ಈ ಗ್ರಾಮದಲ್ಲಿ ಮಹಿಳೆಯರು ದೇವರ ಗುಡಿ ಕಟ್ಟುವಂತಿಲ್ಲ, ಜಾತ್ರೆಗೆ ಹೋಗುವಂತಿಲ್ಲ: ಯಾಕಿರಬಹುದು?
ದಾವಣಗೆರೆ ಜನವರಿ 4: ಈ ಗ್ರಾಮದಲ್ಲಿ ವಿಶಿಷ್ಟ ಆಚರಣೆ ಇದೆ. ಯಾವುದೇ ಕಾರಣಕ್ಕೂ ಮಹಿಳೆಯರು ಜಾತ್ರೆಗೆ ಬರುವಂತಿಲ್ಲ. ಇಲ್ಲಿ ದೇವರ ಗುಡಿ ಕಟ್ಟುವಂತಿಲ್ಲ. ಜಾತ್ರೆ ಮುಗಿದ ಮಾರನೇ ದಿನವಷ್ಟೇ ಮಹಿಳೆಯರು ಅಲ್ಲಿಗೆ ಹೋಗಬೇಕು. ಒಂದು ವೇಳೆ ಉಲ್ಲಂಘಿಸಿ ಹೋದರೆ ಅಪಾಯ ಕಟ್ಟಿಟ್ಟ ಬುತ್ತಿ. ಇಂಥ ದುಸ್ಸಾಹಸಕ್ಕೆ ಯಾರೂ ಕೈ ಹಾಕಿಲ್ಲ. ಹಾಗಾಗಿ, ಈ ಜಾತ್ರೆ ಸಾಕಷ್ಟು ವಿಶೇಷತೆ ಹೊಂದಿದೆ. ಮಧ್ಯ ಕರ್ನಾಟಕದ ಹೆಬ್ಬಾಗಿಲು ದಾವಣಗೆರೆ ತಾಲೂಕಿನ ಬಸಾಪುರ ಗ್ರಾಮದಲ್ಲಿ ನಡೆಯುವ ಮಹೇಶ್ವರ ಜಾತ್ರೆಯ ಸ್ಪೆಷಾಲಿಟಿ.
ಬಯಲಲ್ಲಿ ಬಯಲಾಗಿ, ಜೀವಂತ ಸಮಾಧಿಯಾದ ಶ್ರೀ ವೀರ ಮಹೇಶ್ವರರಿಗೆ ಗುಡಿಯನ್ನು ಕಟ್ಟುವಂತಿಲ್ಲ. ಯಾರೊಬ್ಬರೂ ಗುಡಿ ಕಟ್ಟುವ ಪ್ರಯತ್ನ ಮಾಡಿಲ್ಲ. ಹೆಣ್ಣು ಮಕ್ಕಳು ಈ ಜಾತ್ರೆಗೆ ಬರುವಂತಿಲ್ಲ. ಇಂದಿಗೂ ಗ್ರಾಮದ ಮಹಿಳೆಯರು

ಇದನ್ನು ತಪ್ಪದೇ ಪಾಲಿಸಿಕೊಂಡು ಬಂದಿದ್ದಾರೆ. ಪೂರ್ವಿಕರು ಹಾಕಿಕೊಟ್ಟ ನಿಯಮ, ಪದ್ಧತಿಯನ್ನು ಬಸಾಪುರ ಜನರು ಮುಂದುವರಿಸಿಕೊಂಡು ಹೋಗುತ್ತಿದ್ದಾರೆ.
ಜಾತ್ರೆ ವೇಳೆ ಯಾವೊಬ್ಬ ಹೆಣ್ಣು ಮಕ್ಕಳೂ ಅತ್ತ ಕಡೆ ಹೋಗುವುದಿಲ್ಲ, ಜಾತ್ರೆ ಮುಗಿದ ಮಾರನೆಯ ದಿನ ಹೆಣ್ಣು ಮಕ್ಕಳಷ್ಟೆ ಅಲ್ಲಿಗೆ ಹೋಗಿ, ಊಟ ಮಾಡಿ ಬರುತ್ತಿದ್ದ ಸಂಪ್ರದಾಯವೂ ಈಚೆಗೆ ಕಾಣುತ್ತಿಲ್ಲ. ಜಾತ್ರೆ ವೇಳೆ ಬಸಾಪುರ, ಆನೆಕೊಂಡ, ಬೇತೂರು, ದಾವಣಗೆರೆ ಸೇರಿದಂತೆ ವಿವಿಧೆಡೆಯಿಂದ ಭಕ್ತರು ಮಡಿ ಉಡಿಯಿಂದ ಜಾತ್ರೆಗೆ ಬರುತ್ತಾರೆ.

2 ಶತಮಾನಗಳ ಇತಿಹಾಸ:
ಕಳೆದ 2 ಶತಮಾನಗಳಿಂದಲೂ ನಗರದ ಹೊರ ವಲಯದ ಬಸಾಪುರ ಗ್ರಾಮದಲ್ಲಿ ನಡೆದುಕೊಂಡು ಬರುವಂತೆ ಮಹೇಶ್ವರ ಜಾತ್ರೆಯು ಶ್ರದ್ಧಾಭಕ್ತಿಯಿಂದ ನೆರವೇರಿತು. ಇಲ್ಲಿನ ಬಸಾಪುರ ಗ್ರಾಮದ ಹೊರ ವಲಯದ ಶ್ರೀ ವೀರ ಮಹೇಶ್ವರ ಸ್ವಾಮಿಯ ಜಾತ್ರೆ ತನ್ನ ವೈಶಿಷ್ಟ್ಯತೆಯಿಂದಲೇ ಮಧ್ಯ ಕರ್ನಾಟಕದಲ್ಲಿ ಪ್ರಸಿದ್ಧಿ ಪಡೆದಂತಹ ಜಾತ್ರೆ.
ಬಂಧು-ಬಳಗ, ಸ್ನೇಹಿತರು ಹೀಗೆ ಯಾರನ್ನೂ ಆಹ್ವಾನಿಸದಿದ್ದರೂ ಸ್ವಾಮಿ ಜಾತ್ರೆಗೆ ಬರುವುದು ಜಾತ್ರೆಯ ಮತ್ತೊಂದು ವಿಶೇಷ. ಇನ್ನೂರು ವರ್ಷದಿಂದಲೂ ಇದು ನಡೆದು ಬಂದಿದೆ. ಶ್ರೀ ಮಹೇಶ್ವರ ಸ್ವಾಮಿ ತೋಟದಲ್ಲಿ ತೆಂಗಿನ ಗರಿಗಳಲ್ಲಿ ತಾತ್ಕಾಲಿಕವಾಗಿ ಕಟ್ಟಿದ ಶ್ರೀ ವೀರ ಮಹೇಶ್ವರ ದೇವಸ್ಥಾನಕ್ಕೆ ತೀವ್ರ ಬರಗಾಲದಲ್ಲೂ ಬತ್ತದ ಮಹೇಶ್ವರ ಸ್ವಾಮಿ ತೋಟದ ಕೊಳ (ಪುಷ್ಕರಣಿ)ದಿಂದ ಮಡಿ ನೀರನ್ನು ತಂದು ಪೂಜೆ ಸಲ್ಲಿಸುವ ಜೊತೆಗೆ ಧಾರ್ಮಿಕ ಆಚರಣೆಯು ನಡೆಯಿತು.

ಜಾತ್ರೆ ಮೊದಲ ದಿನದಂದು ತೆಂಗಿನ ಗರಿಯಿಂದ ಕಟ್ಟುವ ತಾತ್ಕಾಲಿಕ ಚಪ್ಪರದಲ್ಲೇ ಸ್ವಾಮಿಗೆ ಪೂಜಿಸಲಾಯಿತು. ಬಾಳೆಹಣ್ಣು, ಬೋರಾ ಸಕ್ಕರೆಯೇ ಇಲ್ಲಿ ಪ್ರಸಾದ, ಅನ್ನ, ಸಾರು ಎಡೆ ಹಿಡಿಯುವ ಮೂಲಕ ಭಕ್ತಾದಿಗಳಿಗೆ ಮಹಾ ಪ್ರಸಾದವಾಗಿ ನೀಡಲಾಯಿತು. ಪುಟ್ಟ ಬಾಲಕರಿಂದ ವಯೋವೃದ್ಧರವರೆಗೆ ಉತ್ಸಾಹದಿಂದ ಭಾಗವಹಿಸಿದ್ದರು.
ಮಧ್ಯ ಕರ್ನಾಟಕ ಸೇರಿ ವಿವಿಧೆಡೆಯಿಂದ ಭಕ್ತರು ಯಾರೂ ಕರೆಯದಿದ್ದರೂ ಸ್ವಯಂ ಪ್ರೇರಣೆಯಿಂದ ಮಹೇಶ್ವರ ಸ್ವಾಮಿ ಜಾತ್ರೆಗೆಂದೇ ಬರುತ್ತಾರೆ. ತಲತಲಾಂತರದಿಂದಲೂ ದಾವಣಗೆರೆ ಜಿಲ್ಲೆ, ನೆರೆ ಹೊರೆಯ ಜಿಲ್ಲೆಗಳ ಸಹಸ್ರಾರು ಸಂಖ್ಯೆಯಲ್ಲಿ ಭಕ್ತರು ಬಂದು, ಸ್ವಾಮಿಯ ಜಾತ್ರೆಯಲ್ಲಿ ಪಾಲ್ಗೊಳ್ಳುತ್ತಾರೆ.

ಚನ್ನಗಿರಿ ತಾಲೂಕಿನ ಚಿಕ್ಕಲಿಕೆರೆ ಗ್ರಾಮದಲ್ಲಿ ಇಂತಹ ಜಾತ್ರೆ ಇತ್ತು. ಅದೇ ರೀತಿ ಶ್ರೀ ವೀರ ಮಹೇಶ್ವರರು ಬಸಾಪುರದ ಹೊರ ವಲಯದ ಈ ಪ್ರದೇಶದಲ್ಲಿ ಜೀವಂತ ಸಮಾಧಿಯಾದರೆಂಬ ಪ್ರತೀತಿ ಇದೆ. ಅಂದಿನಿಂದಲೂ ವೀರ ಮಹೇಶ್ವರರ ಜಾತ್ರೆ ಆಚರಿಸಲ್ಪಡುತ್ತದೆ. ವಿರಕ್ತರಾದ ಶ್ರೀ ಮಹೇಶ್ವರರು ಬಸಾಪುರದ ಅಂಗಡಿ ಕೆಂಚಬಸಪ್ಪ, ಅಂಗಡಿ ಬಸವಲಿಂಗಪ್ಪನವರ ತೋಟದಲ್ಲಿ 2 ಶತಮಾನಗಳ ಹಿಂದೆ ಜೀವಂತ ಸಮಾಧಿಯಾಗಿದ್ದರು. ಆಗಿನಿಂದಲೂ 3 ದಿನ ಜಾತ್ರೋತ್ಸವ ನಡೆಯುತ್ತದೆ.
ಶ್ರೀ ಮಹೇಶ್ವರರು ಜೀವಂತ ಸಮಾಧಿಯಾ ದ ಪುಣ್ಯ ಸ್ಥಳ ಸೇರಿದಂತೆ ಒಟ್ಟು 1 ಎಕರೆ ಭೂಮಿಯನ್ನು ಇಂದಿಗೂ ಶ್ರೀ ಮಹೇಶ್ವರ ಸ್ವಾಮಿಯ ತೋಟವೆಂದೇ ಗುರುತಿಸಲಾಗುತ್ತದೆ. ಶ್ರೀ ಮಹೇಶ್ವರರು ಜೀವಂತ ಸಮಾಧಿಯಾದ ಸ್ಥಳ, ತೋಟವನ್ನು
ಶ್ರೀ ಮಹೇಶ್ವರ ಸ್ವಾಮಿ ಸೇವಾ ಟ್ರಸ್ಟ್ ನೋಡಿಕೊಳ್ಳುತ್ತದೆ. ಅಂಗಡಿ ವಂಶಸ್ಥರು ಈ ಜಾಗವನ್ನು ಟ್ರಸ್ಟ್ ಗೆ ಬಿಟ್ಟು ಕೊಟ್ಟಿದ್ದಾರೆ.
ನೆಲದ ಮೇಲೆ ಪ್ರಸಾದ:
ಜಾತ್ರೆಯ ಮೊದಲ ದಿನ ಅನ್ನ, ಹಾಲು, ಬೋರಾ ಸಕ್ಕರೆ ಪ್ರಸಾದವಿರುತ್ತದೆ. 2ನೇ ದಿನದಂದು ಅನ್ನ, ಮಜ್ಜಿಗೆ ಸಾರು ಪ್ರಸಾದವಿರುತ್ತದೆ. ಬಡವ, ಬಲ್ಲಿದ ಎನ್ನದೇ ಶ್ರೀ ವೀರ ಮಹೇಶ್ವರರ ಸನ್ನಿಧಿಯಲ್ಲಿ ಎಲ್ಲರೂ ಬರೀ ನೆಲದ ಮೇಲೆಯೇ ಕುಳಿತು ಪ್ರಸಾದ ಸೇವಿಸುವುದು ಇಲ್ಲಿ ಸಂಪ್ರದಾಯವೂ ಆಗಿದೆ.
ಕಾಂಗ್ರೆಸ್ ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪ, ಸಚಿವ ಎಸ್. ಎಸ್. ಮಲ್ಲಿಕಾರ್ಜುನ್, ಉದ್ಯಮಿ ಎಸ್. ಎಸ್. ಗಣೇಶ್ ಅವರು ತಪ್ಪದೇ ಈ ಜಾತ್ರೆಗೆ ಬರುತ್ತಾರೆ. ಎಲ್ಲೇ ಇದ್ದರೂ ಇಲ್ಲಿಗೆ ಮಹೇಶ್ವರರ ಸನ್ನಿಧಿಗೆ ಪೂಜೆ ಸಲ್ಲಿಸಿ ಹೋಗುತ್ತಾರೆ. ಈ ವರ್ಷವೂ ಭೇಟಿ ನೀಡಿ ದರ್ಶನ ಪಡೆದರು.












Click it and Unblock the Notifications