ವಿಡಿಯೋ; ಹರಿಹರದಲ್ಲಿ ತಾರಕ್ಕೇರಿದ ಹಿಜಾಬ್ ವಿವಾದ
ದಾವಣಗೆರೆ, ಫೆಬ್ರವರಿ 08; ದಾವಣಗೆರೆ ಜಿಲ್ಲೆಯಲ್ಲಿ ಹಿಜಾಬ್ ಹಾಗೂ ಕೇಸರಿ ವಿವಾದ ವಿಚಾರ ತಾರಕಕ್ಕೇರಿದೆ. ಹರಿಹರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಸಂಪೂರ್ಣವಾಗಿ ಉದ್ವಿಗ್ನಗೊಂಡಿತ್ತು. ಕೇಸರಿ ಶಾಲು ಧರಿಸಿ ವಿದ್ಯಾರ್ಥಿಗಳು ಬಂದಾಗ ಗುಂಪೊಂದು ಆಕ್ಷೇಪ ವ್ಯಕ್ತಪಡಿಸಿದೆ. ಹಿಜಾಬ್ ಧರಿಸಿ ಬಂದಿದ್ದಕ್ಕೆ ಮತ್ತೊಂದು ಗುಂಪು ವಿರೋಧ ವ್ಯಕ್ತಪಡಿಸಿದೆ.
ಈ ವೇಳೆ ಪರಿಸ್ಥಿತಿ ತಾರಕಕ್ಕೇರುವ ಹಂತ ತಲುಪಿದ್ದು, ಪೊಲೀಸರು ಪರಿಸ್ಥಿತಿ ನಿಯಂತ್ರಿಸಲು ಲಾಠಿ ಬೀಸಿದರು. ಅಶ್ರುವಾಯು ಪ್ರಯೋಗ ಮಾಡಿದರು. ಇನ್ನು ಕೆಲವು ಕಿಡಿಗೇಡಿಗಳು ಪೊಲೀಸರ ಮೇಲೆಯೇ ಕಲ್ಲು ತೂರಾಟ ನಡೆಸಿದ ಘಟನೆಯೂ ನಡೆಯಿತು.
ಘಟನೆಯಲ್ಲಿ ಬೈಕ್, ಕಾರು ಸೇರಿದಂತೆ ಹಲವು ವಾಹನಗಳು ಜಖಂಗೊಂಡಿವೆ. ಮಾತ್ರವಲ್ಲ ಪೊಲೀಸರು ಅಶ್ರುವಾಯು ಸಿಡಿಸಿದ್ದು, ಪರಿಸ್ಥಿತಿ ತಹಬದಿಗೆ ತರಲು ಹರಸಾಹಸಪಟ್ಟರು. ಪರಿಸ್ಥಿತಿ ಕೈ ಮೀರಿ ಹೋಗುತ್ತಿರುವುದನ್ನು ಅರಿತ ಹರಿಹರ ಪೊಲೀಸರು ಪುಂಡರಿಗೆ ಲಾಠಿ ರುಚಿ ತೋರಿಸಿದರು.
ಹರಿಹರ ಪಟ್ಟಣದಲ್ಲಿರುವ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿಗೆ ಬುರ್ಖಾ ಹಾಗೂ ಹಿಜಾಬ್ ಧರಿಸಿ ವಿದ್ಯಾರ್ಥಿನಿಯರು ಬಂದಿದ್ದರು. ಇದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ ವಿದ್ಯಾರ್ಥಿಗಳ ಗುಂಪೊಂದು ಕೇಸರಿ ಶಾಲು ಧರಿಸಿ ತರಗತಿ ಪ್ರವೇಶಿಸಿತು. ಈ ವೇಳೆ ಮಾತಿನ ಚಕಮಕಿಯೂ ನಡೆದಿದೆ.

ಕಾಲೇಜಿನಲ್ಲಿ ಹಿಜಾಬ್ ವಿವಾದ
ಇನ್ನು ಒಂದು ಸಮುದಾಯದ ಯುವಕರು, ಪೋಷಕರು ಕಾಲೇಜಿಗೆ ಆಗಮಿಸಿದ್ದಾರೆ. ಬುರ್ಖಾ ಹಾಗೂ ಹಿಜಾಬ್ ಧರಿಸಿ ಬಂದರೆ ತಪ್ಪೇನು? ಎಂದು ಪ್ರಶ್ನಿಸಿದ್ದಾರೆ. ಇದಕ್ಕೆ ಪ್ರತಿಯಾಗಿ ಕೇಸರಿ ಧರಿಸಿ ಬಂದರೆ ತಪ್ಪೇನು? ಎಂದು ಮತ್ತೊಂದು ಗುಂಪು ಎದಿರೇಟು ನೀಡಿದೆ. ಈ ವೇಳೆ ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣ ಆಗಿತ್ತು. ಪೊಲೀಸರು ಎರಡೂ ಗುಂಪುಗಳನ್ನು ಸಮಾಧಾನಪಡಿಸಲು ಪ್ರಯತ್ನಿಸಿದರು. ಆದರೆ ಕೇಳುವ ಪರಿಸ್ಥಿತಿಯಲ್ಲಿ ವಿದ್ಯಾರ್ಥಿಗಳು ಇರಲಿಲ್ಲ. ಹಿಜಾಬ್ ಪರ ಹಾಗೂ ವಿರೋಧ ಘೋಷಣೆಗಳು ಹೆಚ್ಚಾಗತೊಡಗಿದವು. ಪೊಲೀಸರು ಎಷ್ಟೇ ಮನವಿ ಮಾಡಿದರೂ ಕೇಳಲೇ ಇಲ್ಲ.

ಲಾಠಿ ಚಾರ್ಜ್, ಅಶ್ರುವಾಯು ಪ್ರಯೋಗ
ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸುತ್ತಿರುವುದನ್ನು ಗಮನಿಸಿದ ಪೊಲೀಸರು ಲಾಠಿ ಚಾರ್ಜ್ ಮಾಡಿದ್ದಾರೆ. ಈ ಸಂದರ್ಭದಲ್ಲಿ ವಿದ್ಯಾರ್ಥಿಗಳು ಓಡಿ ಹೋಗಿದ್ದಾರೆ. ಬಳಿಕ ಪೊಲೀಸರ ಮೇಲೆಯೇ ಕಲ್ಲು ತೂರಾಟವನ್ನು ಕೆಲ ಕಿಡಿಗೇಡಿಗಳು ನಡೆಸಿದರು. ಆಗ ಪೊಲೀಸರು ಅಶ್ರುವಾಯು ಸಿಡಿಸಿದರು. ಈ ಸಂದರ್ಭದಲ್ಲಿ ಕಾಲೇಜಿನ ಬಳಿ ನಿಲ್ಲಿಸಿದ್ದ ವಾಹನಗಳು ಜಖಂಗೊಂಡವು.

ಹರಿಹರದ ಶಾಸಕರ ಭೇಟಿ
ಕೆಲವರು ರಸ್ತೆಗಳಲ್ಲಿ ನಿಂತುಕೊಂಡು ಕಲ್ಲು ತೂರುತ್ತಿದ್ದರಿಂದಾಗಿ ಸ್ಥಳದಲ್ಲಿ ಮತ್ತಷ್ಟು ಉದ್ವಿಗ್ನ ಪರಿಸ್ಥಿತಿ ನಿರ್ಮಾಣ ಆಗಿತ್ತು. ಇದಕ್ಕೂ ಮುನ್ನ ಸ್ಥಳಕ್ಕೆ ಹರಿಹರ ಶಾಸಕ ಎಸ್. ರಾಮಪ್ಪ ಭೇಟಿ ನೀಡಿ ಪರಿಸ್ಥಿತಿ ಪರಿಶೀಲನೆ ನಡೆಸಿದರು. ಎರಡು ಗುಂಪುಗಳ ಜೊತೆ ಮಾತುಕತೆ ನಡೆಸಿದರೂ ಮಾತು ಕೇಳಲೇ ಇಲ್ಲ. ಸಮವಸ್ತ್ರ ಧರಿಸಿ ತರಗತಿಗಳಿಗೆ ಹಾಜರಾಗಿ. ನಿಮ್ಮ ಭವಿಷ್ಯ ಹಾಳು ಮಾಡಿಕೊಳ್ಳಬೇಡಿ. ಕೇಸರಿ ಶಾಲು ಧರಿಸಿ ಬರುವುದು, ಹಿಜಾಬ್ ಧರಿಸುವುದಕ್ಕೆ ವಿರೋಧ ವ್ಯಕ್ತಪಡಿಸುವುದು ಸೇರಿದಂತೆ ರಾಜ್ಯ ಸರ್ಕಾರ ಹಾಗೂ ಕೋರ್ಟ್ ನಿರ್ಧಾರ ಮಾಡುತ್ತದೆ. ಓದಿನ ಬಗ್ಗೆ ಗಮನ ಕೊಡಿ. ಪ್ರತಿಭಟನೆ ಕೈಬಿಟ್ಟು ತರಗತಿಗಳಿಗೆ ಹಾಜರಾಗಿ ಎಂದು ಸಲಹೆ ನೀಡಿದರೂ ವಿದ್ಯಾರ್ಥಿಗಳು ಮಾತ್ರ ಕೇಳಲಿಲ್ಲ.

ದಾವಣಗೆರೆಯಲ್ಲಿಯೂ ಆಕ್ರೋಶ
ದಾವಣಗೆರೆ ನಗರದ ಶಾಮನೂರು ರಸ್ತೆ ಬಳಿ ಇರುವ ಬಿ. ಎಸ್. ಚನ್ನಬಸಪ್ಪ ಕಾಲೇಜಿನಲ್ಲಿ ಕೇಸರಿ ಶಾಲು ಧರಿಸಿ ಕಾಲೇಜಿಗೆ ವಿದ್ಯಾರ್ಥಿಗಳು ಬಂದಿದ್ದಾರೆ. ಕೇಸರಿ ಶಾಲುಗಳನ್ನು ಆಚೆ ಇಟ್ಟು ತರಗತಿಗೆ ಹಾಜರಾಗುವಂತೆ ಉಪನ್ಯಾಸಕರುಮನವೊಲಿಸಿದರೂ ಕೇಳಲಿಲ್ಲ. ಅವರು ಹಿಜಾಬ್ ತೆಗೆದರೆ ಮಾತ್ರ ಕೇಸರಿ ಶಲ್ಯ ತೆಗೆಯುವುದಾಗಿ ವಿದ್ಯಾರ್ಥಿಗಳ ಪಟ್ಟು ಹಿಡಿದಿದ್ದರು. ಕೋರ್ಟ್ ತೀರ್ಪು ಬರುವರೆಗೂ ಸಮವಸ್ತ್ರದಲ್ಲೇ ಬನ್ನಿ ಎಂದು ಉಪನ್ಯಾಸಕರು ಮನವಿ ಮಾಡಿದರೂ ಪ್ರಯೋಜನವಾಗಲಿಲ್ಲ. ಕೋರ್ಟ್ ತೀರ್ಪು ಬರೋವರೆಗೂ ಹಿಜಾಬ್ ತೆಗೆಯಬೇಕು ಎಂದು ಒತ್ತಾಯಿಸಿದರು. ಸ್ಥಳಕ್ಕೆ ವಿದ್ಯಾನಗರ ಪೊಲೀಸರು ಆಗಮಿಸಿದ್ದು, ವಿದ್ಯಾರ್ಥಿಗಳ ಮನವೊಲಿಸಲು ಪ್ರಯತ್ನಿಸಿದರು.

ಜಿಲ್ಲೆಯಲ್ಲಿ ಕಾಲೇಜುಗಳಿಗೆ ರಜೆ
ಹಿಜಾಬ್ ಹಾಗೂ ಕೇಸರಿ ಶಾಲು ನಡುವಿನ ಸಂಘರ್ಷದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಮೂರು ದಿನಗಳ ಕಾಲ ಹೈಸ್ಕೂಲ್ ಮತ್ತು ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದೆ. ದಾವಣಗೆರೆ ಜಿಲ್ಲೆಯಲ್ಲಿಯೂ ರಜೆ ಘೋಷಣೆ ಮಾಡಲಾಗಿದೆ.
ಹರಿಹರ ಪಟ್ಟಣದಲ್ಲಿ ನಡೆದ ಗಲಾಟೆ ಬಗ್ಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಿಷ್ಯಂತ್ ಪ್ರತಿಕ್ರಿಯೆ ನೀಡಿದ್ದಾರೆ. "ಪರಿಸ್ಥಿತಿ ನಿಯಂತ್ರಣಕ್ಕೆ ಬಂದಿದ್ದು, ಎಲ್ಲಾ ರೀತಿಯ ಕ್ರಮ ತೆಗೆದುಕೊಳ್ಳಲಾಗುತ್ತಿದೆ. ಪ್ರತಿಭಟನಾಕಾರರ ಗುಂಪು ಗಲಾಟೆ ಮುಂದುವರಿಸಿದ್ದರಿಂದ ಅನಿವಾರ್ಯವಾಗಿ ಪೊಲೀಸರು ಲಾಠಿ ಚಾರ್ಜ್ ಹಾಗೂ ಅಶ್ರುವಾಯು ಪ್ರಯೋಗ ಮಾಡಬೇಕಾಯಿತು" ಎಂದರು.












Click it and Unblock the Notifications