ದಾವಣಗೆರೆಯಲ್ಲಿ ಮಳೆ; ಬೆಳೆ ಹಾನಿ ವೀಕ್ಷಿಸಿದ ಜಿಲ್ಲಾಧಿಕಾರಿಗಳು
ದಾವಣಗೆರೆ, ನವೆಂಬರ್ 18; ದಾವಣಗೆರೆ ಜಿಲ್ಲೆಯಲ್ಲಿ ಮಳೆ ಸುರಿಯುತ್ತಿದ್ದು ಬೆಳೆಗಳಿಗೆ ಹಾನಿಯಾಗಿದೆ. ಜಿಲ್ಲಾಧಿಕಾರಿಗಳು ಹಾನಿಯಾದ ಬೆಳೆಗಳನ್ನು ವೀಕ್ಷಣೆ ಮಾಡಿದ್ದು, ಶೀಘ್ರವೇ ಹಾನಿಗೊಳಗಾದ ಬೆಳೆಗಳಿಗೆ ಪರಿಹಾರ ವಿತರಿಸುವ ವ್ಯವಸ್ಥೆ ಮಾಡಲಾಗುತ್ತದೆ ಎಂದು ಭರವಸೆ ನೀಡಿದರು.
ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಗುರುವಾರ ಮಳೆಯಿಂದ ಹಾನಿಗೊಳಗಾದ ಹರಿಹರ ತಾಲ್ಲೂಕಿನ ಮಲೇಬೆನ್ನೂರು ಹೋಬಳಿ ಕುಂಬಳೂರು, ನಿಟ್ಟೂರು, ಆದಾಪುರ ಹಾಗೂ ಮಲೆಬೆನ್ನೂರು ಗ್ರಾಮಗಳಿಗೆ ರೈತರೊಂದಿಗೆ ಭೇಟಿ ನೀಡಿ ಪರಿಶೀಲಿಸಿದರು.
ನಂತರ ಸಂತ್ರಸ್ಥರ ಜೊತೆ ಮಾತುಕತೆ ನಡೆಸಿದರು. ಶೀಘ್ರವೇ ಹಾನಿಗೆ ಪರಿಹಾರ ವಿತರಿಸುವ ವ್ಯವಸ್ಥೆ ಮಾಡಲಾಗುವುದು ಎಂದು ಸಾಂತ್ವನ ಹೇಳಿದರು. ಜಿಲ್ಲೆಯಲ್ಲಿ ನವೆಂಬರ್ 17ರಂದು 10 ಮಿ. ಮೀ. ಸರಾಸರಿ ಮಳೆಯಾಗಿದ್ದು, ಒಟ್ಟು 75.48 ಲಕ್ಷ ರೂ. ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ.

ದಾವಣಗೆರೆ ತಾಲ್ಲೂಕು ವ್ಯಾಪ್ತಿಯಲ್ಲಿ 135 ಎಕರೆ ಭತ್ತ, 2 ಎಕರೆ ಬಾಳೆ ಮತ್ತು 10 ಎಕರೆ ಮೆಕ್ಕೆಜೋಳದ ಬೆಳೆ ಹಾನಿಯಾಗಿದೆ. ಹರಿಹರ ತಾಲ್ಲೂಕು ವ್ಯಾಪ್ತಿಯಲ್ಲಿ 787 ಎಕರೆ ಭತ್ತ, 2 ಎಕರೆ ರಾಗಿ ಬೆಳೆ ಹಾನಿಯಾಗಿದ್ದು, ರೂ. 48.33 ಲಕ್ಷ ನಷ್ಟವಾಗಿದೆ.
ಹೊನ್ನಾಳಿ ತಾಲ್ಲೂಕು ವ್ಯಾಪ್ತಿಯಲ್ಲಿ 1 ಪಕ್ಕಾ ಮನೆ ತೀವ್ರ ಹಾನಿಯಿಂದ ರೂ. 3 ಲಕ್ಷ ಮತ್ತು 2 ಪಕ್ಕಾ ಮನೆ ಭಾಗಶ: ಹಾನಿಯಿಂದ ರೂ. 1.30 ಲಕ್ಷ ಸೇರಿ ಒಟ್ಟು ರೂ.4.30 ಲಕ್ಷ ನಷ್ಟದ ಅಂದಾಜು ಮಾಡಲಾಗಿದೆ. ನ್ಯಾಮತಿ ತಾಲ್ಲೂಕು ವ್ಯಾಪ್ತಿಯಲ್ಲಿ 1 ಪಕ್ಕಾ ಮನೆ ತೀವ್ರ ಹಾನಿಯಾಗಿದ್ದು, ರೂ.1 ಲಕ್ಷ ಮತ್ತು 6 ಪಕ್ಕಾ ಮನೆ ಭಾಗಶ: ಹಾನಿಯಗಿದ್ದು, ರೂ.3 ಲಕ್ಷ, 1 ದನದ ಕೊಟ್ಟಿಗೆ ಹಾನಿಯಾಗಿದ್ದು, ರೂ.0.15 ಲಕ್ಷ ಮತ್ತು 7 ಎಕರೆ ಭತ್ತದ ಬೆಳೆ ಹಾನಿಯಾಗಿದ್ದು, ರೂ.3 ಲಕ್ಷ ಒಟ್ಟು ರೂ.7.15 ಲಕ್ಷ ಅಂದಾಜು ನಷ್ಟ ಸಂಭವಿಸಿರುತ್ತದೆ.

ಚನ್ನಗಿರಿ ತಾಲ್ಲೂಕು ವ್ಯಾಪ್ತಿಯಲ್ಲಿ 1 ಪಕ್ಕಾ ಮನೆ ತೀವ್ರ ಹಾನಿಯಾಗಿದ್ದು, ರೂ. 3 ಲಕ್ಷ, 2 ಪಕ್ಕಾ ಮನೆ ಭಾಗಶ: ಹಾನಿಯಾಗಿದ್ದು, ರೂ.1.20 ಲಕ್ಷ ಮತ್ತು 2 ಕಚ್ಚಾ ಮನೆ ತೀವ್ರಹಾನಿಯಾಗಿದ್ದು ರೂ.3.00 ಲಕ್ಷ, ಒಟ್ಟು 7.20 ಲಕ್ಷ ಅಂದಾಜು ನಷ್ಟ ಸಂಭವಿಸಿರುತ್ತದೆ. ಸರ್ಕಾರದ ಮಾರ್ಗಸೂಚಿ ಅನ್ವಯ ಸಂತ್ರಸ್ತರಿಗೆ ಪರಿಹಾರ ವಿತರಿಸಲಾಗುತ್ತದೆ ಎಂದು ಜಿಲ್ಲಾಡಳಿತ ಹೇಳಿದೆ.
ಕಡಲೆ ಬೆಳೆ ನಿರ್ವಹಣೆ; ಹಿಂಗಾರು ಹಂಗಾಮು ಆರಂಭವಾಗಿದ್ದು ದಾವಣಗೆರೆ ಜಿಲ್ಲೆಯಾದ್ಯಂತ ಕಡಲೆ ಬೆಳೆ ಬೆಳವಣಿಗೆಯಿಂದ ಕಾಯಿಕಟ್ಟುವ ಹಂತದಲ್ಲಿದೆ. ಈ ಸಮಯದಲ್ಲಿ ರೈತರು ಕೆಲವು ನಿರ್ವಹಣಾ ತಾಂತ್ರಿಕತೆಗಳನ್ನು ಅಳವಡಿಸಿಕೊಳ್ಳುವುದು ಹೆಚ್ಚಿನ ಇಳುವರಿ ಪಡೆಯಲು ಸಹಕಾರಿಯಾಗುತ್ತದೆ.
ಕಡಲೆ ಬೆಳೆ 30 ರಿಂದ 40 ದಿನಗಳ ಬೆಳೆಯಿದ್ದಾಗ ಕುಡಿ ಚಿವುಟುವುದರಿಂದ ಕವಲುಗಳ ಸಂಖ್ಯೆ ಹೆಚ್ಚಾಗಿ ಹೆಚ್ಚಿನ ಇಳುವರಿ ನಿರೀಕ್ಷಿಸಬಹುದು. ಬಿತ್ತನೆಯಾದ 35 ದಿನಗಳ ನಂತರ ನ್ಯಾಫ್ತಾಲಿಕ್ ಅಸಿಟಿಕ್ ಆಸಿಡ್ (ಎನ್.ಎ.ಎ.) 20 ಪಿ.ಪಿ.ಎಂ. ಅನ್ನು 100 ಲೀಟರ್ ನೀರಿಗೆ 2 ಮಿ.ಲೀ. ಬೆರೆಸಿ ಬೆಳೆಗೆ ಸಿಂಪಡಿಸುವುದರಿಂದ ಬೆಳೆ ಸದೃಢ, ಆರೋಗ್ಯಕರ ಬೆಳವಣಿಗೆ ಹೊಂದುತ್ತದೆ.
ಬಿತ್ತನೆಯಾದ 35 ದಿನಗಳ ನಂತರ ಸಸ್ಯವರ್ಧಕವಾದ ಟ್ರೈಕೊಂಟಿನಾಲ್ 1 ಮಿ.ಲೀ. ಅನ್ನು 1 ಲೀಟರ್ ನೀರಿಗೆ ಬೆರೆಸಿ ಸಿಂಪಡಿಸುವುದರಿಂದ ಹೂವು ಮತ್ತು ಕಾಯಿಗಳ ಸಂಖ್ಯೆ ಹೆಚ್ಚುವುದು. ಸಾವಯವ ರೈತರು ಬೀಜಾಮೃತ ಸಿಂಪರಣೆ ಕೈಗೊಳ್ಳಬಹುದು.
ಸಸ್ಯ ಸಂರಕ್ಷಣೆಗೆ ಸಂಬಂಧಿಸಿದಂತೆ ಕಾಯಿಕೊರಕದ ಬಾಧೆ ಕಂಡುಬಂದಲ್ಲಿ 1 ರಿಂದ 1.5 ಮಿ.ಲೀ. ಅಜಾಡಿರೆಕ್ಟಿನ್ ಅನ್ನು 1 ಲೀಟರ್ ನೀರಿಗೆ ಬೆರೆಸಿ ಸಿಂಪಡಿಸಬೇಕು ಅಥವಾ 0.5 ಗ್ರಾಂ. ಇಮಾಮೆಕ್ಟಿನ್ ಬೆನ್ಜೋಯೇಟ್ 5 ಎಸ್.ಜಿ. ಅಥವಾ 0.2- 0.4 ಮಿ.ಲೀ. ಕ್ಲೋರಂಟ್ರಿನಿಲಿಪೋಲ್‍ನ್ನು 18.5 ಎಸ್. ಸಿ. ಯನ್ನು 1 ಲೀ. ನೀರಿಗೆ ಬೆರೆಸಿ ಸಿಂಪಡಿಸಬೇಕು.
ನಿರ್ವಹಣಾ ಕ್ರಮವಾಗಿ ಜಮೀನಿನಲ್ಲಿ ಕವಲೊಡೆದ ಕೊಂಬೆಗಳನ್ನು ನೆಟ್ಟು ಜಮೀನಿನಲ್ಲಿ ಹಾಗೂ ಸುತ್ತಲೂ ಮಂಡಕ್ಕಿ ಅಥವಾ ಅನ್ನ ಚೆಲ್ಲುವುದರಿಂದ ಪಕ್ಷಿಗಳು ಆಕರ್ಷಿತವಾಗಿ ರೆಂಬೆ ಮೇಲೆ ಕುಳಿತುಕೊಳ್ಳುತ್ತವೆ. ಹಾಗೆಯೇ ಬೆಳೆಯಲ್ಲಿರುವ ಕೀಟಗಳನ್ನು ಹಿಡಿದು ತಿನ್ನುತ್ತವೆ.
ಈ ಸಮಯದಲ್ಲಿ ಈ ನಿರ್ವಹಣಾ ಕ್ರಮಗಳನ್ನು ಅನುಸರಿಸುವುದರಿಂದ ಕಡಲೆಯಲ್ಲಿ ನಿರೀಕ್ಷಿತ ಇಳುವರಿ ಪಡೆಯಲು ಸಾಧ್ಯವಾಗುತ್ತದೆ ಎಂದು ಜಂಟಿ ಕೃಷಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.












Click it and Unblock the Notifications