Devarabelakere Check Dam: 50 ವರ್ಷ ಇತಿಹಾಸ ಹೊಂದಿರುವ ಈ ಪಿಕಪ್ ಡ್ಯಾಂನ ಸೌಂದರ್ಯಕ್ಕೆ ಮಾರುಹೋಗದವರಿಲ್ಲ
ದಾವಣಗೆರೆ, ಆಗಸ್ಟ್, 30: ದಾವಣಗೆರೆ ಜಿಲ್ಲೆಯಲ್ಲಿ ನೀವು ವೀಕ್ಷಣೆ ಮಾಡಲೇಬೇಕಾದ ಚೆಕ್ ಡ್ಯಾಂವೊಂದಿದೆ. ಇಲ್ಲಿಗೆ ಪ್ರತಿ ದಿನ, ವಾರಾಂತ್ಯದಲ್ಲಿ ಪ್ರವಾಸಿಗರ ದಂಡೇ ಹರಿದುಬರುತ್ತದೆ. ಹಾಗಾದರೆ ನೀವು ಕೂಡ ದಾವಣಗೆರೆಗೆ ಹೋದಾಗ ಇಲ್ಲಿಗೆ ಭೇಟಿ ನೀಡುವುದನ್ನು ಮರೆಯಬೇಡಿ. ಇದು ಎಲ್ಲಿ ಇದೆ ಹಾಗೂ ಇದರ ವಿಶೇಷತೆಯನ್ನು ಕೂಡ ಇಲ್ಲಿ ನೀಡಲಾಗಿದೆ ತಿಳಿಯಿರಿ.
ಹರಿಹರ ತಾಲೂಕಿನ ದೇವರಬೆಳಕೆರೆ ಡ್ಯಾಂ ತನ್ನೊಡಲಲ್ಲಿ ಅಡಗಿದ್ದ ಸೌಂದರ್ಯಕ್ಕೆ ಹೆಸರುವಾಸಿಯಾಗಿತ್ತು. ರಜೆ ದಿನಗಳಲ್ಲಿ ಕಾಲೇಜು ಯುವಕ, ಯುವತಿಯರು, ಹಿರಿಯರು, ಕಿರಿಯರು ಎನ್ನದೇ ಎಲ್ಲಾ ವರ್ಗದ ಜನರು ಇಲ್ಲಿಗೆ ಬರುತ್ತಿದ್ದರು. ವಾರಾಂತ್ಯದಲ್ಲಂತೂ ಪ್ರವಾಸಿಗರ ಸಂಖ್ಯೆ ತುಸು ಹೆಚ್ಚಿತ್ತು. ಅದರಲ್ಲಿಯೂ ಮಳೆಗಾಲದ ವೇಳೆ ಈ ಡ್ಯಾಂನಿಂದ ಹೊರಬರುವ ಜಲಸಿರಿ ನೋಡಲು ತಂಡೋಪತಂಡವಾಗಿ ಬರುತ್ತಿದ್ದರು. ಆದರೆ ಈ ಡ್ಯಾಂ ಎಷ್ಟು ಸೌಂದರ್ಯ ಇಟ್ಟುಕೊಂಡಿದೆಯೋ ಅಷ್ಟೇ ತನ್ನೊಡಲಲ್ಲಿ ಹೂಳನ್ನು ತುಂಬಿಕೊಂಡಿದೆ.

ಹರಿಹರ ತಾಲೂಕಿನ ದೇವರಬೆಳಕೆರೆ ಪಿಕಪ್ ಡ್ಯಾಂ ಆಗಿ ಬರೋಬ್ಬರಿ 50 ವರ್ಷಗಳೇ ಕಳೆದಿವೆ. ಆದರೂ ಇದೊಂದು ಅತ್ಯುತ್ತಮ ಪ್ರವಾಸಿ ತಾಣವಾಗಲೇ ಇಲ್ಲ ಎಂಬ ಕೊರಗು ಜಿಲ್ಲೆಯ ಜನರನ್ನು ಕಾಡುತ್ತಿದೆ. ಈ ಡ್ಯಾಂನ ಮತ್ತೊಂದು ದೊಡ್ಡ ಸಮಸ್ಯೆ ಎಂದರೆ ಇಲ್ಲಿ ತುಂಬಿರುವ ಹೂಳು. ಯಾರೇ ಶಾಸಕರಾಗಿ ಬಂದರೂ ಹೂಳು ತೆಗೆಸುತ್ತೇವೆ, ದೇವರಬೆಳಕೆರೆ ಡ್ಯಾಂ ಅನ್ನು ಪಿಕ್ನಿಕ್ ಸ್ಪಾಟ್ ಮಾಡುತ್ತೇವೆ ಎಂಬ ಭರವಸೆ ಕೊಟ್ಟಿದ್ದು ಬಿಟ್ಟರೆ ಬೇರೆ ಆಗಿದ್ದು ಕಡಿಮೆಯೇ.
ಪಿಕಪ್ ಡ್ಯಾಂನ ಹಿನ್ನೀರ ನೋಟವನ್ನು ನೋಡಲು ಜನರು ತಾ ಮುಂದು ನಾ ಮುಂದು ಅಂತಾ ಬರುವುದಲ್ಲದೆ, ಇಲ್ಲಿದೆ ಸೆಲ್ಫಿ ತೆಗೆಸಿಕೊಳ್ಳಲು ಮುಗಿಬೀಳುತ್ತಾರೆ. ಹಿನ್ನೀರಿನಲ್ಲಿ ನಿಂತಾಗ ಬೀಸುವ ತಂಪಾದ ಗಾಳಿಗೆ ಎಂಥವರಾದರೂ ಫಿದಾ ಆಗುತ್ತಾರೆ. ಅದರಲ್ಲಿಯೂ ಪಿಕ್ ಡ್ಯಾಂನ ಕ್ರಸ್ಟ್ ಗೇಟ್ ತೆಗೆದಾಗ ಇಲ್ಲಿಂದ ಬರುವ ಹಾಲಿನಂತ ನೊರೆ ನೋಡಿ ಕಣ್ತುಂಬಿಕೊಳ್ಳುವವರು ಹೆಚ್ಚು.
ಈಗ ಹೊರಹರಿವಿನ ಪ್ರಮಾಣ ಕಡಿಮೆಯಾಗಿದೆ. ಆದರೆ ಸೌಂದರ್ಯಕ್ಕೇನೂ ಕೊರತೆ ಆಗಿಲ್ಲ. ಪಿಕ್ ಅಪ್ ಡ್ಯಾಂನ ಮೇಲೆ ನಿಂತರೆ ಹೊಸದೊಂದು ಅನುಭವ ಕೊಡುತ್ತದೆ. ಅಷ್ಟು ಅತ್ಯುತ್ತಮವಾದ ಪ್ರವಾಸಿ ತಾಣ ಇದು ಅಂದರೆ ತಪ್ಪಾಗಲಾರದು. ಸುಮಾರು 5 ದಶಕಗಳ ಹಿಂದೆ ನಿರ್ಮಾಣ ಮಾಡಲಾಗಿರುವ ಈ ಡ್ಯಾಂ ನೋಡುವುದೇ ಒಂಥರಾ ಮಜಾ. ವಾರಾಂತ್ಯದ ಪಿಕ್ನಿಕ್‌ಗೆ ಹೆಚ್ಚಿನ ಸಂಖ್ಯೆಯಲ್ಲಿ ಇಲ್ಲಿಗೆ ಜನರು ಬರುತ್ತಾರೆ. ಶ್ಯಾಗಳೆ ಹಳ್ಳಕ್ಕೆ ಡ್ಯಾಂ ನಿರ್ಮಾಣ ಮಾಡಿ ಬರೋಬ್ಬರಿ 50 ವರ್ಷ ಆಗಿದ್ದು, ಅಭಿವೃದ್ಧಿ ಆಗಿರುವುದು ಮಾತ್ರ ತುಂಬಾನೇ ಕಡಿಮೆ.
ಡ್ಯಾಂ ಉದ್ಘಾಟನೆಯಾಗಿದ್ದು ಯಾವಾಗ?
ಪಿಕಪ್ ಡ್ಯಾಂ ಉದ್ಘಾಟನೆಯಾಗಿದ್ದು 1996 ರಲ್ಲಿ. ಆಗ ಮಾಜಿ ಪ್ರಧಾನಿ ಎಚ್. ಡಿ.ದೇವೇಗೌಡರು ಕರ್ನಾಟಕ ರಾಜ್ಯದ ಸಿಎಂ ಆಗಿದ್ದರು. ಇದರ ಅಭಿವೃದ್ಧಿಗೆ ಹೆಚ್ಚಿನ ಅನುದಾನ ನೀಡಿದ್ದರು. ಇದಕ್ಕೊಂದು ಕಾಯಕಲ್ಪ ಸಿಕ್ಕಿದ್ದು ಈ ಅವಧಿಯಲ್ಲೇ. ಇನ್ನು ಜನರನ್ನು ತನ್ನತ್ತ ಕೈಬೀಸಿ ಕರೆಯುತ್ತಿರುವ ಈ ತಾಣದಲ್ಲಿ ಮೂಲಭೂತ ಸೌಲಭ್ಯಗಳು ಶೂನ್ಯ.
ಹಿನ್ನೀರು ಪ್ರದೇಶದಲ್ಲಿ ನೀರು ಯಥೇಚ್ಛವಾಗಿ ಇರುವುದರಿಂದ ನೋಡಲು ಎರಡು ಕಣ್ಣು ಸಾಲದು. ಎಲ್ಲಿ ನೋಡಿದರೂ ನೀರೋ ನೀರು. ಆದರೆ ಡ್ಯಾಂ ನಿರ್ಮಾಣ ಆಗಿದ್ದರೂ ಈಗ ಅಭಿವೃದ್ಧಿ ಒತ್ತಟ್ಟಿಗಿರಲಿ, ನಿರ್ವಹಣೆಯೇ ಎಂಬುದೇ ಇಲ್ಲ.
ಮೂಲಭೂತ ಸೌಕರ್ಯ ವಂಚಿತ
ಅಂದ ಹಾಗೆ ಇದೊಂದು ಸೂಪರ್ ಪಿಕ್ನಿಕ್ ಸ್ಪಾಟ್ ಆದರೂ ಮೂಲಭೂತ ಸೌಲಭ್ಯಗಳು ಇಲ್ಲಿ ಮರೀಚಿಕೆ. ವಿದ್ಯುತ್ ಕಂಬಗಳಿಲ್ಲ, ವಿದ್ಯುತ್ ದೀಪದ ವ್ಯವಸ್ಥೆ ಇಲ್ಲ. ಕುಳಿತುಕೊಳ್ಳಲು ಮೇಜು ಇಲ್ಲ. ಅಲ್ಲಲ್ಲಿ ಡ್ಯಾಂನ ಮೇಲೆ ಅಳವಡಿಸಿದ್ದ ಕಬ್ಬಿಣದ ಸರಳು ಹೊರಗಡೆ ಬಂದಿವೆ. ಇಷ್ಟೆಲ್ಲ ಸಮಸ್ಯೆಗಳಿದ್ದರೂ ಇದುವರೆಗೂ ಇದನ್ನು ದುರಸ್ತಿ ಮಾಡಿಸದಿರುವುದೇ ವಿಪರ್ಯಾಸದ ಸಂಗತಿ
ಇನ್ನು ರೈತರ ಲಕ್ಷಾಂತರ ಹೆಕ್ಟೇರ್ ಜಮೀನುಗಳಿಗೆ ನೀರೊದಗಿಸುವ ಈ ಅಣೆಕಟ್ಟು ರೈತರ ಪಾಲಿಗೆ ಸಂಜೀವಿನಿ. ಕುಡಿಯುವ ನೀರಿನ ಜೀವಸೆಲೆ. ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ಇಚ್ಛಾಶಕ್ತಿ ತೋರಿದರೆ ಅಭಿವೃದ್ಧಿಯೇನೂ ಕಷ್ಟವಾಗದು.
ಬಹಳ ದಿನಗಳಿಂದ ದೇವರಬೆಳಕೆರೆ ಡ್ಯಾಂ ನೀರು ಅವಲಂಬಿಸಿ ಬೆಳೆ ಬೆಳೆಯುತ್ತಿರುವ ರೈತರದ್ದು ಇದೇ ಕೂಗು. ಆದಷ್ಟು ಬೇಗ ಹೂಳು ತೆಗೆಸಿ. ಅಕ್ಕಪಕ್ಕದಲ್ಲಿ ಬೆಳೆದಿರುವ ಗಿಡಗಳನ್ನು ಸ್ವಚ್ಛಗೊಳಿಸಿ. ಇಲ್ಲದಿದ್ದರೆ ಕೊನೆ ಭಾಗದ ರೈತರಿಗೆ ಸಿಗುವುದಿಲ್ಲ. ಈ ಬಗ್ಗೆ ಹಿಂದೆ ಶಾಸಕರು, ಸಚಿವರಿಗೆ ಮನವಿ ಸಲ್ಲಿಸಿದ್ದರೂ ಪ್ರಯೋಜನ ಆಗಿರಲಿಲ್ಲ.
ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ಮುಖಂಡ ಎನ್.ಹೆಚ್. ಶ್ರೀನಿವಾಸ್ ನಂದಿಗಾವಿ ಅವರ ಗಮನಕ್ಕೆ ರೈತರು ತಂದರು. ಈ ಕುರಿತಂತೆ ನೀವಾದರೂ ಸ್ಪಂದಿಸಿ ಎಂದು ಮನವಿ ಮಾಡಿದರು. ಕೂಡಲೇ ರೈತರ ಸಮಸ್ಯೆಗೆ ಸ್ಪಂದಿಸಿದ ನಂದಿಗಾವಿ ಶ್ರೀನಿವಾಸ್ ಅವರು, ಗಾಂಜಿ ವೀರಪ್ಪ ನಾಲೆಯ ಬಲದಂಡೆ ಕಾಲುವೆಗೆ ಭೇಟಿ ನೀಡಿದರು.
ಈ ವೇಳೆ ಇಲ್ಲಿ ಸಂಪೂರ್ಣವಾಗಿ ಹೂಳು ತುಂಬಿದ್ದು ಗಮನಕ್ಕೆ ಬಂದಿತು.
ಪಿಕ್ ಅಪ್ ಡ್ಯಾಂನ ಕೊನೇ ಭಾಗದ ಹರಿಹರ ತಾಲೂಕಿನ ಶಿವನಹಳ್ಳಿ, ಬನ್ನಿಕೊಡು, ಶಂಶಿಪುರ ಹಾಗೂ ಇನ್ನಿತರೆ ಗ್ರಾಮಗಳ ರೈತರ ಬೆಳೆಗೆ ನೀರಿನ ಅಭಾವ ಉಂಟಾಗುತ್ತಿರುವ ಕುರಿತಂತೆ ರೈತರಿಂದ ಮಾಹಿತಿ ಪಡೆದುಕೊಂಡರು. ಹರಿಹರ ತಾಲೂಕಿನ ಹಲವು ಗ್ರಾಮಗಳ ಜಮೀನುಗಳಿಗೆ ನೀರು ಹೋಗುತ್ತಿಲ್ಲ. ಈ ಬಾರಿ ಮಳೆಯು ಕಡಿಮೆಯಾಗಿದೆ. ಬೆಳೆಗಳು ಒಣಗುತ್ತಿವೆ. ರೈತರ ಬದುಕು ದುಸ್ತರವಾಗಿದೆ. ಭೂತಾಯಿಯನ್ನೇ ನಂಬಿಕೊಂಡು ಬದುಕುತ್ತಿರುವ ರೈತರು ಸಂಕಷ್ಟದಲ್ಲಿದ್ದಾರೆ.
ವೈಯಕ್ತಿಕ ಹಣದಿಂದ ಹೂಳು ತೆಗೆಸುವ ಕೆಲಸ ಮಾಡೋಣ
ಒಂದೆಡೆ ಮಳೆ ಕೈಕೊಟ್ಟಿದೆ. ಮತ್ತೊಂದೆಡೆ ಡ್ಯಾಂನಲ್ಲಿ ನೀರಿದ್ದರೂ ಬೆಳೆಗಳಿಗೆ ಸಿಗುತ್ತಿಲ್ಲ. ಇಂಥ ಅಡಕತ್ತರಿ ಪರಿಸ್ಥಿತಿಯಲ್ಲಿ ರೈತರು ಏನು ಮಾಡಬೇಕು ಎಂದು ನಂದಿಗಾವಿ ಶ್ರೀನಿವಾಸ್ ಪ್ರಶ್ನಿಸಿದರು. ಇನ್ನು ಸ್ಥಳಕ್ಕೆ ಆಗಮಿಸಿದ ನೀರಾವರಿ ಇಲಾಖೆಯ ಎಂಜಿನಿಯರ್ ಹಾಗೂ ಗ್ರಾಮಸ್ಥರ ಜೊತೆಗೆ ತೆರಳಿ ಕಾಲುವೆಯ ಹೂಳು ಕೂಡಲೇ ತೆಗೆಸಿ. ಸರ್ಕಾರದಿಂದ ಹಣ ಬರುವವರೆಗೆ ಕಾಯುತ್ತಾ ಕೂರುವುದು ಬೇಡ. ನನ್ನ ವೈಯಕ್ತಿಕ ಹಣ ಹಾಗೂ ರೈತರ ಸಹಕಾರದೊಂದಿಗೆ ಹೂಳು ತೆಗೆಸುವ ಕೆಲಸ ಮಾಡೋಣ ಎಂದು ಶ್ರೀನಿವಾಸ್ ಭರವಸೆ ನೀಡಿದರು. ಇದಕ್ಕೆ ಕೊನೆಭಾಗದ ರೈತರು ಹರ್ಷ ವ್ಯಕ್ತಪಡಿಸಿದರು.











Click it and Unblock the Notifications