• search
 • Live TV
ದಾವಣಗೆರೆ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ದೇವರಬೆಳಕೆರೆ ಡ್ಯಾಂನಲ್ಲಿ ಬಿರುಕು: ಸೌಂದರ್ಯದ ಒಡಲಲ್ಲಿ ಆಪತ್ತು, ರೈತರ ಎದೆಯಲ್ಲಿ ಢವಢವ!

By ದಾವಣಗೆರೆ ಪ್ರತಿನಿಧಿ
|
Google Oneindia Kannada News

ದಾವಣಗೆರೆ, ನವೆಂಬರ್ 24: ದಾವಣಗೆರೆ ಜಿಲ್ಲೆಯಲ್ಲಿ ವರುಣ ಅಬ್ಬರಿಸಿ ಬೊಬ್ಬಿರಿದು ತಣ್ಣಗಾಗಿದ್ದಾನೆ. ಕೈಗೆ ಬಂದಿದ್ದ ಫಸಲು ಕಳೆದುಕೊಂಡು ಸಂಕಷ್ಟದಲ್ಲಿರುವ ರೈತರಿಗೆ ಈಗ ಮತ್ತೊಂದು ಆಘಾತ ಎದುರಾಗಿದೆ. ಮಾತ್ರವಲ್ಲ, ದುಗುಡವೂ ಹೆಚ್ಚಾಗುವಂತೆ ಮಾಡಿದೆ. ಯಾಕೆಂದರೆ ಸಾವಿರಾರು ಎಕರೆ ಪ್ರದೇಶಗಳಿಗೆ ನೀರುಣಿಸುವ ಡ್ಯಾಂನಲ್ಲಿ ಈಗ ಬಿರುಕು ಬಿಟ್ಟಿದೆ.

ಹರಿಹರ ತಾಲೂಕಿನ ದೇವರಬೆಳಕೆರೆ ಗ್ರಾಮದಲ್ಲಿ ಪಿಕಪ್ ಅಣೆಕಟ್ಟು ನಿರ್ಮಾಣ ಮಾಡಲಾಗಿದೆ. ಕಳೆದ ನಾಲ್ಕು ದಶಕಗಳ ಹಿಂದೆ ನಿರ್ಮಿಸಲಾಗಿರುವ ಈ ಡ್ಯಾಂ ಲಕ್ಷಾಂತರ ರೈತರಿಗೆ ಜೀವಸೆಲೆ ಆಗಿದೆ. ಈ ನೀರು ಆಧರಿಸಿಯೇ ಬೆಳೆ ಬೆಳೆಯುತ್ತಿದ್ದು, ರೈತರ ಪಾಲಿಗೆ ವರದಾನವಾಗಿದೆ. ಭದ್ರಾ ಡ್ಯಾಂ ಹಾಗೂ ಹಳ್ಳ- ಕೊಳ್ಳಗಳಿಂದ ಹರಿದು ಬರುವ ನೀರು ಇಲ್ಲಿ ಸಂಗ್ರಹ ಆಗುತ್ತದೆ. ಈ ನೀರನ್ನು ರೈತರ ಬೆಳೆಗಳಿಗೆ ಹರಿಸಲಾಗುತ್ತದೆ. ಹಾಗಾಗಿ, ದೇವರಬೆಳೆಕೆರೆ ಪಿಕಪ್ ಡ್ಯಾಂ ರೈತರ ಬದುಕಿಗೆ ವರದಂತಿದೆ.

 ರೈತರಲ್ಲಿ ಆತಂಕ ಮತ್ತಷ್ಟು ಹೆಚ್ಚಳ

ರೈತರಲ್ಲಿ ಆತಂಕ ಮತ್ತಷ್ಟು ಹೆಚ್ಚಳ

ಆದರೆ, ಈಗ ಡ್ಯಾಂನಲ್ಲಿ ಬಿರುಕು ಕಾಣಿಸಿಕೊಂಡಿದ್ದು, ರೈತರಲ್ಲಿ ಆತಂಕ ಮತ್ತಷ್ಟು ಹೆಚ್ಚಾಗುವಂತೆ ಮಾಡಿದೆ. ಅಕಾಲಿಕ ಮಳೆಯಿಂದಾಗಿ ಅಪಾರ ಪ್ರಮಾಣದ ಬೆಳೆ ನಷ್ಟ ಅನುಭವಿಸಿರುವ ರೈತರಿಗೆ ಈಗ ಮತ್ತೊಂದು ಭಯ ಶುರುವಾಗುವ ಜೊತೆಗೆ ಒಂದು ವೇಳೆ ಡ್ಯಾಂನಲ್ಲಿ ಬಿರುಕು ಬಿಟ್ಟಿರುವ ಜಾಗದಿಂದ ನೀರು ವೇಗವಾಗಿ ಹೊರಬಂದರೆ ಏನು ಮಾಡುವುದು ಎಂಬ ಚಿಂತೆಯಲ್ಲಿ ಮುಳುಗಿದ್ದಾರೆ.

ಕಳೆದ ಒಂದು ವಾರದಿಂದ ಸುರಿದ ಭಾರೀ ಮಳೆಯಿಂದಾಗಿ ಹರಿಹರ ತಾಲೂಕಿನ ದೇವರಬೆಳಕೆರೆ ಪಿಕಪ್ ಡ್ಯಾಂ ತುಂಬಿದೆ. ಮಳೆಗಾಲದ ವೇಳೆಯೂ ತುಂಬಿ ಹರಿದಿತ್ತು. ಆದರೆ, ಈಗ ಡ್ಯಾಂನಲ್ಲಿ ಸಂಪೂರ್ಣವಾಗಿ ನೀರು ಸಂಗ್ರಹವಾಗಿರುವುದು ಖುಷಿ ತಂದರೆ, ಮತ್ತೊಂದೆಡೆ ಬಿರುಕು ಕಾಣಿಸಿಕೊಂಡಿದ್ದರೂ ಅಧಿಕಾರಿಗಳು ಗಂಭೀರವಾಗಿ ಪರಿಗಣಿಸದಿರುವುದು ರೈತರ ಆಕ್ರೋಶಕ್ಕೆ ಕಾರಣವಾಗಿದೆ.

 ಅಣೆಕಟ್ಟು ನಿರ್ಮಾಣವಾಗಿ ಸುಮಾರು 43 ವರ್ಷಗಳಾಗಿವೆ

ಅಣೆಕಟ್ಟು ನಿರ್ಮಾಣವಾಗಿ ಸುಮಾರು 43 ವರ್ಷಗಳಾಗಿವೆ

ಸಾವಿರಾರು ಎಕರೆ ಪ್ರದೇಶಕ್ಕೆ ನೀರುಣಿಸುವ ಈ ಪಿಕ್ಅಪ್ ಅಣೆಕಟ್ಟು ನಿರ್ಮಾಣವಾಗಿ ಸುಮಾರು 43 ವರ್ಷಗಳೇ ಕಳೆದಿವೆ. ಡ್ಯಾಂನ ಎಡಗಡೆ ಭಾಗದಲ್ಲಿ ಬಿರುಕು ಕಾಣಿಸಿಕೊಂಡಿದೆ. ಒಂದು ವೇಳೆ ಡ್ಯಾಂ ಒಡೆದರೆ 10 ಹಳ್ಳಿ, ಸಾವಿರಾರು ಎಕರೆ ಕೃಷಿ ಭೂಮಿ ಜಲಾವೃತವಾಗುವ ಜೊತೆಗೆ ಭಾರೀ ಹಾನಿ ಆಗಲಿದೆ. ಕಳೆದ ಕೆಲ ದಿನಗಳಿಂದ ಸುರಿದ ಮಳೆಯಿಂದಾಗಿ ಭರ್ತಿಯಾದ ಪಿಕಪ್ ಡ್ಯಾಂನ 14 ಗೇಟ್‌ಗಳ ಮೂಲಕ ನೀರು ಹೊರಬಿಡಲಾಗುತ್ತಿದೆ. ಆದರೆ 14 ಗೇಟ್‌ಗಳು ಕಸ ಸೇರಿದಂತೆ ತ್ಯಾಜ್ಯದಿಂದಾಗಿ ನೀರು ಹೊರ ಹೊಗುತ್ತಿಲ್ಲ. ಇದೇ ಕಾರಣಕ್ಕೆ ಬಿರುಕು ಬಿಟ್ಟಿರಬಹುದು ಎಂದು ಹೇಳಲಾಗುತ್ತಿದೆ.

 10,570 ಎಕರೆ ಕೃಷಿ ಭೂಮಿಗೆ ನೀರುಣಿಸುವ ಜೀವಸೆಲೆ

10,570 ಎಕರೆ ಕೃಷಿ ಭೂಮಿಗೆ ನೀರುಣಿಸುವ ಜೀವಸೆಲೆ

2286.08 ಚದರ ಮೀಟರ್ ವಿಸ್ತೀರ್ಣವುಳ್ಳ ಡ್ಯಾಂ, 10,570 ಎಕರೆ ಕೃಷಿ ಭೂಮಿಗೆ ನೀರುಣಿಸುವ ಜೀವಸೆಲೆಯಾಗಿದೆ. ಬಲ್ಲೂರು, ದೇವರಬೆಳಕೆರೆ, ಕಡ್ಲೇಗೊಂದಿ, ಬೆಳ್ಳೂಡಿ ಸೇರಿ ಕೆಳ ಹಂತದ ಹಳ್ಳಿಗಳಲ್ಲಿ ಈಗ ಆತಂಕ ಶುರುವಾಗಿದೆ. ಡ್ಯಾಂನಲ್ಲಿ ಬಿರುಕಿನ ಬಗ್ಗೆ ಗ್ರಾಮಸ್ಥರು ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜನ ಆಗಿಲ್ಲ. ಕಳೆದ ಒಂದು ತಿಂಗಳಿಂದ ಅಧಿಕಾರಿಗಳಿಗೆ ಹೇಳಿದರೂ ಕ್ಯಾರೇ ಎಂದಿಲ್ಲ ಎಂದು ಸ್ಥಳೀಯರು ಆರೋಪಿಸಿದ್ದಾರೆ.

ಇನ್ನು ಸ್ಥಳಕ್ಕೆ ಹರಿಹರ ಶಾಸಕ ಎಸ್. ರಾಮಪ್ಪ ಭೇಟಿ ನೀಡಿ ಪರಿಶೀಲನೆ ನಡೆಸಿದರು‌. ಸಿಇಒ ಗಮನಕ್ಕೆ ತಂದರೂ ಸ್ಥಳಕ್ಕೆ ಬಂದಿಲ್ಲ. ಡ್ಯಾಂನಲ್ಲಿ ಬಿರುಕು ಬಿಟ್ಟಿರುವುದು ನಿಜ. ಈ ಡ್ಯಾಂ ಒಡೆದರೆ ಹತ್ತಾರು ಹಳ್ಳಿಗಳು ಸಂಕಷ್ಟಕ್ಕೆ ಒಳಗಾಗಲಿವೆ. ಪರಿಣಿತರಿಂದ ಬಿರುಕಿನ ಬಗ್ಗೆ ಅಧ್ಯಯನ ನಡೆಸಿ ಸಮಸ್ಯೆ ಬಗೆಹರಿಸಬೇಕು ಎಂದು ಶಾಸಕ ರಾಮಪ್ಪ ಒತ್ತಾಯಿಸಿದ್ದಾರೆ.

  ISRO ಮತ್ತೊಮ್ಮೆ ಪ್ರಪಂಚಕ್ಕೆ ಶಾಕ್ ನೀಡಲು ಸಿದ್ದವಾಗುತ್ತಿರುವುದು ಹೀಗೆ | Oneindia Kannada
   ನೀರು ಹರಿಯುವುದನ್ನು ನೋಡುವುದೇ ಚೆಂದ

  ನೀರು ಹರಿಯುವುದನ್ನು ನೋಡುವುದೇ ಚೆಂದ

  ಇನ್ನು ದೇವರಬೆಳಕೆರೆ ಡ್ಯಾಂನಿಂದ ಹೊರಬಿಡುವ ನೀರು ಹರಿಯುವುದನ್ನು ನೋಡುವುದೇ ಚೆಂದ. ಇಲ್ಲಿ ನೀರು ಹರಿಯುವ ಸೊಬಗು ನೋಡಲು ವಾರಾಂತ್ಯಕ್ಕೆ ಪ್ರವಾಸಿಗರ ದಂಡೇ ಹರಿದು ಬರುತ್ತಿದೆ. ಒಂದೆಡೆ ಹೊರ ಹೋಗುವ ನೀರಿನ ಮೂಲಕ ನಯನ ಮನೋಹರ ದೃಶ್ಯ ಕಂಡು ಬರುತ್ತದೆ. ನಿತ್ಯವೂ ಜನರು ಇಲ್ಲಿಗೆ ಆಗಮಿಸಿ ನೀರಿನ ಸೊಬಗು ನೋಡಿ ಖುಷಿಪಡುತ್ತಾರೆ.

  ಶನಿವಾರ ಮತ್ತು ಭಾನುವಾರ ಕಾಲೇಜು ವಿದ್ಯಾರ್ಥಿಗಳು ಇಲ್ಲಿಗೆ ಮೋಜು ಮಸ್ತಿಗೆ ಹೆಚ್ಚಾಗಿ ಬರುತ್ತಿದ್ದಾರೆ. ಸೌಂದರ್ಯದ ಮೂಲಕ ಜನರ ಮನ ಸೆಳೆಯುತ್ತಿದ್ದರೆ ಮತ್ತೊಂದೆಡೆ ಬಿರುಕು ಕಾಣಿಸಿಕೊಂಡಿರುವುದು ಸೌಂದರ್ಯದ ಒಡಲಲ್ಲಿ ಆಪತ್ತು ಎಂಬಂತಾಗಿದೆ. ಆದಷ್ಟು ಬೇಗ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಬಿರುಕು ಬಿಡಲು ಕಾರಣವೇನು? ಏನೆಲ್ಲಾ ಕ್ರಮ ತೆಗೆದುಕೊಳ್ಳಬೇಕು? ಎಂಬ ಬಗ್ಗೆ ಸಮಾಲೋಚನೆ ನಡೆಸಿ ಕ್ರಮ ಕೈಗೊಳ್ಳಬೇಕು ಎಂದು ರೈತರು ಒತ್ತಾಯಿಸಿದ್ದಾರೆ.

  English summary
  Davanagere: The Pickup Dam was built in the village of Devarabelakere in Harihara Taluk and is now cracking in a dam that is watered to thousands of acres.
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X