ಶಾಮನೂರು ಶಿವಶಂಕರಪ್ಪ, ಪುತ್ರ S.S.ಮಲ್ಲಿಕಾರ್ಜುನ್ ಭಾವಚಿತ್ರವುಳ್ಳ ಉಡುಗೊರೆ ಬಾಕ್ಸ್‌ಗಳ ಪತ್ತೆ: ಪ್ರಕರಣ ದಾಖಲು
ದಾವಣಗೆರೆ, ಮಾರ್ಚ್, 30: ರಾಜ್ಯ ವಿಧಾನಸಭೆ ಚುನಾವಣಾ ಕಣ ರಂಗೇರಿದ್ದು, ರಾಜಕೀಯ ನಾಯಕರು ತಮ್ಮ ತಮ್ಮ ಕ್ಷೇತ್ರಗಳಲ್ಲಿ ಉಡುಗೊರೆಗಳನ್ನು ಹಂಚುವ ಮೂಲಕ ಮತದಾರರನ್ನು ಸೆಳೆಯುವ ಪ್ರಯತ್ನದಲ್ಲಿದ್ದಾರೆ. ಇದೇ ರೀತಿ ದಾವಣಗೆರೆಯಲ್ಲೂ ಕೂಡ ಶಾಮನೂರು ಶಿವಶಂಕರಪ್ಪ, ಪುತ್ರ ಎಸ್.ಎಸ್.ಮಲ್ಲಿಕಾರ್ಜುನ್ ಭಾವಚಿತ್ರವಿರುವ ಉಡುಗೊರೆ ಬಾಕ್ಸ್‌ಗಳು ಪತ್ತೆಯಾಗಿದ್ದು, ಪ್ರಕರಣ ಸಂಬಂಧ ತಂದೆ, ಮಗ ಇಬ್ಬರ ವಿರುದ್ಧವೂ ಪ್ರಕರಣ ದಾಖಲಾಗಿದೆ ಎಂದು ಎಸ್‌ಪಿ ಸಿ.ಬಿ. ರಿಷ್ಯಂತ್ ಮಾಹಿತಿ ನೀಡಿದ್ದಾರೆ.
ತಂದೆ, ಮಗನ ವಿರುದ್ಧ ದೂರು ದಾಖಲು
ವಿಧಾನಸಭೆ ಚುನಾವಣೆ ದಿನಾಂಕ ಘೋಷಣೆಯಾಗುತ್ತಿದ್ದಂತೆ ಅಕ್ರಮಗಳಿಗೆ ಕಡಿವಾಣ ಹಾಕಲು ಕೇಂದ್ರ ಚುನಾವಣಾ ಆಯೋಗ ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಿದೆ. ದಾವಣಗೆರೆಯಲ್ಲಿ ಕಾಂಗ್ರೆಸ್ ಶಾಸಕ ಹಾಗೂ ಮಾಜಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ವಿರುದ್ಧ ಅಕ್ರಮವಾಗಿ ಅಡುಗೆ ಉಪಕರಣ ಹಂಚಿದ ಆರೋಪದ ಮೇಲೆ ಕೆ.ಟಿ.ಜೆ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸಿ.ಬಿ. ರಿಷ್ಯಂತ್ ಹೇಳಿದ್ದೇನು?
ಪ್ರಕರಣದಲ್ಲಿ ಶಾಮನೂರು ಶಿವಶಂಕರಪ್ಪ ಮೊದಲ ಆರೋಪಿಯಾದರೆ, ಇವರ ಮಗ ಎಸ್.ಎಸ್. ಮಲ್ಲಿಕಾರ್ಜುನ್ 2ನೇ ಆರೋಪಿ ಆಗಿದ್ದಾರೆ. ಅಕ್ರಮವಾಗಿ ಕುಕ್ಕರ್, ಸೀರೆ, ಅಡುಗೆ ಉಪಕರಣಗಳು ಇದ್ದ ಬಾಕ್‌ಗಳನ್ನು ವಶಪಡಿಸಿಕೊಳ್ಳಲಾಗಿದ್ದು, ಇವುಗಳ ಮೇಲೆ ಎಸ್.ಎಸ್. ಮಲ್ಲಿಕಾರ್ಜುನ್ ಹಾಗೂ ಶಾಮನೂರು ಶಿವಶಂಕರಪ್ಪನವರ ಭಾವಚಿತ್ರವಿರುವುದು ಕಂಡುಬಂದಿದೆ. ಇದೇ ಕಾರಣದಿಂದ ತಂದೆ, ಮಗ ಇಬ್ಬರ ಮೇಲೂ ಪ್ರಕರಣ ದಾಖಲಿಸಲಾಗಿದೆ ಎಂದು ದಾವಣಗೆರೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ. ರಿಷ್ಯಂತ್ ತಿಳಿಸಿದ್ದಾರೆ.
ಕಾಂಗ್ರೆಸ್ ಶಾಸಕ ಶಾಮನೂರ ಶಿವಶಂಕರಪ್ಪ, ಮಲ್ಲಿಕಾರ್ಜುನ್ ಭಾವಚಿತ್ರವಿರುವ ಲಕ್ಷಾಂತರ ರೂಪಾಯಿ ಮೌಲ್ಯದ ಅಡುಗೆ ಸಲಕರಣೆಗಳು ಪತ್ತೆ ಆಗಿವೆ. ದಾವಣಗೆರೆ ಕೆ.ಟಿ.ಜೆ. ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಭಗತ್ ಸಿಂಗ್ ನಗರದಲ್ಲಿ ಮತದಾರರಿಗೆ ಹಂಚಲೆಂದು ಸಂಗ್ರಹಿಸಿದ್ದ 7.19 ಲಕ್ಷ ರೂಪಾಯಿ ಮೌಲ್ಯದ ಅಡುಗೆ ಸಲಕರಣೆಯನ್ನು ಪೊಲೀಸರು ಇದೀಗ ವಶಕ್ಕೆ ಪಡೆದಿದ್ದಾರೆ.
ಕಾಂಗ್ರೆಸ್ ಶಾಸಕ ಶಾಮನೂರು ಶಿವಶಂಕರಪ್ಪ ಹಾಗೂ ಪುತ್ರ, ಮಾಜಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ಭಾವಚಿತ್ರವಿದ್ದ ಅಡುಗೆ ಸಲಕರಣೆಗಳನ್ನು ವಶಪಡಿಸಿಕೊಳ್ಳಲಾಗಿದ್ದು, ಕಾಡಜ್ಜಿ ಹನಮಂತಪ್ಪ ಎಂಬುವವರ ವಿರುದ್ಧವೂ ಪ್ರಕರಣ ದಾಖಲಾಗಿದೆ. ಇನ್ನು ಪ್ರಕರಣದಲ್ಲಿ ಶಾಮನೂರು ಶಿವಶಂಕರಪ್ಪ ಎ1 ಹಾಗೂ ಮಲ್ಲಿಕಾರ್ಜುನ್ ಎ2 ಆರೋಪಿ ಆಗಿದ್ದಾರೆ.

ಎಸ್.ಎಸ್.ಮಲ್ಲಿಕಾರ್ಜುನ್ ಹೇಳಿದ್ದೇನು?
ಸೀರೆ, ಕುಕ್ಕರ್, ಅಡುಗೆ ಉಪಕರಣಗಳನ್ನು ನಾವು ಹಂಚಿಲ್ಲ. ನಮ್ಮ ವಿರುದ್ಧ ಪ್ರಕರಣ ದಾಖಲಿಸಿರುವ ಹಿಂದೆ ಬಿಜೆಪಿ ಕೈವಾಡ ಇದೆ ಎಂದು ದಾವಣಗೆರೆ ಉತ್ತರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಎಸ್.ಎಸ್. ಮಲ್ಲಿಕಾರ್ಜುನ್ ಆರೋಪ ಮಾಡಿದ್ದಾರೆ.
ಉಪಕರಣಗಳನ್ನು ಹಂಚಿರುವ ಕುರಿತಂತೆ ಯಾವುದೇ ಮಾಹಿತಿ ಇಲ್ಲ. ಅಭಿಮಾನಿಗಳು, ಗೆಳೆಯರು ಯುಗಾದಿ ಹಬ್ಬದ ಹಿನ್ನೆಲೆಯಲ್ಲಿ ಹಂಚಿರುವ ಸಾಧ್ಯತೆ ಇದೆ. ಇಲ್ಲದಿದ್ದರೆ ಬಿಜೆಪಿಯವರೇ ಹಂಚಿ ನಮ್ಮ ಹೆಸರಿಗೆ ಮಸಿ ಬಳಿಯುವ ಪ್ರಯತ್ನ ಮಾಡಿರಬಹುದು ಎಂದು ಆರೋಪ ಮಾಡಿದರು.
ಇನ್ನು ನಾವು ಚುನಾವಣೆಗೆ ಸಿದ್ಧತೆ ಮಾಡಿಕೊಳ್ಳುತ್ತಿದ್ದೇವೆ. ಸಭೆಗಳನ್ನು ನಡೆಸುತ್ತಿದ್ದೇವೆ. ಜಿ. ಎಂ. ಸಿದ್ದೇಶ್ವರ ಬಿಜೆಪಿ ಪಕ್ಷದಿಂದ ನನ್ನ ವಿರುದ್ದ ಕಣಕ್ಕಿಳಿದರೆ ಇಳಿಯಲಿ. ನಮಗೇನೂ ತೊಂದರೆ ಇಲ್ಲ ಎಂದರು.
ದಾಖಲೆ ಇಲ್ಲದ 5.25 ಲಕ್ಷ ರೂಪಾಯಿ ಪತ್ತೆ
ಮತ್ತೊಂದೆಡೆ ದಾಖಲೆ ಇಲ್ಲದೆ ಸಾಗಿಸುತ್ತಿದ್ದ 5.25 ಲಕ್ಷ ರೂಪಾಯಿ ನಗದನ್ನು ಪೊಲೀಸರು ವಶಪಡಿಸಿಕೊಂಡ ಘಟನೆ ಕಾರವಾರದ ಮಾಜಾಳ ಚೆಕ್ ಪೋಸ್ಟ್ ಬಳಿ ನಡೆದಿದೆ.
ಕದ್ರಾ ಸಿಪಿಐ ಗೋವಿಂದರಾಜ ದಾಸರಿ, ಕದ್ರಾ ಪಿಎಸ್ಐಗಳಾದ ಉದ್ದಪ್ಪ ಅಶೋಕ ಧರೆಪ್ಪನವರ, ರವೀಂದ್ರ ಬಿರಾದಾದ, ಸಿಬ್ಬಂದಿಗಳಾದ ಮುಕುಂದ ನಾಯ್ಕ, ಸಂತೋಷ ಉರ್ಮಿ, ರಾಧಾ ಗೌಡ, ಸುರೇಶ್ ಹಾರಗೊಪ್ಪ ಹಾಗೂ ಜಿಲ್ಲಾ ಸಂಕ್ಯಾ ಸಂಗ್ರಹಣ ಅಧಿಕಾರ ಕಛೇರಿ ಅಧಿಕಾರಿಗಳ ಸಮ್ಮುಖದಲ್ಲಿ ಜಂಟಿಯಾಗಿ ಕಾರ್ಯಾಚರಣೆ ನಡೆಸಲಾಗಿದೆ. ಈ ವೇಳೆ ಗೋವಾದಿಂದ ಆಗಮಿಸುತ್ತಿದ್ದ ವಾಹನ ತಪಾಸಣೆ ನಡೆಸಲಾಗಿದ್ದು, ಯಾವುದೇ ದಾಖಲೆ ಇಲ್ಲದೆ 5 ಲಕ್ಷದ 25 ಸಾವಿರ ರೂಪಾಯಿ ನಗದು ಹಣ ಕಾರಿನಲ್ಲಿ ಪತ್ತೆಯಾಗಿದೆ.












Click it and Unblock the Notifications