'ಕೇಂದ್ರದಲ್ಲಿ ಅಧಿಕಾರದಲ್ಲಿ ಇರೋದು ದೇಶವನ್ನು ಮಾರುವಂಥ ಬಿಜೆಪಿ ಸರ್ಕಾರ'
ದಾವಣಗೆರೆ, ನವೆಂಬರ್ 3: "ದೇಶವನ್ನು ಮಾರುವಂಥ ಸರ್ಕಾರ ಕೇಂದ್ರದಲ್ಲಿ ಬಂದಿದೆ" ಎಂದು ಬಿಜೆಪಿ ವಿರುದ್ಧ ಭಾನುವಾರ ದಾವಣಗೆರೆಯಲ್ಲಿ ಮಾಜಿ ಸಚಿವ- ಕಾಂಗ್ರೆಸ್ ನಾಯಕ ಯು. ಟಿ. ಖಾದರ್ ಕಿಡಿ ಕಾರಿದ್ದಾರೆ.
ದಾವಣಗೆರೆ ನಗರದ ವರದಿಗಾರರ ಕೂಟದಲ್ಲಿ ಮಾತನಾಡಿದ ಅವರು, ಕೇಂದ್ರ ಸರ್ಕಾರದ ಜಿಎಸ್ ಟಿ, ನೋಟ್ ಬ್ಯಾನ್ ಸೇರಿದಂತೆ ಹಲವು ಯೋಜನೆಗಳಿಂದ ಈ ಕಷ್ಟದ ಪರಿಸ್ಥಿತಿ ಬಂದಿದೆ. ಆರ್ ಸಿಇಪಿಗೆ ಸಹಿ ಹಾಕಿದರೆ ಸ್ವಾಭಿಮಾನಿ ಬದುಕು ಕಷ್ಟವಾಗುತ್ತದೆ. ಅದರಲ್ಲೂ ಹೈನುಗಾರಿಕೆ ಮಾಡುವ ನಮ್ಮ ರೈತರ ಪರಿಸ್ಥಿತಿ ಏನಾಗಬಹುದು ಎನ್ನುವುದನ್ನು ಕೇಂದ್ರ ಸರ್ಕಾರ ಅರ್ಥ ಮಾಡಿಕೊಂಡು, ಈ ಒಪ್ಪಂದದ ಸಾಧಕ ಬಾಧಕಗಳನ್ನು ಚರ್ಚೆ ಮಾಡಬಹುದಿತ್ತು ಎಂದಿದ್ದಾರೆ.
ಬಿಜೆಪಿಯವರು ಬಾಯಲ್ಲಿ ಮಾತ್ರ ಸ್ವದೇಶಿ, ಮಾಡುವುದು ಮಾತ್ರ ವಿದೇಶಿ ಕೆಲಸ. ಆರ್ ಸಿಇಪಿ ಸಹಿ- ಒಪ್ಪಂದ ಆಗಬಾರದು ಎನ್ನುವುದು ನಮ್ಮ ಒತ್ತಾಯ. ಏನಾದರೂ ಆರ್ ಸಿಇಪಿ ಒಪ್ಪಂದವಾದರೆ ಕಾಂಗ್ರೆಸ್ ನಿಂದ ದೊಡ್ಡ ಹೋರಾಟವೇ ನಡೆಯುತ್ತದೆ. ಕೇಂದ್ರ ಸರ್ಕಾರ ನೆರೆ ಸಂತ್ರಸ್ತರ ಕಣ್ಣೊರೆಸುವುದರಲ್ಲಿ ವಿಫಲವಾಗಿದೆ ಎಂದು ಆರೋಪಿಸಿದ್ದಾರೆ.

ರಾಜ್ಯ ಸರ್ಕಾರವು ಕೇಂದ್ರದಿಂದ ಪರಿಹಾರ ತೆಗೆದುಕೊಳ್ಳಲು ವಿಫಲವಾಗಿದೆ. ಅದರಲ್ಲೂ ರಾಜ್ಯದಿಂದ ಇಪ್ಪತ್ತೈದು ಸಂಸದರನ್ನು ನೀಡಿದ್ದೇವೆ. ಆದರೆ ಪರಿಹಾರ ಮಾತ್ರ ಇಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಟಿಪ್ಪುವನ್ನು ಪಠ್ಯದಿಂದ ಕೈಬಿಡುವುದು ನಮಗ್ಯಾರಿಗೂ ನಷ್ಟವಲ್ಲ. ಟಿಪ್ಪುವಿನ ಇತಿಹಾಸ, ವ್ಯಕ್ತಿತ್ವ ರಾಜ್ಯಕ್ಕಷ್ಟೇ ಸೀಮಿತವಲ್ಲ. ಇಂಗ್ಲೆಂಡ್ ನಲ್ಲಿ ಟಿಪ್ಪುವಿಗೆ ಸಂಬಂಧಿಸಿದ ದಾಖಲೆಗಳನ್ನು ಮ್ಯೂಸಿಯಂನಲ್ಲಿ ಇಟ್ಟಿದ್ದಾರೆ. ಟಿಪ್ಪುವಿನ ಇತಿಹಾಸವನ್ನು ಅಳಿಸಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.
ಯಡಿಯೂರಪ್ಪ ಅವರ ಆಡಿಯೋ ವಿಚಾರದ ಬಗ್ಗೆ ಮಾತನಾಡಿ, ಇದು ಸಂವಿಧಾನಬಾಹಿರ ಕೃತ್ಯ. ಜನಪ್ರತಿನಿಧಿ ಕಾಯ್ದೆಯ ಸ್ಪಷ್ಟ ಉಲ್ಲಂಘನೆ. ಇದರ ವಿರುದ್ಧ ಹೋರಾಡುತ್ತೇವೆ ಎಂದಿದ್ದಾರೆ. ಯಡಿಯೂರಪ್ಪನವರ ಆಡಿಯೋ ಟ್ಯಾಂಪರಿಂಗ್ ಮಾಡಿದ್ದಾರಾ ಆಥವಾ ಇಲ್ಲವಾ ಎಂಬ ಬಗ್ಗೆ ಸಿಬಿಐ ತನಿಖೆಯಾಗಲಿ. ಯಾವುದೇ ಪ್ರಕರಣವನ್ನು ಐದು ನಿಮಿಷಗಳಲ್ಲಿ ಸಿಬಿಐಗೆ ವಹಿಸುತ್ತಾರೆ. ಇದನ್ನೂ ವಹಿಸಲಿ. ಯಾರು ತಪ್ಪು ಮಾಡಿದ್ದಾರೆ ಎನ್ನುವುದು ಜನತೆಗೆ ಗೊತ್ತಾಗಲಿ ಎಂದು ಆಗ್ರಹಿಸಿದ್ದಾರೆ ಖಾದರ್.












Click it and Unblock the Notifications