ನಾನು ರಾಜೀನಾಮೆ ಕೊಡುತ್ತಿದ್ದೆ; ಸಿಎಂ, ಸಂಘ ಪರಿವಾರದವರು ಬೇಡ ಎಂದಿದ್ದಾರೆ- ರೇಣುಕಾಚಾರ್ಯ
ದಾವಣಗೆರೆ, ಜುಲೈ, 30: ಪ್ರವೀಣ್ ಹತ್ಯೆಯನ್ನು ಖಂಡಿಸಿ ಹೋರಾಟ ಮಾಡುತ್ತಿರುವವರ ಬಗ್ಗೆ ದಾವಣಗೆರೆಯಲ್ಲಿ ಶಾಸಕ ಎಂ.ಪಿ.ರೇಣುಕಾಚಾರ್ಯ ಮಾತನಾಡಿ, ಯಾರೂ ಕೂಡ ಕಾನೂನು ಕೈಗೆತ್ತಿಕೊಳ್ಳಬೇಡಿ. ಶಾಂತಿ, ಸುವ್ಯವಸ್ಥೆ ಕಾಪಾಡೋಣ. ಸಮಾಜಘಾತುಕ ಕೃತ್ಯ ಎಸಗುವವರನ್ನು ಎನ್‌ಕೌಂಟರ್ ಮಾಡಿ ಎಂದು ಮುಖ್ಯಂತ್ರಿಗಳಿಗೆ ಒತ್ತಾಯ ಮಾಡಿದ್ದೇನೆ. ದುಷ್ಟ ಶಕ್ತಿಗಳು, ಸಮಾಜಘಾತುಕ, ಭಯೋತ್ಪಾದಕ ಶಕ್ತಿಗಳ ಹೆಡೆಮುರಿ ಕಟ್ಟುತ್ತೇವೆ ಎಂದು ಗಂಗೆ ಮೇಲೆ ಪ್ರತಿಜ್ಞೆ ಮಾಡುತ್ತೇನೆ ಎಂದು ಹೊನ್ನಾಳಿ ಶಾಸಕ ಎಂ.ಪಿ. ರೇಣುಕಾಚಾರ್ಯ ಹೇಳಿದರು.
'ಕೆಲ ಅಲ್ಪಸಂಖ್ಯಾತ ಗೂಂಡಾಗಳು ಅಟ್ಟಹಾಸ ಮೆರೆಯುತ್ತಿದ್ದಾರೆ'. ಯುಪಿ ಮಾದರಿಯಲ್ಲಿ ತಕ್ಕ ಉತ್ತರ ಕೊಡುವುದಾಗಿ ಮುಖ್ಯಮಂತ್ರಿಗಳು ಹೇಳಿದ್ದಾರೆ. ಆರೋಪಿಗಳ ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳಬೇಕು ಎಂದು ರೇಣುಕಾಚಾರ್ಯ ಆಗ್ರಹಿಸಿದರು.
ಹಿಂದೂ ಯುವಕರು ಬಳೆ ತೊಟ್ಟುಕೊಂಡಿಲ್ಲ. ನನಗೂ ಜೀವಬೆದರಿಕೆ ಬಂದಿತ್ತು. ನಾನು ಹೆದರಿದೆನಾ? ನೀನು ಕೂಡ ಧೈರ್ಯದಿಂದ ಇರಬೇಕು. ನಿಮ್ಮ ಜೊತೆ ನಾವಿದ್ದೇವೆ. ಪ್ರತಿಭಟನೆ ನಡೆಸಿದರೆ ನಮಗೆ ತೊಂದರೆಯಾಗುತ್ತದೆ. ಹಾಗೆಯೇ ಕಾಂಗ್ರೆಸ್‌ಗೆ ಲಾಭ ಆಗುತ್ತದೆ. ಆದ್ದರಿಂದ ನಾವೆಲ್ಲರೂ ಎಚ್ಚೆತ್ತುಕೊಳ್ಳಬೇಕಿದೆ ಎಂದರು.

ತಪಿತಸ್ಥರ ವಿರುದ್ಧ ಕಠಿಣ ಕ್ರಮ:
ಯುವಕರನ್ನು ಹತ್ಯೆಗೈದವರ ವಿರುದ್ದ ಕಠಿಣ ಕ್ರಮ ಕೈಗೊಳ್ಳದಿದ್ದರೆ ರಾಜೀನಾಮೆ ನೀಡುವುದಾಗಿ ಹೇಳಿದ್ದೆ. ಮುಖ್ಯಮಂತ್ರಿಗಳು, ಸಂಘ ಪರಿವಾರದ ನಾಯಕರು ಬೇಡ ಎಂದಿದ್ದಾರೆ. ಅವರೆಲ್ಲರ ಮಾತಿಗೆ ಬೆಲೆ ಕೊಟ್ಟಿದ್ದೇನೆ. ಬೇರೆಯದ್ದೇ ಸಂದೇಶ ಹೋಗಿ ಇದು ಕಾಂಗ್ರೆಸ್‌ಗೆ ಅನುಕೂಲ ಆಗುತ್ತದೆ ಎಂಬ ಕಾರಣಕ್ಕೆ ರಾಜೀನಾಮೆ ನಿರ್ಧಾರವನ್ನು ಕೈಬಿಟ್ಟಿದ್ದೇನೆ ಎಂದು ಹೇಳಿದರು.
'ಬಿಜೆಪಿ ಕಾರ್ಯಕರ್ತ ಪ್ರವೀಣ್ ಹತ್ಯೆಯಾದ ದಿನದಿಂದಲೂ ಸರಿಯಾದ ನಿದ್ದೆ ಮಾಡದೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಕಣ್ಣೀರು ಹಾಕುತ್ತಿದ್ದಾರೆ.' ನಮ್ಮದೇ ಸರ್ಕಾರ ಇದ್ದರೂ ಹಿಂದೂಗಳ ಕೊಲೆಯಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಖಚಿತ ಎಂದಿದ್ದಾರೆ. ಅವರ ಮೇಲೆ ವಿಶ್ವಾಸ ಇಡೋಣ ಎಂದು ಹೇಳಿದರು.

ರೇಣುಕಾಚಾರ್ಯ ಕಿವಿಮಾತು:
ಬಿಜೆಪಿ ಮುಖಂಡರು ಹಾಗೂ ಯುವಕರು ಆತ್ಮಸ್ಥೈರ್ಯ ಕಳೆದುಕೊಳ್ಳಬಾರದು. ಆತ್ಮಸ್ಥೈರ್ಯ ಕಳೆದುಕೊಂಡರೆ ನಾವು ಬಲಿಪಶು ಆಗುತ್ತೇವೆ. ಹರ್ಷ, ಪ್ರವೀಣ್ ಸೇರಿದಂತೆ ಅನೇಕರ ಹತ್ಯೆಯಾಗಿದೆ ಎಂಬ ಕಾರಣಕ್ಕೆ ಯುವಕರು ಭಯಭೀತರಾಗಿದ್ದಾರೆ. ನಾವು ನಿಮ್ಮ ಜೊತೆಗೆ ಇದ್ದೇವೆ. ಕೇಂದ್ರ, ರಾಜ್ಯದಲ್ಲಿ ಬಿಜೆಪಿ ಸರ್ಕಾರ ಇದೆ. ಎದೆಗುಂದದೆ ಧೈರ್ಯವಾಗಿರಿ ಎಂದು ಕಾರ್ಯಕರ್ತರಿಗೆ ಶಾಸಕ ರೇಣುಕಾಚಾರ್ಯ ಕಿವಿಮಾತು ಹೇಳಿದರು.
ಪ್ರವೀಣ್ ಹತ್ಯೆ ಪ್ರಕರಣವನ್ನು ಎನ್‌ಐಎ ತನಿಖೆಗೆ ವಹಿಸುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಹೇಳಿದ್ದಾರೆ. ಹಿಂದೂಗಳ ರಕ್ಷಣೆ ಮಾಡಲು ಆಗಿಲ್ಲ ಎಂಬ ನೋವು ನಮಗೂ ಇದೆ. ಪ್ರವೀಣ್ ನೆಟ್ಟಾರು ಹತ್ಯೆಯನ್ನು ನಾವೆಲ್ಲರೂ ಖಂಡಿಸುತ್ತೇವೆ ಎಂದು ರೇಣುಕಾಚಾರ್ಯ ಹೇಳಿದರು.












Click it and Unblock the Notifications