ಎಲ್ಲಾ ಕ್ಷೇತ್ರಗಳಿಗಿಂತಲೂ ಹರಿಹರ ತುಂಬಾ ವಿಶೇಷ ಏಕೆ?:ನಿಮ್ಮ ಕುತೂಹಲಕಾರಿ ಪ್ರಶ್ನೆಗೆ ಉತ್ತರ ಇಲ್ಲಿದೆ
ದಾವಣಗೆರೆ, ಏಪ್ರಿಲ್, 08: ರಾಜ್ಯ ವಿಧಾನಸಭೆ ಚುನಾವಣೆ ಸಮೀಪಿಸುತ್ತಲೇ ಇದ್ದು, ಎಲ್ಲಾ ಕ್ಷೇತ್ರಗಳಲ್ಲೂ ಆಯಾ ಪಕ್ಷದ ನಾಯಕರು ಪ್ರಚಾರದಲ್ಲಿ ಮುಳುಗಿ ಹೋಗಿದ್ದಾರೆ. ಅದರಲ್ಲೂ ದಾವಣಗೆರೆ ಜಿಲ್ಲೆಯಲ್ಲಿ ಹೈವೋಲ್ಟೇಜ್ ಕ್ಷೇತ್ರವೆಂದರೆ ಅದು ಹರಿಹರ. ಯಾಕೆಂದರೆ ಈ ಕ್ಷೇತ್ರ ಸಾಕಷ್ಟು ವಿಚಾರಗಳಿಂದ ಕುತೂಹಲ ಕೆರಳಿಸಿದೆ. ಇಲ್ಲಿ ಒಂದೇ ಪಕ್ಷ ಎರಡನೇ ಬಾರಿ ಗೆದ್ದ ಇತಿಹಾಸ ಕಡಿಮೆಯಿದ್ದು, ಇಲ್ಲಿ ಮಾತ್ರ ತ್ರಿಕೋನ ಸ್ಪರ್ಧೆ ಏರ್ಪಟ್ಟಿದೆ.
ಇದೀಗ ಹರಿಹರ ಕ್ಷೇತ್ರದಲ್ಲಿ ಕಾಂಗ್ರೆಸ್, ಬಿಜೆಪಿ ಮತ್ತು ಜೆಡಿಎಸ್ ನಡುವೆ ನೇರ ಹಣಾಹಣಿ ಇದೆ. ಕಾಂಗ್ರೆಸ್‌ನ ರಾಮಪ್ಪ 2018ರ ಚುನಾವಣೆಯಲ್ಲಿ ಶಾಸಕರಾಗಿದ್ದರು. ಅದೇ ರೀತಿಯಲ್ಲಿ ಬಿಜೆಪಿಯ ಬಿ.ಪಿ. ಹರೀಶ್ ಅವರೂ ಎಂಎಲ್ಎ ಆಗಿದ್ದರು. ಹಾಗೆಯೇ ಜೆಡಿಎಸ್‌ನ ಹೆಚ್.ಎಸ್. ಶಿವಶಂಕರ್ ಅವರೂ ಸಹ ಶಾಸಕರಾಗಿ ಚುನಾಯಿತರಾಗಿದ್ದರು. ಹಾಗಾಗಿ ಈ ಕ್ಷೇತ್ರದಲ್ಲಿ ಮತದಾರ ಒಮ್ಮೆ ಗೆಲ್ಲಿಸಿದ ಪಕ್ಷವನ್ನು ಮತ್ತೆ ಗೆಲ್ಲಿಸುವುದು ಕಡಿಮೆ.

ಮತದಾರರ ಮನದೊಳಗೆ ಈ ಬಾರಿ ಯಾರು ಅಡಗಿದ್ದಾರೆ ಎಂಬ ಕುತೂಹಲದ ನಡುವೆ ಮತ್ತೊಂದು ಸ್ಪೆಷಾಲಿಟಿ ಈ ಕ್ಷೇತ್ರಕ್ಕಿದೆ. ಹರಿ-ಹರ ನೆಲೆ ನಿಂತಿರುವ ಕ್ಷೇತ್ರವೇ ಹರಿಹರ. ಚುನಾವಣೆ ಅಂದರೆ ಸಾಕು ಮತದಾರರ ಮನ ಗೆಲ್ಲಲು ಪಕ್ಷಗಳು, ಅಭ್ಯರ್ಥಿಗಳು ಆಸೆ, ಆಮೀಷ ಒಡ್ಡುವುದು ಸಹಜ. ಕುಕ್ಕರ್, ಸೀರೆ, ಎಲೆಕ್ಟ್ರಾನಿಕ್ ವಸ್ತುಗಳು, ಹಣ ಸೇರಿದಂತೆ ಇತರೆ ರೀತಿಯಲ್ಲಿ ಆಮಿಷ ಒಡ್ಡಲಾಗುತ್ತದೆ.
18ಕ್ಕೂ ಹೆಚ್ಚು ಹಳ್ಳಿಗಳ ಜನರಿಂದ ದೇಣಿಗೆ ಸಂಗ್ರಹ
ಈ ವಿಧಾನಸಭಾ ಕ್ಷೇತ್ರದಲ್ಲಿ ಸುಮಾರು 18ಕ್ಕೂ ಹೆಚ್ಚು ಹಳ್ಳಿಗಳ ಜನರು ದೇಣಿಗೆ ಮೂಲಕ ಹಣ ಒಟ್ಟುಗೂಡಿಸಿ ಅಭ್ಯರ್ಥಿಗೆ ನೀಡುವ ಸಂಪ್ರದಾಯ ಮೊದಲಿನಿಂದಲೂ ನಡೆದುಕೊಂಡು ಬಂದಿದೆ. ಜನತಾ ಪರಿವಾರದ ಹಿರಿಯ ನಾಯಕ ಹೆಚ್. ಶಿವಪ್ಪಶಂಕರ್ ಅವರು ಹರಿಹರ ಕ್ಷೇತ್ರದಲ್ಲಿ ಸ್ಪರ್ಧೆ ಮಾಡಿ ಎರಡು ಬಾರಿ ಶಾಸಕರಾಗಿದ್ದರು.
ಆಗಿನ ಚುನಾವಣಾ ಸಂದರ್ಭದಲ್ಲಿ ಜನರೇ ದೇಣಿಗೆ ಮೂಲಕ ಹಣ ಸಂಗ್ರಹಿಸಿ ಅಭ್ಯರ್ಥಿಗೆ ನೀಡುತ್ತಿದ್ದರು. ಗ್ರಾಮಸ್ಥರು ನೀಡಿದ ಹಣವನ್ನು ಚುನಾವಣಾ ಪ್ರಚಾರಕ್ಕೆ ಖರ್ಚು ಮಾಡಿ ಜಯಗಳಿಸಿದ್ದರು. ಈ ಬಾರಿ ಜೆಡಿಎಸ್ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ಹೆಚ್.ಎಸ್. ಶಿವಶಂಕರ್ ಅವರ ಪರ ಗ್ರಾಮಸ್ಥರು ಹಣ ಸಂಗ್ರಹಣೆಯಲ್ಲಿ ನಿರತರಾಗಿದ್ದಾರೆ.

ಜೆ.ಹೆಚ್. ಪಟೇಲ್ ಅವರು ಮುಖ್ಯಮಂತ್ರಿ ಆಗಿದ್ದಾಗ ಸಚಿವರಾಗಿದ್ದ ಶಿವಪ್ಪ ಅವರು 1994ರ ಚುನಾವಣೆಯಲ್ಲಿ ಕ್ಷೇತ್ರದ ಜನರಿಂದ ಧನ ಸಹಾಯ ಪಡೆದಿದದ್ದರು. 2013, 2018ರಲ್ಲಿ ಕಣಕ್ಕಿಳಿದಿದ್ದ ಶಿವಶಂಕರ್ ಅವರಿಗೆ ಜನರ ನೆರವು ಸಮಾರೋಪಾದಿಯಲ್ಲಿ ಹರಿದುಬಂದಿತ್ತು.
ಯಾವ್ಯಾವ ಗ್ರಾಮಗಳಲ್ಲಿ ದೇಣಿಗೆ ಸಂಗ್ರಹ?
ಹರಿಹರ ತಾಲೂಕಿನ ಹೊಳೆ ಸಿರಿಗೆರೆ, ಬೆಳ್ಳೂಡಿ, ಉಕ್ಕಡಗಾತ್ರಿ, ಕಮಲಾಪುರ, ದೂಳೆಹೊಳೆ, ನಂದಿಗುಡಿ, ಭಾನುವಳ್ಳಿ, ನಂದಿಗಾವಿ, ಹೊಸಳ್ಳಿ, ಹಿರೇ ಹೊಸಳ್ಳಿ, ಸಾಲಕಟ್ಟೆ, ಮಿಟ್ಲಕಟ್ಟೆ, ಬನ್ನಿಕೋಡು, ಸಂಕ್ಲೀಪುರ, ವಾಸನ, ಕೊಕ್ಕನೂರು ಸೇರಿದಂತೆ ಹದಿನೆಂಟು ಗ್ರಾಮಗಳಲ್ಲಿ ಜನರು ಸ್ವಯಂಪ್ರೇರಣೆಯಿಂದಲೇ ದೇಣಿಗೆ ಸಂಗ್ರಹಿಸಿ ಚುನಾವಣೆ ಉಸ್ತುವಾರಿ ನೋಡಿಕೊಳ್ಳುವವರಿಗೆ ಕೊಡುತ್ತಾರೆ.
ಚುನಾವಣೆಯಲ್ಲಿ ಪ್ರಚಾರಕ್ಕೆ ಬರುತ್ತಾರೆ. ಅವರಿಗೂ ಊಟ, ತಿಂಡಿ, ಕುಡಿಯುವ ನೀರಿನ ವ್ಯವಸ್ಥೆ ಮಾಡಬೇಕು. ಮತ ಎಣಿಕೆ, ಮತಗಟ್ಟೆ ಏಜೆಂಟರಿಗೆ ಖರ್ಚು ಮಾಡಲು ಹಣ ಬೇಕು. ಚುನಾವಣೆಯಲ್ಲಿ ಸ್ಪರ್ಧೆ ಮಾಡುವ ಶಿವಪ್ಪನವರ ಕುಟುಂಬಕ್ಕೆ ನೆರವು ಮೊದಲಿನಿಂದ ನೀಡಿಕೊಂಡು ಬರುತ್ತಿದ್ದೇವೆ. ಈ ಮೂಲಕ ತಮ್ಮ ಕೈಯಲ್ಲಾದಷ್ಟು ಸಹಾಯ ಮಾಡಿಕೊಂಡು ಬರುತ್ತಿದ್ದೇವೆ. ಈ ಬಾರಿಯೂ ಅವರ ಕುಟುಂಬದ ಮೇಲಿನ ಅಭಿಮಾನದಿಂದ ಹಣ ಸಂಗ್ರಹಿಸುತ್ತಿದ್ದೇವೆ ಎಂದು 18 ಗ್ರಾಮಗಳ ಪ್ರಮುಖರು ಹೇಳಿದ್ದಾರೆ.
ಯಾರ ಮೇಲೂ ಒತ್ತಡ ಹೇರಲ್ಲ
ಯಾರಿಗೂ ಹಣ ನೀಡಿ ಎಂದು ಒತ್ತಡ ಹೇರುವುದಿಲ್ಲ. ಕೆಳ, ಮಧ್ಯಮ ವರ್ಗದವರು ಸೇರಿ ಚುನಾವಣೆಗೂ ಮುನ್ನ ಸಭೆ ನಡೆಸುತ್ತಾರೆ. ಶಿವಶಂಕರ್ ಅವರ ಚುನಾವಣಾ ಖರ್ಚಿಗಾಗಿ ದೇಣಿಗೆ ಸಂಗ್ರಹ ಮಾಡುವ ಸಂಪ್ರದಾಯ ಈ ಬಾರಿಯೂ ಮುಂದುವರೆದಿದೆ. ಅವರ ಶಕ್ತಿಗೆ ಅನುಸಾರ ಹಣ ನೀಡಲಾಗುತ್ತದೆ ಎನ್ನುವ ಮಾತುಗಳು ಕೇಳಿಬರುತ್ತಿವೆ.
ಚುನಾವಣೆ ಅಂದ ಮೇಲೆ ಹಣ ಕೊಟ್ಟು ಹಣ ಸೇರಿಸುವುದನ್ನು ನೋಡಿದ್ದೇವೆ. ಈಗ ಎಲ್ಲೆಡೆ ಹಣ ಕೊಟ್ಟರೆ ಮಾತ್ರ ಜನರು ಬರುತ್ತಾರೆ ಎಂಬ ಮಾತುಗಳು ಕೇಳಿಬರುತ್ತಿವೆ. ಆದರೆ ಹರಿಹರದಲ್ಲಿ ಮಾತ್ರ ಜನರೇ ಅಭ್ಯರ್ಥಿಗಳ ಅಭಿಮಾನದಿಂದ ಧನ ಸಹಾಯ ಮಾಡಲು ಮುಂದೆ ಬರುವುದು ತುಂಬಾ ವಿಶೇಷವಾಗಿದೆ. ಮತ್ತೊಂದೆಡೆ ಕ್ಷೇತ್ರದಲ್ಲಿ ತಂದೆ ಮೇಲಿನ ಅಭಿಮಾನ ಒಂದಿಷ್ಟು ಕಡಿಮೆಯಾಗಿಲ್ಲ. ಮೂರು ಬಾರಿ ಕಣಕ್ಕಿಳಿದಾಗಲೂ ಜನರು ನೆರವು ನೀಡಿದ್ದಾರೆ. ಇದನ್ನು ಜೀವನದಲ್ಲಿ ಮರೆಯುವುದಿಲ್ಲ ಎಂದು ಹೆಚ್.ಎಸ್.ಶಿವಶಂಕರ್ ಹೇಳಿದ್ದಾರೆ.












Click it and Unblock the Notifications