ದಾವಣಗೆರೆ ಜಿಲ್ಲೆಗೆ ಭೇಟಿ ನೀಡಲಿರುವ ನಟ ಸುದೀಪ್: ವಾಲ್ಮಿಕಿ ಸಮುದಾಯದ ಮತ ಸೆಳೆಯಲು ಬಿಜೆಪಿ ಪ್ಲಾನ್, ಎಲ್ಲೆಲ್ಲಿ ಪ್ರಚಾರ?
ದಾವಣಗೆರೆ, ಏಪ್ರಿಲ್, 26: ರಾಜ್ಯ ವಿಧಾನಸಭೆ ಚುನಾವಣೆ ಹಿನ್ನೆಲೆ ಬಿಜೆಪಿ ಅಭ್ಯರ್ಥಿಗಳ ಪರ ಅಭಿನಯ ಚಕ್ರವರ್ತಿ ನಟ ಕಿಚ್ಚ ಸುದೀಪ್ ಬೆಣ್ಣೆನಗರಿ ದಾವಣಗೆರೆ ಜಿಲ್ಲೆಯಲ್ಲಿ ಅಬ್ಬರದ ಪ್ರಚಾರ ಮತಬೇಟೆ ನಡೆಸಲಿದ್ದಾರೆ.
ಮಧ್ಯಾಹ್ನ 12:30ಕ್ಕೆ ಜಗಳೂರು ಬಿಜೆಪಿ ಅಭ್ಯರ್ಥಿ ಎಸ್.ವಿ.ರಾಮಚಂದ್ರಪ್ಪನವರರ ಪರ ರೋಡ್ ಶೋ ನಡೆಸುವ ಮೂಲಕ ಸುದೀಪ್ ಮತಯಾಚನೆ ಮಾಡಲಿದ್ದಾರೆ. ಜಗಳೂರು ಕ್ಷೇತ್ರವು ಎಸ್.ಟಿ. ಮೀಸಲಾತಿ ಕ್ಷೇತ್ರವಾಗಿದ್ದು, ಇಲ್ಲಿ ವಾಲ್ಮೀಕಿ ಸಮುದಾಯದವರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ.

ಜಗಳೂರು ತಾಲೂಕಿನಲ್ಲಿ ಸುದೀಪ್ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಇದ್ದಾರೆ. ಆದ್ದರಿಂದ ಬಿಜೆಪಿಯತ್ತ ಮತ ಸೆಳೆಯಲು ಯೋಜನೆ ರೂಪಿಸಲಾಗಿದೆ. ಇದು ಎಸ್.ವಿ. ರಾಮಚಂದ್ರಪ್ಪ ಅವರಿಗೆ ವರದಾನವಾಗುವ ಸಾಧ್ಯತೆ ಇದೆ ಎನ್ನುವ ಮಾತುಗಳು ಕೇಳಿಬರುತ್ತಿವೆ.
ಮಧ್ಯಾಹ್ನ 2 ಗಂಟೆಗೆ ದಾವಣಗೆರೆ ತಾಲೂಕಿನ ಮಾಯಕೊಂಡ ಕ್ಷೇತ್ರ ವ್ಯಾಪ್ತಿಯಲ್ಲಿಯೂ ಸುದೀಪ್ ಅಭ್ಯರ್ಥಿ ಪರವಾಗಿ ಅಬ್ಬರದ ಪ್ರಚಾರ ಮಾಡಲಿದ್ದಾರೆ. ಮಾಯಕೊಂಡ ಬಿಜೆಪಿ ಅಭ್ಯರ್ಥಿಯಾದ ಬಸವರಾಜ್ ನಾಯ್ಕ್ ಪರ ತ್ಯಾವಣಿಗೆಯಲ್ಲಿ ಚುನಾವಣಾ ಪ್ರಚಾರ ನಡೆಸಲಿದ್ದಾರೆ. ಈ ಕ್ಷೇತ್ರದಲ್ಲಿಯೂ ವಾಲ್ಮೀಕಿ ಸಮುದಾಯದ ಮತಗಳಿದ್ದು, ಅವರನ್ನು ಸೆಳೆಯಲು ಬಿಜೆಪಿ ತಂತ್ರಗಾರಿಕೆ ರೂಪಿಸಿದೆ.
ಸಂಜೆ ನಾಲ್ಕು ಗಂಟೆಗೆ ದಾವಣಗೆರೆ ಉತ್ತರ ಮತ್ತು ದಕ್ಷಿಣ ಕ್ಷೇತ್ರದಲ್ಲಿ ಪ್ರಚಾರ ನಡೆಸಲಿದ್ದಾರೆ. ವಾಲ್ಮೀಕಿ ಸಮುದಾಯದವರು ಹೆಚ್ಚಿರುವ ನಿಟ್ಟುವಳ್ಳಿಯ ದುರ್ಗಾಂಬಿಕಾ ದೇವಸ್ಥಾನದಿಂದ ರೋಡ್ ಶೋ ಆಯೋಜನೆ ಮಾಡಲಾಗಿದೆ. ಬಿಜೆಪಿ ಉತ್ತರ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಲೋಕಿಕೆರೆ ನಾಗರಾಜ್ ಹಾಗೂ ದಕ್ಷಿಣ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಬಿ.ಜಿ. ಅಜಯ್ ಕುಮಾರ್ ಪರ ಪ್ರಚಾರ ಕೈಗೊಳ್ಳಲಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.












Click it and Unblock the Notifications