• search
 • Live TV
ದಾವಣಗೆರೆ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ದಾವಣಗೆರೆ ಯುವತಿಯ ಶಪಥ: ರಸ್ತೆಯಾಗಿ ಬಸ್ ಬರುವ ತನಕ ಮದುವೆಯಾಗಲ್ಲ!

By ದಾವಣಗೆರೆ ಪ್ರತಿನಿಧಿ
|
Google Oneindia Kannada News

ದಾವಣಗೆರೆ, ಸೆಪ್ಟೆಂಬರ್ 15: ಆ ಗ್ರಾಮದ ಗೋಳಿನ ಕಥೆ ಕೇಳಿದರೆ ಎಂಥವರಿಗಾದರೂ ಅಯ್ಯೋ ಪಾಪ ಎನಿಸದಿರದು. ಸುತ್ತಮುತ್ತಲೂ ಗುಡ್ಡಗಾಡು ಪ್ರದೇಶ, ಓಡಾಡಲು ರಸ್ತೆ ಇಲ್ಲ, ಕಾಡು ಪ್ರಾಣಿಗಳ ಕಾಟ. ರಾತ್ರಿಯಾದರೆ ಮನೆಯಿಂದ ಹೊರ ಬರಲು ಭಯ. ವಿದ್ಯಾರ್ಥಿಗಳು ಶಾಲಾ- ಕಾಲೇಜಿಗೆ ಹೋಗಿ ಬರುವುದೇ ದುಸ್ಸಾಹಸ. ಇನ್ನು ಮಳೆ ಬಂದರೆ ಮುಗೀತು, ಎಲ್ಲಿ ಕೆಸರಿನ ಗದ್ದೆಯಾಗಿರುವ ರಸ್ತೆಯಲ್ಲಿ ಬಿದ್ದು ಆಸ್ಪತ್ರೆ ಸೇರಬೇಕಾಗುತ್ತದೆ ಎಂಬ ಆತಂಕ.

ಈ ಊರಿಗೆ ಬಸ್ ಇಲ್ಲ. ಇನ್ನು ಮದುವೆಯಾಗಲು ಕನ್ಯೆ ನೋಡಲು ಬರುವವರು ರಸ್ತೆ ನೋಡಿಯೇ ಈ ಗ್ರಾಮಕ್ಕೆ ಬಂದವರು ಏನು ಹೇಳದೇ ವಾಪಸ್ ಹೋಗುತ್ತಿದ್ದಾರೆ. ಪ್ರಧಾನಿ, ಮುಖ್ಯಮಂತ್ರಿ, ಜನಪ್ರತಿನಿಧಿಗಳು, ಅಧಿಕಾರಿಗಳಿಗೆ ಹೇಳಿ ಸಾಕಾಗಿ ಹೋಗಿದೆ. ಇಂಥದ್ದೊಂದು ಸಮಸ್ಯೆಗಳನ್ನೇ ಮೈಮೇಲೆ ಹೊದ್ದುಕೊಂಡತಿರುವ ಗ್ರಾಮ ದಾವಣಗೆರೆ ತಾಲೂಕಿನ ಮಾಯಕೊಂಡ ಸಮೀಪದ ಹುಬ್ಳಿ ಪಕ್ಕದಲ್ಲಿರೋ ಎಚ್. ರಾಂಪುರ.

 ಸಿಟಿಯಲ್ಲಿದ್ದುಕೊಂಡು ಓದುತ್ತಿರುವ ವಿದ್ಯಾರ್ಥಿಗಳು

ಸಿಟಿಯಲ್ಲಿದ್ದುಕೊಂಡು ಓದುತ್ತಿರುವ ವಿದ್ಯಾರ್ಥಿಗಳು

ಈ ಊರಲ್ಲಿ ಸುಮಾರು 50 ಕುಟುಂಬಗಳು ವಾಸವಾಗಿವೆ. ಅಲ್ಲದೇ ಗಡಿ ಗ್ರಾಮವಾಗಿರುವ ಕಾರಣ ಕುಗ್ರಾಮ ಎಂಬ ಹಣೆಪಟ್ಟಿ ಹೊತ್ತುಕೊಂಡಿದೆ. ಈ ಊರಲ್ಲಿ ಮೊಬೈಲ್‌ ನೆಟ್‌ವರ್ಕ್ ಸಹ ಸರಿಯಾಗಿ ಸಿಗುವುದಿಲ್ಲ. ಸರಿಯಾದ ರಸ್ತೆ ಇಲ್ಲದೇ, ಸರ್ಕಾರಿ ಬಸ್ ಬಾರದ ಕಾರಣ ಪೋಷಕರು ತಮ್ಮ ಮಕ್ಕಳನ್ನು ಸಿಟಿಯಲ್ಲೋ, ಸಂಬಂಧಿಕರ ಮನೆಯಲ್ಲೋ ಕಳುಹಿಸಿ ಓದಿಸುವಂತಹ ದುಸ್ಥಿತಿ ಇದೆ.

 ಯುವತಿಯರನ್ನು ಮದುವೆಯಾಗಲು ಯುವಕರು ಇಚ್ಚಿಸುತ್ತಿಲ್ಲ

ಯುವತಿಯರನ್ನು ಮದುವೆಯಾಗಲು ಯುವಕರು ಇಚ್ಚಿಸುತ್ತಿಲ್ಲ

ಇನ್ನು ಯುವಕರಿಗೆ ಹೆಣ್ಣು ಕೊಡುತ್ತಿಲ್ಲ. ಯುವತಿಯರನ್ನು ಮದುವೆಯಾಗಲು ಯುವಕರು ಇಚ್ಚಿಸುತ್ತಿಲ್ಲ. ಎಷ್ಟೋ ಸಂಬಂಧಗಳು ಈ ಗ್ರಾಮದ ಸಮಸ್ಯೆಯಿಂದಲೇ ಮುರಿದು ಬೀಳುತ್ತಿವೆ. ವಿದ್ಯಾರ್ಥಿ ಹಾಗೂ ವಿದ್ಯಾರ್ಥಿನಿಯರು ಓದಿಗಿಂತ ಹೆಚ್ಚಾಗಿ ರಸ್ತೆಯ ಸಮಸ್ಯೆಯಿಂದಲೇ ಬಳಲುತ್ತಿದ್ದಾರೆ. ಒಳ್ಳೆಯ ರಸ್ತೆ ನಿರ್ಮಿಸಿಕೊಡಿ ಎಂದು ಸಾಲು ಸಾಲು ಮನವಿ ಸಲ್ಲಿಸಿದ್ದರೂ ಪ್ರಯೋಜನ ಮಾತ್ರ ಶೂನ್ಯ. ಸ್ವಾತಂತ್ರ್ಯ ಬಂದು 75 ವರ್ಷಗಳಾದರೂ ಮೂಲಭೂತ ಸೌಲಭ್ಯಗಳಿಂದ ವಂಚಿತವಾಗಿದೆ ಈ ಗ್ರಾಮ.

 ಮದುವೆಯಾಗಲ್ಲ ಎಂದು ಯುವತಿಯ ಶಪಥ

ಮದುವೆಯಾಗಲ್ಲ ಎಂದು ಯುವತಿಯ ಶಪಥ

ಎಚ್. ರಾಂಪುರ ಗ್ರಾಮದ ಬಿಂದು ಎಂಬ ಯುವತಿಯು ತಮ್ಮೂರಿಗೆ ರಸ್ತೆಯಾಗಿ ಬಸ್ ಬರುವವರೆಗೂ ಮದುವೆ ಆಗಲ್ಲ ಎಂಬುದಾಗಿ ಶಪಥ ಮಾಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಎಲ್ಲರಿಗೂ ಪತ್ರ ಬರೆದಿದ್ದಾಳೆ. ಸಿಎಂ ಬಸವರಾಜ ಬೊಮ್ಮಾಯಿಗೆ ಪತ್ರ ಬರೆದಿದ್ದು, ಇದಕ್ಕೆ ಸಕಾರಾತ್ಮಕವಾಗಿ ಸ್ಪಂದನೆ ಸಿಕ್ಕಿದೆ. "ಇದುವರೆಗೂ ಯಾರೊಬ್ಬರೂ ಕ್ಯಾರೇ ಎಂದಿರಲಿಲ್ಲ. ಈಗ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಪತ್ರ ಬರೆದಿರುವುದು ಖುಷಿ ತಂದಿದೆ. ನಾವು ಗುಡ್ಡಗಾಡು ಪ್ರದೇಶದಲ್ಲಿ ನಡೆದುಕೊಂಡು ಹೋಗಬೇಕು. ಏನಾದರೂ ಆದರೆ ಯಾರೂ ಹೊಣೆ. ನಾವು ಕೇಳುತ್ತಿರುವುದು ಮೂಲಭೂತ ಸೌಕರ್ಯ. ಆದಷ್ಟು ಬೇಗ ರಸ್ತೆ ನಿರ್ಮಾಣ ಆಗಬೇಕು. ಗ್ರಾಮಕ್ಕೆ ಬಸ್ ಬರಬೇಕು. ಆ ನಂತರವೇ ನಾನು ಮದುವೆಯಾಗುತ್ತೇನೆ,'' ಎಂದು ಬಿಂದು ಹೇಳಿದ್ದಾರೆ.

 ಶಾಸಕ ಪ್ರೊ. ಲಿಂಗಣ್ಣ ಹೇಳೋದೇನು?

ಶಾಸಕ ಪ್ರೊ. ಲಿಂಗಣ್ಣ ಹೇಳೋದೇನು?

ಇನ್ನು ಆಸ್ಪತ್ರೆಗೆ ಹೋಗುವವರ ಪಾಡು ದೇವರಿಗೆ ಗೊತ್ತು. ಕಷ್ಟಪಟ್ಟು ಹೋಗುವಂಥ ಸ್ಥಿತಿ ನಿರ್ಮಾಣವಾಗಿದೆ. ರಸ್ತೆ ಹಾಳಾಗಿರುವುದರಿಂದ ಸಕಾಲಕ್ಕೆ ರೋಗಿಗಳನ್ನು ಆಸ್ಪತ್ರೆಗೆ ಸೇರಿಸಲಾಗುತ್ತಿಲ್ಲ. ಆ್ಯಂಬುಲೆನ್ಸ್ ಬರಲು ಕಷ್ಟವಾಗುತ್ತದೆ. ಮಳೆ ಬಂದರೆ ಇನ್ನೂ ಕಷ್ಟ ಹೇಳತೀರದು. ನಮ್ಮ ಗೋಳು ಯಾರಿಗೆ ಹೇಳುವುದು. ಇನ್ನು ಗ್ರಾಮದ ಜನರು ತಮ್ಮೂರಿಗೆ ರಸ್ತೆ ನಿರ್ಮಿಸಿಕೊಡುವಂತೆ ಶಾಸಕ ಪ್ರೊ. ಲಿಂಗಣ್ಣ ಬಳಿ ಮನವಿ ಮಾಡಿಕೊಂಡರೂ ಯಾವುದೇ ಪ್ರಯೋಜನವಾಗಿಲ್ಲ ಅಂತಾರೆ ಗ್ರಾಮಸ್ಥರು.

"ಈಗಾಗಲೇ 2 ಕಿಲೋಮೀಟರ್ ರಸ್ತೆ ಆಗಿದೆ. ಸರ್ಕಾರದಿಂದ ಹಣ ಬಿಡುಗಡೆಯಾದ ಕೂಡಲೇ ಎಚ್. ರಾಂಪುರದ ರಸ್ತೆ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಲಾಗುವುದು. ಅನುದಾನ ಬರಬೇಕಷ್ಟೇ. ಬಂದ ಕೂಡಲೇ ಕಾಮಗಾರಿ ಶುರು ಮಾಡಲಾಗುವುದು,'' ಎಂದು ಶಾಸಕ ಪ್ರೊ. ಲಿಂಗಣ್ಣ ಭರವಸೆ ನೀಡಿದ್ದಾರೆ.
   ಹಸರಂಗನಿಗೆ ವಾಟ್ಸ್ ಆಪ್ ಮೆಸೇಜ್ ಮಾಡಿದ ವಿರಾಟ್ ! | Oneindia Kannada

   English summary
   Without the proper road to H. Rampur near Mayakonda and without bus transport, people are suffering.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X