ದಾವಣಗೆರೆ; ಕುಂದೂರಿನಲ್ಲಿ ಚಂದ್ರಶೇಖರ್ ಅಂತ್ಯಸಂಸ್ಕಾರ
ದಾವಣಗೆರೆ, ನವೆಂಬರ್, 04: ಶಾಸಕ ಎಂ. ಪಿ. ರೇಣುಕಾಚಾರ್ಯರ ಸಹೋದರನ ಪುತ್ರ ಚಂದ್ರಶೇಖರ್ ಅಂತ್ಯಸಂಸ್ಕಾರ ಹೊನ್ನಾಳಿ ತಾಲೂಕಿನ ಕುಂದೂರಿನಲ್ಲಿ ನೆರವೇರಿತು. ವೀರಶೈವ ಲಿಂಗಾಯತ ಜಂಗಮ ಧಾರ್ಮಿಕ ವಿಧಿವಿಧಾನದ ಪ್ರಕಾರ ರೇಣುಕಾಚಾರ್ಯರ ಕುಟುಂಬಕ್ಕೆ ಸಂಬಂಧಿಸಿದ ತೆಂಗಿನತೋಟದಲ್ಲಿ ಅಜ್ಜ ಅಜ್ಜಿಯ ಸಮಾಧಿ ಮಧ್ಯೆ ಚಂದ್ರು ಅಂತ್ಯಕ್ರಿಯೆ ಜರುಗಿತು.
ಈ ವೇಳೆ ರೇಣುಕಾಚಾರ್ಯ, ಕುಟುಂಬಸ್ಥರು ಚಂದ್ರಶೇಖರ್‌ಗೆ ಕಣ್ಣೀರಿನ ವಿದಾಯ ಹೇಳಿದರು. ಹೊನ್ನಾಳಿ ಹಿರೇಕಲ್ಮಠದ ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ ನೇತೃತ್ವದಲ್ಲಿ ಅಂತ್ಯಕ್ರಿಯೆಯ ವಿಧಿವಿಧಾನ ನಡೆಯಿತು.
ಚಂದ್ರಶೇಖರ್ ತಾಯಿಯ ಗೋಳಾಟವಂತೂ ಮುಗಿಲು ಮುಟ್ಟಿತ್ತು. ಹೊನ್ನಾಳಿಯಿಂದ ಕುಂದೂರು ಗ್ರಾಮಕ್ಕೆ ಹೋಗುವವರೆಗೂ ಮೆರವಣಿಗೆಯುದ್ದಕ್ಕೂ ಕಣ್ಣೀರಿನಿಂದಲೇ ಚಂದ್ರಶೇಖರ್‌ಗೆ ಜನರು ವಿದಾಯ ಹೇಳಿದರು.
ತರಗನಹಳ್ಳಿ ಗ್ರಾಮದಲ್ಲಂತೂ ಶಾಲಾ-ಕಾಲೇಜು ವಿದ್ಯಾರ್ಥಿಗಳು ಕಣ್ಣೀರಿಟ್ಟ ದೃಶ್ಯ ಎಲ್ಲರ ಮನಕಲುಕುವಂತಿತ್ತು. ಪಾರ್ಥೀವ ಶರೀರದ ಮರವಣಿಗೆ ಉದ್ದಕ್ಕೂ ಸಾವಿರಾರು ಜನರು ಪಾಲ್ಗೊಂಡಿದ್ದರು. ಅದೇ ರೀತಿಯಲ್ಲಿ ಕುಂದೂರು ಗ್ರಾಮ ತಲುಪುತ್ತಿದ್ದಂತೆ ರೇಣುಕಾಚಾರ್ಯ ಕುಟುಂಬದವರ ಆಕ್ರಂದನ ಮುಗಿಲು ಮುಟ್ಟಿತ್ತು.
ಮಧ್ಯಾಹ್ನ ಕುಂದೂರು ಗ್ರಾಮದಲ್ಲಿರುವ ರೇಣುಕಾಚಾರ್ಯರ ಮನೆಗೆ ಮೃತದೇಹವನ್ನು ತರಲಾಗಿತ್ತು. ಈ ವೇಳೆ ಗ್ರಾಮದ ಹಿರಿಯರು, ಕಿರಿಯರು, ಮಹಿಳೆಯರು, ಯುವಕರು, ಯುವತಿಯರು, ಮಕ್ಕಳೂ ಸಹ ಅಶ್ರುತರ್ಪಣ ಸಲ್ಲಿಸಿದರು. ಜನರು ಚಂದ್ರು ಕಳೆಬರಹ ನೋಡಿ ಬಿಕ್ಕಳಿಸಿ ಅತ್ತರು. ಗ್ರಾಮದ ಬಸವೇಶ್ವರ ಗದ್ದುಗೆ ಬಳಿ ಪಾರ್ಥೀವ ಶರೀರಕ್ಕೆ ವಿಶೇಷ ಪೂಜೆಯನ್ನು ಸಲ್ಲಿಸಲಾಯಿತು. ಅಂತಿಮವಾಗಿ ರೇಣುಕಾಚಾರ್ಯರ ತಂದೆ ಹಾಗೂ ತಾಯಿಯ ಸಮಾಧಿ ಮಧ್ಯೆದಲ್ಲಿ ಸಾವಿರಾರು ಜನರ ಸಮ್ಮುಖದಲ್ಲಿ ಚಂದ್ರಶೇಖರ್‌ಗೆ ಕಣ್ಣೀರಿನ ವಿದಾಯ ಹೇಳಲಾಯಿತು.

ರೇಣುಕಾಚಾರ್ಯರ ಪತ್ನಿ ಸುಮಾ ಹೇಳಿದ್ದೇನು?
ಇನ್ನು ಹೊನ್ನಾಳಿಯಲ್ಲಿ ಮಾತನಾಡಿದ ರೇಣುಕಾಚಾರ್ಯರ ಪತ್ನಿ ಸುಮಾ ಅವರು, ಚಂದ್ರಶೇಖರ್ ಪ್ರಕರಣದಿಂದ ಕುಟುಂಬವೇ ದುಃಖದಲ್ಲಿದೆ. ಚಂದ್ರಶೇಖರ್ ಸೌಮ್ಯ ಸ್ವಭಾವದ ಹುಡುಗನಾಗಿದ್ದ. ಅವನಿಗೆ ಇಂತಹ ಪರಿಸ್ಥಿತಿ ಬರುತ್ತದೆ ಎಂದು ಕನಸು ಮನಸಿನಲ್ಲಿಯೂ ಊಹಿಸಿರಲಿಲ್ಲ. ಉನ್ನತ ತನಿಖೆಯಿಂದ ಸತ್ಯಾಸತ್ಯತೆ ಹೊರಬರಬೇಕು. ಈ ಪ್ರಕರಣವನ್ನು ಸಿಬಿಐಗೆ ವಹಿಸಬೇಕು ಎಂದು ಆಗ್ರಹಿಸಿದರು.

ತುಂಗಾ ನಾಲೆ ಬಳಿ ಪರಿಶೀಲನೆ
ಇನ್ನು ಚಂದ್ರು ಮೃತದೇಹ ಪತ್ತೆಯಾದ ಹೊನ್ನಾಳಿ ತಾಲೂಕಿನ ಹೆಚ್. ಕಡದಕಟ್ಟೆಯ ತುಂಗಾ ಮೇಲ್ದಂಡೆ ನಾಲೆ ಸ್ಥಳಕ್ಕೆ ಎಡಿಜಿಪಿ ಅಲೋಕ್ ಕುಮಾರ್ ಭೇಟಿ ನೀಡಿ ಮಾಹಿತಿ ಕಲೆ ಹಾಕಿದರು. ಪೂರ್ವ ವಲಯ ಐಜಿಪಿ ತ್ಯಾಗರಾಜ್, ಎಸ್‌ಪಿ ರಿಷ್ಯಂತ್ ಸೇರಿದಂತೆ ಪೊಲೀಸರು ಸ್ಥಳದಲ್ಲಿದ್ದರು. ಬಳಿಕ ಮಾಧ್ಯಮದವರ ಜೊತೆ ಮಾತನಾಡಿದ ಅವರು, ಚಂದ್ರು ಸಾವಿನ ಕುರಿತಂತೆ ದೂರು ಕೊಟ್ಟಿದ್ದಾರೆ. ಇದನ್ನು ಆಧರಿಸಿಯೇ ತನಿಖೆ ನಡೆಸಲಾಗುತ್ತಿದೆ. ಎಸ್‌ಪಿ ರಿಷ್ಯಂತ್ ಅವರೇ ಇಲ್ಲಿದ್ದು, ತನಿಖೆ ನಡೆಸುತ್ತಿದ್ದಾರೆ. ಪೊಲೀಸ್ ತಂಡ ಹಾಗೂ ಹುಬ್ಬಳ್ಳಿಯಿಂದ ಬಂದಿರುವ ಎಫ್ಎಸ್ಐಎಲ್ ತಂಡ ಇದ್ದು, ಸಾಕ್ಷ್ಯಗಳನ್ನು ಕಲೆ ಹಾಕಲಾಗುತ್ತಿದೆ. ತನಿಖೆಯಿಂದ ಸತ್ಯಾಸತ್ಯತೆ ಹೊರಗೆಳೆಯುತ್ತೇವೆ ಎಂದು ಹೇಳಿದರು.

ಎಲ್ಲಾ ಆಯಾಮಗಳಲ್ಲಿ ತನಿಖೆ
ಕಾರು ನೂರು ಕಿಲೋ ಮೀಟರ್ ವೇಗವಾಗಿ ಚಲಾಯಿಸಲಾಗಿದೆ. ಸುರಹೊನ್ನೆ ಬಳಿ ರಾತ್ರಿ 11:56ಕ್ಕೆ ಕಾರು ಪಾಸ್ ಆಗಿದೆ. ಭಾನುವಾರ ಬೆಳಗ್ಗೆ 12 ಗಂಟೆ 6 ನಿಮಿಷಕ್ಕೆ ಕಾರು ಪಲ್ಟಿ ಆಗಿದೆ. ನ್ಯಾಮತಿ ಬಳಿ ಸಿಸಿ ಟಿವಿಯಲ್ಲಿ ಕಾರು ಹೋಗಿರುವುದು ಪತ್ತೆಯಾಗಿದೆ. ಈಬಗ್ಗೆ ಕೂಲಂಕುಷವಾಗಿ ತನಿಖೆ ನಡೆಸಲಾಗುತ್ತಿದೆ. ಇನ್ನೆರಡು ದಿನಗಳಲ್ಲಿ ಮರಣೋತ್ತರ ಪರೀಕ್ಷಾ ವರದಿ ಕೈ ಸೇರಲಿದ್ದು, ಎಲ್ಲಾ ಆಯಾಮಗಳಲ್ಲಿ ತನಿಖೆ ಡೆಯುತ್ತಿದೆ ಎಂದು ಅಲೋಕ್ ಕುಮಾರ್ ತಿಳಿಸಿದರು.

ಗಂಭೀರವಾಗಿ ಪ್ರಕರಣದ ಪರಿಗಣನೆ
ರೇಣುಕಾಚಾರ್ಯ ಅವರ ಅಣ್ಣನ ಮಗನ ಸಾವಿನ ಪ್ರಕರಣವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದೆ. ಎಲ್ಲಾ ಆಯಾಮಗಳಲ್ಲಿ ಪ್ರಕರಣದ ತನಿಖೆ ಮಾಡುತ್ತೇವೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ವಿಜಯನಗರದಲ್ಲಿ ಹೇಳಿದರು. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚಂದ್ರಶೇಖರ್‌ನ ಸಂಶಯಾಸ್ಪದ ಸಾವಿನ ಬಗ್ಗೆ ರಾಜ್ಯದ ಪೊಲೀಸರೇ ತನಿಖೆ ನಡೆಸುತ್ತಾರೆ. ಸಿಓಡಿ ಸೇರಿದಂತೆ ಯಾವುದೇ ಬೇರೆ ಹಂತದ ತನಿಖೆಗೆ ಕೊಡುವುದಿಲ್ಲ. ನಮ್ಮ ಪೊಲೀಸರೇ ಸಮರ್ಥರಿದ್ದಾರೆ, ಅವರೇ ತನಿಖೆ ನಡೆಸುತ್ತಾರೆ. ನಾನೊಬ್ಬ ಗೃಹ ಮಂತ್ರಿಯಾಗಿ ಪ್ರಕರಣ ತನಿಖೆ ಹಂತದಲ್ಲಿ ಇರುವುದರಿಂದ ಈ ಬಗ್ಗೆ ಹೆಚ್ಚು ಮಾತನಾಡುವುದಿಲ್ಲ. ಅದು ಮತ್ತೇನೋ ಆಯಾಮ ಪಡೆಯುತ್ತದೆ. ಹಾಗಾಗಿ ತನಿಖೆ ನಡೆದ ಬಳಿಕ ನಾವು ಉತ್ತರ ನೀಡುತ್ತೇವೆ ಎಂದರು.












Click it and Unblock the Notifications