತಿ ಪ್ರಾಸ್ತಾವಿಕವಾಗಿ ಮಾತನಾಡಿದರು. ವಿಭಾಗೀಯ ಸಂಚಾಲಕರಾದ ಫಕೃದ್ದೀನ್.ಡಿ ಸ್ವಾಗತಿಸಿದರು.
-
Rishab Shetty: ಪತ್ನಿ ಪ್ರಗತಿ ಶೆಟ್ಟಿ ಹೊರತುಪಡಿಸಿ ಎಲ್ಲರನ್ನೂ ಅನ್ಫಾಲೋ ಮಾಡಿದ ನಟ ರಿಷಬ್ ಶೆಟ್ಟಿ -
ಕೊಹ್ಲಿ ಭಾಯ್ಗೆ ಮೈದಾನದಲ್ಲಿ ಕೆಣಕ್ಬೇಡಿ, ತುಂಬಾ ಸಮಯ ನಿಲ್ಲಲು ಬಿಡಬೇಡಿ; ಎಸ್ಆರ್ಎಚ್ ಸಹ ಆಟಗಾರರಿಗೆ ಇಶಾನ್ ಎಚ್ಚರಿಕೆ ಸಂದೇಶ -
Rameshwaram Cafe: ರಾಮೇಶ್ವರಂ ಕೆಫೆ ಪಾರ್ಸಲ್ - ಬ್ಯಾಗ್ ತುಂಬಾ ದುಬಾರಿ ಕಣ್ರೀ: ಸೋಷಿಯಲ್ ಮೀಡಿಯಾ ವೈರಲ್ ಪೋಸ್ಟ್ -
Hardik Pandya: ವಾಂಖೆಡೆ ಸ್ಟೇಡಿಯಂ ಸಿಬ್ಬಂದಿಗೆ ನೀಡಿದ್ದ ಸಹಾಯಹಸ್ತದ ಮಾತು ಉಳಿಸಿಕೊಂಡ ಹಾರ್ದಿಕ್ ಪಾಂಡ್ಯ -
March 30 Horoscope: ಕೆಲಸ ಮತ್ತು ಹಣದ ಸ್ಥಿತಿಯಲ್ಲಿ ಹೊಸ ಬದಲಾವಣೆ -
Bengaluru Property Tax: ಆಸ್ತಿ ತೆರಿಗೆ ಸ್ವೀಕಾರಕ್ಕಾಗಿ ರಾತ್ರಿ 10ಗಂಟೆವರೆಗೆ ಪಾಲಿಕೆ ಕಚೇರಿ ಓಪನ್ -
Arecanut Price: ದಾವಣಗೆರೆ ಮಾರುಕಟ್ಟೆಯಲ್ಲಿ ರಾಶಿ ಅಡಿಕೆ ಧಾರಣೆ ಭರ್ಜರಿ ಏರಿಕೆ: ಇಲ್ಲಿದೆ ಮಾರ್ಚ್ 30ರ ದರಪಟ್ಟಿ -
Hardik Pandya: ಕೇವಲ 35 ದಿನಗಳಲ್ಲಿ ಕೋಟಿ.. ಕೋಟಿ ಖರ್ಚು ಮಾಡಿದ ಹಾರ್ದಿಕ್ ಪಾಂಡ್ಯ; ಇಲ್ಲಿದೆ ಪಟ್ಟಿ -
ಕರ್ನಾಟಕ ಪ್ರಥಮ PUC ಫಲಿತಾಂಶ 2026 ಪ್ರಕಟ: ಫಲಿತಾಂಶ ವೀಕ್ಷಿಸುವುದು ಹೇಗೆ? ಇಲ್ಲಿದೆ ಮಾಹಿತಿ -
March 31 Horoscope: ಲಾಭ, ನಷ್ಟ, ಆರೋಗ್ಯದ ಸಂಪೂರ್ಣ ಮಾಹಿತಿ -
Karnataka Weather: ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನ ಈ ಜಿಲ್ಲೆಗಳಲ್ಲಿ ಇಂದು ಗುಡುಗು ಸಹಿತ ಮಳೆಯ ಆರ್ಭಟ -
Gold Rate Today: ವಾರದ ಆರಂಭದಲ್ಲೇ ಚಿನ್ನದ ಬೆಲೆ ಕುಸಿತ; 100 ಗ್ರಾಂ ಖರೀದಿಸಿದರೆ 8,100 ರೂಪಾಯಿವರೆಗೆ ಉಳಿತಾಯ












Click it and Unblock the Notifications