ದಾವಣಗೆರೆ ಜಿಲ್ಲೆಯ ವಿವಿಧೆಡೆ ಸಂಚಾರ ನಿಯಮಗಳ ಪಾಲನೆ ಕುರಿತು ವಿಭಿನ್ನ ಜಾಗೃತಿ
ದಾವಣಗೆರೆ, ಜನವರಿ, 17: ರಸ್ತೆ ಸುರಕ್ಷಾ ಸಪ್ತಾಹ ಅಂಗವಾಗಿ ಜಿಲ್ಲೆಯ ವಿವಿಧೆಡೆ ವಾಹನ ಸವಾರರಿಗೆ ಜಾಗೃತಿ ಮೂಡಿಸಲು ವಿಭಿನ್ನ ಪ್ರಯತ್ನ ನಡೆಸಲಾಯಿತು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ್ ಅವರ ಸೂಚನೆಯಂತೆ ಪೊಲೀಸ್ ಹೆಚ್ಚುವರಿ ಪೊಲೀಸ್ ಅಧೀಕ್ಷಕರು, ಡಿವೈಎಸ್ಪಿ ಮಾರ್ಗದರ್ಶನದಲ್ಲಿ ರಸ್ತೆ ಸುರಕ್ಷತಾ ಸಪ್ತಾಹ ಅಂಗವಾಗಿ ಜಿಲ್ಲೆಯಾದ್ಯಂತ ವಿಶೇಷ ಕಾರ್ಯಾಚರಣೆ ಕೈಗೊಂಡು ಎಲ್ಲಾ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ಅಪಘಾತಗಳನ್ನು ತಡೆಗಟ್ಟುವ ಸಲುವಾಗಿ ವಾಹನಗಳ ಹಿಂಭಾಗ ಕೆಂಪು ಮತ್ತು ಹಳದಿ ರೇಡಿಯಂ ಸ್ಟಿಕರ್‌ಗಳನ್ನು ಅಂಟಿಸುವ ಕಾರ್ಯಕ್ರಮ ನಡೆಸಲಾಯಿತು. ಈ ಬಗ್ಗೆ ಸಾರ್ವಜನಿಕರು, ವಾಹನ ಚಾಲಕರಿಗೆ ಜಾಗೃತಿ ಮೂಡಿಸಲಾಯಿತು.

ಚನ್ನಗಿರಿ, ದಾವಣಗೆರೆ, ನ್ಯಾಮತಿಯಲ್ಲಿ ಹೆಚ್ಚುವರಿ ಪೊಲೀಸ್ ಅಧೀಕ್ಷಕ ವಿಜಯಕುಮಾರ್ ಕುಮಾರ್ ಎಂ.ಸಂತೋಷ್ ಅವರ ಹಾಗೂ ಚನ್ನಗಿರಿ ಡಿವೈಎಸ್ಪಿ ಪ್ರಶಾಂತ ಮನ್ನೊಳಿ ಅವರ ಉಪಸ್ಥಿತಿಯಲ್ಲಿ ಪೊಲೀಸರಿಂದ ಸಂಚಾರಿ ನಿಯಮಗಳ ಪಾಲನೆ ಜಾಗೃತಿಗಾಗಿ ವಿಭಿನ್ನ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಕಾರ್ಯಕ್ರಮದಲ್ಲಿ ಸಂಚಾರ ನಿಯಮಗಳ ಉಲ್ಲಂಘನೆ ಮಾಡುತ್ತಿರುವಂತಹ ವಾಹನ ಚಾಲಕರಿಗೆ ಕಡ್ಡಾಯವಾಗಿ ಸಂಚಾರ ನಿಯಮಗಳನ್ನು ಪಾಲಿಸಬೇಕು. ಇಲ್ಲದಿದ್ದರೆ ಅಪಘಾತಗಳು ಸಂಭವಿಸುತ್ತವೆ. ಪ್ರಾಣ ಹಾನಿ ಆಗುತ್ತದೆ. ನಿಮ್ಮ ನಂಬಿಕೊಂಡು ಇರುವಂತಹ ಕುಟುಂಬದ ಸದಸ್ಯರಿಗೆ ದಿಕ್ಕಿಲ್ಲದಂತಾಗುತ್ತದೆ. ಹುಷಾರಾಗಿರಿ, ಎಚ್ಚರಿಕಾ ಕ್ರಮ ಅನುಸರಿಸಿ, ಸಂಚಾರ ನಿಯಮ ಪಾಲಿಸಿ ಎಂದು ಜಾಗೃತಿ ಮೂಡಿಸಲಾಯಿತು.
ಹೆಲ್ಮೆಟ್ ರಹಿತ ವಾಹನ ಚಾಲನೆ, ತ್ರಿಬಲ್ ರೈಡಿಂಗ್ ಚಾಲನೆ ಮಾಡುವಂತಹ ವಾಹನ ಚಾಲಕರಿಗೆ ಯಮ ಪಾಶ ಹಾಕಿ ಎಚ್ಚರಿಸುತ್ತಾ ಸಂಚಾರ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ತಿಳಿಸಲಾಯಿತು. ಸಂಚಾರ ನಿಯಮಗಳು ಇರುವುದು ನಿಮ್ಮ ಜೀವ ರಕ್ಷಣೆಗಾಗಿ. ಆದ್ದರಿಂದ ಎಲ್ಲಾ ವಾಹನ ಸವಾರರು ರಸ್ತೆ ಸುರಕ್ಷತಾ ಸಂಚಾರ ನಿಯಮಗಳನ್ನು ಪಾಲಿಸಿ ಎಂದು ಪೊಲೀಸರು ಮನವಿ ಮಾಡಿದರು.
ನಂತರ ಅಪಘಾತಗಳನ್ನು ತಡೆಗಟ್ಟುವ ಸಲುವಾಗಿ ವಾಹನಗಳ ಹಿಂಭಾಗ ಕೆಂಪು ಮತ್ತು ಹಳದಿ ರೇಡಿಯಂ ಸ್ಟಿಕರ್‌ಗಳನ್ನು ಅಂಟಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಈ ಬಗ್ಗೆ ಸಾರ್ವಜನಿಕರಿಗೆ ವಾಹನ ಚಾಲಕರಿಗೆ ಜಾಗೃತಿ ಮೂಡಿಸಿದರು. ನ್ಯಾಮತಿ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕ ರವಿ, ಪಿಎಸ್ಐ ಹಾಗೂ ಸಿಬ್ಬಂದಿ ಈ ವೇಳೆ ಹಾಜರಿದ್ದರು.
ಹಾಗೆಯೇ ರಸ್ತೆ ಸುರಕ್ಷಾ ಸಪ್ತಾಹ ಅಂಗವಾಗಿ ಚನ್ನಗಿರಿ ನಗರದಲ್ಲಿ ಪೊಲೀಸರಿಂದ ಸಂಚಾರಿ ನಿಯಮಗಳ ಪಾಲನೆ ಜಾಗೃತಿಗಾಗಿ ವಿಭಿನ್ನವಾಗಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮದಲ್ಲಿ ಸಂಚಾರ ನಿಯಮಗಳ ಉಲ್ಲಂಘನೆ ಮಾಡುತ್ತಿರುವಂತಹ ವಾಹನ ಚಾಲಕರಿಗೆ ಕಡ್ಡಾಯವಾಗಿ ಸಂಚಾರ ನಿಯಮಗಳನ್ನು ಪಾಲಿಸುವಂತೆ ಕಟ್ಟುನಿಟ್ಟಿನ ಸೂಚನೆ ನೀಡಲಾಯಿತು.
ಚನ್ನಗಿರಿ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕ ನಿರಂಜನ್, ಪಿಎಸ್ಐ ಗುರುಶಾಂತಯ್ಯ, ರೂಪ್ಲಿ ಬಾಯಿ, ಯಮ ವೇಷಧಾರಿ ಹೊಮ್ ಗಾರ್ಡ್ ಸಿಬ್ಬಂದಿ ಸ್ವಾಮಿ ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.
ದಾವಣಗೆರೆ ದಕ್ಷಿಣ ಸಂಚಾರ ಪೊಲೀಸರಿಂದ ಜಾಗೃತಿ: ದಕ್ಷಿಣ ಸಂಚಾರ ಪೊಲೀಸ್ ಠಾಣೆ ವತಿಯಿಂದ ರಸ್ತೆ ಸುರಕ್ಷಾ ಸಪ್ತಾಹ ಅಂಗವಾಗಿ ದಾವಣಗೆರೆ ನಗರದ ಜಯದೇವ ವೃತ್ತದಲ್ಲಿ ಸ್ಕೌಟ್ಸ್ ಅಂಡ್ ಗೈಡ್ಸ್ ಮಕ್ಕಳಿಗೆ ಸಂಚಾರ ನಿಯಮದ ಬಗ್ಗೆ ಜಾಗೃತಿ ಮೂಡಿಸಲಾಯಿತು. ಕಾರ್ಯಕ್ರಮದಲ್ಲಿ ದಕ್ಷಿಣ ಸಂಚಾರ ಪಿಎಸ್ಐ ನಿರ್ಮಲಾ ಹಾಗೂ ಟ್ರಾಫಿಕ್ ಪೊಲೀಸ್ ಸಿಬ್ಬಂದಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.












Click it and Unblock the Notifications