Murugha mutt seer: ಜೈಲಿನಿಂದ ಬಿಡುಗಡೆಯಾದ ಮರುಘಾ ಶ್ರೀಗಳ ವಾಸ್ತವ್ಯ ಎಲ್ಲಿ ಗೊತ್ತಾ?, ಇಲ್ಲಿದೆ ಮಾಹಿತಿ
ದಾವಣಗೆರೆ, ನವೆಂಬರ್, 16: ಪೋಕ್ಸೋ ಕೇಸ್‌ನಲ್ಲಿ ಬಂಧಿತರಾಗಿದ್ದ ಚಿತ್ರದುರ್ಗದ ಮರುಘಾ ಮಠದ ಪೀಠಾಧಿಪತಿ ಶಿವಮೂರ್ತಿ ಮುರುಘಾ ಶ್ರೀ ಇಂದು ಜೈಲಿನಿಂದ ಬಿಡುಗಡೆಯಾದ ನಂತರ ದಾವಣಗೆರೆಗೆ ಭೇಟಿ ನೀಡಿದರು. ನಗರದ ಶಿವಯೋಗಿ ಮಂದಿರಕ್ಕೆ ಆಗಮಿಸಿದ ಶ್ರೀಗಳಿಗೆ ಹೂಮಾಲೆ ಹಾಕಿ ಹಿಸಿ ತಿನ್ನಿಸಿ ಭಕ್ತರು ಸ್ವಾಗತ ಕೋರಿದರು.
ನಗರದ ಜಯದೇವ ವೃತ್ತದಲ್ಲಿರುವ ಶಿವಯೋಗಿ ಮಂದಿರಕ್ಕೆ ಚಿತ್ರದುರ್ಗ ಜೈಲಿನಿಂದ ಬಿಡುಗಡೆಯಾದ ಬಳಿಕ ಆಗಮಿಸಿದ ಶ್ರೀಗಳಿಗೆ ಭಕ್ತರು ಸ್ವಾಗತ ಕೋರಿದರು. ಶಿವಯೋಗಿ ಮಂದಿರದಲ್ಲಿ ಜಯದೇವ ಶ್ರೀಗಳು ಮತ್ತು ಮುರುಘರಾಜೇಂದ್ರ ಶ್ರೀಗಳ ಗದ್ಧುಗೆಗೆ ಭೇಟಿ ನೀಡಿ ದರ್ಶನ ಪಡೆದರು. ಹಿರಿಯ ಶ್ರೀಗಳ ಗದ್ದುಗೆಗೆ ನಮಸ್ಕರಿಸಿದ ಮುರುಘಾ ಶ್ರೀಗಳು ಬಳಿಕ ದಾವಣಗೆರೆಯ ವಿರಕ್ತ ಮಠಕ್ಕ ತೆರಳಿದರು. ಇಲ್ಲಿಯೇ ಮುರುಘಾ ಶ್ರೀಗಳು ವಾಸ್ತವ್ಯ ಹೂಡಲಿದ್ದಾರೆ. ಆದರೆ ಎಷ್ಟು ದಿನಗಳವರೆಗೆ ಶ್ರೀಗಳು ವಾಸ್ತವ್ಯ ಹೂಡುತ್ತಾರೆ ಎಂಬ ಕುರಿತಂತೆ ಮಾಹಿತಿ ಇಲ್ಲ.

ಶ್ರೀಗಳು ಬಿಡುಗಡೆಯಾಗಿ ಬಂದ ಬಳಿಕ ಜಯದೇವ ಮುರುಘಾ ರಾಜೇಂದ್ರ ಮಹಾಸ್ವಾಮಿಗಳ ಕರ್ತೃ ಗದ್ದುಗೆ ದರ್ಶನ ಪಡೆದರು. ಈ ವೇಳೆ ಪಕ್ಕದಲ್ಲಿಯೇ ಇದ್ದ ಮಾಜಿ ಶಾಸಕ ಹೆಚ್. ಎಸ್.ಶಿವಶಂಕರ್ ಅವರು ಗುರುಗಳು ಬೆಂಗಳೂರು ಇಲ್ಲವೇ ಬೇರೆ ಕಡೆ ಹೋಗುತ್ತೀರಾ ಎಂದು ಭಾವಿಸಿದ್ದೆವು. ನೀವು ದಾವಣಗೆರೆಯಲ್ಲಿಯೇ ವಾಸ್ತವ್ಯ ಹೂಡುತ್ತಿರುವುದು ತುಂಬಾನೇ ಖುಷಿ ತಂದಿದೆ. ದಾವಣಗೆರೆಯು ಸಾಂಸ್ಕೃತಿಕವಾಗಿ, ಸಾಹಿತ್ಯಿಕವಾಗಿ, ಶೈಕ್ಷಣಿಕವಾಗಿ ಹೆಸರು ಪಡೆದಿರುವ ಜಿಲ್ಲೆ. ಇಲ್ಲಿಯೇ ನೀವು ತಂಗುತ್ತಿರುವುದು ನಮಗೆಲ್ಲಾ ಸಮಾಧಾನ ತಂದಿದೆ ಎಂದು ಹೇಳಿದರು.
ನೀವು ಬೇರೆ ಜಿಲ್ಲೆಗೆ ಹೋಗುತ್ತೀರಾ. ಇಲ್ಲವೇ ಬೆಂಗಳೂರಿನಲ್ಲಿ ವಾಸ್ತವ್ಯ ಹೂಡುತ್ತೀರಾ ಎಂದು ಕೆಲವರು ಭಾವಿಸಿದ್ದರು. ಆದರೆ ನೀವು ದಾವಣಗೆರೆಯ ಮಂಡಿಪೇಟೆಯಲ್ಲಿರುವ ವಿರಕ್ತ ಮಠದಲ್ಲಿ ವಾಸ್ತವ್ಯ ಮಾಡುತ್ತಿದ್ದು, ಭಕ್ತರಿಗೆ ಸಂತಸ ತಂದಿದೆ ಎಂದರು. ಇದಕ್ಕೆ ಪ್ರತಿಕ್ರಿಯೆ ನೀಡಿದ ಶ್ರೀಗಳು, ಹೌದು ದಾವಣಗೆರೆಯು ಸಾಂಸ್ಕೃತಿಕ ನಗರಿ. ಇಲ್ಲಿಯೇ ವಾಸ್ತವ್ಯ ಹೂಡುತ್ತಿದ್ದೇನೆ ಎಂದು ಹೇಳಿದರು.
ಮುರುಘಾ ಶ್ರೀಗಳು ಏನು ಹೇಳಿದ್ರು?
ಮಾಧ್ಯಮದವರ ಪ್ರಶ್ನೆಗಳಿಗೆ ಪ್ರತಿಕ್ರಿಯೆ ನೀಡಲು ನಿರಾಕರಿಸಿದ ಶಿವಮೂರ್ತಿ ಮುರುಘಾ ಶರಣರು, ಈ ಸಂದರ್ಭದಲ್ಲಿ ನಾವು ಮೌನವಾಗಿದ್ದೇವೆ. ಯಾವುದನ್ನೂ ಮಾತನಾಡುವುದಿಲ್ಲ. ನಾವು ಮೌನವಾಗಿರುತ್ತೇವೆ ಎಂದರು.
ಈಗಾಗಲೇ ಎಲ್ಲವನ್ನೂ ವಕೀಲರು ನಿಮಗೆ ಹೇಳಿರುತ್ತಾರೆ. ಹಾಗಾಗಿ, ನಾನು ಹೆಚ್ಚು ಮಾತನಾಡಲು ಇಷ್ಟಪಡುವುದಿಲ್ಲ. ನಿಮ್ಮ ಸಹಕಾರಕ್ಕೆ ಧನ್ಯವಾದಗಳು ಎಂದ ಮುರುಘಾ ಶರಣರು ಪ್ರಕರಣಕ್ಕೆ ಸಂಬಂಧಿಸಿದಂತೆ ಷಡ್ಯಂತ್ರ ಮಾಡಲಾಗಿದೆ ಎಂಬುದೂ ಸೇರಿದಂತೆ ಯಾವುದೇ ಪ್ರಶ್ನೆಗಳಿಗೆ ಉತ್ತರ ನೀಡದೇ ತೆರಳಿದರು.
ನಾನು ಜಾಮೀನಿನ ಮೇಲೆ ಬಿಡುಗಡೆ ಆಗಿದ್ದೇನೆ. ಹೆಚ್ಚು ಪ್ರತಿಕ್ರಿಯೆ ನೀಡುವುದಿಲ್ಲ. ಏನನ್ನೂ ಈಗಲೇ ಮಾತನಾಡುವುದಿಲ್ಲ. ವಿಚಾರಣೆ ನಡೆಯುತ್ತಿದೆ. ನಮ್ಮ ವಕೀಲರು ಹೆಚ್ಚು ಮಾತನಾಡಬಾರದು ಎಂದು ಸೂಚನೆ ನೀಡಿದ್ದಾರೆ. ನ್ಯಾಯಾಲಯದ ಆದೇಶದಂತೆ ಜಾಮೀನು ಸಿಕ್ಕಿದೆ ಎಂದು ಹೇಳಿದರು. ಇನ್ನು ಎಲ್ಲರಿಗೂ ಒಳ್ಳೆಯದು ಮಾಡಿ. ಮಾಧ್ಯಮದವರ ಸಹಕಾರ ಇರಲಿ. ಒಳಿತಾಗಲಿ ಎಂಬುದಷ್ಟೇ ನನ್ನ ಹಾರೈಕೆ ಎಂದು ಶಿವಮೂರ್ತಿ ಮುರುಘಾ ಶರಣರು ಹೇಳಿದರು. ಬೇರೆ ಯಾವುದೇ ವಿಚಾರಗಳ ಕುರಿತಂತೆ ಪ್ರತಿಕ್ರಿಯೆ ನೀಡಲು ನಿರಾಕರಿಸಿದರು.
ಇನ್ನು ಶ್ರೀಗಳು ಬಿಡುಗಡೆಯಾಗಿದ್ದು, ಖುಷಿ ಕೊಟ್ಟಿದೆ. ಶ್ರೀಗಳ ಆಗಮನದಿಂದ ಸದ್ಯಕ್ಕೆ ಭಕ್ತರು ನಿರಾಳರಾಗಿದ್ದಾರೆ ಎಂದು ಸಮಾಜದ ಮುಖಂಡರು ಹೇಳಿದರು.











Click it and Unblock the Notifications