ವಸತಿ ಸಚಿವ ಸೋಮಣ್ಣರನ್ನು ತರಾಟೆಗೆ ತೆಗೆದುಕೊಂಡ ರೈತ!
ದಾವಣಗೆರೆ, ಮೇ 31: ದಾವಣಗೆರೆ ಜಿಲ್ಲೆ ಹರಿಹರದ ಶೇರಾಪುರದಲ್ಲಿ ಕೆಎಚ್‌ಬಿ ಲೇಔಟ್ ಕಾಮಗಾರಿಯನ್ನು ಪರಿಶೀಲನೆಗೆ ವಸತಿ ಸಚಿವ ವಿ.ಸೋಮಣ್ಣ ಆಗಮಿಸಿದ್ದ ವೇಳೆ ರೈತರೊಬ್ಬರು ತರಾಟೆಗೆ ತೆಗೆದುಕೊಂಡ ಘಟನೆ ನಡೆದಿದೆ.
ಶೇರಾಪುರದಲ್ಲಿ ಲೇಔಟ್ ಕಾಮಗಾರಿ ಮಾಡಿದ್ದರಿಂದ ನೀರು ಬಸಿದು ತೋಟಕ್ಕೆ ಹಾನಿ ಮಾಡುತ್ತಿದೆ. ಲೇಔಟ್‌ನ ಎತ್ತರ ಹೆಚ್ಚಿಸಿದ ಕಾರಣ ಸುತ್ತಮುತ್ತಲಿನ ತೋಟಗಳಿಗೆ ನೀರು ನುಗ್ಗುತ್ತಿದೆ. ಈ ಬಗ್ಗೆ ಅಧಿಕಾರಿಗಳಿಗೆ ಎಷ್ಟು ಬಾರಿ ಮನವಿ ಮಾಡಿದ್ದರೂ ಸ್ಪಂದಿಸಿಲ್ಲ. ನೀರು ನುಗ್ಗುತ್ತಿರುವುದರಿಂದ ನಮ್ಮ ಜಮೀನುಗಳಿಗೆ ಹಾನಿಯಾಗುತ್ತಿದೆ ಎಂದು ರೈತ ರಾಜಶೇಖರ್ ಎಂಬುವರು ಸಚಿವರಗೆ ಸಾರ್ವಜನಿಕವಾಗಿಯೇ ತರಾಟೆಗೆ ತೆಗೆದುಕೊಂಡಿದ್ದಾರೆ.
ನೀರು ಸರಾಗವಾಗಿ ಹರಿದು ಹೋಗಲು ಕಾಲುವೆಯನ್ನಾದರೂ ನಿರ್ಮಿಸಬೇಕು. ಇಲ್ಲಿನ ಅಧಿಕಾರಿಗಳು ಅದು ಮಾಡಿಲ್ಲ. ಕೂಡಲೇ ಉಂಟಾಗಿರುವ ಸಮಸ್ಯೆ ಬಗೆಹರಿಸಿ ಲೇಔಟ್‌ನಿಂದ ಜಮೀನುಗಳಿಗೆ ತೊಂದರೆಯಾಗದಂತೆ ನೋಡಿಕೊಳ್ಳಿ. ಈ ಸಮಸ್ಯೆ ಪರಿಹರಿಸದಿದರೆ ನಾವೇ ಜೆಸಿಬಿ ಮೂಲಕ ಲೇಔಟ್‌ನ್ನು ತೆರವುಗೊಳಿಸುತ್ತೇವೆ ಎಂದು ರೈತ ರಾಜಶೇಖರ್ ಸಚಿವ ಸೋಮಣ್ಣಗೆ ನೇರವಾಗಿ ಎಚ್ಚರಿಕೆ ನೀಡಿದರು.

ರೈತ ಹುಚ್ಚ ಎಂದ ಸೋಮಣ್ಣ
ಸಾರ್ವಜನಿಕವಾಗಿಯೇ ತರಾಟೆಗೆ ತೆಗೆದುಕೊಂಡ ರೈತನಿಗೆ ಹುಚ್ಚ ಎಂದು ಸಚಿವ ವಿ.ಸೋಮಣ್ಣ ಹೇಳಿದ್ದು, ಅಧಿಕಾರಿಗಳ ಮುಂದೆ ಅಳಲು ತೋಡಿಕೊಂಡ ರೈತನ ಬಗ್ಗೆ ವಿ.ಸೋಮಣ್ಣ ಲಘುವಾದ ಮಾತನಾಡಿದರು. ""ಅವನು ಯಾವನಾದರೂ ಆಗಿರಲಿ ರೀ. ಒಳ್ಳೆ ಹುಚ್ಚ ಆಡಿದಂಗೆ ಆಡ್ತಾನೆ. ಹೀಗೆ ಎಲ್ಲಾರೂ ಉಂಟೇನು. ನೀವ್ಯಾರು ಮಾತನಾಡುವುದಕ್ಕೆ ಹೋಗಬೇಡಿ. ಇವರಿಗೆ ಪುಗ್ಸಟ್ಟೆ ಕೆಲಸ ಆಗಬೇಕು. ಸುಮ್ನೆ ಎಲ್ಲರ ಮುಂದೆ ಚೇಷ್ಠೆ ಮಾಡ್ತಾನೆ'' ಎಂದರು.