ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ ಸವಿತಾ ಬಾಯಿ ಫೋಟೋ ಅಶ್ಲೀಲ ಎಡಿಟ್: ಬಂಜಾರ ಸಮುದಾಯದಿಂದ ಪ್ರತಿಭಟನೆ
ಮಾಯಾಕೊಂಡ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯೂ ಆದ ಬಂಜಾರ ಸಮುದಾಯದ ನಾಯಕಿ ಸವಿತಾಬಾಯಿ ಮಲ್ಲೇಶ್ ನಾಯ್ಕ್ ಅವರ ಫೋಟೋಗಳನ್ನು ಎಡಿಟ್ ಮಾಡಿ ಅಶ್ಲೀಲವಾಗಿ ಚಿತ್ರಿಸಲಾಗಿದೆ.
ದಾವಣಗೆರೆ, ಮಾರ್ಚ್ 2: ಮಾಯಾಕೊಂಡ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯೂ ಆದ ಬಂಜಾರ ಸಮುದಾಯದ ನಾಯಕಿ ಸವಿತಾಬಾಯಿ ಮಲ್ಲೇಶ್ ನಾಯ್ಕ್ ಅವರ ಫೋಟೋಗಳನ್ನು ಎಡಿಟ್ ಮಾಡಿ ಅಶ್ಲೀಲವಾಗಿ ಚಿತ್ರಿಸಲಾಗಿದೆ. ಈ ಚಿತ್ರಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಾಕಿ ಅಪಮಾನ ಮಾಡಲಾಗಿದೆ. ಈ ಬಗ್ಗೆ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸಬೇಕೆಂದು ರಾಜ್ಯ ಬಂಜಾರ ವಿದ್ಯಾರ್ಥಿ ಸಂಘದ ರಾಜಾಧ್ಯಕ್ಷ ಡಿ.ಆರ್.ಗಿರೀಶ್ ಆಗ್ರಹಿಸಿದ್ದಾರೆ.
ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮಾಯಕೊಂಡ ಮೀಸಲು ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಟಿಕೆಟ್ ಆಕಾಂಕ್ಷಿ ಸವಿತಾ ಬಾಯಿ ಮಲ್ಲೇಶ್ ನಾಯ್ಕ ಅವರ ಭಾವಚಿತ್ರವನ್ನು ಅಶ್ಲೀಲವಾಗಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಡುತ್ತಿರುವ ಕಿಡಿಗೇಡಿಗಳ ಕೃತ್ಯ ವಿರೋಧಿಸಿ ಮಾರ್ಚ್ 6ರಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿ ಮುಂದೆ ಪ್ರತಿಭಟನೆ ನಡೆಸಲಾಗುವುದು. ಸುಮಾರು 5ರಿಂದ ಆರು ಸಾವಿರ ಜನರು ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಹೇಳಿದರು.

ಸವಿತಾಬಾಯಿ ಮಲ್ಲೇಶ್ ನಾಯ್ಕ ಅವರ ಭಾವಚಿತ್ರವನ್ನು ಅಶ್ಲೀಲವಾಗಿ ಚಿತ್ರಿಸಿ ಸಾಮಾಜಿಕ ಜಾಲತಾಣಗಳಾದ ವಾಟ್ಸಾಪ್ ಹಾಗು ಫೇಸ್‌ಬುಕ್‌ಗಳಲ್ಲಿ ಹರಿಬಿಡುತ್ತಿರುವ ಕಿಡಿಗೇಡಿಗಳ ಕೃತ್ಯವನ್ನು ರಾಜ್ಯದ ಸಮಸ್ತ ಬಂಜಾರ ಸಮಾಜ ಉಗ್ರವಾಗಿ ಖಂಡಿಸುತ್ತದೆ. ಸೂಕ್ತ ಕ್ರಮ ಕೈಗೊಳ್ಳದಿದ್ದರೆ ಚುನಾವಣೆಯಲ್ಲಿ ಇದಕ್ಕೆ ಸಮಾಜ ಉತ್ತರ ನೀಡುತ್ತದೆ ಎಂದರು.
ತಮ್ಮ ಸಮರ್ಪಕ ನಾಯಕತ್ವ, ಸೇವಾಕಾರ್ಯ, ಸರಳತನ, ಕ್ಷೇತ್ರದ ಎಲ್ಲಾ ಧರ್ಮ, ಜಾತಿ ಜನಾಂಗದವರ ನಿಕಟ ಸಂಪರ್ಕದ ಕಾರಣದಿಂದ ಈಗಾಗಲೇ ಜನಾನುರಾಗಿ ನಾಯಕಿ ಎಂಬ ಹೆಗ್ಗಳಿಕೆಗೆ ಸವಿತಾ ಬಾಯಿ ಅವರು ಪಾತ್ರರಾಗಿದ್ದಾರೆ. ಹೀಗಿರುವಾಗ ಕಾಂಗ್ರೆಸ್ ಪಕ್ಷದ ಕಳೆದ ವಿಧಾನಸಭಾ ಚುನಾವಣಾ ಪರಾಜಿತ ಅಭ್ಯರ್ಥಿ ಕೆ.ಎಸ್.ಬಸವರಾಜ್ ಕ್ಷೇತ್ರದಾದ್ಯಂತ ಬಂಜಾರ ಸಮಾಜದ ಮಹಿಳೆ ಹಾಗೂ ಮಾಯಾಕೊಂಡ ಮೀಸಲು ಕ್ಷೇತ್ರದ ಸ್ಥಳೀಯ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ ಸವಿತಾಬಾಯಿ ಅವರ ಬಗ್ಗೆ ಹಿಂದಿನಿಂದಲೂ ಅವಹೇಳನ, ಅಪಪ್ರಚಾರ ಮಾಡುತ್ತಾ ಬಂದಿರುತ್ತಾರೆ ಎಂದು ದೂರಿದರು.

ರಾಜಕೀಯಕ್ಕೆ ಪಾದಾರ್ಪಣೆ ಮಾಡುವ ಮುನ್ನ ಸವಿತಾಬಾಯಿ ತಮಿಳು ಸಿನಿಮಾ ಹಾಗೂ ಮಾಡೆಲಿಂಗ್‌ನಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು. ಈ ವಿಚಾರ ತಿಳಿದು ಬಸವಂತಪ್ಪ ಅಲಿಯಾಸ್ ಕೆ. ಎಸ್. ಬಸವರಾಜ್ ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳುವ ಸಲುವಾಗಿ ವ್ಯವಸ್ಥಿತವಾಗಿ ತೇಜೋವಧೆ ಮಾಡಲು ಹೊರಟಿದ್ದಾರೆ. ಅಶ್ಲೀಲವಾಗಿ ಫೋಟೋಗಳನ್ನು ಎಡಿಟ್ ಮಾಡಿ ಕ್ಷೇತ್ರದ ಕೆಲ ಜನರಿಗೆ, ಯುವಕರಿಗೆ ತೋರಿಸಿ ಮಾನ ಹಾನಿ ಮಾಡುವ ನೀಚ ಕೆಲಸವನ್ನು ಮಾಡುತ್ತಿದ್ದಾರೆ. ಅಷ್ಟೇ ಅಲ್ಲದೆ ಆಕಾಂಕ್ಷಿ ಆಗಿದ್ದ ನಾಯಕರಿಗೂ ಅಶ್ಲೀಲ ಚಿತ್ರಗಳನ್ನು ತೋರಿಸಿ ರಾಜಕೀಯವಾಗಿ ತುಳಿಯಲು ಪ್ರಯತ್ನಿಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕಾಂಗ್ರೆಸ್ ಮಹಿಳೆಯರ ರಕ್ಷಣೆ ಹಾಗೂ ಮಹಿಳಾ ಸಬಲೀಕರಣಕ್ಕೆ ಆದ್ಯತೆ ನೀಡುವ ಪಕ್ಷ. ಆದರೆ ಬಸವಂತಪ್ಪನವರ ಈ ಕೃತ್ಯ ಪಕ್ಷಕ್ಕೆ ಮುಜುಗರ ತರುವುದರಲ್ಲಿ ಸಂದೇಹವೇ ಇಲ್ಲ. ಪಕ್ಷದ ವರಿಷ್ಠರು ಬಸವಂತಪ್ಪ ವಿರುದ್ದ ಸೂಕ್ತ ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿದರು. ಸುದ್ದಿಗೋಷ್ಠಿಯಲ್ಲಿ ಮಂಜಾನಾಯ್ಕ, ಸಲ್ಮಾಬಾನು, ಪಾರ್ವತಮ್ಮ, ಅಭಿಲಾಷ್, ಸಂತೋಷ ನಾಯ್ಕ, ಲತಾ ನಾಯ್ಕ, ವಾಣಿ ನಾಯ್ಕ ಇತರರು ಉಪಸ್ಥಿತರಿದ್ದರು.












Click it and Unblock the Notifications