ಚುನಾವಣಾ ಆಯೋಗದಿಂದ ಚಿಹ್ನೆ ಪಡೆದ ಮಾಡಾಳ್ ಮಲ್ಲಿಕಾರ್ಜುನ್
ದಾವಣಗೆರೆ, ಏಪ್ರಿಲ್ 24; ಕರ್ನಾಟಕ ವಿಧಾನಸಭೆ ಚುನಾವಣೆಗೆ ನಾಮಪತ್ರ ವಾಪಸ್ ಪಡೆಯಲು ಸೋಮವಾರ ಮಧ್ಯಾಹ್ನ 3 ಗಂಟೆ ಅಂತಿಮ ದಿನವಾಗಿತ್ತು. ಚುನಾವಣಾ ಕಣ ಅಂತಿಮಗೊಂಡಿದ್ದು, ಚುನಾವಣಾ ಆಯೋಗ ಸ್ವತಂತ್ರ ಅಭ್ಯರ್ಥಿಗಳಿಗೆ ಚಿಹ್ನೆ ಹಂಚಿಕೆ ಮಾಡಿದೆ. ಚನ್ನಗಿರಿ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಮಾಡಾಳ್ ಮಲ್ಲಿಕಾರ್ಜುನ್‌ಗೆ ಸಹ ಆಯೋಗ ಚಿಹ್ನೆ ನೀಡಿದೆ.
ಸೋಮವಾರ ಫೇಸ್‌ಬುಕ್ ಪುಟದಲ್ಲಿ ಈ ಕುರಿತು ಮಾಡಾಳ್ ಮಲ್ಲಿಕಾರ್ಜುನ್ ಮಾಹಿತಿ ನೀಡಿದ್ದಾರೆ. 'ಆತ್ಮೀಯ ಸ್ವಾಭಿಮಾನಿ ಮತದಾರ ಬಂಧುಗಳೇ ಮುಂಬರುವ 2023ರ ವಿಧಾನಸಭಾ ಚುನಾವಣೆಯಲ್ಲಿ ಸ್ವಾಭಿಮಾನಿ ಮತದಾರ ಬಂಧುಗಳ ಇಚ್ಛೆಯಂತೆ ಪಕ್ಷೇತರ ಅಭ್ಯರ್ಥಿಯಾಗಿ ನಾನು ಸ್ಪರ್ಧಿಸಿದ್ದು ನನ್ನ ಚಿಹ್ನೆ ತೆಂಗಿನ ತೋಟವಾಗಿದೆ' ಎಂದು ಹೇಳಿದ್ದಾರೆ.

ಮೇ 10ರಂದು ನಡೆಯುವ ಚುನಾವಣೆಗೆ ನಾಮಪತ್ರ ವಾಪಸ್ ಪಡೆಯಲು ಸೋಮವಾರ ಮಧ್ಯಾಹ್ನ 3 ಗಂಟೆಯ ತನಕ ಅವಕಾಶವಿತ್ತು. ಬಳಿಕ ಕಣದಲ್ಲಿ ಉಳಿದ ಅಭ್ಯರ್ಥಿಗಳನ್ನು ಆಯೋಗ ಅಂತಿಮಗೊಳಿಸಿದೆ, ಕಣದಲ್ಲಿ ಪಕ್ಷೇತರ ಅಭ್ಯರ್ಥಿಗಳಿದ್ದರೆ ಅವರಿಗೆ ಚಿಹ್ನೆಗಳನ್ನು ಹಂಚಿಕೆ ಮಾಡಿದೆ.
ಬಿಜೆಪಿ ಟಿಕೆಟ್ ಕೈತಪ್ಪಿತ್ತು; ದಾವಣಗೆರೆ ಜಿಲ್ಲೆಯ ಚನ್ನಗಿರಿ ಕ್ಷೇತ್ರದ ಹಾಲಿ ಶಾಸಕರು ಬಿಜೆಪಿಯ ಮಾಡಾಳ್ ವಿರೂಪಾಕ್ಷಪ್ಪ. ಆದರೆ ಬಿಜೆಪಿ ಈ ಬಾರಿಯ ಚುನಾವಣೆಗೆ ಹಾಲಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಬದಲು ತುಮ್ಕೋಸ್‌ನ ಮಾಜಿ ಅಧ್ಯಕ್ಷ ಎಚ್. ಎಸ್. ಶಿವಕುಮಾರ್‌ಗೆ ಟಿಕೆಟ್ ನೀಡಿದೆ.

ಪುತ್ರನ ಲಂಚ ಪ್ರಕರಣದಲ್ಲಿ ಆರೋಪಿಯಾಗಿ, ಲೋಕಾಯುಕ್ತದಿಂದ ಬಂಧನಕ್ಕೊಳಗಾಗಿದ್ದ ಮಾಡಾಳ್ ವಿರೂಪಾಕ್ಷಪ್ಪಗೆ ನಿರೀಕ್ಷೆಯಂತೆ ಟಿಕೆಟ್ ಕೈತಪ್ಪಿದೆ. ಆದರೆ ಶಾಸಕರು ಪಕ್ಷ ಪುತ್ರನಾದ ಮಾಡಾಳ್ ಮಲ್ಲಿಕಾರ್ಜುನ್‌ಗೆ ಟಿಕೆಟ್ ನೀಡಲಿದೆ ಎಂಬ ನಿರೀಕ್ಷೆಯಲ್ಲಿದ್ದರು. ಟಿಕೆಟ್ ಕೈತಪ್ಪಿದ ಬಳಿಕ ಮಾಡಾಳ್ ಮಲ್ಲಿಕಾರ್ಜುನ್ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಸಿದ್ದಾರೆ. ಬಿಜೆಪಿ ಅವರನ್ನು ಪಕ್ಷದಿಂದ 6 ವರ್ಷಗಳ ಅವಧಿಗೆ ಅಮಾನತು ಮಾಡಿದೆ.
ಚನ್ನಗಿರಿ ಕ್ಷೇತ್ರದಲ್ಲಿ ಈ ಬಾರಿಯ ಚುನಾವಣೆಗೆ ಕಣ ಅಂತಿಮಗೊಂಡಿದೆ. ಬಿಜೆಪಿಯಿಂದ ಎಚ್. ಎಸ್. ಶಿವಕುಮಾರ್, ಕಾಂಗ್ರೆಸ್‌ನಿಂದ ಬಸವರಾಜು ವಿ. ಶಿವಂಗಗಾ ಮತ್ತು ಜೆಡಿಎಸ್‌ನಿಂದ ತೇಜಸ್ವಿ ಪಟೇಲ್ ಅಭ್ಯರ್ಥಿಗಳು. ಪಕ್ಷೇತರ ಅಭ್ಯರ್ಥಿಯಾಗಿ ಮಾಡಾಳ್ ಮಲ್ಲಿಕಾರ್ಜುನ್ ಸ್ಪರ್ಧೆ ಮಾಡಿದ್ದಾರೆ.
ಚನ್ನಗಿರಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಕರ್ನಾಟಕ ಸಾಬೂನು ಮತ್ತು ಮಾರ್ಜಕ ಕಾರ್ಖಾನೆ (ಕೆಎಸ್‌ಡಿಎಲ್) ಅಧ್ಯಕ್ಷರಾಗಿದ್ದರು. ಆದರೆ ಟೆಂಡರ್‌ಗಾಗಿ ಶಾಸಕರ ಪುತ್ರ, ಕೆಎಎಸ್ ಅಧಿಕಾರಿ ಪ್ರಶಾಂತ್ ಮಾಡಾಳ್ 40 ಲಕ್ಷ ರೂ. ಲಂಚ ಪಡೆಯುತ್ತಿದ್ದರು. ಈ ವೇಳೆ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿ ಬಂಧಿಸಿದ್ದರು.
ಕೆಎಸ್‌ಡಿಎಲ್ ಅಧ್ಯಕ್ಷರಾಗಿದ್ದ ಮಾಡಾಳ್ ವಿರೂಪಾಕ್ಷಪ್ಪರ ಬೆಂಗಳೂರಿನ ಶಾಸಕರ ಖಾಸಗಿ ಕಚೇರಿಯಲ್ಲಿಯೇ ಈ ಬಂಧನ ನಡೆದಿತ್ತು. ಈ ಪ್ರಕರಣದಲ್ಲಿ ಮಾಡಾಳ್ ವಿರೂಪಾಕ್ಷಪ್ಪ ಸಹ ಆರೋಪಿಯಾಗಿದ್ದರು. ಅಪ್ಪ, ಮಗ ಇಬ್ಬರನ್ನು ಲೋಕಾಯುಕ್ತರು ಬಂಧಿಸಿದ್ದರು. ಜಾಮೀನು ಪಡೆದು ಇಬ್ಬರು ಈಗ ಬಿಡುಗಡೆಯಾಗಿದ್ದಾರೆ.
ಮಾಡಾಳ್ ವಿರೂಪಾಕ್ಷಪ್ಪ ಆರೋಪಿಯಾದಾಗಲೇ ಅವರಿಗೆ ಈ ಬಾರಿಯ ಚುನಾವಣೆ ಟಿಕೆಟ್ ಸಿಗುವುದಿಲ್ಲ ಎಂಬ ಸುದ್ದಿ ಇತ್ತು. ಆದರೆ ಮಲ್ಲಿಕಾರ್ಜುನ್ ಮಾಡಾಳ್ ತಮಗೆ ಟಿಕೆಟ್ ಸಿಗುವ ನಿರೀಕ್ಷೆಯಲ್ಲಿ ಕ್ಷೇತ್ರದಲ್ಲಿ ಪ್ರಚಾರ ಆರಂಭಿಸಿದ್ದರು. ಆದರೆ ಮಾಡಾಳ್ ಕುಟುಂಬದ ಯಾವ ಸದಸ್ಯರಿಗೂ ಸಹ ಬಿಜೆಪಿ ಟಿಕೆಟ್ ನೀಡಿಲ್ಲ.
ಅಭ್ಯರ್ಥಿ ಬದಲಿಸಿದ ಜೆಡಿಎಸ್; ಚನ್ನಗಿರಿ ಕ್ಷೇತ್ರದಲ್ಲಿ ಜೆಡಿಎಸ್ ಪಕ್ಷ ಅಭ್ಯರ್ಥಿಯನ್ನು ಬದಲಾವಣೆ ಮಾಡಿದೆ. ಮೊದಲು ಕಾಂಗ್ರೆಸ್ ಬಿಟ್ಟು ಪಕ್ಷ ಸೇರಿದ್ದ ಎಂ. ಯೋಗೇಶ್ ಅಭ್ಯರ್ಥಿ ಎಂದು ಘೋಷಣೆ ಮಾಡಲಾಗಿತ್ತು. ಆದರೆ ತೇಜಸ್ವಿ ವಿ. ಪಟೇಲ್ ಕಾಂಗ್ರೆಸ್ ಟಿಕೆಟ್‌ಗಾಗಿ ಅರ್ಜಿ ಸಲ್ಲಿಸಿದ್ದರು.
ಕಾಂಗ್ರೆಸ್ ಟಿಕೆಟ್ ಕೈತಪ್ಪಿದ ಹಿನ್ನಲೆಯಲ್ಲಿ ತೇಜಸ್ವಿ ವಿ. ಪಟೇಲ್ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯಲು ಬಯಸಿದ್ದರು. ಆಗ ಸ್ಥಳೀಯು ಮುಖಂಡರು ಜೆಡಿಎಸ್‌ನಿಂದ ಕಣಕ್ಕಿಳಿಯಲು ಒತ್ತಾಯಿಸಿದ್ದರು. ಮಾಜಿ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ಭೇಟಿಯಾದ ಅವರು ಜೆಡಿಎಸ್ ಸೇರಿದ್ದರು. ಬಳಿಕ ಅವರೇ ತೇಜಸ್ವಿ ವಿ. ಪಟೇಲ್ ಜೆಡಿಎಸ್ ಅಭ್ಯರ್ಥಿಯಾದರು.












Click it and Unblock the Notifications