15 ದಿನಕ್ಕೊಮ್ಮೆ ಕುಡಿಯುವ ನೀರಿನ ಸರಬರಾಜು: ದಾವಣಗೆರೆ ಪಾಲಿಕೆ ವಿರುದ್ದ ಜನಾಕ್ರೋಶ
ದಾವಣಗೆರೆ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗಿದ್ದು, ಪಾಲಿಕೆ ಅಧಿಕಾರಿಗಳ ವಿರುದ್ಧ ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ದಾವಣಗೆರೆ, ಫೆಬ್ರವರಿ, 27: ಪಾಲಿಕೆ ವ್ಯಾಪ್ತಿಯಲ್ಲಿ ಕುಡಿಯುವ ನೀರು ಸಮರ್ಪಕವಾಗಿ ಸರಬರಾಜು ಆಗುತ್ತಿಲ್ಲ. ಇದರಿಂದ ಜನಸಾಮಾನ್ಯರಿಗೆ ತುಂಬಾ ತೊಂದರೆಯಾಗಿದೆ. ನಗರದ ಕುಂದುವಾಡ ಕೆರೆ ಹಾಗೂ ಟಿ. ಬಿ. ಸ್ಟೇಷನ್‌ನಿಂದ ನೀರು ಪೂರೈಕೆ ಮಾಡಲಾಗುತ್ತಿದೆ. ಆದರೂ ಕೂಡ ಮೋಟಾರ್ ಹಾಳಾಗಿರುವ ಕಾರಣ ಕೆಲವೆಡೆ ಹತ್ತು ದಿನಕ್ಕೊಮ್ಮೆ ನೀರು ಬಿಡಲಾಗುತ್ತಿದೆ. ಆಡಳಿತ ವರ್ಗದ ನಿರ್ಲಕ್ಷ್ಯದಿಂದ ಈ ಸಮಸ್ಯೆ ಎದುರಾಗಿದೆ ಎಂದಿ ಇಲ್ಲಿನ ಜನರ ಆರೋಪವಾಗಿದೆ.
ಈ ವಿಚಾರ ಗೊತ್ತಾಗುತ್ತಿದ್ದಂತೆಯೇ ಮಹಾನಗರ ಪಾಲಿಕೆ ವಿರೋಧ ಪಕ್ಷದ ನಾಯಕ ಗಡಿಗುಡಾಳ್ ಮಂಜುನಾಥ್ ನೇತೃತ್ವದ ತಂಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿತು. ಕುಂದುವಾಡ ಕೆರೆಯಿಂದ ನಗರಕ್ಕೆ ನೀರು ಸರಬರಾಜು ಮಾಡಲು ಬಳಕೆಯಾಗುವ ಎರಡು ಮೋಟಾರ್‌ಗಳು ಹಾಳಾಗಿವೆ. ಇನ್ನು ಒಂದು ಹಾಳಾದರೆ ಮತ್ತೊಂದು ಉಪಯೋಗಕ್ಕೆ ಇಟ್ಟುಕೊಂಡಿದ್ದ ಮೋಟಾರ್ ಸಹ ಕೆಟ್ಟು ಹೋಗಿದೆ. ಇದರಿಂದ
ಹಳೆ ದಾವಣಗೆರೆ ಹಾಗೂ ಹೊಸ ದಾವಣಗೆರೆಯ ಕೆಲವು ಪ್ರದೇಶಗಳಲ್ಲಿ ನೀರಿನ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಿದೆ.
ಜಲಸಿರಿ ಯೋಜನೆಯಡಿ ಕಾಮಗಾರಿ ನಡೆಸುವ ವೇಳೆ ಮೋಟಾರ್‌ಗೆ ಧಕ್ಕೆಯಾಗಿರುವ ಕಾರಣ ಈ ಸಮಸ್ಯೆ ತಲೆದೋರಿದೆ. ಕಳೆದ ಬಾರಿ ಉತ್ತಮ ಮಳೆಯಾಗಿದ್ದು, ಹೆಚ್ಚಿನ ಪ್ರಮಾಣದಲ್ಲಿ ನೀರು ಸಂಗ್ರಹವಾಗಿದೆ. ಆದರೆ ಕೆಲವೊಂದು ಪ್ರದೇಶಗಳಲ್ಲಿ ನಾಲ್ಕೈದು ದಿನಕ್ಕೊಮ್ಮೆ, ಕೆಲವೆಡೆ ಹತ್ತು ದಿನಕ್ಕೊಮ್ಮೆ ಕುಡಿಯುವ ನೀರು ಹರಿಸಲಾಗುತ್ತಿದೆ. ಸರಿಯಾದ ನಿರ್ವಹಣೆ ಇಲ್ಲದ ಕಾರಣಕ್ಕೆ ಈ ಸಮಸ್ಯೆಯಾಗಿದೆ ಎಂದು ಇಲ್ಲಿನ ಜನರ ಆರೋಪವಾಗಿದೆ.

15 ದಿನಕ್ಕೊಮ್ಮೆ ಕುಡಿಯುವ ನೀರಿನ ಸರಬರಾಜು
ಬೇಸಿಗೆ ಕಾಲ ಆಗಮನವಾಗಿದ್ದು, ಜನರು ನೀರಿಗಾಗಿ ಪರದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಅಧಿಕಾರಿ ವರ್ಗದವರು ಈ ಬಗ್ಗೆ ಹೆಚ್ಚು ಗಮನಹರಿಸಿ ಸಮಸ್ಯೆಯನ್ನು ಕೂಡಲೇ ಪರಿಹರಿಸಬೇಕು ಎಂದು ಮಂಜುನಾಥ್ ಆಗ್ರಹಿಸಿದರು.
ಕುಂದುವಾಡ ಕೆರೆಯಿಂದ ನೀರು ಪೂರೈಕೆ ಮಾಡಲು ತೊಂದರೆ ಆಗಿರುವ ಕಾರಣದಿಂದ ರಾಜನಹಳ್ಳಿ ಪಂಪ್ ಹೌಸ್‌ನಿಂದ ನೀರು ಸರಬರಾಜು ಮಾಡಲು ಉದ್ದೇಶಿಸಲಾಗಿದೆ. ಇನ್ನು ಮೂರ್ನಾಲ್ಕು ದಿನಗಳಲ್ಲಿ ಸಮಸ್ಯೆ ಬಗೆಹರಿಯಲಿದೆ. ಹಳೆ ದಾವಣಗೆರೆಯ ಕೆಲವೆಡೆ ಏಳೆಂಟು ದಿನಕ್ಕೊಮ್ಮೆ ನೀರು ಸರಬರಾಜು ಮಾಡಲಾಗುತಿತ್ತು.

ಕೆಲವೇ ದಿನಗಳಲ್ಲಿ ಸಮಸ್ಯೆ ಬಗೆಹರಿಸುತ್ತೇವೆ
ಹೊಸ ದಾವಣಗೆರೆಯ ಕೆಲವೆಡೆ ಮೂರ್ನಾಲ್ಕು ದಿನಗಳಿಗೊಮ್ಮೆ ನೀರು ಹರಿಸಲಾಗುತಿತ್ತು. ಸಮಸ್ಯೆಯಾಗಿರುವ ಕಾರಣ ಎರಡರಿಂದ ಮೂರು ದಿನ ತಡವಾಗಿ ನೀರು ಪೂರೈಕೆ ಮಾಡಲಾಗುತ್ತಿದೆ. ಇನ್ನು ಮೂರ್ನಾಲ್ಕು ದಿನಗಳಲ್ಲಿ ಈ ಸಮಸ್ಯೆ ಬಗೆಹರಿಯಲಿದೆ ಎಂದು ಪಾಲಿಕೆಯ ಎಕ್ಸಿಕ್ಯೂಟಿವ್ ಎಂಜಿನಿಯರ್ ಉದಯಕುಮಾರ್ ಮಾಹಿತಿ ನೀಡಿದರು.

ಕಾಮಗಾರಿಯಿಂದ ತೊಂದರೆ ಆಗಿದೆ
ಜಲಸಿರಿ ಯೋಜನೆಯಡಿ ನಡೆಸುತ್ತಿರುವ ಕಾಮಗಾರಿಯಿಂದ ತೊಂದರೆಯಾಗಿದೆ. ಈ ಯೋಜನೆ ನಿರ್ವಹಣೆ ಮಾಡುತ್ತಿರುವವರು ಇದನ್ನು ಸರಿಪಡಿಸಬೇಕಿದೆ. ಆದಷ್ಟು ಬೇಗ ಮೋಟಾರ್ ಸರಿಪಡಿಸಲಾಗುವುದು. ಆಗ ನೀರಿನ ಸರಬರಾಜಿನಲ್ಲಿ ವ್ಯತ್ಯಯ ತಪ್ಪಲಿದೆ. ಬಾತಿ ಬಳಿ ನೀರಿನ ಪೈಪ್ ಒಡೆದಿತ್ತು. ಅದೇ ರೀತಿಯಲ್ಲಿ ಎರಡು ದಿನಗಳ ಕಾಲ ಬೆಸ್ಕಾಂ ಕಾಮಗಾರಿಗಳು ನಡೆದವು. ಜಲಸಿರಿ ಯೋಜನೆಯಡಿ ಕೈಗೊಳ್ಳಲಾದ ಕೆಲಸದ ವೇಳೆ ಮೋಟಾರ್ ಹಾಳಾಗಿತ್ತು. ಈ ಮೂರು ಕಾರಣಗಳಿಂದ ಸಮಸ್ಯೆ ತಲೆದೋರಿದೆ ಎಂದು ಮಾಹಿತಿ ನೀಡಿದರು.

ಜನರು ಬದುಕುವುದಾದರೂ ಹೇಗೆ?
ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಬಳಿಕ ಮಾತನಾಡಿದ ಮಂಜುನಾಥ್, ಪ್ರತಿ ಬಾರಿಯೂ ಒಂದಲ್ಲಾ ಒಂದು ರೀತಿಯ ಸಬೂಬು ಹೇಳುತ್ತಾರೆ. ನಗರಕ್ಕೆ ನೀರು ಸರಬರಾಜು ಮಾಡುವುದು ತುಂಬಾನೇ ಮುಖ್ಯ. ಮೋಟಾರ್ ಹಾಳಾಗಿದೆ ಎಂಬ ಕಾರಣಕ್ಕೆ ಹತ್ತು ದಿನಕ್ಕೊಮ್ಮೆ ನೀರು ಪೂರೈಸಿದರೆ ಜನರು ಬದುಕುವುದಾದರೂ ಹೇಗೆ? ಅಧಿಕಾರಿಗಳು ಆದಷ್ಟು ಬೇಗ ಕ್ರಮ ಕೈಗೊಂಡು ಸಮಸ್ಯೆ ಪರಿಹರಿಸಬೇಕು. ಬೇಸಿಗೆ ಬರುತ್ತಿದೆ. ಇದೇ ರೀತಿಯ ಪರಿಸ್ಥಿತಿ ಮುಂದುವರೆದರೆ ಸಮಸ್ಯೆ ಮತ್ತಷ್ಟು ಬಿಗಡಾಯಿಸಲಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಇನ್ನು ಭದ್ರಾ ಜಲಾಶಯದ ನೀರು ಸಂಗ್ರಹವಾಗುವ ವೇಳೆಯಲ್ಲಿ ಟಿ.ಬಿ. ಸ್ಟೇಷನ್‌ನ ಹಾಗೂ ಕುಂದವಾಡ ಕೆರೆ ಹೂಳೆತ್ತುವ ಕಾಮಗಾರಿ ನಡೆಸಲಾಯಿತು. ಅದನ್ನು ಅವೈಜ್ಞಾನಿಕವಾಗಿ ಮಾಡಲಾಗಿದೆ. ಈಗ ಒಂದು ಗಂಟೆ ಕಡಿಮೆ ನೀರು ಹರಿಸಲಾಗುತ್ತಿದೆ. ಕೇಳಿದರೆ ನೀರು ಸಂಗ್ರಹವಿಲ್ಲ ಎನ್ನುವ ನೆಪವನ್ನು ಹೇಳುತ್ತಿದ್ದಾರೆ. ದೂರ ದೃಷ್ಟಿಯಿಂದ ಕಾಮಗಾರಿ ಸಮರ್ಪಕವಾಗಿ ಮಾಡಿದ್ದರೆ ಈ ತೊಂದರೆ ಆಗುತ್ತಿರಲಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಅಧಿಕಾರಿಗಳ ವಿರುದ್ಧ ಆಕ್ರೋಶ
ಭದ್ರಾ ಜಲಾಶಯದಿಂದ ನೀರು ಹರಿಸುವುದು ತಡವಾಗಲಿದೆ. ಹಾಗಿದ್ದರೂ ಕೂಡ ಕ್ರಮ ಕೈಗೊಂಡಿಲ್ಲ. ಹೂಳೆತ್ತಲು ಕೋಟ್ಯಂತರ ರೂಪಾಯಿ ವ್ಯಯಿಸಲಾಗಿದೆ. ಆದರೂ ನೀರಿನ ಸಮಸ್ಯೆ ಬಗೆಹರಿಸಲು ಆಗಿಲ್ಲ. ಬಿಜೆಪಿ ನೇತೃತ್ವದ ಆಡಳಿತ ವರ್ಗ ಸಮಸ್ಯೆ ನಿವಾರಣೆಗೆ ಮುಂದಾಗಿಲ್ಲ. ಇಚ್ಛಾಶಕ್ತಿಯೂ ಇಲ್ಲ. ಮೋಟಾರ್‌ಗಳು ಹಾಳಾಗಿದ್ದರೂ ಆಸಕ್ತಿ ವಹಿಸಿ ಸರಿಪಡಿಸುವ ಕೆಲಸವನ್ನು ಮಾಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಅಧಿಕಾರೊಗಳ ನಿರ್ಲಕ್ಷ್ಯದಿಂದ ಜನರು ನಿತ್ಯವೂ ಪಾಲಿಕೆಗೆ ಹಿಡಿಶಾಪ ಹಾಕುವಂತಾಗಿದೆ. ಕೆಲವೆಡೆಯಂತೂ ಹದಿನೈದು ದಿನಕ್ಕೊಮ್ಮೆ ನೀರು ಬಿಡಲಾಗುತ್ತಿದೆ. ಸಮುದ್ರಕ್ಕೆ ನೆಂಟಸ್ಥನ, ಉಪ್ಪಿಗೆ ಬರ ಎಂಬಂತಹ ಸ್ಥಿತಿ ಎದುರಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈ ವೇಳೆ ಮಹಾನಗರ ಪಾಲಿಕೆ ಹಿರಿಯ ಸದಸ್ಯರಾದ ಕೆ. ಚಮನ್ ಸಾಬ್, ಪಾಮೇನಹಳ್ಳಿ ನಾಗರಾಜ್, ಮನು, ನಿಖಿಲ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.












Click it and Unblock the Notifications