Breaking; ದಾವಣಗೆರೆ ಜಿಲ್ಲೆಗೆ ಸಿಹಿಸುದ್ದಿ ನೀಡಿದ ಕರ್ನಾಟಕ ಸರ್ಕಾರ
ಬೆಂಗಳೂರು, ಡಿಸೆಂಬರ್ 21; ಕರ್ನಾಟಕ ಸರ್ಕಾರ ದಾವಣಗೆರೆ ಜಿಲ್ಲೆಯ ಜನರಿಗೆ ಸಿಹಿ ಸುದ್ದಿಯೊಂದನ್ನು ನೀಡಿದೆ. ಚನ್ನಗಿರಿ ತಾಲ್ಲೂಕು ಆಸ್ಪತ್ರೆಯನ್ನು 100 ರಿಂದ 250 ಹಾಸಿಗೆಗಳ ಸಾಮರ್ಥ್ಯವುಳ್ಳ ಆಸತ್ರೆಯನ್ನಾಗಿ ಮೇಲ್ದರ್ಜೆಗೇರಿಸಲು ಆಡಳಿತಾತ್ಮಕ ಅನುಮೋದನೆ ನೀಡಿದೆ.
ಪದ್ಮ ವಿ. ಸರ್ಕಾರದ ಅಧೀನ ಕಾರ್ಯದರ್ಶಿ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ (ಆರೋಗ್ಯ 1 & 2) ಈ ಕುರಿತು ಆದೇಶ ಹೊರಡಿಸಿದ್ದಾರೆ. ಕಟ್ಟಡ ನಿರ್ಮಾಣ ಕಾಮಗಾರಿಯ ರೂ. 2650.00 ಲಕ್ಷಗಳ ಅಂದಾಜು ಪಟ್ಟಿಗೆ ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ.
ಆಯುಕ್ತರು, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ಇಲಾಖೆ ಇವರ ಪತ್ರದಲ್ಲಿ ದಾವಣಗೆರೆ ಜಿಲ್ಲೆ ಚನ್ನಗಿರಿ ಸಾರ್ವಜನಿಕ ಆಸ್ಪತ್ರೆಯು 100 ಹಾಸಿಗೆಗಳ ಸಾಮರ್ಥ್ಯವುಳ್ಳ ಆಸ್ಪತ್ರೆಯಾಗಿದ್ದು, ಶಿವಮೊಗ್ಗ ಹಾಗೂ ದಾವಣಗೆರೆ ಜಿಲ್ಲಾ ಕೇಂದ್ರದಿಂದ ಸುಮಾರು 60 ಕಿ.ಮೀ. ದೂರದಲ್ಲಿರುತ್ತದೆ.

ರೋಗಿಗಳಿಗೆ ತುರ್ತು ಚಿಕಿತ್ಸೆ ಅವಶ್ಯವಿದ್ದಾಗ ಸುಲಭ ಚಿಕಿತ್ಸೆ ಸಾಧ್ಯವಾಗದೇ ತೊಂದರೆ ಉಂಟಾಗುತ್ತಿದೆ. ಅದಲ್ಲದೇ ಚನ್ನಗಿರಿ ತಾಲ್ಲೂಕಿನಲ್ಲಿ ಹೆಚ್ಚಾಗಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಹಿಂದುಳಿದ ವರ್ಗದವರು ವಾಸಿಸುತ್ತಿದ್ದು, ಕಡುಬಡವರಾಗಿದ್ದು, ಜಿಲ್ಲಾ ಕೇಂದ್ರಗಳಿಗೆ ಹೋಗಿ ಹೆಚ್ಚಿನ ಚಿಕಿತ್ಸೆಯನ್ನು ಪಡೆಯಲು ಶಕ್ತರಾಗಿರುವುದಿಲ್ಲ ಎಂದು ವಿವರಣೆ ನೀಡಲಾಗಿತ್ತು.
ಚನ್ನಗಿರಿ ತಾಲ್ಲೂಕಿನಲ್ಲಿ ಆಸ್ಪತ್ರೆ ಹಾಗೂ ವೈದ್ಯರ ವಸತಿಗೃಹಗಳನ್ನು ನಿರ್ಮಿಸಲು ಸ್ಥಳದ ಲಭ್ಯತೆ ಇರುವುದರಿಂದ ಸಾರ್ವಜನಿಕರ ಆರೋಗ್ಯದ ಹಿತದೃಷ್ಟಿಯ ಹಿನ್ನೆಲೆಯಲ್ಲಿ, ಚನ್ನಗಿರಿ ತಾಲ್ಲೂಕು ಆಸ್ಪತ್ರೆಯನ್ನು 100 ರಿಂದ 230 ಹಾಸಿಗೆಗಳ ಸಾಮರ್ಥ್ಯವುಳ್ಳ ವಿಭಾಗೀಯ ಆಸ್ಪತ್ರೆಯನ್ನಾಗಿ ಮೇಲ್ದರ್ಜೆಗೇರಿಸಲು ಪ್ರಸ್ತಾವನೆ ಸಲ್ಲಿಸಲಾಗಿತ್ತು.
2018-19ನೇ ಸಾಲಿನ ಲೋಕೋಪಯೋಗಿ ಇಲಾಖೆಯ ಶಿವಮೊಗ್ಗ ವೃತ್ತದ ದರಪಟ್ಟಿ ಹಾಗೂ 2019-20ನೇ ಸಾಲಿನ ವಿದ್ಯುತ್ ದರಪಟ್ಟಿ ಅಳವಡಿಸಿಕೊಂಡು ರೂ. 2650.00 ಲಕ್ಷಗಳಿಗೆ (ವೈದ್ಯಕೀಯ ಉಪಕರಣ ಮತ್ತು ಪೀಠೋಪಕರಣಗಳನ್ನೊಳಗೊಂಡಂತೆ) ಈ ಕೆಳಕಂಡಂತೆ ವಿಕೃತ ಅಂದಾಜು ಪಟ್ಟಿಯನ್ನು ತಯಾರಿಸಲಾಗಿತ್ತು.
ಆಸ್ಪತ್ರೆಗೆ ಅವಶ್ಯ ವೈದ್ಯಾಧಿಕಾರಿಗಳು ಹಾಗೂ ಸಿಬ್ಬಂದಿಗಳ ವೇತನಕ್ಕಾಗಿ ಅವಶ್ಯವಿರುವ ಆವರ್ತಕ ವೆಚ್ಚ ರೂ. 767.37 ಲಕ್ಷಗಳು ಸೇರಿ ಸದರಿ ಕಾಮಗಾರಿಗೆ ಒಟ್ಟಾರೆಯಾಗಿ ರೂ. 3417.37 ಲಕ್ಷಗಳ (ಕಟ್ಟಡ ನಿರ್ಮಾಣಕ್ಕೆ ರೂ. 2650.00 ಲಕ್ಷಗಳು + ಮಾನವ ಸಂಪನ್ಮೂಲಕ್ಕಾಗಿ ರೂ. 767.37 ಲಕ್ಷಗಳು) ಅಂದಾಜು ಪಟ್ಟಿಗೆ ಆಡಳಿತಾತ್ಮಕ ಅನುಮೋದನೆಯೊಂದಿಗೆ ಅನುದಾನವನ್ನು ಒದಗಿಸುವಂತೆ ಪ್ರಸ್ತಾಪಿಸಲಾಗಿದೆ.
ಪ್ರಸ್ತಾವನೆಯಲ್ಲಿ ವಿವರಿಸಿರುವ ಅಂಶಗಳ ಹಿನ್ನೆಲೆಯಲ್ಲಿ, ದಾವಣಗೆರೆ ಜಿಲ್ಲೆ ಚನ್ನಗಿರಿ ತಾಲ್ಲೂಕು ಆಸ್ಪತ್ರೆಯನ್ನು 100 ರಿಂದ 250 ಹಾಸಿಗೆಗಳ ಸಾಮರ್ಥ್ಯವುಳ್ಳ ಆಸ್ಪತ್ರೆಯನ್ನಾಗಿ ಮೇಲ್ದರ್ಜೆಗೇರಿಸಲು ಕಟ್ಟಡ ನಿರ್ಮಾಣ ಕಾಮಗಾರಿಯ ರೂ. 2656.00 ಲಕ್ಷಗಳ ಅಂದಾಜು ಪಟ್ಟಿಗೆ ಅನುಮೋದನೆ ನೀಡಲಾಗಿದೆ.
ಷರತ್ತುಗಳು; ಈ ಕಾಮಗಾರಿಗಳನ್ನು ಕೈಗೊಳ್ಳುವ ಮುನ್ನ ಸಕ್ಷಮ ಪ್ರಾಧಿಕಾರದಿಂದ ತಾಂತ್ರಿಕ ಅನುಮೋದನೆಯನ್ನು ಪಡೆಯತಕ್ಕದ್ದು. ಈ ಕಾಮಗಾರಿಗಳನ್ನು ಕೆಟಿಪಿಪಿ ಕಾಯ್ದೆ ಹಾಗೂ ನಿಯಮಗಳನ್ನು ಅನುಸರಿಸಿ ಟೆಂಡರ್ ಆಹ್ವಾನಿಸಿ ಅನುಷ್ಠಾನಗೊಳಿಸತಕ್ಕದ್ದು.
ಮಾನವ ಸಂಪನ್ಮೂಲಕ್ಕಾಗಿ ಅವಶ್ಯವಿರುವ ಹುದ್ದೆಗಳ ಸೃಜನೆ ಮತ್ತು ಅಗತ್ಯ ಅನುದಾನಕ್ಕಾಗಿ ಪ್ರತ್ಯೇಕವಾಗಿ ಪ್ರಸ್ತಾವನೆಯನ್ನು ಸರ್ಕಾರಕ್ಕೆ ಸಲ್ಲಿಸತಕ್ಕದ್ದು ಎಂದು ಷರತ್ತು ಹಾಕಲಾಗಿದೆ.












Click it and Unblock the Notifications