ತೋರಣಗಟ್ಟೆ: ಬೆಂಕಿಯಿಂದ ಧಗಧಗಿಸಿದ ಮನೆ, ವಿದ್ಯಾರ್ಥಿಗಳ ಶಾಲಾ ದಾಖಲಾತಿಗಳು, ಬಂಗಾರ, ಹಣ ಸುಟ್ಟು ಭಸ್ಮ, ನೆರವಾಗ್ತಾರಾ ಎಂಎಲ್‌ಎ?
ಜಗಳೂರು, ಜನವರಿ, 31: ಆಕಸ್ಮಿಕವಾಗಿ ಬೆಂಕಿ ತಗುಲಿದ ಇಡೀ ಮನೆಯೇ ಧಗಧಗಿಸಿದ್ದು, ಈ ವೇಳೆ ಮನೆಯಲ್ಲಿದ್ದ ವಸ್ತುಗಳೆಲ್ಲ ಬೆಂಕಿಗಾಹುತಿಯಾದ ಘಟನೆ ಜಗಳೂರು ತಾಲೂಕಿನ ತೋರಣಗಟ್ಟೆ ಗ್ರಾಮದಲ್ಲಿ ನಡೆದಿದೆ.
ತೋರಣಗಟ್ಟೆ ಗ್ರಾಮದ ಬಡಪ್ಪ ಎಂಬುವವರ ಮನೆಗೆ ನಿನ್ನೆ (ಜನವರಿ 30) ರಾತ್ರಿ ಆಕಸ್ಮಿಕವಾಗಿ ಬೆಂಕಿ ಹೊತ್ತಿಕೊಂಡು ಉರಿದಿದೆ. ಪರಿಣಾಮ ಈ ವೇಳೆ ಮನೆಯಲ್ಲಿದ್ದ ಸಂಬಾರು ಪದಾರ್ಥಗಳು, ವಿದ್ಯಾರ್ಥಿಗಳ ಪುಸ್ತಕಗಳು, ಶಾಲಾ ದಾಖಲಾತಿಗಳು, ಸುಮಾರು 4 ಲಕ್ಷ ಮೌಲ್ಯದ ಹಣ, ಬಂಗಾರ ಸೇರಿದಂತೆ ಇನ್ನಿತರ ವಸ್ತುಗಳು ಬೆಂಕಿಯ ಜ್ವಾಲೆಗೆ ಸುಟ್ಟು ಕರಕಲಾಗಿವೆ. ಸದ್ಯ ಈ ವೇಳೆ ಮನೆಯಲ್ಲಿ ಯಾರೂ ಇಲ್ಲದ ಕಾರಣ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.

ಇನ್ನು ಬಡಪ್ಪ ಎಂಬುವವರಿಗೆ ಒಬ್ಬ ಗಂಡು ಮಗ, 3 ಹೆಣ್ಣುಮಕ್ಕಳು ಇದ್ದು, ಈ ಮಕ್ಕಳ ಶಾಲಾ ದಾಖಲಾತಿಗಳೆಲ್ಲ ಸುಟ್ಟು ಕರಕಲಾಗಿವೆ. ಈ ವಿಷಯವನ್ನು ತಿಳಿಯುತ್ತಿದ್ದಂತೆ ಆ ಮಕ್ಕಳು ಕಣ್ಣೀರಿಟ್ಟಿದ್ದಾರೆ. ಮನೆಗೆ ಬೆಂಕಿ ಬಿದ್ದ ವಿಷಯ ತಿಳಿದ ಈ ಮನೆಯವರು ಕಿರುಚಾಡಿಕೊಂಡಾಗ ಅಕ್ಕಪಕ್ಕದ ಮನೆಯವರು ಬಂದು ಸ್ವಲ್ಪ ಮಟ್ಟಿಗೆ ಬೆಂಕಿಯನ್ನು ನಂದಿಸುವ ಪ್ರಯತ್ನ ಮಾಡಿದ್ದಾರೆ.
ಬಳಿಕ ಸ್ಥಳೀಯರ ಮಾಹಿತಿ ಮೇರೆಗೆ ಸ್ಥಳಕ್ಕೆ ಆಗಮಿಸಿದ ಅಗ್ನಿ ಶಾಮಕ ಸಿಬ್ಬಂದಿ ಇಲ್ಲಿ ನಡೆದ ಘಟನೆಯನ್ನು ವೀಕ್ಷಣೆ ಮಾಡಿ ಇನ್ನೂ ಅರ್ಧಂಬರ್ಧ ಉಳಿದ ಬೆಂಕಿಯನ್ನು ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಳಿಕ ಇಲ್ಲಿ ಏನೆಲ್ಲ ಅನಾಹುತಗಳು ಆಗಿವೆ ಎನ್ನುವ ಮಾಹಿತಿಯನ್ನು ಸಂಗ್ರಹಿಸಿದ್ದಾರೆ.
ಬಡಪ್ಪ ಮತ್ತು ಇವರ ಪತ್ನಿ ಚಂದ್ರಮ್ಮ ಅವರು ಕಷ್ಟಪಟ್ಟು ಪ್ರತಿದಿನವೂ ಕೂಲಿ ಮಾಡಿ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಹಣವನ್ನು ಕೂಡಿಟ್ಟಿದ್ದರು. ಅಲ್ಲದೆ ಹೆಣ್ಣು ಮಕ್ಕಳ ಮದುವೆಗೂ ಸಹ ತಾವು ಕಷ್ಟಪಟ್ಟು ದುಡಿದ ಹಣದಲ್ಲೇ ಬಂಗಾರ ಮಾಡಿಸಿಟ್ಟುಕೊಂಡಿದ್ದರು. ಆದರೆ ಈ ಅಗ್ನಿ ಅವಘಡದಿಂದ ಹಣ ಬಂಗಾರವೂ ಕೂಡ ಸುಟ್ಟು ಕರಕಲಾಗಿದೆ.
ಇದೊಂದು ಬಡ ಕುಟುಂಬವಾಗಿದ್ದು, ಇವರ ಮಕ್ಕಳ ಶಿಕ್ಷಣದ ಭವಿಷ್ಯದ ದೃಷ್ಟಿಯಿಂದ ತಾಲೂಕಿನ ಎಂಎಲ್‌ಎ, ಸಂಬಂಧಪಟ್ಟ ಅಧಿಕಾರಿಕಾರಿಗಳು ಈ ಬಗ್ಗೆ ಗಮನಹರಿಸಿ ಈ ಕುಟುಂಬಕ್ಕಾದ ನಷ್ಟವನ್ನು ಬರಿಸಬೇಕು ಎಂಬುದು ಗ್ರಾಮಸ್ಥರ ಒತ್ತಾಯವಾಗಿದೆ. ಈ ಹಿಂದೆಯೂ ಇಂತಹ ಘಟನೆಗಳು ನಡೆದಿದ್ದರೂ ಕೂಡ ಯಾವುದೇ ಅಧಿಕಾರಿಗಳು ಇತ್ತ ಗಮನಹರಿಸದೇ ನಿರ್ಲಕ್ಷ್ಯತನ ತೋರಿರುವುದರಿಂದ ಯಾವ ಪರಿಹಾರವೂ ಬಂದಿಲ್ಲ ಎಂಬುದು ಗ್ರಾಮಸ್ಥರ ಆಕ್ರೋಶವಾಗಿದೆ.
ಈಗಲಾದರೂ ಇದಕ್ಕೆ ಸಂಬಂಧಿಸಿದ ಅಧಿಕಾರಿಗಳು ಎಚ್ಚೆತ್ತುಕೊಂಡು ಅಗ್ನಿ ಅವಘಡದಿಂದ ಆತಂಕಕ್ಕೆ ಸಿಲುಕಿದ ಕುಟುಂಬದ ನೆರವಿಗೆ ನಿಲ್ಲಬೇಕಿದೆ ಎನ್ನುವುದು ಗ್ರಾಮಸ್ಥರ ಆಗ್ರಹವಾಗಿದೆ.
ಘಟನೆ ಬಗ್ಗೆ ಗೋಳು ತೋಡಿಕೊಂಡ ಕುಟುಬಂಸ್ಥರು, ನಮ್ಮ ಒಂದು ಬಡಕುಟುಂಬವಾಗಿದ್ದು, ಕಟ್ಟಪಡ್ಡು ಕೂಲಿ ಮಾಡಿಯೇ ಜೀವನ ಸಾಗಿಸಬೇಕಿದೆ. ಇದರಿಂದ ಬಂದ ಹಣದಿಂದಲೇ ಮಕ್ಕಳನ್ನು ವಿದ್ಯಾಭ್ಯಾಸವನ್ನು ಮಾಡಿಸುತ್ತಿದ್ದೆವು. ಆದರೆ ನಿನ್ನೆ ನಡೆದ ಘಟನೆಯಿಂದ ಮನೆ ಸಂಪೂರ್ಣವಾಗಿ ಸುಟ್ಟು ಕರಕಲಾಗಿದೆ. ಈ ವೇಳ ಮನೆಯಲ್ಲಿ ನಾವು ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಕೂಡಿಟ್ಟಿದ್ದ ಸುಮಾರು 4 ಲಕ್ಷ ಮೌಲ್ಯದ ಹಣ, ಬಂಗಾರ, ಮಕ್ಕಳ ಶಾಲಾ ದಾಖಲಾತಿಗಳು ಸುಟ್ಟು ಕರಕಲಾಗಿವೆ ಎಂದು ಹೇಳುತ್ತಾ ಕಣ್ಣೀರಿಟ್ಟಿದ್ದಾರೆ.












Click it and Unblock the Notifications