ರಾಜಕೀಯಕ್ಕೆ ಗುಡ್ ಬೈ ಹೇಳಿದ ಬಿಜೆಪಿ ಶಾಸಕ ಎಸ್.ಎ.ರವೀಂದ್ರನಾಥ್, ಬೆಂಬಲಿಗರ ಒತ್ತಾಯ ಏನು?- ಇಲ್ಲಿದೆ ವಿವರ
ದಾವಣಗೆರೆ, ಏಪ್ರಿಲ್, 05: ವಿಧಾನಸಭೆ ಚುನಾವಣೆ ಸಮೀಪಿಸುತ್ತಿದ್ದಂತೆಯೇ ಎಲ್ಲಾ ಪಕ್ಷಗಳಲ್ಲೂ ಬದಲಾವಣೆಗಳು ಆಗುತ್ತಲೇ ಇವೆ. ಪಕ್ಷ ತೊರೆದು ಮತ್ತೊಂದು ಪಕ್ಷಕ್ಕೆ ಹೋಗುವವರು ಒಂದು ಕಡೆಯಾದರೆ, ಮತ್ತೊಂದೆಡೆ ಕೆಲವರು ರಾಜಕೀಯಕ್ಕೆ ನಿವೃತ್ತಿ ಹೇಳುವ ಮೂಲಕ ತಮ್ಮ ಪಕ್ಷಕ್ಕೆ ಶಾಕ್ ನೀಡುತ್ತಿದ್ದಾರೆ. ಇದೇ ರೀತಿಯಲ್ಲಿ ಇದೀಗ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ದಾವಣಗೆರೆ ಉತ್ತರದಿಂದ ಸ್ಪರ್ಧೆ ಮಾಡುವುದಿಲ್ಲ ಎಂದು ಹೇಳುವ ಮೂಲಕ ಬಿಜೆಪಿ ಶಾಸಕ ಎಸ್.ಎ.ರವೀಂದ್ರನಾಥ್ ರಾಜಕೀಯಕ್ಕೆ ನಿವೃತ್ತಿ ಘೋಷಣೆ ಮಾಡಿದ್ದಾರೆ.
ಶಾಸಕರ ಮನೆ ಮುಂದೆ ಜಮಾಯಿಸಿದ ಬೆಂಬಲಿಗರು
ದಾವಣಗೆರೆ ತಾಲೂಕಿನ ಶಿರಮಗೊಂಡನಹಳ್ಳಿಯಲ್ಲಿರುವ ತಮ್ಮ ನಿವಾಸದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಆರೋಗ್ಯ ಸರಿಯಿಲ್ಲದ ಕಾರಣಕ್ಕೆ ನಾನೇ ಚುನಾವಣೆಯಿಂದ ಹಿಂದೆ ಸರಿಯುತ್ತಿದ್ದೇನೆ ಎಂದು ಮಾಹಿತಿ ನೀಡಿದ್ದರು. ಮಾಜಿ ಸಚಿವ ಎಸ್.ಎ.ರವೀಂದ್ರನಾಥ್ ಚುನಾವಣಾ ಕಣದಿಂದ ಹಿಂದೆ ಸರಿಯುತ್ತಿದ್ದಂತೆಯೇ ಅವರ ನಿವಾಸದ ಮುಂದೆ ಸಾವಿರಾರು ಬೆಂಬಲಿಗರು ಜಮಾಯಿಸಿದ್ದರು.

ಯಾವುದೇ ಕಾರಣಕ್ಕೂ ಚುನಾವಣೆಯಿಂದ ಹಿಂದೆ ಸರಿಯಬೇಡಿ. ನಿಮ್ಮನ್ನು 25 ಸಾವಿರ ಮತಗಳ ಅಂತರದಿಂದ ಗೆಲ್ಲಿಸಿಕೊಡುತ್ತೇವೆ. ಜೊತೆಗೆ ಪಕ್ಷದ ವರಿಷ್ಠರ ಮನವೊಲಿಸುವ ಕೆಲಸವನ್ನು ಕೂಡ ಮಾಡುತ್ತೇವೆ ಎಂದು ಬೆಂಬಲಿಗರು ಆಗ್ರಹಿಸಿದ್ದಾರೆ.
ಇತ್ತೀಚೆಗಷ್ಟೇ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ದಾವಣಗೆರೆ ಉತ್ತರಕ್ಕೆ ಎಸ್.ಎ.ರವೀಂದ್ರನಾಥ್ ಅಭ್ಯರ್ಥಿ ಎಂದು ತಿಳಿಸಿದ್ದರು. ಆಗ ರವೀದ್ರನಾಥ್ ನನಗೆ ಟಿಕೆಟ್ ಬೇಡ, ಹೊಸಬರಿಗೆ ಅವಕಾಶ ಕೊಡಿ ಎಂದು ಹೇಳಿದ್ದರು. ಬಿ.ಎಸ್.ಯಡಿಯೂರಪ್ಪನವರು ಸ್ವಯಂ ನಿವೃತ್ತಿ ಘೋಷಣೆ ಮಾಡಿದ್ದರು. ಬಳಿಕ ಹಿರಿಯ ಅಂದರೆ ನಾನೇ ಆಗಿದ್ದೇನೆ. ಆದ್ದರಿಂದ ನಾನು ಕೂಡ ನಿವೃತ್ತಿ ಘೋಷಣೆ ಮಾಡಿದ್ದೇನೆ. ಪಕ್ಷ ಯಾರಿಗೆ ಟಿಕೆಟ್ ನೀಡುತ್ತದೆಯೋ ಅವರನ್ನು ಗೆಲ್ಲಿಸುವ ಪ್ರಯತ್ನವನ್ನು ಮಾಡುತ್ತೇವೆ ಎಂದು ತಿಳಿಸಿದ್ದರು.
ಚುನಾವಣೆಯಲ್ಲಿ ಸ್ಪರ್ಧೆ ಮಾಡುವುದಿಲ್ಲ
ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ದಾವಣಗೆರೆ ಉತ್ತರ ಕ್ಷೇತ್ರದಿಂದ ಸ್ಪರ್ಧೆ ಮಾಡುವುದಿಲ್ಲ. ಈ ಬಗ್ಗೆ ಬೆಂಗಳೂರಿನಲ್ಲಿ ನಡೆದ ಬಿಜೆಪಿ ಕೋರ್ ಕಮಿಟಿ ಸಭೆಯಲ್ಲಿ ಸ್ಪಷ್ಟವಾಗಿ ತಿಳಿಸಿದ್ದೇನೆ. ವಯಸ್ಸಿನ ಕಾರಣದಿಂದ ನನಗೆ ಟಿಕೆಟ್ ನಿರಾಕರಿಸಿಲ್ಲ. ಆರೋಗ್ಯ ಸರಿ ಇಲ್ಲದ ಕಾರಣ ನಾನೇ ಕಣದಿಂದ ಹಿಂದೆ ಸರಿಯುವುದಾಗಿ ತಿಳಿಸಿ ಬಂದಿದ್ದೇನೆ ಎಂದು ಬಿಜೆಪಿಯ ಹಿರಿಯ ಶಾಸಕ ಎಸ್.ಎ. ರವೀಂದ್ರನಾಥ್ ಇತ್ತೀಚೆಗಷ್ಟೇ ಘೋಷಣೆ ಮಾಡಿದ್ದರು.

ನನ್ನ ಅಭಿಪ್ರಾಯವನ್ನು ತಿಳಿಸಿದ್ದೇನೆ
ಶಿರಮಗೊಂಡನಹಳ್ಳಿಯ ತಮ್ಮ ನಿವಾಸದಲ್ಲಿ ಮಾಧ್ಯಮದವರ ಜೊತೆ ಮಾತನಾಡಿದ ಅವರು, ಆರೋಗ್ಯ ಸರಿ ಇಲ್ಲದ ಕಾರಣ ಸ್ಪರ್ಧೆ ಮಾಡುತ್ತಿಲ್ಲ. ಕೋರ್ ಕಮಿಟಿ ಸಭೆಯಲ್ಲಿ ರಾಜ್ಯ ನಾಯಕರ ಮುಂದೆ ನನ್ನ ಅಭಿಪ್ರಾಯವನ್ನು ಹೇಳಿದ್ದೇನೆ. ಜಿಲ್ಲಾವಾರು ಸಭೆ ನಡೆಸಿದ ವೇಳೆ ಯಾವ ಕ್ಷೇತ್ರದಲ್ಲಿ ಯಾರಿಗೆ ಟಿಕೆಟ್ ನೀಡಬೇಕು ಎನ್ನವ ಬಗ್ಗೆ ಸಭೆಯಲ್ಲಿ ಸುದೀರ್ಘವಾಗಿ ಚರ್ಚಿಸಲಾಯಿತು. ಹಾಗೆಯೇ ಜಿಲ್ಲಾಧ್ಯಕ್ಷರು ಯಾವ ಯಾವ ಕ್ಷೇತ್ರಗಳಲ್ಲಿ ಆಕಾಂಕ್ಷಿಗಳಿದ್ದಾರೆ ಎಂಬ ಕುರಿತಂತೆ ಮಾಹಿತಿ ನೀಡಿದರು ಎಂದು ತಿಳಿಸಿದರು.
ದಾವಣಗೆರೆ ಉತ್ತರದಲ್ಲಿ ಬಿಜೆಪಿಯ ಐವರು ಆಕಾಂಕ್ಷಿಗಳಿದ್ದಾರೆ. ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜಗದೀಶ್, ಮಹಾನಗರ ಪಾಲಿಕೆ ಮಾಜಿ ಮೇಯರ್ ಎಸ್. ಟಿ.ವೀರೇಶ್, ಬಿಜೆಪಿ ಜಿಲ್ಲಾ ರೈತ ಮೋರ್ಚಾ ಅಧ್ಯಕ್ಷ ಲೋಕಿಕೆರೆ ನಾಗರಾಜ, ಬಿಜೆಪಿ ಮಾಜಿ ಅಧ್ಯಕ್ಷ ಜೀವನಮೂರ್ತಿ ಹಾಗೂ ಧನಂಜಯ ಕುಮಾರ್ ಹೆಸರು ಪ್ರಸ್ತಾಪ ಮಾಡಿದ್ದಾರೆ. ನಾನು ಸ್ಪರ್ಧೆ ಮಾಡುವುದಿಲ್ಲ ಎಂದು ಹೇಳಿದ ಮೇಲೆ ಆಕಾಂಕ್ಷಿಗಳು ಹೆಚ್ಚಾಗಿದ್ದಾರೆ ಎಂದು ತಿಳಿಸಿದ್ದರು.
ನಾನು ಚುನಾವಣೆಗೆ ಸ್ಪರ್ಧಿಸುವುದಿಲ್ಲ
ಚುನಾವಣೆಗೆ ನಾನು ಸ್ಪರ್ಧಿಸುವುದಿಲ್ಲ ಎಂದು ಈ ಹಿಂದೆಯೇ ಹಲವಾರು ಬಾರಿ ಹೇಳಿದ್ದೆ. ಆದರೆ ಪಕ್ಷದ ವರಿಷ್ಠರು ಚುನಾವಣೆಗೆ ನಿಲ್ಲುವುದಿಲ್ಲ ಎಂಬುದಾಗಿ ಎಲ್ಲಿಯೂ ಹೇಳಬೇಡಿ ಎಂಬ ಸೂಚನೆ ನೀಡಿದ್ದರು. ಈ ಕಾರಣದಿಂದ ಬಹಿರಂಗವಾಗಿ ನಾನು ಎಲ್ಲಿಯೂ ಸ್ಪರ್ಧೆ ಮಾಡುವುದಿಲ್ಲ ಅಂತಾ ಹೇಳಿರಲಿಲ್ಲ. ಇದೀಗ ಸ್ಪಷ್ಟವಾಗಿ ತಿಳಿಸಿಬಂದಿದ್ದೇನೆ ಎಂದು ಹೇಳಿದ್ದರು.
ಇನ್ನು ದಾವಣಗೆರೆ ಉತ್ತರ, ಚನ್ನಗಿರಿಯಿಂದ ಸಿಎಂ ಸ್ಪರ್ಧೆ ಮಾಡುವುದಿಲ್ಲ. ಕೇವಲ ವದಂತಿ ಅಷ್ಟೇ. ಬಸವರಾಜ ಬೊಮ್ಮಾಯಿ ಶಿಗ್ಗಾಂವಿಯಲ್ಲಿ ಸ್ಪರ್ಧೆ ಮಾಡುತ್ತಾರೆ. ಒಂದೇ ಜಾತಿಯಿಂದ ಚುನಾವಣೆಯಲ್ಲಿ ಗೆಲ್ಲಲು ಸಾಧ್ಯವಿಲ್ಲ. ಎಲ್ಲಾ ಸಮುದಾಯಗಳ ಸಹಕಾರ ಬೇಕು. ಆಗ ಮಾತ್ರ ಗೆಲ್ಲಲು ಸಾಧ್ಯ ಆಗುತ್ತದೆ ಎಂದಿದ್ದರು.
ರಾಜಕಾರಣ ಅಂದ ಮೇಲೆ ನೋವು ಸಹಜವಾಗಿರುತ್ತದೆ. ಎಲ್ಲವನ್ನೂ ಬಹಿರಂಗವಾಗಿ ಹೇಳಲು ಆಗುವುದಿಲ್ಲ. 50 ವರ್ಷಗಳ ರಾಜಕಾರಣದಲ್ಲಿ ಎಲ್ಲವನ್ನೂ ನೋಡಿದ್ದೇನೆ. ಇದು ಹೊಸದೇನೂ ಅಲ್ಲ. ಕೊನೆ ಅವಧಿಗೆ ಸಚಿವ ಸ್ಥಾನ ನೀಡದಿದ್ದರ ಬಗ್ಗೆ ಪರೋಕ್ಷವಾಗಿ ಎಸ್.ಎ.ರವೀಂದ್ರನಾಥ್ ಅವರು ಅಸಮಾಧಾನ ಹೊರಹಾಕಿದ್ದರು.
ಮತ್ತೆ ಗೆಲುವಿನ ನಿರೀಕ್ಷೆಯಲ್ಲಿ ಶಾಮನೂರು
ಮತ್ತೊಂದೆಡೆ ದಾವಣಗೆರೆ ದಕ್ಷಿಣದಿಂದ ಸತತವಾಗಿ ಮೂರು ಬಾರಿ ಗೆಲುವು ಸಾಧಿಸಿದ್ದ ಕಾಂಗ್ರೆಸ್‌ನ ಹಿರಿಯ ನಾಯಕ ಶಾಮನೂರು ಶಿವಕಂರಪ್ಪನವರಿಗೆ ನಿರೀಕ್ಷೆಯಂತೆ ಈ ಬಾರಿಯೂ ಕಾಂಗ್ರೆಸ್ ಟಿಕೆಟ್ ಘೋಷಣೆ ಮಾಡಿದೆ.
ಈ ಮೂಲಕ ಶಿವಶಂಕರಪ್ಪನವರು ಸತತ 6ನೇ ಬಾರಿ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸುತ್ತಿದ್ದಾರೆ. ಇನ್ನು ಅವರಿಗೆ ಕಾಂಗ್ರೆಸ್ ಟಿಕೆಟ್ ನೀಡಲು ಕಾರಣವೂ ಇದೆ. 90ರ ಗಡಿ ದಾಟಿದ ಶಾಸಕ ಶಾಮನೂರು ಶಿವಕಂರಪ್ಪ ಅಖಿಲ ಭಾರತ ವೀರಶೈವ ಮಹಾಸಭೆಯ ಅಧ್ಯಕ್ಷರಾಗಿದ್ದು, ಪ್ರಬಲ ಲಿಂಗಾಯತ ಸಮುದಾಯ ಮುಖಂಡರಾಗಿದ್ದಾರೆ. ಆದ್ದರಿಂದ ಅವರಿಗೆ ಕಾಂಗ್ರೆಸ್ ಟಿಕೆಟ್ ಘೋಷಣೆ ಮಾಡಿದೆ ಎನ್ನಲಾಗಿದೆ.
ಇತ್ತೀಚೆಗಷ್ಟೇ ಹಾಲಾಡಿ ಶ್ರೀನಿವಾಸ್ ಶೆಟ್ಟಿ ಬೆನ್ನಲೇ ಇದೀಗ ಮತ್ತೋರ್ವ ಬಿಜೆಪಿ ಶಾಸಕ ಎಸ್.ಎ.ರವೀಂದ್ರ ನಾಥ್ ರಾಜಕೀಯಕ್ಕೆ ನಿವೃತ್ತಿ ಘೋಷಣೆ ಮಾಡಿದ್ದಾರೆ. ಉಡುಪಿ ಜಿಲ್ಲೆಯ ರಾಜಕೀಯದಲ್ಲಿನ ಆಶ್ಚರ್ಯಕಾರಿ ಬೆಳವಣಿಗೆಯೊಂದರಲ್ಲಿ ಕುಂದಾಪುರದ ವಾಜಪೇಯಿ ಎಂದೇ ಕರೆಯಲ್ಪಡುವ ಹಾಲಾಡಿ ಶ್ರೀನಿವಾಸ ಶೆಟ್ಟಿ ಸಕ್ರಿಯ ರಾಜಕಾರಕ್ಕೆ ಗುಡ್ ಬೈ ಹೇಳಲು ನಿರ್ಧರಿಸಿದ್ದರು.
ಇದರ ಬೆನ್ನಲ್ಲೇ ಇದೀಗ ದಾವಣಗೆರೆ ಉತ್ತರ ವಿಧಾನಸಭಾ ಕ್ಷೇತ್ರದಿಂದ ನಾನು ಸ್ಪರ್ಧೆ ಮಾಡುವುದುದಿಲ್ಲ ಎಂದು ಹೇಳುವ ಮೂಲಕ ಎಸ್.ಎ.ರವೀಂದ್ರನಾಥ್ ರಾಜಕೀಯಕ್ಕೆ ನಿವೃತ್ತಿ ಘೋಷಣೆ ಮಾಡಿದ್ದಾರೆ. ಹಾಗಾದರೆ ಬಿಜೆಪಿಯಿಂದ ದಾವಣಗೆರೆ ಉತ್ತರದಲ್ಲಿ ಯಾರನ್ನು ಕಣಕ್ಕೆ ಇಳಿಸಲಿದ್ದಾರೆ ಎನ್ನುವುದನ್ನು ಕಾದುನೋಡಬೇಕಿದೆ.












Click it and Unblock the Notifications