ದಾವಣಗೆರೆ; ಪೊಲೀಸ್ ಪಥ ಸಂಚಲನ, ಮಸೀದಿಗಳಿಗೆ ಡಿಸಿ ಭೇಟಿ
ದಾವಣಗೆರೆ, ಫೆಬ್ರವರಿ 11; ದಾವಣಗೆರೆ ಜಿಲ್ಲೆಯ ಮಲೆಬೆನ್ನೂರು, ಹೊನ್ನಾಳಿಯಲ್ಲಿ ಶುಕ್ರವಾರ ಹಿಜಾಬ್/ ಕೇಸರಿ ಶಾಲು ವಿವಾದದ ಸಂಬಂಧ ಸಾರ್ವಜನಿಕರಲ್ಲಿ ಆತ್ಮಸ್ಥೈರ್ಯ ತುಂಬಲು ವಿವಿಧ ರಸ್ತೆಗಳಲ್ಲಿ ಪೊಲೀಸರು ಪಥ ಸಂಚಲನ ನಡೆಸಿದರು.
ದಾವಣಗೆರೆ ಜಿಲ್ಲೆಯಾದ್ಯಂತ 144 ಸೆಕ್ಷನ್ ಜಾರಿಯಾಗಿರುವ ಹಿನ್ನಲೆಯಲ್ಲಿ ಶುಕ್ರವಾರ ದಾವಣಗೆರೆ ನಗರದ ಆಜಾದ್ ನಗರ, ಭಾಷಾನಗರ, ವಿನೋಬನಗರ ದಲ್ಲಿರುವ ಮಸೀದಿಗಳಿಗೆ ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ. ಬಿ. ರಿಷ್ಯಂತ್ ಭೇಟಿ ನೀಡಿದರು.
"ಅನಗತ್ಯವಾಗಿ ಶಾಂತಿ ಸುವ್ಯವಸ್ಥೆ ಕದಡುವುದು ಅಥವಾ ಗದ್ದಲ ಸೃಷ್ಟಿಸುವ ಪ್ರಯತ್ನ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಪ್ರಚೋದನಾಕಾರಿ ಸಂದೇಶ ಹಾಕುವುದನ್ನು ಯಾರು ಮಾಡಬಾರದು" ಎಂದು ದಾವಣಗೆರೆ ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಕರೆ ನೀಡಿದರು.
"ಜಿಲ್ಲೆಯಲ್ಲಿ ಇದುವರೆಗೂ ಯಾವುದೇ ಗಲಾಟೆಗಳಾಗದೆ ಎಲ್ಲರೂ ಸಹೋದರರಂತೆ ಬಾಳುತ್ತಿದ್ದೇವೆ. ಹಾಗಾಗಿ ಜನಸಂದಣಿ ಇರುವ ಪ್ರದೇಶಗಳಿಗೆ ಹಾಗೂ ಮಸೀದಿಗಳಿಗೆ ಭೇಟಿ ನೀಡಿ ಜನರೊಂದಿಗೆ ಮಾತನಾಡಿ ಅವರಿಗೆ ಆತ್ಮವಿಶ್ವಾಸ ತುಂಬುವ ಕಾರ್ಯ ಮಾಡುತ್ತಿದ್ದೇವೆ" ಎಂದು ಜಿಲ್ಲಾಧಿಕಾರಿಗಳು ಹೇಳಿದರು.

ಕಾನೂನು ಕ್ರಮದ ಎಚ್ಚರಿಕೆ
"ನೀಷೆಧಾಜ್ಞೆ ಜಾರಿ ಇರುವುದರಿಂದ ಸಾಮೂಹಿಕವಾಗಿ ನಮಾಜ್ ಮಾಡದೆ 144 ಸೆಕ್ಷನ್ ತೆರವಾಗುವವರೆಗೂ ತಮ್ಮ ಮನೆಗಳಲ್ಲಿ ಪ್ರಾರ್ಥನೆ ಮಾಡುವಂತೆ ಅರಿವು ಮೂಡಿಸಲಾಗುತ್ತಿದ್ದು ಯಾವುದೇ ಸಂದರ್ಭದಲ್ಲಿಯೂ ಜನರು ಕಾನೂನು ಕೈಗೆತ್ತಿಕೊಳ್ಳುವುದಕ್ಕೆ ಮುಂದಾಗಬಾರದು. ಕೆಲವೆಡೆ ಅನವಶ್ಯಕವಾಗಿ ಸಣ್ಣ ಪುಟ್ಟ ಗಲಾಟೆಗಳಾಗಿವೆ, ಅವುಗಳನ್ನು ಜಿಲ್ಲಾ ಪೊಲೀಸ್ ಇಲಾಖೆ ಯಶಸ್ವಿಯಾಗಿ ನಿಭಾಯಿಸಿದೆ ಮತ್ತು ಮುಂದೆಯೂ ಕೂಡ ಈ ರೀತಿಯ ಗಲಾಟೆಗಳಾಗದಂತೆ ನೋಡಿಕೊಳ್ಳಲಾಗುವುದು. ಸುಳ್ಳು ಸಂದೇಶ ಹಾಗೂ ವದಂತಿಗಳಿಗೆ ಯಾರು ಕಿವಿಗೂಡಬಾರದು, ಪ್ರಚೋದನಾಕಾರಿ ಹೇಳಿಕೆಗಳು, ಸಂದೇಶ ನೀಡುವವರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಲಾಗುವುದು" ಎಂದು ಜಿಲ್ಲಾಧಿಕಾರಿಗಳು ಎಚ್ಚರಿಕೆ ನೀಡಿದರು.

ಸಾಮಾಜಿಕ ತಾಲತಾಣಗಳ ಪೋಸ್ಟ್
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ. ಬಿ. ರಿಷ್ಯಂತ್ ಮಾತನಾಡಿ, "ಹಿಜಾಬ್ ಮತ್ತು ಕೇಸರಿಶಾಲಿನ ಕುರಿತ ಚರ್ಚೆಗೆ ಸಂಬಂಧಿಸಿದಂತೆ ನ್ಯಾಯಾಲಯ ನೀಡುವ ಆದೇಶ, ಸೂಚನೆಗಳನ್ನು ಪಾಲಿಸುವುದು ನಮ್ಮ ಕರ್ತವ್ಯ. ಸಾಮಾಜಿಕ ಜಾಲತಾಣಗಳಾದ ಫೇಸ್‍ಬುಕ್, ವಾಟ್ಸಪ್, ಇನ್ಸ್ಟಾಗ್ರಾಮ್‍ಗಳಲ್ಲಿ ಪ್ರಚೋದನಾಕಾರಿ ಹೇಳಿಕೆಗಳನ್ನು ಹಾಗೂ ಪೊಸ್ಟರ್ ಹಂಚಿಕೊಂಡಲ್ಲಿ ಮತ್ತು ಗುಂಪುಗಾರಿಗೆ, ಗಲಾಟೆ ಮಾಡುವವರ ವಿರುದ್ಧ ಪ್ರಕರಣ ದಾಖಲಿಸಿ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು" ಎಂದರು.

ಎಲ್ಲರೂ ಶಾಂತಿಯುತವಾಗಿ ಸಹಕಾರ ನೀಡಬೇಕು
"ಈಗಾಗಲೇ ಕೆಲವರ ಮೇಲೆ ಪ್ರಕರಣ ದಾಖಲಿಸಿ ಬಂಧಿಸಲಾಗಿದೆ. ಗುಂಪುಗಾರಿಕೆ, ಪ್ರಚೋದನಾಕಾರಿ ಹೇಳಿಕೆ, ಪೋಸ್ಟರ್‍ಗಳ ಹಂಚಿಕೆ ಕುರಿತಂತೆ ಸಾರ್ವಜನಿಕರಿಗೆ ಮಾಹಿತಿ ದೊರೆತಲ್ಲಿ, ಕಾನೂನು ಕೈಗೆತ್ತಿಕೊಳ್ಳದೆ ಹತ್ತಿರದ ಪೊಲೀಸ್ ಠಾಣೆಗೆ ತಿಳಿಸಬೇಕು. ಜಿಲ್ಲೆಗೆ ರಕ್ಷಣಾ ಪಡೆಗಳು ಕೂಡ ಆಗಮಿಸಿದ್ದು ಇದುವರೆಗೂ ಬಳಕೆ ಮಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿಲ್ಲ, ಸಾರ್ವಜನಿಕರು ಹೀಗೆಯೇ ಶಾಂತಿಯುತವಾಗಿ ಸಹಕರಿಸಬೇಕು" ಎಂದು ಸಿ.ಬಿ. ರಿಷ್ಯಂತ್ ಹೇಳಿದರು.

ಪೊಲೀಸರ ಪಥ ಸಂಚಲನ
ಹರಿಹರದ ಜಾಮಿಯಾ ಮಸೀದಿ ಹಾಗೂ ಹೆಚ್.ಎಸ್. ಬಡಾವಣೆಯ ಮಸ್ಜಿದ್ ಇ ಅಜಾಮ್ ಮಸೀದಿಗಳಿಗೆ ಮತ್ತು ಮಲೆಬೇನ್ನೂರಿಗೆ ಜಿಲ್ಲಾಧಿಕಾರಿಗಳು, ಪೊಲೀಸ್ ಅಧಿಕಾರಿಗಳನ್ನೊಳಗೊಂಡ ತಂಡ ಭೇಟಿ ನೀಡಿ ಸಾಮೂಹಿಕ ಪ್ರಾರ್ಥನೆ ಕೈಗೊಳ್ಳದಂತೆ ಅರಿವು ಮೂಡಿಸಿತು.
ಮಂಗಳವಾರ ಹರಿಹರದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಬಳಿಕ ಹಿಜಾಬ್, ಕೇಸರಿ ಶಾಲು ವಿವಾದಕ್ಕೆ ಸಂಬಂಧಿಸಿದಂತೆ ಗಲಭೆ ನಡೆದಿತ್ತು.

ಸೆಕ್ಷನ್ 144 ಅನ್ವಯ ನಿಷೇಧಾಜ್ಞೆ ಜಾರಿ
ಹಿಜಾಬ್ ಮತ್ತು ಕೇಸರಿ ಶಾಲು ವಿವಾದ ಹಿನ್ನೆಲೆಯಲ್ಲಿ ಶಾಂತಿ ಪಾಲನೆ ಹಾಗೂ ಕಾನೂನು ಸುವ್ಯವಸ್ಥೆ ಕಾಪಾಡುವ ಉದ್ದೇಶದಿಂದ ದಾವಣಗೆರೆ ಮಹಾನಗರಪಾಲಿಕೆ ಹಾಗೂ ಹರಿಹರ ತಾಲ್ಲೂಕಿನಾದ್ಯಂತ ನಿಷೇಧಾಜ್ಞೆಯನ್ನು ಫೆಬ್ರವರಿ 11ರ ಮಧ್ಯರಾತ್ರಿ 12 ಗಂಟೆಯವರೆಗೆ ವಿಸ್ತರಣೆ ಮಾಡಲಾಗಿದೆ. ರಾಜ್ಯದಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆಯು ಶಾಲಾ ಕಾಲೇಜುಗಳಲ್ಲಿ ವಸ್ತ್ರ ಸಂಹಿತೆಯನ್ನು ಕಡ್ಡಾಯಗೊಳಿಸಿ ಆದೇಶ ಹೊರಡಿಸಿದೆ. ಆದರೆ ಕೆಲವು ವಿದ್ಯಾರ್ಥಿಗಳು, ಸಂಘಟನೆಗಳು ಪ್ರತಿಭಟನೆ ನಡೆಸುತ್ತಿರುವುದು ಕಂಡುಬಂದಿದ್ದು, ದಾವಣಗೆರೆ ನಗರದಲ್ಲಿ ಪರ ಮತ್ತು ವಿರೋಧದ ಪ್ರತಿಭಟನೆಗಳು ಜರುಗಿವೆ. ಈ ಕುರಿತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳೊಂದಿಗೆ ಚರ್ಚಿಸಿದ್ದು, ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.












Click it and Unblock the Notifications