ಜೀವರಕ್ಷಕ ರಕ್ತಕ್ಕೆ ಬಂದಿದೆ ಭಾರೀ ಬೇಡಿಕೆ: ದಾವಣಗೆರೆಯಲ್ಲಿ ರಕ್ತದ ಕೊರತೆಗೆ ಪ್ರಮುಖ ಕಾರಣಗಳೇನು?
ದಾವಣಗೆರೆ, ಜೂನ್ 07: ಜೀವರಕ್ಷಕ ರಕ್ತ ಪ್ರತಿಯೊಬ್ಬ ರೋಗಿಗೂ ಅತಿ ಅವಶ್ಯಕವಾಗಿ ಬೇಕು. ಆದರೆ ಕಳೆದ ಕೆಲ ವರ್ಷಗಳಿಂದ ರಕ್ತಕ್ಕೆ ಭಾರೀ ಬೇಡಿಕೆ ಬಂದಿದೆ. ಆಪರೇಷನ್, ನಿಶ್ಯಕ್ತರಾಗಿರುವವರು ಸೇರಿದಂತೆ ಎಷ್ಟೋ ರೋಗಿಗಳಿಗೆ ಸರಿಯಾದ ಸಮಯದಲ್ಲಿ ಸಿಗುತ್ತಿಲ್ಲ. ಇದರಿಂದಾಗಿ ಪರದಾಡುವಂತಾಗಿದೆ. ರಕ್ತ ಸಂಗ್ರಹವೂ ಕಡಿಮೆಯಾಗಿದೆ. ರಕ್ತದಾನ ಮಾಡುವವರ ಸಂಖ್ಯೆಯೂ ದಿನಕಳೆದಂತೆ ಕಡಿಮೆಯಾಗುತ್ತಿದೆ. ಯಾಕೆ ಅನ್ನೋದೇ ಇಂಟ್ರೆಸ್ಟಿಂಗ್.
ದಾವಣಗೆರೆಯಲ್ಲಿ ಪ್ರತಿದಿನ 500 ಯೂನಿಟ್ ರಕ್ತದ ಅವಶ್ಯಕತೆ ಇದೆ. ಆದರೆ ಸಂಗ್ರಹವಾಗುತ್ತಿರುವುದು ಕೇವಲ 250 ಯೂನಿಟ್ ಮಾತ್ರ. ಇದರಿಂದಾಗಿ ಅರ್ಧಕರ್ಧದಷ್ಟು ಕೊರತೆ ಉಂಟಾಗಲು ನಾಲ್ಕು ಪ್ರಮುಖ ಕಾರಣಗಳನ್ನು ಗುರುತಿಸಲಾಗಿದೆ.

ಈ ಬಾರಿ ಭಾರೀ ಬಿಸಿಲು. ಸೂರ್ಯನ ಶಾಖಕ್ಕೆ ಜನರು ತತ್ತರಿಸಿ ಹೋಗಿದ್ದಾರೆ. ಹಾಗಾಗಿ, ರಕ್ತ ಕೊಡಲು ಯಾರೂ ಮುಂದೆ ಬರುತ್ತಿಲ್ಲ. ಮನೆಯಿಂದ ಹೊರಗೆಡೆ ಬಿಸಿಲಿಗೆ ಹೋದರೆ ಸುಸ್ತಾಗಿ ಹೋಗುತ್ತದೆ. ಇನ್ನು ರಕ್ತ ಕೊಟ್ಟರೆ ಎಲ್ಲಿ ಆರೋಗ್ಯದಲ್ಲಿ ಏರುಪೇರಾಗುತ್ತದೆ, ಸುಸ್ತಾಗುತ್ತದೆ ಎಂಬ ಕಾರಣಕ್ಕೆ ರಕ್ತದಾನ ಮಾಡಲು ಯಾರೂ ಬಯಸುತ್ತಿಲ್ಲ.
ವಿಧಾನಸಭಾ ಚುನಾವಣೆಯಲ್ಲಿ ಎಲ್ಲರೂ ಪ್ರಚಾರದಲ್ಲಿ ಬ್ಯುಸಿಯಾಗಿದ್ದರು. ಈ ವೇಳೆ ರಕ್ತ ಸಂಗ್ರಹ ಘಟಕಗಳು ಖಾಲಿ ಹೊಡೆಯುತ್ತಿದ್ದವು. ಹಳ್ಳಿಯಿಂದ ಹಿಡಿದು ನಗರ ಪ್ರದೇಶಗಳಲ್ಲಿ ಎಲ್ಲರೂ ಚುನಾವಣೆಯ ಗುಂಗಿನಲ್ಲಿದ್ದ ಕಾರಣ ರಕ್ತ ಸಂಗ್ರಹ ನಿರೀಕ್ಷಿಸಿದಷ್ಟಿರಲಿ, ರೋಗಿಗಳಿಗೆ ಹೊಂದಿಸಲು ಪರದಾಡುವಂಥ ಸನ್ನಿವೇಶ ನಿರ್ಮಾಣವಾಗಿತ್ತು.
ರಕ್ತದಾನ ಮಾಡುವ ಕುರಿತಂತೆ ಜಾಗೃತಿ ಮೂಡಿಸುವ ಕಾರ್ಯಕ್ರಮಗಳು ಕಡಿಮೆಯಾಗಿರುವುದು. ಕಳೆದ ಕೆಲ ವರ್ಷಗಳ ಹಿಂದೆ ರಕ್ತದಾನ ಮಾಡಲು ನಾ ಮುಂದು ತಾ ಮುಂದು ಅಂತಾ ಜನರು ಮುಂದೆ ಬರುತ್ತಿದ್ದರು. ಆದ್ರೆ, ಇತ್ತೀಚಿನ ದಿನಗಳಲ್ಲಿ ರಕ್ತದಾನ ಮಾಡುವುದರಿಂದ ತೊಂದರೆಯಾಗುತ್ತದೆ ಎಂಬ ಕಾರಣಕ್ಕೆ ಎಷ್ಟೋ ಜನರು ರಕ್ತ ದಾನ ಮಾಡಲು ಇಷ್ಟಪಡುತ್ತಿಲ್ಲ. ಇದು ಸಹ ರಕ್ತ ಸಂಗ್ರಹವಾಗದಿರಲು ಕಾರಣಗಳಲ್ಲೊಂದು.

ಪರೀಕ್ಷೆಗಳು ನಡೆಯುತ್ತಿವೆ. ಹಾಗಾಗಿ, ವಿದ್ಯಾರ್ಥಿಗಳು ಓದಿನಲ್ಲಿ ಮಗ್ನರಾಗುತ್ತಾರೆ. ರಕ್ತ ಕೊಟ್ಟ ಬಳಿಕ ಸ್ವಲ್ಪ ಮಟ್ಟಿಗೆ ಆಯಾಸವಾಗುತ್ತದೆ. ಓದಿನ ಕಡೆಗೆ ಗಮನ ಕೊಡಲು ಆಗದು ಎಂಬ ಕಾರಣಕ್ಕೆ ಕಳೆದ ಎರಡು ತಿಂಗಳಿನಲ್ಲಿ ವಿದ್ಯಾರ್ಥಿಗಳು ರಕ್ತ ಕೊಟ್ಟಿಲ್ಲ. ಹಾಗಾಗಿ, ರಕ್ತ ಸಂಗ್ರಹ ವಿದ್ಯಾರ್ಥಿಗಳಿಂದ ನಿರೀಕ್ಷಿಸಿದ ಪ್ರಮಾಣದಲ್ಲಿ ಆಗಿಲ್ಲ.
ಜಿಲ್ಲಾಡಳಿತ, ರೆಡ್ ಕ್ರಾಸ್ ಸಂಸ್ಥೆ, ವಿವೇಕಾನಂದ ಸ್ವಯಂ ಸೇವಾ ರಕ್ತ ಕೇಂದ್ರ, ಲೈಫ್ ಲೈನ್ ಸ್ವಯಂಪ್ರೇರಿತ ರಕ್ತದಾನಿಗಳ ಸಮೂಹ ಸೇರಿದಂತೆ ಅನೇಕ ಸಂಘ ಸಂಸ್ಥೆಗಳು ರಕ್ತದಾನ ಮಾಡುವವರಿಗೆ ಪ್ರೇರೇಪಿಸುವ ಕೆಲಸ ಮಾಡುತ್ತಿವೆ. ವಿದ್ಯಾರ್ಥಿ ಭವನ, ಜಯದೇವ ವೃತ್ತ ಸೇರಿದಂತೆ ಪ್ರಮುಖ ರಸ್ತೆಗಳಲ್ಲಿ ರಕ್ತದಾನ ಮಾಡಿ, ಜೀವ ಉಳಿಸಿ ಎಂಬ ನಾಮಫಲಕ ಹಿಡಿದು ಆ್ಯಂಬುಲೆನ್ಸ್ ಪಕ್ಕದಲ್ಲಿ ನಿಂತ ನರ್ಸ್‌ಗಳು ಕಣ್ಣಿಗೆ ಬೀಳುತ್ತಿದ್ದಾರೆ. ಇದು ರಕ್ತಕ್ಕೆ ಎಷ್ಟು ಬೇಡಿಕೆ ಇದೆ ಎಂಬುದಕ್ಕೆ ನಿದರ್ಶನವಾಗಿದೆ.
ಎ, ಬಿ ಹಾಗೂ ಒ ಪಾಸಿಟಿವ್ ಸೇರಿದಂತೆ ಎಲ್ಲಾ ರಕ್ತ ಗ್ರೂಪ್ ಗೂ ಭಾರೀ ಬೇಡಿಕೆ ಬರುತ್ತಿದೆ. ಅದರಲ್ಲಿ ಹೆಚ್ಚಿನದಾಗಿ ನೆಗೆಟಿವ್ ರಕ್ತ ಸಿಗುತ್ತಿಲ್ಲ. ರೋಗಿಗಳಿಗೆ ರಕ್ತ ಕೊಡಲು ಯಾರೂ ಮುಂದೆ ಬಾರದ ಕಾರಣ ಕುಟುಂಬದವರು ಪರಿತಪಿಸುವುದು ಆಸ್ಪತ್ರೆಗಳ ಮುಂದೆ ಸಾಮಾನ್ಯವಾಗಿಬಿಟ್ಟಿದೆ. ಹೃದ್ರೋಗ ಚಿಕಿತ್ಸಾ ಘಟಕಗಳು, ಹೆರಿಗೆ ಮತ್ತು ಇತರ ಚಿಕಿತ್ಸೆಗಳಿಗೆ ಹೆಚ್ಚಿನ ಅವಶ್ಯಕತೆ ಇರುತ್ತದೆ. ಹೆಚ್ಚು ಹಣ ಕೊಟ್ಟರೆ ರಕ್ತ ಸಿಗುತ್ತದೆ ಎಂಬ ಭಾವನೆ ಕೆಲವರಲ್ಲಿದೆ. ಆದರೆ, ರಕ್ತ ಕೊಡುವವರು ಹೆಚ್ಚಾದರೆ ಮಾತ್ರ ರಕ್ತದ ಕೊರತೆ ನೀಗಿಸಬಹುದು ಎಂಬ ಮಾತು ಕೇಳಿ ಬರುತ್ತಿದೆ.
ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಶೇಕಡಾ 15ರಷ್ಟು ರಕ್ತದ ಕೊರತೆ ಉಂಟಾಗಿದೆ. ಒ, ಎ, ಬಿ ಪಾಸಿಟಿವ್ ರಕ್ತಕ್ಕೆ ಬೇಡಿಕೆ ಇದೆ. ಅದರಲ್ಲಿಯೂ ಎಬಿ ಪಾಸಿಟಿವ್, ಎಬಿ ನೆಗೆಟಿವ್ ಗೆ ತುಂಬಾನೇ ಬೇಡಿಕೆ ಹೆಚ್ಚಿದೆ. ರಕ್ತದಾನದ ಬಗ್ಗೆ ಅರಿವು ಕಡಿಮೆಯಾಗುತ್ತಿದೆ. ಜೂನ್ 14 ವಿಶ್ವ ರಕ್ತದಾನಿಗಳ ದಿನ ಹಾಗೂ ಅಕ್ಟೋಬರ್ 1 ರಾಷ್ಟ್ರೀಯ ರಕ್ತದಾನ ದಿನದಂದು ಮಾತ್ರ ನೆನಪಿನಲ್ಲಿರುತ್ತದೆ. ಆಗ ಮಾತ್ರ ಕಾರ್ಯಕ್ರಮಗಳನ್ನು ನಡೆಸಲಾಗುತ್ತದೆ.
ರಕ್ತ ನೀಡಲು ಪ್ರೇರೇಪಿಸುವ ಕಾರ್ಯಕ್ರಮ ನಡೆಸಲಾಗುತ್ತದೆ. ಉಳಿದಂತೆ ಮರೆತು ಬಿಡಲಾಗುತ್ತದೆ. ರಕ್ತದಾನ ಮಹತ್ವ ಕುರಿತಂತೆ ಹಳ್ಳಿ ಹಳ್ಳಿಗಳು, ನಗರ ಪ್ರದೇಶಗಳಲ್ಲಿ ಅರಿವು ಮೂಡಿಸುವ ಕೆಲಸ ಹೆಚ್ಚಾಗಿ ನಡೆಯಬೇಕಾಗಿದೆ ಎಂದು ಲೈಫ್ ಲೈನ್ ಸ್ವಯಂಪ್ರೇರಿತ ರಕ್ತದಾನಿಗಳ ಸಮೂಹದ ಕಾರ್ಯದರ್ಶಿ ಹಾಗೂ ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ದಾವಣಗೆರೆ ಜಿಲ್ಲಾ ಘಟಕದ ಅನಿಲ್ ಬಾರಂಗಲ್ ಅಭಿಪ್ರಾಯಪಟ್ಟಿದ್ದಾರೆ.
ರಕ್ತ ಕೊಡಿ, ತೆಗೆದುಕೊಂಡು ಹೋಗಿ
ಆಸ್ಪತ್ರೆಗಳಲ್ಲಿ ದಾಖಲಾಗಿರುವ ರೋಗಿಗಳ ಸಂಬಂಧಿಕರು ರಕ್ತ ಹೊಂದಿಸುವುದು ಕಷ್ಟವಾಗಿಬಿಟ್ಟಿದೆ. ರಕ್ತ ಬದಲಾಯಿಸುವುದು, ಆಪರೇಷನ್, ಹೆರಿಗೆ ಸಮಯದಲ್ಲಿ ರಕ್ತ ಹೆಚ್ಚಾಗಿ ಬೇಕಾಗುತ್ತದೆ. ಈ ವೇಳೆಯಲ್ಲಿ ರಕ್ತನಿಧಿ ಘಟಕಕ್ಕೆ ತೆರಳಿದರೆ ನೀವು ಕೇಳುವ ರಕ್ತ ಸಂಗ್ರವಿಲ್ಲ. ಯಾರಾದರನ್ನೂ ಕರೆಯಿಸಿ ರಕ್ತ ಕೊಡಿಸಿ. ಆಮೇಲೆ ತೆಗೆದುಕೊಂಡು ಹೋಗಿ ಎಂಬ ಸಿದ್ಧ ಉತ್ತರ ಬರುತ್ತಿದೆ. ಇದಕ್ಕೆ ಪ್ರಮುಖ ಕಾರಣ ರಕ್ತ ಸಿಗದೇ ಇರುವುದು.
ದಾವಣಗೆರೆ ಜಿಲ್ಲೆಯಲ್ಲಿ ಸುಮಾರು 10 ರಕ್ತನಿಧಿ ಘಟಕಗಳಿವೆ. ಬಾಪೂಜಿ ರಕ್ತನಿಧಿ ಕೇಂದ್ರ, ಎಸ್ ಎಸ್ ಹೈಟೆಕ್ ಮೆಡಿಕಲ್ ಕಾಲೇಜ್, ಬ್ಲಡ್ ಬ್ಯಾಂಕ್, ಭಾರತೀಯ ರೆಡ್ ಕ್ರಾಸ್, ಲೈಫ್ ಲೈನ್, ವಿವೇಕಾನಂದ ಮತ್ತು ಕರ್ನಾಟಕ ಹಿಮೋಫಿಲಿಯಾ. ಕೆಲವೆಡೆಗಳಲ್ಲಂತೂ ರಕ್ತ ಸಿಗುವುದಿಲ್ಲ ಎಂಬ ಬೋರ್ಡ್ ಅನ್ನು ಹಾಕಲಾಗಿದೆ.
ಕೋವಿಡ್ ಬಳಿಕ ಸುಧಾರಿಸಿದ್ದ ಸಮಸ್ಯೆ
ಕೊರೊನಾ ಸೋಂಕು ಕಾಣಿಸಿಕೊಂಡಾಗ ರಕ್ತ ಸಿಗುವುದು ಕಷ್ಟವಾಗಿತ್ತು. ಸೋಂಕು ತಗುಲಿದವರ ಸಂಖ್ಯೆ ಹೆಚ್ಚಾಗುತಿತ್ತು. ಮನೆಯಿಂದ ಹೊರಬರಲು ಜನರು ಭಯಪಡುತ್ತಿದ್ದರು. ಹಾಗಾಗಿ, ರಕ್ತ ಸಂಗ್ರಹ ಕಡಿಮೆಯಾಗಿತ್ತು. ಎಲ್ಲೆಡೆ ಜಾಗೃತಿ ಮೂಡಿಸಿದ್ದರಿಂದ ಅವರವರ ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿ ವಹಿಸುತ್ತಿದ್ದರು. ಆಮೇಲೆ ಕಡಿಮೆಯಾಗಿತ್ತು. ಸೋಂಕು ಕಡಿಮೆಯಾದ ಬಳಿಕ ರಕ್ತ ಸಂಗ್ರಹವಾಗುತಿತ್ತು. ಮತ್ತೆ ಕಳೆದ ಆರು ತಿಂಗಳಿನಿಂದ ರಕ್ತ ಸಂಗ್ರಹ ಕಡಿಮೆಯಾದ ಕಾರಣ ಬೇಡಿಕೆ ಸಹಜವಾಗಿಯೇ ಹೆಚ್ಚಿದೆ. ಈಗಲೂ ನಾವೆಲ್ಲರೂ ರಕ್ತ ಕೊಡುತ್ತೇವೆ. ಸಾಮಾನ್ಯ ಜನರು, ವಿದ್ಯಾರ್ಥಿಗಳು, ಯುವಕರು ಮುಂದೆ ಬರುತ್ತಿಲ್ಲ ಎನ್ನುತ್ತಾರೆ ಅನಿಲ್.
ಬಾಂಬೆ ಒ ಪಾಸಿಟಿವ್ ಎಂದರೇನು?
1952ರಲ್ಲಿ ಬಾಂಬ್ ಒ ಪಾಸಿಟಿವ್ ರಕ್ತ ಹೊಂದಿದ್ದು ಪತ್ತೆಯಾಗಿತ್ತು. ಮುಂಬೈನಲ್ಲಿ ವ್ಯಕ್ತಿಯೊಬ್ಬರಲ್ಲಿ ಬಾಂಬೆ ಒ ಪಾಸಿಟಿವ್ ಮಾದರಿ ಸಂಗ್ರಹವಾಗಿತ್ತು. ಇದು ಒ ಪಾಸಿಟಿವ್ ಹಾಗೂ ಒ ನೆಗೆಟಿವ್‌ಗೆ ಹೊಂದುತ್ತಿರಲಿಲ್ಲ. ಹಾಗಾಗಿ, ಈ ಮಾದರಿಯನ್ನು ಬಾಂಬೆ ಒ ಪಾಸಿಟಿವ್ ಎಂದು ಹೆಸರಿಸಲಾಯಿತು. 140 ಕೋಟಿ ಜನರು ದೇಶದಲ್ಲಿದ್ದು, ಕೇವಲ 450 ರಿಂದ 500 ಮಂದಿಯಲ್ಲಿ ಮಾತ್ರ ಈ ರಕ್ತ ಹೊಂದಿದ್ದಾರೆ. ದಾವಣಗೆರೆ ಜಿಲ್ಲೆಯಲ್ಲಿ ಬಾಂಬೆ ಒ ಪಾಸಿಟಿವ್ ಹೊಂದಿರುವ ನಾಲ್ವರಿದ್ದು, ಅವರು ನನ್ನ ಸಂಪರ್ಕದಲ್ಲಿದ್ದಾರೆ. ಈ ರಕ್ತ ಸಿಗುವುದು ತೀರಾ ವಿರಳ ಎನ್ನುತ್ತಾರೆ ಅನಿಲ್.
ಒಟ್ಟಾರೆ ಜೀವರಕ್ಷಕವಾಗಿದ್ದ ರಕ್ತ ದಾನ ಮಾಡಲು ಎಲ್ಲರೂ ಮುಂದೆಬರಬೇಕಿದೆ. ಇಲ್ಲದಿದ್ದರೆ ಮುಂಬರುವ ದಿನಗಳಲ್ಲಿ ಸಮಸ್ಯೆ ಮತ್ತಷ್ಟು ಜಟಿಲವಾಗುವುದಂತೂ ಸತ್ಯವಾಗಿದೆ.
-
Ration card: ರಾಜ್ಯದಲ್ಲಿ ಪಡಿತರಚೀಟಿ ತಿದ್ದುಪಡಿಗೆ ಮತ್ತೆ ಅವಕಾಶ -
Vande Bharat Express: 20 ಬೋಗಿಗಳ 42ನೇ ವಂದೇ ಭಾರತ್ ರೈಲು ಸಂಚಾರ ಆರಂಭ, ಎಲ್ಲಿ? ವೇಳಾಪಟ್ಟಿ -
ಟಿ20 ವಿಶ್ವಕಪ್ 2026 ಫೈನಲ್ ಪಂದ್ಯ ಮಳೆಯಿಂದ ರದ್ದಾದ್ರೆ ಟ್ರೋಫಿ ಯಾರ ಮುಡಿಗೆ?; ಐಸಿಸಿ ನಿಯಮಗಳು ಹೀಗಿವೆ -
Gold Price: ಚಿನ್ನ ಬೆಲೆ ಭಾರಿ ಕುಸಿತ ಸಾಧ್ಯತೆ, ಆದರೆ ಇದೊಂದು ದೇಶದ ನಿರ್ಧಾರ ಮುಖ್ಯ -
Horoscope March 7: ಉದ್ಯೋಗದಲ್ಲಿ ಉತ್ತಮ ಬದಲಾವಣೆ, ದಾಂಪತ್ಯದಲ್ಲಿ ಸಿಹಿ ಅಲೆ, ದಿನ ಭವಿಷ್ಯ -
ಕನ್ನಡ ನಾಡಿನ ಪ್ರತಿಭೆಗಳ ಸಾಧನೆ, ಯುಪಿಎಸ್ಸಿ ಟಾಪರ್ಸ್ ಮಾಹಿತಿ ತಿಳಿಯಿರಿ | UPSC Toppers -
ಕರ್ನಾಟಕಕ್ಕೆ ಬಂದ್ರೆ ಅಮ್ಮನ ಮನೆಗೆ ಬಂದಂತೆ ಭಾಸವಾಗುತ್ತೆ: ಕನ್ನಡದಲ್ಲೇ ಭಾಷಣ ಮಾಡಿದ ನಟ ಜ್ಯೂನಿಯರ್ ಎನ್ಟಿಆರ್ -
Women's Day Wishes: ಹೆಣ್ಣು ಜಗದ ಕಣ್ಣು: ಮಹಿಳಾ ದಿನಕ್ಕೆ ನಿಮ್ಮ ಪ್ರೀತಿಪಾತ್ರರಿಗೆ ಶುಭ ಕೋರಲು ಇಲ್ಲಿವೆ ಸುಂದರ ಸಾಲುಗಳು -
MS Dhoni: ಕುಣಿದು ಕುಪ್ಪಳಿಸುತ್ತಿದ್ದ ಪತ್ನಿ ಸಾಕ್ಷಿ ಸಿಂಗ್ಗೆ ಸುಮ್ನೆ ಕೂತ್ಕೋ ಎಂದ ಎಂಎಸ್ ಧೋನಿ -
Bengaluru Home: ಬೆಂಗಳೂರಲ್ಲಿ ಸ್ವಂತ ಮನೆಯ ಕನಸು ಕಾಣುತ್ತಿರುವವರಿಗೆ ಜಿಬಿಎ ಗುಡ್ನ್ಯೂಸ್: ಒಂಟಿ ಮನೆ ಯೋಜನೆ ಅಪ್ಡೇಟ್ಸ್ -
Gold Rate Today: ಸತತ ಆರನೇ ದಿನವೂ ಚಿನ್ನದ ಬೆಲೆಯಲ್ಲಿ ಇಳಿಕೆ: ಬೆಂಗಳೂರಿನಲ್ಲಿ ಇಂದಿನ ದರಗಳು ಹೀಗಿವೆ -
Suryakumar Yadav: ಮೀಟರ್ ಇದ್ರೆ ಮೈದಾನದಲ್ಲಿ ಅಭಿಮಾನಿಗಳ ಬಾಯಿ ಮುಚ್ಚಿಸಿ: ಮಿಚೆಲ್ ಸ್ಯಾಂಟ್ನರ್ಗೆ ಸೂರ್ಯ ಸವಾಲು












Click it and Unblock the Notifications