ದಾವಣಗೆರೆ ಏರ್‌ಪೋರ್ಟ್ ಬೇಡಿಕೆಗೆ ಮನ್ನಣೆ, ಅಧಿಕಾರಿಗಳ ಭೇಟಿ
ದಾವಣಗೆರೆ, ಜನವರಿ 21; ದಾವಣಗೆರೆ ಜಿಲ್ಲೆಯಲ್ಲಿ ವಿಮಾನ ನಿಲ್ದಾಣದ ನಿರ್ಮಾಣವಾಗಬೇಕು ಎಂಬ ಬೇಡಿಕೆಗೆ ಮನ್ನಣೆ ಸಿಕ್ಕಿದೆ. ಕರ್ನಾಟಕ ಮೂಲಸೌಕರ್ಯ ಅಭಿವೃದ್ದಿ ನಿಗಮದ ಅಧಿಕಾರಿಗಳು ಜಿಲ್ಲೆಗೆ ಭೇಟಿ ನೀಡಿ ಎರಡು ಮೂರು ಕಡೆಗಳಲ್ಲಿ ಸ್ಥಳ ಪರಿಶೀಲನೆ ನಡೆಸಿ, ಜಿಲ್ಲಾಡಳಿತ ಭವನದ ಸಭೆ ಸಹ ನಡೆಸಿದರು.
ಗುರುವಾರ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಸಂಬಂಧಿಸಿದಂತೆ ಸ್ಥಳ ಪರಿಶೀಲನೆ ನಡೆಸಿದ ಅಧಿಕಾರಿಗಳು ಬಳಿಕ ಸಂಸದರು, ಜಿಲ್ಲಾಧಿಕಾರಿಗಳು ಹಾಗೂ ಸಂಬಂಧಿಸಿದ ಇಲಾಖೆಗಳ ಅಧಿಕಾರಿಗಳೊಂದಿಗೆ ಚರ್ಚಿಸಿ ಮಾಹಿತಿ ಪಡೆದರು. ಈ ಮೂಲಕ ಜಿಲ್ಲೆಯಲ್ಲಿ ವಿಮಾನ ನಿಲ್ದಾಣ ನಿರ್ಮಾಣದ ಬೇಡಿಕೆ ಮತ್ತೆ ರೆಕ್ಕೆ ಬಿಚ್ಚಿದೆ.
ಕೇಂದ್ರ ವಿಮಾನಯಾನ ಸಚಿವಾಲಯದಿಂದ ದಾವಣಗೆರೆ ಜಿಲ್ಲೆಯಲ್ಲಿ ವಿಮಾನ ನಿಲ್ದಾಣ ಆರಂಭಕ್ಕೆ ಜಿಲ್ಲಾಡಳಿತಕ್ಕೆ ಪತ್ರ ಬರೆಯಲಾಗಿದೆ. ಈ ಪತ್ರದಲ್ಲಿ ಕೇಳಲಾಗಿರುವ ಸ್ಪಷ್ಟನೆಗಳ ಹಿನ್ನಲೆಯಲ್ಲಿ ಸ್ಥಳವನ್ನು ವೀಕ್ಷಣೆ ಮಾಡಲು ಕರ್ನಾಟಕ ಮೂಲಸೌಕರ್ಯ ಅಭಿವೃದ್ದಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ರವಿ ಅವರ ನೇತೃತ್ವದಲ್ಲಿ ಅಧಿಕಾರಿಗಳು ಆಗಮಿಸಿದ್ದರು.
ನಿರ್ದೇಶಕ ರವಿ ಮಾತನಾಡಿ, "ಸಚಿವರ ನಿರ್ದೇಶನದಂತೆ ಸ್ಥಳ ವೀಕ್ಷಣೆ ಮಾಡಲಾಗಿದೆ. ಈಗಾಗಲೇ ಗುರುತಿಸಿರುವ ಸ್ಥಳಗಳು ವಿಮಾನ ನಿಲ್ದಾಣಕ್ಕೆ ಸೂಕ್ತವಾಗಿದ್ದು, ಕನಿಷ್ಠ 2.5 ಕಿಮೀ ಸ್ಥಳ ಬೇಕಾಗಲಿದೆ ಹಾಗೂ ಕೆಲ ಅಂಕಿ ಅಂಶಗಳು ಬೇಕಾಗಿವೆ ಏರ್ ಬಸ್ ನಿಲ್ದಾಣ ಮಾಡುವುದಾದರೆ 500 ಎಕರೆ ಜಾಗ ಬೇಕಾಗಬಹುದು ಹಾಗೂ ಇದರಲ್ಲಿ ಎಷ್ಟು ಸರ್ಕಾರಿ ಜಾಗ ಇದೆಯೆಂದು ಪರಿಶೀಲಿಸಬೇಕು" ಎಂದರು.
ಮಧ್ಯ ಕರ್ನಾಟಕವಾದ ದಾವಣಗೆರೆಯಲ್ಲಿ ವಿಮಾನ ನಿಲ್ದಾಣ ನಿರ್ಮಾಣವಾಗಬೇಕು ಎಂಬುದು ಹಲವು ವರ್ಷಗಳ ಬೇಡಿಕೆ. ದಾವಣಗೆರೆ ಪಕ್ಕದ ಶಿವಮೊಗ್ಗದಲ್ಲಿ ವಿಮಾನ ನಿಲ್ದಾಣ ಕಾಮಗಾರಿ ನಡೆಯುತ್ತಿದೆ. ಇದು ಬಿಟ್ಟರೆ ಹುಬ್ಬಳ್ಳಿ ದಾವಣಗೆರೆಗೆ ಸಮೀಪವಿರುವ ವಿಮಾನ ನಿಲ್ದಾಣವಾಗಿದೆ.

600 ಎಕರೆ ಜಾಗ ಬೇಕಾಗುತ್ತದೆ
ಕರ್ನಾಟಕ ಮೂಲಸೌಕರ್ಯ ಅಭಿವೃದ್ದಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ರವಿ ಮಾತನಾಡಿ, "ಮುಖ್ಯವಾಗಿ ಈ ಭಾಗದಲ್ಲಿ ರೈತರ ಉತ್ಪಾದನೆಗಳು ಹೆಚ್ಚಿರುವುದರಿಂದ ಕಾರ್ಗೊ ನಿಲ್ದಾಣ ಮಾಡುವುದಾದರೆ ಹೆಚ್ಚು ಅನುಕೂಲವಾಗಲಿದೆ. ಕಾರ್ಗೊ ನಿಲ್ದಾಣಕ್ಕೆ 600 ಎಕರೆ ಜಾಗ ಬೇಕಾಗುತ್ತದೆ. ಹಾಗಾಗೀ ಏರ್ ಬಸ್ ನಿಲ್ದಾಣ ಮಾಡುವ ಬಗ್ಗೆ ಚಿಂತಿಸಬೇಕಾಗುತ್ತದೆ" ಎಂದರು.
ನಿಗಮದ ಕಾರ್ಯ ನಿರ್ವಾಹಕ ನಿರ್ದೇಶಕ ಪ್ರಕಾಶ್ ಮಾತನಾಡಿ, "ಕೇಂದ್ರ ವಿಮಾನಯಾನ ಪ್ರಾಧಿಕಾರದವರು ಜಿಲ್ಲೆಯಲ್ಲಿ ವಿಮಾನ ನಿಲ್ದಾಣ ಮಾಡುವ ಸ್ಥಳದಿಂದ ಸುತ್ತಲಿನ ವಿಮಾನ ನಿಲ್ದಾಣಗಳ ಬಗೆಗೆ ಮಾಹಿತಿ ಕೋರಿದ ಹಿನ್ನಲೆಯಲ್ಲಿ ಮ್ಯಾಪ್ ಹಾಕಿ ನೋಡಿದಾಗ ಶಿವಮೊಗ್ಗ, ಬಳ್ಳಾರಿ, ಹುಬ್ಬಳ್ಳಿ ನಿಲ್ದಾಣಗಳು ಕಂಡು ಬರುತ್ತವೆ" ಎಂದು ಹೇಳಿದರು.

ಅಗತ್ಯ ಭೂಮಿ ನೀಡಿದರೆ ನೀಲನಕ್ಷೆ ತಯಾರಿ
ದಾವಣಗೆರೆಯಲ್ಲಿ ವಿಮಾನ ನಿಲ್ದಾಣ ನಿರ್ಮಾಣ ಕುರಿತು ಈ ಹಿಂದೆ ನೀಡಿರುವ ವರದಿಯಂತೆ 340 ಎಕರೆ ಸ್ಥಳ ಗುರುತಿಸಲಾಗಿದೆ. ಈ ಸ್ಥಳ ಎಟಿಆರ್ 72 ಮಾದರಿ ನಿಲ್ದಾಣ ನಿರ್ಮಿಸಲು ಸೂಕ್ತವಾಗಿದೆ. ಒಂದುವೇಳೆ ಏರ್ ಬಸ್ ಮಾದರಿ ನಿಲ್ದಾಣ ನಿರ್ಮಿಸುವುದಾದರೆ ಕನಿಷ್ಠ 600 ಎಕರೆ ಜಾಗ ಬೇಕಾಗುತ್ತದೆ. ಅಗತ್ಯ ಭೂಮಿ ಒದಗಿಸಿದರೆ ನೀಲನಕ್ಷೆ ತಯಾರಿಸಲಾಗುವುದು, ಕೆಲ ತಾಂತ್ರಿಕ ಅಂಶಗಳನ್ನು ಪರಿಶೀಲಿಸಿ, ಮಣ್ಣಿನ ರಚನೆ, ವಾತವರಣ ಮುಂತಾದವುಗಳನ್ನು ಅಭ್ಯಾಸ ಮಾಡಿ ವರದಿ ನೀಡಲಾಗುವುದು ಎಂದು ಅಧಿಕಾರಿಗಳು ಸಭೆಯಲ್ಲಿ ಹೇಳಿದರು.

ಜಿಲ್ಲಾಡಳಿತದಿಂದ ಸಹಕಾರ
ದಾವಣಗೆರೆ ಸಂಸದ ಜಿ. ಎಂ. ಸಿದ್ದೇಶ್ವರ್ ಸಭೆಯಲ್ಲಿ ಮಾತನಾಡಿ, "ಈಗಾಗಲೇ ವರದಿ ನೀಡಿರುವಂತೆ ಎಟಿಆರ್ 72 ಏರ್‌ಪೋರ್ಟ್ ಬಗೆಗೆ ಸಿದ್ದತೆ ಮಾಡಿಕೊಳ್ಳಿ. ಮುಂದಿನ ಏರ್ ಬಸ್ ನಿಲ್ದಾಣಕ್ಕೆ ಅನುಕೂಲವಾಗುವಂತೆ ಭೂಮಿಯನ್ನು ಗುರುತಿಸೋಣ" ಎಂದರು.
ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಸಭೆಯಲ್ಲಿ ಮಾತನಾಡಿ, "ಜಿಲ್ಲೆಯ ಜನರ ಬಹುದಿನಗಳ ಕನಸಾದ ಏರ್ ಪೋರ್ಟ್ ಸಾಕಾರಕ್ಕೆ ಜಿಲ್ಲಾಡಳಿತ ವತಿಯಿಂದ ಎಲ್ಲ ರೀತಿಯ ಸಹಕಾರ ನೀಡಲಾಗುವುದು" ಎಂದು ಭರವಸೆ ನೀಡಿದರು.

ಸಚಿವರಾಗಿದ್ದ ಸಿದ್ದೇಶ್ವರ್
ದಾವಣಗೆರೆಗೆ ಏರ್ ಪೋರ್ಟ್ ಬೇಕು ಎಂಬುದು ಹಲವು ವರ್ಷಗಳ ಬೇಡಿಕೆ. ಸಂಸದ ಜಿ. ಎಂ. ಸಿದ್ದೇಶ್ವರ್ ನರೇಂದ್ರ ಮೋದಿ ಸಂಪುಟದಲ್ಲಿ ಭಾರೀ ಕೈಗಾರಿಕೆ ಖಾತೆ ರಾಜ್ಯ ಸಚಿವರಾಗಿದ್ದರು. ಆದರೂ ಸಹ ವಿಮಾನ ನಿಲ್ದಾಣ ಯೋಜನೆ ಜಾರಿಗೊಳಿಸಲು ಆಗಲಿಲ್ಲ.
ಜಿಲ್ಲೆಯಲ್ಲಿ ವಿಮಾನ ನಿಲ್ದಾಣ ನಿರ್ಮಿಸಲು ಆನಗೋಡು ಸಮೀಪ 1370 ಎಕರೆ ಭೂಮಿಯನ್ನು ಗುರುತಿಸಲಾಗಿತ್ತು. ಆದರೆ ಕೆಲವು ರಾಜಕೀಯ ಉದ್ದೇಶದಿಂದ ರೈತರನ್ನು ಎತ್ತಿಕಟ್ಟಿದರು. ಆದ್ದರಿಂದ ಯೋಜನೆ ಜಾರಿಗೆ ಬರಲಿಲ್ಲ. ಜಿಲ್ಲೆಯಲ್ಲಿ ವಿಮಾನ ಹಾರಾಟ ಕಣ್ತುಂಬಿಕೊಳ್ಳುವ ಜನರ ಕನಸು ನನಸಾಗಲಿಲ್ಲ.












Click it and Unblock the Notifications