ವಂದೇ ಭಾರತ್ ರೈಲಿಗೆ ಕಲ್ಲೇಟು ಪ್ರಕರಣಕ್ಕೆ ಟ್ವಿಸ್ಟ್: 12 ವರ್ಷದ ಬಾಲಕರಿಂದ ಕೃತ್ಯ
ದಾವಣಗೆರೆ, ಜುಲೈ 05: ದಾವಣಗೆರೆಯಲ್ಲಿ ವಂದೇ ಭಾರತ್ ರೈಲಿಗೆ ಕಲ್ಲು ಹೊಡೆದ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದ್ದು, 12 ವರ್ಷದ ಬಾಲಕರು ಕಲ್ಲು ಹೊಡೆದಿರುವುದು ಬೆಳಕಿಗೆ ಬಂದಿದೆ.
ಕಳೆದ ಕೆಲ ದಿನಗಳ ಹಿಂದೆಯಷ್ಟೇ ದಾವಣಗೆರೆಯಲ್ಲಿ ಸಂಸದ ಜಿ. ಎಂ. ಸಿದ್ದೇಶ್ವರ ನೇತೃತ್ವದಲ್ಲಿ ಧಾರವಾಡ-ಬೆಂಗಳೂರು ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲನ್ನು ಅದ್ಧೂರಿಯಾಗಿ ಬರಮಾಡಿಕೊಳ್ಳಲಾಗಿತ್ತು. ಆದರೆ ಕಳೆದ ಶನಿವಾರ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿಗೆ ಯಾರೋ ಕಲ್ಲು ಹೊಡೆದಿದ್ದು, ಗಾಜು ಪುಡಿಪುಡಿಯಾಗಿತ್ತು. ಅದೃಷ್ಟವಶಾತ್ ಯಾವುದೇ ಅನಾಹುತ ಸಂಭವಿಸಿರಲಿಲ್ಲ.

ಉತ್ತರ ಭಾರತದಲ್ಲಿ ನಡೆಯುತ್ತಿದ್ದ ಘಟನೆ ದಾವಣಗೆರೆಯಲ್ಲಿ ನಡೆದಿದ್ದು, ಆತಂಕಕ್ಕೆ ಕಾರಣವಾಗಿತ್ತು. ರೈಲ್ವೆ ಇಲಾಖೆಯ ಅಧಿಕಾರಿಗಳು ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದರು. ರೈಲ್ವೆ ಪೊಲೀಸರು ಪ್ರಕರಣದ ವಿಚಾರಣೆಗೆ ಇಳಿದಾಗ ಶಾಕ್ ಕಾದಿತ್ತು. ಆಜಾದ್ ನಗರ ಹಾಗೂ ಬಾಷಾ ನಗರದ 12 ವರ್ಷದ ಬಾಲಕರು ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿಗೆ ಕಲ್ಲು ಹೊಡೆದಿರುವುದು ಬೆಳಕಿಗೆ ಬಂದಿದೆ. ಪ್ರಕರಣ ಸಂಬಂಧ ಇಬ್ಬರು ಬಾಲಕರನ್ನು ಚಿತ್ರದುರ್ಗದ ರಿಮ್ಯಾಂಡ್ ಹೋಂಗೆ ಕಳುಹಿಸಲಾಗಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.
ಇತ್ತೀಚಿಗೆ ದಾವಣಗೆರೆಯಲ್ಲಿ ಸಂಚಾರ ಆರಂಭಿಸಿದ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ನೋಡಲು ಆಕರ್ಷಣೀಯವಾಗಿತ್ತು. ಬಾಲಕರು ರೈಲು ತೆರಳುತ್ತಿರುವಾಗ ತಮಾಷೆಗಾಗಿ ಕಲ್ಲು ಹೊಡೆದರೋ ಅಥವಾ ಇದರ ಹಿಂದೆ ಬೇರೆ ಯಾರದ್ದಾದರೂ ಕೈವಾಡ ಇದೆಯೋ ಎನ್ನುವುದು ಈವರೆಗೂ ಸ್ಪಷ್ವವಾಗಿಲ್ಲ. ಈ ಬಗ್ಗೆ ದಾವಣಗೆರೆ ರೈಲ್ವೆ ಇಲಾಖೆಯ ಅಧಿಕಾರಿಗಳು ಮಾಹಿತಿ ನೀಡಿದ್ದು, ಪ್ರಕರಣ ಸಂಬಂಧ ಇಬ್ಬರು ಬಾಲಕರನ್ನು ವಶಕ್ಕೆ ಪಡೆಯಲಾಗಿದೆ. ತನಿಖೆ ಮುಂದುವರಿದಿದೆ ಎಂದಷ್ಟೇ ತಿಳಿಸಿದ್ದಾರೆ.

ಕರ್ನಾಟಕದ ಮೊದಲ ರೈಲು ಎಂಬ ಕೀರ್ತಿಗೆ ಪಾತ್ರವಾಗಿದ್ದ ವಂದೇ ಭಾರತ್ ರೈಲು ಬೆಂಗಳೂರು - ಮೈಸೂರು- ಚೆನ್ನೈ ನಡುವೆ ಸಂಚರಿಸುವ ರೈಲಿನ ಮೇಲೆ ಕೂಡ ಕಲ್ಲು ತೂರಾಟ ನಡೆದಿತ್ತು. ಆದರೆ ಇತ್ತೀಚಿಗೆ ಆರಂಭವಾಗಿದ್ದ ಧಾರವಾಡ- ಬೆಂಗಳೂರು ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿಗೆ ದಾವಣಗೆರೆ ನಗರದ ಜಿಎಂಐಟಿ ಬಳಿ ಕಲ್ಲು ತೂರಾಟ ನಡೆದಿತ್ತು. ರೈಲಿನ ಬೋಗಿಯ ಗ್ಲಾಸ್‌ಗೆ ಕಲ್ಲು ತಗುಲಿ ಸ್ವಲ್ಪ ಪ್ರಮಾಣದಲ್ಲಿ ಹಾನಿಯಾಗಿತ್ತು. ಕಲ್ಲು ತೂರಾಟ ನಡೆದ ಜಾಗ, ರೈಲು ಬರುವ ಹಾಗೂ ಬರುವುದಕ್ಕಿಂತ ಮುನ್ನ ಯಾರೆಲ್ಲಾ ಓಡಾಡಿದ್ದರು, ಸುತ್ತಮುತ್ತಲಿನ ಸಿಸಿಟಿವಿ ದೃಶ್ಯಾವಳಿ ಪರಿಶೀಲಿಸಿದಾಗ ಬಾಲಕರು ಕೃತ್ಯ ಎಸಗಿರುವುದು ಬೆಳಕಿಗೆ ಬಂದಿದೆ. ಬಾಲಕರ ಪೋಷಕರ ವಿಚಾರಣೆಯೂ ಸಹ ನಡೆದಿದೆ ಎಂದು ರೈಲ್ವೆ ಇಲಾಖೆಯ ಮೂಲಗಳು ತಿಳಿಸಿವೆ.












Click it and Unblock the Notifications