ಪಿಂಜಾರ ಅಭಿವೃದ್ಧಿ ನಿಗಮ ಸ್ಥಾಪನೆಗೆ ಒತ್ತಾಯ
ದಾವಣಗೆರೆ, ನವೆಂಬರ್ 30: ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮ ರಚನೆ ಬೆನ್ನಲ್ಲೇ ರಾಜ್ಯದಲ್ಲಿರುವ ಪಿಂಜಾರ, ನದಾಫ್ ಸಮುದಾಯಗಳ ಅಭಿವೃದ್ಧಿಗಾಗಿ ಪಿಂಜಾರ ಅಭಿವೃದ್ಧಿ ನಿಗಮ ಸ್ಥಾಪಿಸಬೇಕೆಂದು ಕರ್ನಾಟಕ ಪಿಂಜಾರ್, ನದಾಫ್, ಮನ್ಸೂರಿ ಸಂಘಗಳ ಮಹಾಮಂಡಳದ ರಾಜ್ಯಾಧ್ಯಕ್ಷ ಅಬ್ದುಲ್ ರಝಾಕ್
ನದಾಫ್ ಒತ್ತಾಯಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಸೋಮವಾರ ಮಾತನಾಡಿದ ಅವರು, "ರಾಜ್ಯದಲ್ಲಿ ಅಂದಾಜು 30 ಲಕ್ಷ ಜನಸಂಖ್ಯೆ ಇರುವ ಮುಸ್ಲಿಂ ಸಮುದಾಯದಲ್ಲಿ ಶೇ.50ರಷ್ಟು ಜನಸಂಖ್ಯೆ ಪಿಂಜಾರ, ನದಾಫ್ ವರ್ಗಕ್ಕೆ ಸೇರಿದವರಾಗಿದ್ದು, ಎಲ್ಲಾ ವಲಯಗಳಲ್ಲೂ ಹಿಂದುಳಿದಿರುವ ಈ ಸಮುದಾಯದ ಅಭಿವೃದ್ಧಿಗಾಗಿ ಪಿಂಜಾರ ಅಭಿವೃದ್ಧಿ ನಿಗಮ ಸ್ಥಾಪಿಸುವಂತೆ ಒತ್ತಾಯಿಸಿ ಹಲವು ಬಾರಿ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಆರೋಪಿಸಿದರು.
ಸುವರ್ಣಸೌಧವನ್ನು ಮರಾಠ ಶ್ರೀಮಂತರಿಗೆ ಮಾರುತ್ತಾರೆ: ವಾಟಾಳ್
ಗಾದೆ, ದಿಂಬು, ಹಾಸಿಗೆ ಉತ್ಪಾದನೆಯು ನಮ್ಮ ಸಮುದಾಯದ ಕುಲ ಕಸುಬಾಗಿದೆ. ಆದರೆ, ಇತ್ತೀಚಿನ ದಿನಗಳಲ್ಲಿ ಬೃಹತ್ ಕಂಪನಿಗಳು ಇವುಗಳ ಉತ್ಪಾದನೆಯಲ್ಲಿ ತೊಡಗಿರುವುದರಿಂದ ನಮ್ಮ ಕುಲ ಕಸುಬು ನಶಿಸಿ ಹೋಗುತ್ತಿದೆ. ಹೀಗಾಗಿ ನಾವು ಸಂಕಷ್ಟದಲ್ಲಿದ್ದೇವೆ. ಆದ್ದರಿಂದ ರಾಜ್ಯ ಸರ್ಕಾರ ನಮ್ಮ ಸಮುದಾಯದ ಅಭಿವೃದ್ಧಿಗಾಗಿ ಪಿಂಜಾರ ಅಭಿವೃದ್ಧಿ ನಿಗಮ ಸ್ಥಾಪಿಸಬೇಕೆಂದು ಆಗ್ರಹಿಸಿದರು. ಪಿಂಜಾರ ಅಭಿವೃದ್ಧಿ ನಿಗಮ ಸ್ಥಾಪನೆ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಶೀಘ್ರದಲ್ಲಿಯೇ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪರನ್ನು ಭೇಟಿ ಮಾಡಿ ಮನವಿ ಸಲ್ಲಿಸಲಾಗುವುದು ಎಂದು ತಿಳಿಸಿದರು.
ಒಂದು ವೇಳೆ ನಮಗೆ ಮನವಿ ಸಲ್ಲಿಸಲು ಅವಕಾಶ ಸಿಗದಿದ್ದರೆ, ರಾಜ್ಯದ ಯಾವುದೇ ಭಾಗದಲ್ಲಿ ಮುಖ್ಯಮಂತ್ರಿ ಪ್ರವಾಸ ಕೈಗೊಂಡರೂ ಅಲ್ಲಿ ಅವರಿಗೆ ಘೇರಾವ್ ಹಾಕಿ ಪ್ರತಿಭಟಿಸಬೇಕಾಗುತ್ತದೆ ಎಂದು ಎಚ್ಚರಿಸಿದರು. ಸುದ್ದಿಗೋಷ್ಠಿಯಲ್ಲಿ ಮಹಾಮಂಡಳದ ಮಧ್ಯ ಕರ್ನಾಟಕ ಅಧ್ಯಕ್ಷ ಎಂ.ರಾಜಸಾಬ್, ಶಫಿವುಲ್ಲಾ, ಮುಮ್ತಾಜ್ ಬೇಗಂ, ಮುದಾಪುರ ರೆಹಮಾನ್, ನೌಷಿನ್ ತಾಜ್ ಮತ್ತಿತರರು ಹಾಜರಿದ್ದರು.