ದಾವಣಗೆರೆ ಲೋಕಸಭಾ ಕ್ಷೇತ್ರದ ಕದನ: ಕುತೂಹಲ ಏಕೆ?

ದಾವಣಗೆರೆ, ಮೇ 01: ಕರ್ನಾಟಕದ 28 ಲೋಕಸಭಾ ಕ್ಷೇತ್ರಗಳ ಪೈಕಿ 14 ಕ್ಷೇತ್ರಗಳ ಮತದಾನ ಏಪ್ರಿಲ್ 26ರಂದು ಮುಕ್ತಾಯಗೊಂಡಿದೆ. ಮೇ 7ರ ಮಂಗಳವಾರ ಉಳಿ 14 ಕ್ಷೇತ್ರದ ಮತದಾನ ನಡೆಯಲಿದೆ. ಈ 14 ಕ್ಷೇತ್ರಗಳಲ್ಲಿ ಕುತೂಹಲ ಕೆರಳಿಸಿರುವ ಕ್ಷೇತ್ರಗಳಲ್ಲಿ ದಾವಣಗೆರೆ ಸಹ ಒಂದು.

ಹಾಲಿ ದಾವಣಗೆರೆಯ ಸಂಸದ ಜಿ. ಎಂ. ಸಿದ್ದೇಶ್ವರ. ಆದರೆ ಬಿಜೆಪಿ ಹಾಲಿ ಸಂಸದರಿಗೆ ಟಿಕೆಟ್ ನೀಡಿಲ್ಲ. ಎರಡೂ ರಾಷ್ಟ್ರೀಯ ಪಕ್ಷಗಳಿಂದ ದಾವಣಗೆರೆಯಲ್ಲಿ ಮಹಿಳಾ ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಯಾರು ಗೆದ್ದರೂ ಸಹ ಹೊಸ ಇತಿಹಾಸ ನಿರ್ಮಾಣವಾಗಲಿದೆ. ಮಧ್ಯ ಕರ್ನಾಟಕದ ಚುನಾವಣೆ ಈ ಹಿನ್ನಲೆಯಲ್ಲಿ ಕುತೂಹಲಕ್ಕೆ ಕಾರಣವಾಗಿದೆ.

Davanagere Gayathri Siddeshwar And Prabha Mallikarjun Contest

ದಾವಣಗೆರೆಯ ಚುನಾವಣೆ ಎಂದರೆ ಅದು ಜಿ. ಎಂ. ಸಿದ್ದೇಶ್ವರ ಮತ್ತು ಶಾಮನೂರು ಶಿವಶಂಕರಪ್ಪ ಕುಟುಂಬದ ನಡುವಿನ ಪೈಪೋಟಿ. ಈ ಬಾರಿಯ ಲೋಕಸಭೆ ಚುನಾವಣೆಗೆ ಬಿಜೆಪಿ ಜಿ. ಎಂ. ಸಿದ್ದೇಶ್ವರ ಪತ್ನಿ ಗಾಯತ್ರಿ ಸಿದ್ದೇಶ್ವರ ಮತ್ತು ಕಾಂಗ್ರೆಸ್ ಶಾಮನೂರು ಶಿವಶಂಕರಪ್ಪ ಸೊಸೆ ಪ್ರಭಾ ಮಲ್ಲಿಕಾರ್ಜುನ್‌ಗೆ ಟಿಕೆಟ್ ನೀಡಿದೆ.

ಎರಡು ಕುಟುಂಬದ ಪೈಪೋಟಿ: ದಾವಣಗೆರೆಯಲ್ಲಿ ಲೋಕಸಭೆ ಚುನಾವಣೆಯಲ್ಲಿ ಜಿ. ಎಂ. ಸಿದ್ದೇಶ್ವರ, ವಿಧಾನಸಭೆ ಚುನಾವಣೆಯಲ್ಲಿ ಶಾಮನೂರು ಶಿವಶಂಕರಪ್ಪ ಕಟುಂಬ ಮೇಲುಗೈ ಸಾಧಿಸುತ್ತಾ ಬಂದಿವೆ. ಈ ಬಾರಿ ಲೋಕಸಭೆ ಚುನಾವಣೆಯಲ್ಲಿ ಎರಡೂ ಕುಟುಂಬ ಮಹಿಳೆಯರು ಎದುರಾಳಿಗಳಾಗಿದ್ದು, ಚುನಾವಣಾ ಕಣ ಕುತೂಹಲಕ್ಕೆ ಕಾರಣವಾಗಿದೆ.

ಜಿ. ಎಂ. ಸಿದ್ದೇಶ್ವರ ಪತ್ನಿ ಗಾಯತ್ರಿ ಸಿದ್ದೇಶ್ವರ ಸಂಸದರ ಅಭಿವೃದ್ಧಿ ಕೆಲಸಗಳನ್ನು ಮುಂದಿಟ್ಟುಕೊಂಡು ಮತ ಕೇಳುತ್ತಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಸಹ ಎರಡು ಬಾರಿ ಗಾಯತ್ರಿ ಸಿದ್ದೇಶ್ವರ ಪರವಾಗಿ ಪ್ರಚಾರವನ್ನು ನಡೆಸಿದ್ದಾರೆ. ಅಭ್ಯರ್ಥಿ ಬದಲಾವಣೆ ಮಾಡಿರುವ ಬಿಜೆಪಿ ತಂತ್ರ ಫಲ ಕೊಡಲಿದೆಯೇ? ಕಾದು ನೋಡಬೇಕಿದೆ.

ಕಾಂಗ್ರೆಸ್ ಶಾಮನೂರು ಶಿವಶಂಕರಪ್ಪ ಸೊಸೆ, ಸಚಿವ ಎಸ್. ಎಸ್. ಮಲ್ಲಿಕಾರ್ಜುನ್ ಪತ್ನಿ ಪ್ರಭಾ ಮಲ್ಲಿಕಾರ್ಜುನ್‌ಗೆ ಟಿಕೆಟ್ ನೀಡಿದೆ. ಕುಟುಂಬದ ಪ್ರಭಾವ, ವಿಧಾನಸಭಾ ಕ್ಷೇತ್ರಗಳಲ್ಲಿ ಶಾಮನೂರು ಹೊಂದಿರುವ ಹಿಡಿತ, ದಾವಣಗೆರೆಯನ್ನು ಸ್ಮಾರ್ಟ್ ಸಿಟಿಯನ್ನಾಗಿ ಮಾಡುವ ಪ್ರತ್ಯೇಕ ಪ್ರಣಾಳಿಕೆ ಮುಂದಿಟ್ಟುಕೊಂಡು ಪ್ರಭಾ ಮಲ್ಲಿಕಾರ್ಜುನ್ ಮತ ಕೇಳುತ್ತಿದ್ದಾರೆ.

ಜಿ. ಎಂ. ಸಿದ್ದೇಶ್ವರ 5 ಬಾರಿ ದಾವಣಗೆರೆ ಕ್ಷೇತ್ರವನ್ನು ಪ್ರತಿನಿಧಿಸಿದ್ದಾರೆ. ಆದರೆ ಈ ಬಾರಿ ಆರೋಗ್ಯ್ ಸೇರಿದಂತೆ ವಿವಿಧ ಕಾರಣಕ್ಕೆ ಅವರಿಗೆ ಪಕ್ಷ ಟಿಕೆಟ್ ನೀಡಿಲ್ಲ. 69 ವರ್ಷದ ಗಾಯತ್ರಿ ಸಿದ್ದೇಶ್ವರ ಟಿಕೆಟ್ ಪಡೆದಿದ್ದು, 48 ವರ್ಷದ ಪ್ರಭಾ ಮಲ್ಲಿಕಾರ್ಜುನ್ ಎದುರಾಳಿ.

ಲೋಕಸಭೆ ಚುನಾವಣೆಯಲ್ಲಿ ಎಸ್. ಎಸ್. ಮಲ್ಲಿಕಾರ್ಜುನ್, ಜಿ. ಎಂ. ಸಿದ್ದೇಶ್ವರ ಎದುರಾಳಿಯಾಗುತ್ತಿದ್ದರು. ಆದರೆ ಈ ಬಾರಿ ಎರಡೂ ಕುಟುಂಬದ ಮಹಿಳೆಯರು ಚುನಾವಣಾ ಕಣದಲ್ಲಿದ್ದಾರೆ. ಎಸ್. ಎಸ್. ಮಲ್ಲಿಕಾರ್ಜುನ್ ಮತ್ತು ಶಾಮನೂರು ಶಿವಶಂಕರಪ್ಪ ಇಬ್ಬರೂ ಸಹ ಶಾಸಕರು. ಯಾವ ಕುಟುಂಬದ ಪ್ರಭಾವ ಎಷ್ಟಿದೆ? ಎಂದು ಜೂನ್ 4ರಂದು ಫಲಿತಾಂಶ ಪ್ರಕಟವಾದ ಬಳಿಕ ತಿಳಿಯಲಿದೆ.

ಬಂಡಾಯದ ಬಿಸಿ: ದಾವಣಗೆರೆ ಕ್ಷೇತ್ರದಲ್ಲಿ ಕಾಂಗ್ರೆಸ್‌ಗೆ ಬಂಡಾಯದ ಬಿಸಿ ತಟ್ಟಿದೆ. ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿದ್ದ ಕುರುಬ ಸಮುದಾಯದ ವಿನಯ್ ಕುಮಾರ್ ಪಕ್ಷೇತರ ಅಭ್ಯರ್ಥಿಯಾಗಿ ಕಣದಲ್ಲಿದ್ದಾರೆ. ಐಎಎಸ್ ಪರೀಕ್ಷೆಗೆ ಅಭ್ಯರ್ಥಿಗಳನ್ನು ತಯಾರು ಮಾಡುವ ತರಬೇತಿ ಸಂಸ್ಥೆ ಹೊಂದಿರುವ ಅವರು ಪ್ರಭಾ ಮಲ್ಲಿಕಾರ್ಜುನ್‌ಗೆ ಸೇರಬೇಕಾದ ಮತಗಳನ್ನು ಸೆಳೆಯುತ್ತಾರೆಯೇ? ಕಾದು ನೋಡಬೇಕಿದೆ.

ದಾವಣಗೆರೆ ಕ್ಷೇತ್ರದಲ್ಲಿ 1971 ರಿಂದ 1991ರ ತನಕ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆದ್ದಿತ್ತು. 1998ರಲ್ಲಿ ಮತ್ತೆ ಗೆಲುವು ಕಂಡಿತು. ಕಳೆದ 7 ಚುನಾವಣೆಗಳಲ್ಲಿ ಬಿಜೆಪಿ 6 ಬಾರಿ ಕ್ಷೇತ್ರದಲ್ಲಿ ಗೆದ್ದಿದೆ. ಈ ಬಾರಿ ಯಾವ ಪಕ್ಷದ ಅಭ್ಯರ್ಥಿ ಗೆದ್ದರೂ ಸಹ ಮಹಿಳಾ ಸಂಸದರ ಮೂಲಕ ದಾವಣಗೆರೆ ಹೊಸ ಇತಿಹಾಸಕ್ಕೆ ಸಾಕ್ಷಿಯಾಗಲಿದೆ.

ಕಳೆದ ಚುನಾವಣೆಯಲ್ಲಿ ಬಿಜೆಪಿಯ ಜಿ. ಎಂ. ಸಿದ್ದೇಶ್ವರ 652,996 ಮತಗಳನ್ನು ಪಡೆದು ಜಯಗಳಿಸಿದ್ದರು. ಕಾಂಗ್ರೆಸ್‌ನಿಂದ ಅಭ್ಯರ್ಥಿಯಾಗಿದ್ದ ಹೆಚ್. ಬಿ. ಮಂಜಪ್ಪ 483,294 ಮತಗಳನ್ನು ಪಡೆದು ಸೋಲು ಕಂಡಿದ್ದರು. ಹೆಚ್‌. ಬಿ. ಮಂಜಪ್ಪ ಸಹ ಶಾಮನೂರು ಕುಟುಂಬದ ಆಪ್ತರಲ್ಲಿ ಒಬ್ಬರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+