ದಾವಣಗೆರೆಯಲ್ಲಿ ಮಳೆಗಾಗಿ ಪ್ರಾರ್ಥಿಸಿ, ಐದು ವಾರಗಳ ವಾರದ ಸಂತೆ
ಮಳೆ ಬರುತ್ತಿಲ್ಲ ಎಂದು ಕತ್ತೆ ಮೆರವಣಿಗೆ ಮಾಡುವುದು, ಕಪ್ಪೆ ಮದುವೆ ಮಾಡುವುದು, ಊರ ದೇವಿ ಜಾತ್ರೆ ಮಾಡುವುದು ವಾಡಿಕೆ. ಇದೇ ರೀತಿ ಮಳೆ ಸುರಿಸು ತಾಯಿ ಅಂತ ನಗರ ದೇವತೆ ಗುಡಿ ಮುಂದೆ ಸಂತೆ ಮಾಡುವ ವಿಶಿಷ್ಟ ಪದ್ಧತಿ ದಾವಣಗೆರೆಯಲ್ಲಿದೆ.
ವಾಡಿಕೆಯಂತೆ ವರುಣ ದೇವನ ಕೃಪೆಗಾಗಿ ಪ್ರಾರ್ಥಿಸಿ ನಗರ ದೇವತೆ ಶ್ರೀದುರ್ಗಾಂಬಿಕಾ ದೇವಸ್ಥಾನದ ಆವರಣದಲ್ಲಿ ಈ ಬಾರಿಯೂ ಸಹ ಐದು ವಾರಗಳ ವಾರದ ಸಂತೆ ಭಾನುವಾರದಂದು ಆರಂಭಗೊಂಡಿದೆ.
ನಗರ ಪಾಲಿಕೆ ಹಾಗೂ ಶ್ರೀ ದುರ್ಗಾಂಬಿಕಾದೇವಿ ದೇವಸ್ಥಾನ ಟ್ರಸ್ಟ್ ವತಿಯಿಂದ ವಾಡಿಕೆಯಂತೆ ವಾರದ ಸಂತೆಗೆ ದೇವಿಗೆ ವಿಶೇಷ ಪೂಜೆ ಸಲ್ಲಿಸುವ ಮೂಲಕ ಚಾಲನೆ ನೀಡಲಾಯಿತು. ಬೆಳಿಗ್ಗೆ ದೇವಸ್ಥಾನಕ್ಕೆ ಆಗಮಿಸಿದ ಪಾಲಿಕೆ ಆಯುಕ್ತ ವೀರೇಂದ್ರ ಕುಂದಗೋಳ ಮತ್ತು ದೇವಸ್ಥಾನದ ಧರ್ಮದರ್ಶಿ ಗೌಡ್ರ ಚನ್ನಬಸಪ್ಪ, ಹನುಮಂತರಾವ್ ಸಾವಂತ್, ಗುರುರಾಜ್ ಸೊಪ್ಪಿನ್ ಮತ್ತಿತರರು ದೇವಿಗೆ ವಿಶೇಷ ಪೂಜೆ ಸಲ್ಲಿಸಿ ಸಮೃದ್ಧ ಮಳೆ, ಬೆಳೆಗಾಗಿ ಪ್ರಾರ್ಥಿಸಿದರು.
ವಾಡಿಕೆಯಂತೆ ಈ ಬಾರಿಯೂ ದೇವಸ್ಥಾನದಸುತ್ತಮುತ್ತ 5 ವಾರಗಳ ಸಂತೆ ನಡೆಸಲಾಗುತ್ತಿದೆ. ಇಲ್ಲಿ ಸುಮಾರು ಎರಡೂವರೆ ಸಾವಿರದಷ್ಟು ವ್ಯಾಪಾರಸ್ಥರು ಮತ್ತು ಅಷ್ಟೇ ಗ್ರಾಹಕರು ಬರಲಿದ್ದು, ಒಂದು ವಾರಕ್ಕೆ ಒಟ್ಟು ಸುಮಾರು 20ರಿಂದ 25 ಲಕ್ಷದಷ್ಟು ವ್ಯಾಪಾರ-ವಹಿವಾಟಾಗಲಿದೆ ಎಂದು ದೇವಸ್ಥಾನದ ಧರ್ಮದರ್ಶಿ ಗೌಡ್ರು ಚನ್ನಬಸಪ್ಪ ಹೇಳಿದರು.

ದೇವಿಗೆ ವಿಶೇಷವಾಗಿ ಬುತ್ತಿ ಪೂಜೆ
ವಾರದ ಸಂತೆಯ ಆರಂಭಿಕ ದಿನದಂದು ನಗರ ದೇವತೆಗೆ ವಿಶೇಷವಾಗಿ ಬುತ್ತಿ ಪೂಜೆ ಮಾಡಿ ಕಂಗೊಳಿಸುವಂತೆ ಮಾಡಲಾಗಿತ್ತು. ವಿಶೇಷ ಪೂಜಾ
ಕೈಂಕರ್ಯಗಳನ್ನು ನೆರವೇರಿಸಲಾಯಿತು. ದೇವಸ್ಥಾನ ಆವರಣದ ಸುತ್ತ ಮುತ್ತ ಸಂತೆಯ ಕಳೆ ಕಟ್ಟಿತ್ತು. ಸಂತೆ ಹಾಕಿದ್ದ ವ್ಯಾಪಾರಸ್ಥರು ಸಹ ದೇವಿಗೆ ನಮಿಸಿ ಉತ್ತಮ ಮಳೆ ಕರುಣಿಸುವಂತೆ
ಪ್ರಾರ್ಥಿಸಿ ತಮ್ಮ ವ್ಯಾಪಾರ ವಹಿವಾಟು ಶುರು ಮಾಡಿಕೊಂಡರು. ಬೆಳಿಗ್ಗೆಯಿಂದ ಮಧ್ಯಾಹ್ನದವರೆಗೂ ವ್ಯಾಪಾರ-ವಹಿವಾಟು ಉತ್ತಮವಾಗಿತ್ತು. ಮಧ್ಯಾಹ್ನದ ನಂತರ ವ್ಯಾಪಾರದಲ್ಲಿ
ಕುಸಿತಗೊಂಡಿದೆ ಎಂಬುದು ವ್ಯಾಪಾರಸ್ಥರ ಅಭಿಪ್ರಾಯವಾಗಿದೆ.

ತರಕಾರಿ ಬೆಲೆ ಜಿಗಿತ ಕಂಡಿದೆ
ಮಳೆ ಇಲ್ಲದೇ ತರಕಾರಿ ಸೇರಿದಂತೆ ಇತರೆ ಉತ್ಪನ್ನಗಳು ಮಾರುಕಟ್ಟೆಗೆ ಬಾರದ ಕಾರಣ ತರಕಾರಿ ಬೆಲೆ ಜಿಗಿತ ಕಂಡಿದೆ. ಅಲ್ಲದೇ ರೈತರೇ ಬೆಳೆದು ನೇರವಾಗಿ ವ್ಯಾಪಾರ ಮಾಡಿದರೆ ತರಕಾರಿ ಉತ್ಪನ್ನಗಳ ಬೆಲೆ ಗಗನ ಕುಸುಮವಾಗುವುದಿಲ್ಲ. ತರಕಾರಿ ಮಂಡಿಯಿಂದ ದುಬಾರಿಗೆ ಖರೀದಿಸಿ ತಂದಾಗ ಮಾರುಕಟ್ಟೆ ದರವು ಹೆಚ್ಚಾಗಲಿದೆ. ಇದರಿಂದ ಗ್ರಾಹಕರು ಖರೀದಿಗೆ ಹಿಂದೆ-ಮುಂದೆ ನೋಡುತ್ತಾರೆ. ಜೊತೆಗೆ ಚೌಕಾಸಿ ಸಹ ಮಾಡುತ್ತಾರೆ ಎಂದು ವ್ಯಾಪಾರಸ್ಥರು ಅಳಲು ತೋಡಿಕೊಂಡಿದ್ದಾರೆ.
ರೈತರು ತಾವು ಬೆಳೆದ ತರಕಾರಿಗಳನ್ನು ಇಲ್ಲಿ ತಂದು ಪೂಜೆ ಸಲ್ಲಿಸಿ, ವ್ಯಾಪಾರ ಮಾಡುತ್ತಾರೆ. ಇದರಿಂದ ದೇವತೆ ರೈತರ ಮೇಲೆ ಕರುಣೆ ತೋರಿಸಿ, ಮಳೆ ಸರಿಯಾದ ಸಮಯಕ್ಕೆ ಆಗುತ್ತದೆ ಎನ್ನುವುದು ಇಲ್ಲಿಯ ಜನರ ನಂಬಿಕೆ.

ವಿಶೇಷವಾಗಿ ಸಂತೆ ಬಳಿ ಬಿಗಿ ಪೊಲೀಸ್ ವ್ಯವಸ್ಥೆ
ಬಿಗಿ ಪೊಲೀಸ್ ವ್ಯವಸ್ಥೆ: ಈ ಬಾರಿ ವಿಶೇಷವಾಗಿ ಸಂತೆ ಬಳಿ ಬಿಗಿ ಪೊಲೀಸ್ ವ್ಯವಸ್ಥೆ ಮಾಡಲಾಗಿತ್ತು. ಸಂತೆ ಒಳಗೆ ಯಾವುದೇ ವಾಹನಗಳಿಗೆ ಪ್ರವೇಶವಿರಲಿಲ್ಲ. ಹಾಗೇನಾದರೂ ಪ್ರವೇಶಿಸಿದರೆ 150 ರಿಂದ 200 ರೂ. ದಂಡ ಸಹ ವಿಧಿಸಲಾಗುತ್ತಿತ್ತು. ಕಳೆದ ವರ್ಷ ಜುಲೈ 8ರಂದು ಸಂತೆ ಪ್ರಾರಂಭಿಸಲಾಗಿತ್ತು. ಆಗ 2ನೇ ವಾರಕ್ಕೆ ಮಳೆ ಪ್ರಾರಂಭವಾಗಿತ್ತು. 3ನೇ ವಾರಕ್ಕೆ ಸತತವಾಗಿ ಉತ್ತಮ ಮಳೆಯಾಗಿತ್ತು. ಆದರಂತೆ ಈ ಬಾರಿಯೂ ಸಂತೆ ಹಾಕಲಾಗಿದ್ದು, ಮೂರು ವಾರದೊಳಗಾಗಿ ಉತ್ತಮ ಮಳೆಯಾಗಲಿದೆ. ಬಹಳ ಮಳೆಯಾದರೆ 3ನೇ ವಾರಕ್ಕೆ ಸಂತೆಯನ್ನು
ನಿಲ್ಲಿಸಲಾಗುವುದು. ಎಂದು ಗೌಡ್ರು ಚನ್ನಬಸಪ್ಪ ತಿಳಿಸಿದರು.

ದೇವಾಲಯದ ಬಳಿ ಸಂತೆ ಹಾಕುತ್ತಾರೆ
ಹಿಂದಿನಿಂದಲೂ ಮಳೆ ಬರಲಿಲ್ಲ ಅಂದರೆ ದೇವಿಗೆ ಯಾವುದೇ ಬಲಿ ಕೊಡದೆ, ದೇವಾಲಯದ ಬಳಿ ಸಂತೆ ಹಾಕುತ್ತಾರೆ. ಇದರಿಂದ ಮಳೆ ಹುಲುಸಾಗಿ ಬರುತ್ತದೆ ಎಂಬುದು ಜನರ ನಂಬಿಕೆ. ಇದು ಹಲವಾರು ಬಾರಿ ಸಾಬೀತು ಕೂಡ ಆಗಿದೆ. ಮಳೆಯಾಗದ ವರ್ಷದಲ್ಲಿ ಐದು ವಾರ ಸಂತೆ ನಡೆಸುತ್ತಾರೆ. ಪ್ರತಿ ಭಾನುವಾರ ಸಂತೆ ಹಾಕಿ ನಗರ ದೇವತೆಗೆ ವಿಶೇಷವಾದ ಪೂಜೆ ಮಾಡುತ್ತಾರೆ. ಈ ಬಾರಿಯೂ ಸಹ ಮಳೆ ಇಲ್ಲದೆ ಹಿನ್ನೆಲೆಯಲ್ಲಿ ಭಾನುವಾರ ದುಗ್ಗಮ್ಮ ದೇವಿಗೆ ಎಡೆ ಪೂಜೆ ಮಾಡಲಾಯಿತು.
ಇದರ ಜೊತೆಗೆ ದಾವಣಗೆರೆಯಿಂದ ಬೇರೆ ಜಿಲ್ಲೆಗಳಿಗೆ ಹೆಣ್ಣು ಮಕ್ಕಳು ಮದುವೆಯಾಗಿ ಹೋಗಿದ್ದವರು ಇಲ್ಲಿಗೆ ಬಂದು ದೇವಿಗೆ ಪೂಜೆ ಸಲ್ಲಿಸಿ ತಮ್ಮ ಊರಿಗೆ ಸಮೃದ್ಧಿ ಸಿಗಲಿ ಎಂದು ಬೇಡಿಕೊಳ್ಳುತ್ತಾರೆ. ಒಟ್ಟಾರೆಯಾಗಿ ಹಿಂದೆಂದಿಗಿಂತಲೂ ಈ ಬಾರಿ ಮಳೆಯ ಪ್ರಮಾಣ ಕಡಿಮೆಯಾಗಿದೆ. ದೇವಿಗೆ ಎಡೆಪೂಜೆ ಮಾಡಿದ್ದರಿಂದ ಮಳೆ ಬರುತ್ತದೋ ಕಾದು ನೋಡಬೇಕಿದೆ.