ಮದ್ಯ ತಯಾರಿಕಾ ಕಾರ್ಖಾನೆಯಲ್ಲಿ ಅಗ್ನಿ ಅವಘಡ; ಒಬ್ಬ ಸಾವು
ದಾವಣಗೆರೆ, ಜನವರಿ 8: ದಾವಣಗೆರೆ ಸಮೀಪ ಹರಪನಹಳ್ಳಿ ತಾಲ್ಲೂಕಿನ ದುಗ್ಗಾವತಿಯಲ್ಲಿರುವ ಮಾಜಿ ಶಾಸಕ ಎಸ್.ಎಸ್ ಮಲ್ಲಿಕಾರ್ಜುನ ಅವರ ಒಡೆತನದ ಮದ್ಯ ತಯಾರಿಕಾ ಘಟಕದಲ್ಲಿ ಬೆಂಕಿ ಕಾಣಿಸಿಕೊಂಡ ಪರಿಣಾಮ ಕಾರ್ಮಿಕರೊಬ್ಬರು ಮೃತಪಟ್ಟಿದ್ದು, ಮೂವರ ಸ್ಥಿತಿ ಗಂಭೀರವಾಗಿದೆ.
ದುಗ್ಗಾವತಿ ಸಕ್ಕರೆ ಕಾರ್ಖಾನೆಯಲ್ಲಿ ಮದ್ಯ ತಯಾರಿಕ ಘಟಕವಾದ ಜಾನ್ ಡಿಸ್ಟಿಲರೀಸ್ ಗೆ ಸೇರಿದ ಕೇಂದ್ರದಲ್ಲಿ ಈ ಅವಘಡ ನಡೆದಿದೆ. ಶುಕ್ರವಾರ ಬೆಳಿಗ್ಗೆ ಟ್ಯಾಂಕರ್ ವೈಲ್ಡಿಂಗ್ ಕಾರ್ಯದಲ್ಲಿ ತೊಡಗಿದ್ದಾಗ ಬೆಂಕಿ ಕಾಣಿಸಿಕೊಂಡಿದೆ. ಒಳಗಡೆ ಅನೇಕ ಕಾರ್ಮಿಕರು ಕೆಲಸ ಮಾಡುತ್ತಿದ್ದರು.
ಆಲ್ಕೋಹಾಲ್ ತಯಾರಿಕಾ ಘಟಕವಾಗಿದ್ದರಿಂದ ಬೆಂಕಿ ಬೇಗನೇ ಇಡೀ ಘಟಕ್ಕೆ ವ್ಯಾಪಿಸಿತು. ಭಾರೀ ದೊಡ್ಡ ಪ್ರಮಾಣದಲ್ಲಿ ಬೆಂಕಿ ಉರಿಯುತ್ತಿದೆ. ಮದ್ಯ ತುಂಬಿದ 22ಕ್ಕೂ ಹೆಚ್ಚು ಟ್ಯಾಂಕರ್ ಗಳಿಗೆ ಬೆಂಕಿಗೆ ಬಿದ್ದಿದ್ದು, 25ಕ್ಕೂ ಹೆಚ್ಚು ಫೈರ್ ಇಂಜಿನ್ ಗಳಿಂದ ಬೆಂಕಿ ನಂದಿಸುವ ಕಾರ್ಯ ನಡೆಯುತ್ತಿದೆ.

ದಾವಣಗೆರೆ ದಕ್ಷಿಣ ಕ್ಷೇತ್ರದ ಶಾಸಕ ಶಾಮನೂರು ಶಿವಶಂಕರಪ್ಪ ಅವರ ಪುತ್ರ ಎಸ್.ಎಸ್ ಮಲ್ಲಿಕಾರ್ಜುನ ಒಡೆತನ ಕಬ್ಬಿನ ಕಾರ್ಖಾನೆಯಲ್ಲಿ ಜಾನ್ ಡಿಸ್ಟಿಲರ್ಸ್ ಕಂಪನಿ ಗುತ್ತಿಗೆ ಆಧಾರದ ಮೇಲೆ ಮದ್ಯ ತಯಾರಿಕೆ ನಡೆಸುತ್ತಿತ್ತು. ಆದರೆ, ಬೆಳಗ್ಗೆ ಏಕಾಏಕಿ ಬೆಂಕಿ ಕಾಣಿಸಿಕೊಂಡ ಪರಿಣಾಮ ಮದ್ಯ ತುಂಬಿದ ಟ್ಯಾಂಕರ್ ಗಳಿಗೆ ಬೆಂಕಿ ಬಿದ್ದಿದೆ.
ಕಾರ್ಖಾನೆಯಲ್ಲಿ ಐದು ಜನ ಕಾರ್ಮಿಕರು ಕೆಲಸ ಮಾಡುತ್ತಿದ್ದು, ಮೂರು ಜನ ಗಂಭೀರವಾಗಿ ಗಾಯಗೊಂಡಿದ್ದು, 38 ವರ್ಷದ ರಘು ಎನ್ನುವರು ಆಸ್ಪತ್ರೆಗೆ ಸಾಗಿಸುವ ದಾರಿಯಲ್ಲಿ ಸಾವನ್ನಪ್ಪಿದ್ದಾನೆ. ಅಲ್ಲದೆ ಒಬ್ಬ ಕಾರ್ಮಿಕ ಬೆಂಕಿಯಲ್ಲೇ ಸಿಕ್ಕಿ ಹಾಕಿಕೊಂಡಿದ್ದಾನೆ ಎಂದು ಹೇಳಲಾಗುತ್ತಿದೆ.
ಗಂಭೀರವಾಗಿ ಗಾಯಗೊಂಡವರು ಹರಿಹರ ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಗಾಯಾಳುಗಳ ಸ್ಥಿತಿ ಗಂಭೀರವಾಗಿದೆ. ಇನ್ನು ಬೆಂಕಿ ನಂದಿಸುವ ಕಾರ್ಯ ಅಗ್ನಿಶಾಮಕ ಸಿಬ್ಬಂದಿಗಳಿಂದ ನಡೆದಿದ್ದು, ಕಾರ್ಖಾನೆಯ ಸುತ್ತ ದಟ್ಟವಾದ ಹೊಗೆ ಆವರಿಸಿಕೊಂಡಿದೆ.
ಮದ್ಯ ತಯಾರಿಕಾ ಕಾರ್ಖಾನೆಯಲ್ಲಿ ಭಾರೀ ಸ್ಫೋಟ: ಒಬ್ಬ ಸಾವು, ಮೂವರ ಸ್ಥಿತಿ ಗಂಭೀರ
— oneindiakannada (@OneindiaKannada) January 8, 2021
ದಾವಣಗೆರೆ ಸಮೀಪ ಹರಪನಹಳ್ಳಿ ತಾಲ್ಲೂಕಿನ ದುಗ್ಗಾವತಿಯಲ್ಲಿರುವ ಕಾರ್ಖಾನೆ
ಮಾಜಿ ಶಾಸಕ ಎಸ್.ಎಸ್. ಮಲ್ಲಿಕಾರ್ಜುನ ಅವರ ಒಡೆತನದ ಮದ್ಯ ತಯಾರಿಕಾ ಘಟಕ#Davanagere #Harapanahalli #Fire #KannadaNews pic.twitter.com/aqL5UYaDhN
ಸಾಕಷ್ಟು ಪ್ರಮಾಣದ ಮದ್ಯದ ಬಾಟಲ್‌ಗಳನ್ನು ಗೋದಾಮಿನಲ್ಲಿ ದಾಸ್ತಾನು ಮಾಡಲಾಗಿದ್ದು, ಕೋಟ್ಯಂತರ ರೂಪಾಯಿ ನಷ್ಟ ಸಂಭವಿಸಿದೆ ಎಂದು ಅಂದಾಜು ಮಾಡಲಾಗಿದೆ.
ಸ್ಥಳಕ್ಕೆ ಹರಪನಹಳ್ಳಿ, ಹರಿಹರ ಮತ್ತು ದಾವಣಗೆರೆಯ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಬಂದು ಬೆಂಕಿ ನಂದಿಸುವ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ. ತಹಶೀಲ್ದಾರ್ ಎಲ್.ಎಂ.ನಂದೀಶ್ ಭೇಟಿ ನೀಡಿ ಪರಿಶೀಲಿಸಿದರು. ಹಲವಾಗಲು ಠಾಣಾ ಪೊಲೀಸರು ಸ್ಥಳದಲ್ಲಿದ್ದಾರೆ.












Click it and Unblock the Notifications